• July 11, 2026
  • RP
  • 0

World Population Day: It’s not merely a large number; humanity, righteous conduct, and the welfare of all people are the true strength of the world.

Looking at the history of world population growth, in 1804 the world’s population was about 100 crore (1 billion). Due to advances in medical science, agriculture, sanitation, and healthcare services, it grew rapidly and reached about 800 crore (8 billion) by 2022.

World Population Day, observed every year on July 11th across the globe, is not merely a day to recall population statistics. It is a day to bring to the world’s attention the inseparable relationship between the future of human society, sustainable development, the dreams of youth, women’s rights, health, education, and the environment.


ವಿಶ್ವ ಜನಸಂಖ್ಯಾ ದಿನ: ಬರಿಯ ದೊಡ್ಡ ಸಂಖ್ಯೆಯಲ್ಲ; ಮಾನವೀಯತೆ, ಸದಾಚಾರ ಹಾಗೂ ಸರ್ವಜನಹಿತವೇ ವಿಶ್ವದ ನಿಜವಾದ ಶಕ್ತಿಯಾಗಿದೆ

ವಿಶ್ವದ ಜನಸಂಖ್ಯೆಯ ಬೆಳವಣಿಗೆಯ ಇತಿಹಾಸವನ್ನು ಗಮನಿಸಿದರೆ, 1804ರಲ್ಲಿ ಜಗತ್ತಿನ ಜನಸಂಖ್ಯೆ ಸುಮಾರು 100 ಕೋಟಿ ಆಗಿತ್ತು. ವೈದ್ಯಕೀಯ ವಿಜ್ಞಾನ, ಕೃಷಿ, ಸ್ವಚ್ಛತೆ ಮತ್ತು ಆರೋಗ್ಯ ಸೇವೆಗಳ ಬೆಳವಣಿಗೆಯಿಂದ ಅದು ವೇಗವಾಗಿ ಹೆಚ್ಚಾಗಿ 2022ರ ಹೊತ್ತಿಗೆ ಸುಮಾರು 800 ಕೋಟಿಗೆ ತಲುಪಿತು.

ಪ್ರತಿ ವರ್ಷ ಜುಲೈ 11ರಂದು ವಿಶ್ವದಾದ್ಯಂತ ಆಚರಿಸಲಾಗುವ ವಿಶ್ವ ಜನಸಂಖ್ಯಾ ದಿನವು ಕೇವಲ ಜನಸಂಖ್ಯೆಯ ಲೆಕ್ಕಾಚಾರವನ್ನು ನೆನಪಿಸುವ ದಿನವಲ್ಲ. ಇದು ಮಾನವ ಸಮಾಜದ ಭವಿಷ್ಯ, ಸುಸ್ಥಿರ ಅಭಿವೃದ್ಧಿ, ಯುವಜನರ ಕನಸುಗಳು, ಮಹಿಳೆಯರ ಹಕ್ಕುಗಳು, ಆರೋಗ್ಯ, ಶಿಕ್ಷಣ ಮತ್ತು ಪರಿಸರದ ನಡುವೆ ಇರುವ ಅವಿನಾಭಾವ ಸಂಬಂಧವನ್ನು ಜಗತ್ತಿನ ಗಮನಕ್ಕೆ ತರುವ ದಿನವಾಗಿದೆ.

ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) 1989ರಲ್ಲಿ ಈ ದಿನವನ್ನು ಆರಂಭಿಸಿತು. 1987ರ ಜುಲೈ 11ರಂದು ವಿಶ್ವದ ಜನಸಂಖ್ಯೆ 500 ಕೋಟಿಯ ಗಡಿ ದಾಟಿದ ಐತಿಹಾಸಿಕ ಕ್ಷಣವೇ ಇದರ ಹಿನ್ನೆಲೆ. ಅದು ವಿಶ್ವದ ಅಭಿವೃದ್ಧಿಯ ಅಥವಾ ದುರ್ಗತಿಯ ದಿಕ್ಕು ನಿರ್ಧರಿಸುವ ಪ್ರಮುಖ ಅಂಶ ಎಂಬ ಅರಿವನ್ನು ಮೂಡಿಸುವ ಉದ್ದೇಶದಿಂದ ಈ ದಿನವನ್ನು ವಿಶ್ವಮಟ್ಟದಲ್ಲಿ ಆಚರಿಸುವುದು ಪ್ರಾರಂಭವಾಯಿತು.

2026ರ ವಿಶ್ವ ಜನಸಂಖ್ಯಾ ದಿನದ ಧ್ಯೇಯವು, “Realizing the hopes and aspirations of young people: today and for the future” ಅಂದರೆ, ಯುವಜನರ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಅರಿತುಕೊಳ್ಳುವುದು: ಇಂದು ಮತ್ತು ಭವಿಷ್ಯಕ್ಕಾಗಿ ಎಂಬುದಾಗಿದೆ. ಈ ಧ್ಯೇಯವು ಜಗತ್ತಿನ ಯುವಜನರ ಆಶೋತ್ತರಗಳು, ಶಿಕ್ಷಣ, ಆರೋಗ್ಯ, ಉದ್ಯೋಗ, ಕುಟುಂಬ ಜೀವನ ಮತ್ತು ಅವರ ಭವಿಷ್ಯದ ಬಗೆಗಿನ ನಿರೀಕ್ಷೆಗಳನ್ನು ಗೌರವಿಸುವಂತೆ ಸರ್ಕಾರಗಳಿಗೆ ಹಾಗೂ ಮನುಕುಲಕ್ಕೆ ಕರೆ ನೀಡುತ್ತದೆ. UNFPA ನಡೆಸಿದ ವಿಶಾಲ ಸಮೀಕ್ಷೆಯ ಪ್ರಕಾರ, ವಿಶ್ವದ ಅಸಂಖ್ಯ ಯುವಕರು ತಮ್ಮ ಕುಟುಂಬವನ್ನು ಕಟ್ಟಿಕೊಳ್ಳಲು, ಮಕ್ಕಳನ್ನು ಬೆಳೆಸಲು ಹಾಗೂ ಉತ್ತಮ ಬದುಕು ಕಟ್ಟಿಕೊಳ್ಳಲು ಬಯಸುತ್ತಿದ್ದರೂ ನಿರುದ್ಯೋಗ, ದುಬಾರಿ ಜೀವನಶೈಲಿ, ದುಶ್ಚಟಗಳು, ಆರೋಗ್ಯದ ಸಮಸ್ಯೆಗಳು ಹಾಗೂ ಸಾಮಾಜಿಕ ಅಡೆತಡೆಗಳು ಅವರ ಆಸೆ-ಆಕಾಂಕ್ಷೆಗಳ ಮೇಲೆ ಪರಿಣಾಮ ಬೀರುತ್ತಿವೆ ಎಂಬುದನ್ನು ಸೂಚಿಸುವೆ.

ಭಾರತದ ದೃಷ್ಟಿಯಿಂದ ನೋಡಿದರೆ, ವಿಶ್ವದಲ್ಲೇ ಅತಿ ದೊಡ್ಡ ಯುವ ಸಮುದಾಯವನ್ನು ಹೊಂದಿರುವ ದೇಶ ನಮ್ಮದು. ಈ ಯುವಶಕ್ತಿಗೆ ಉತ್ತಮ ಗುಣಮಟ್ಟದ ಶಿಕ್ಷಣ, ತಾಂತ್ರಿಕ ಕೌಶಲ್ಯ, ಉತ್ತಮ ಆರೋಗ್ಯ ಹಾಗೂ ಸಮರ್ಪಕ ಉದ್ಯೋಗ ದೊರೆತರೆ ಭಾರತವು ವಿಶ್ವದ ಪ್ರಮುಖ ಆರ್ಥಿಕ ಶಕ್ತಿಯಾಗಿ ಬೆಳೆಯುವ ಎಲ್ಲ ಸಾಮರ್ಥ್ಯ ಹೊಂದಿದೆ. ಇದನ್ನೇ ಅರ್ಥಶಾಸ್ತ್ರಜ್ಞರು Demographic Dividend ಅಥವಾ ಜನಸಂಖ್ಯಾ ಲಾಭಾಂಶ ಎಂದು ಕರೆಯುತ್ತಾರೆ.

ಜನಸಂಖ್ಯೆಯ ಹೆಚ್ಚಳದೊಂದಿಗೆ ಆಹಾರ, ನೀರು, ವಿದ್ಯುತ್, ವಸತಿ, ಆರೋಗ್ಯ, ಶಿಕ್ಷಣ ಮತ್ತು ಸಾರಿಗೆ ವ್ಯವಸ್ಥೆಗಳ ಮೇಲಿನ ಒತ್ತಡವೂ ಹೆಚ್ಚುತ್ತದೆ. ಪರಿಸರ ಮಾಲಿನ್ಯ, ಅರಣ್ಯ ನಾಶ, ಹವಾಮಾನ ಬದಲಾವಣೆ ಹಾಗೂ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆ, ಮಾನವ ನಿರ್ಮಿತ ಪ್ರಕೃತಿವಿಕೋಪದಂತಹ ಸಮಸ್ಯೆಗಳು ಇನ್ನಷ್ಟು ಗಂಭೀರವಾಗುತ್ತವೆ. ಆದ್ದರಿಂದ ಜನಸಂಖ್ಯೆಯನ್ನು ನಿಯಂತ್ರಿಸುವುದಕ್ಕಿಂತಲೂ, ಜನ-ಜೀವನದ ಗುಣಮಟ್ಟವನ್ನು ಉತ್ತಮಗೊಳಿಸುವುದೇ ಆಧುನಿಕ ಜಗತ್ತಿನ ಪ್ರಮುಖ ಗುರಿಯಾಗಿದೆ.
ವಿಶ್ವ ಜನಸಂಖ್ಯಾ ದಿನವು ಮಹಿಳೆಯರ ಆರೋಗ್ಯ, ಸಂತಾನೋತ್ಪತ್ತಿಯ ಹಕ್ಕುಗಳು, ಕುಟುಂಬ ಯೋಜನೆ, ತಾಯಿ-ಮಗುವಿನ ಸುರಕ್ಷತೆ ಮತ್ತು ಲಿಂಗ ಸಮಾನತೆಯ ಮಹತ್ವವನ್ನೂ ಒತ್ತಿ ಹೇಳುತ್ತದೆ. ಶಿಕ್ಷಣ ಪಡೆದ, ಆರೋಗ್ಯವಂತ ಹಾಗೂ ಸಬಲ ಮಹಿಳೆಯರು ಆರೋಗ್ಯಕರ ಕುಟುಂಬ ಮತ್ತು ಆರೋಗ್ಯಕರ ಸಮಾಜ ನಿರ್ಮಾಣದ ಪ್ರಮುಖ ಆಧಾರಸ್ತಂಭಗಳಾಗಿದ್ದಾರೆ. ಆದ್ದರಿಂದ ಮಹಿಳಾ ಶಿಕ್ಷಣದಲ್ಲಿ ಹೂಡಿಕೆ ಮಾಡುವುದು ಜನಸಂಖ್ಯೆಯ ಭವಿಷ್ಯದಲ್ಲಿ ಹೂಡಿಕೆ ಮಾಡಿದಂತೆಯೇ ಆಗುತ್ತದೆ.

1987ರಲ್ಲಿ ಜಾಗತಿಕ ಜನಸಂಖ್ಯೆ 500 ಕೋಟಿ ದಾಟಿದಾಗ ಆರಂಭವಾದ ಜನಸಂಖ್ಯಾ ದಿನದ ನಂತರ, ದಶಕಗಳ ಕಾಲ ಜಗತ್ತು ಜನಸಂಖ್ಯಾ ಸ್ಫೋಟದ ಬಗ್ಗೆ ಕಳವಳಗೊಂಡಿತ್ತು. ಆದರೆ ಇಂದು ಚಿತ್ರಣ ಬದಲಾಗಿದ್ದು, ಹಲವು ದೇಶಗಳಲ್ಲಿ ಜನಸಂಖ್ಯಾ ನಿಯಂತ್ರಣ ಯೋಜನೆಗಳ ವ್ಯತಿರಿಕ್ತ ಪರಿಣಾಮಗಳು ಎದ್ದುಕಾಣುತ್ತಿವೆ.

ಉದಾಹರಣೆಗೆ, ದಶಕಗಳ ಕಾಲದ ‘ಒಂದೇ ಮಗು’ ನೀತಿಯಿಂದಾಗಿ ಚೀನಾದಲ್ಲಿ 2022ರಿಂದ ಜನಸಂಖ್ಯೆ ಸತತ ಕುಸಿಯುತ್ತಿದ್ದು, 2025ರ ವೇಳೆಗೆ 140.5 ಕೋಟಿಗೆ ಇಳಿದಿದೆ. ಜನನ ಪ್ರಮಾಣ 7.92 ಮಿಲಿಯನ್‌ಗಳಷ್ಟು ಕುಸಿದು, ಮಹಿಳೆಯರ ಫಲವತ್ತತೆಯ ದರ (TFR) 1.0ಕ್ಕಿಂತ ಕಡಿಮೆಯಾಗಿದೆ. 60 ವರ್ಷ ಮೇಲ್ಪಟ್ಟವರ ಸಂಖ್ಯೆ ಶೇ.22 ದಾಟಿದ್ದು, ದೇಶವು ಶ್ರೀಮಂತವಾಗುವ ಮುನ್ನವೇ ಮುಪ್ಪಾಗುತ್ತಿರುವ ಆತಂಕ ಚೀನಾ ಸರ್ಕಾರಕ್ಕಿದೆ.

ಜಪಾನ್ ಸ್ಥಿತಿ ಇನ್ನೂ ಗಂಭೀರ! 2024ರಲ್ಲಿ ಕೇವಲ 686,061 ಮಕ್ಕಳು ಜನಿಸಿದ್ದು, TFR 1.15ಕ್ಕೆ ಕುಸಿದಿದೆ ಹಾಗೂ 30% ಜನ 65 ವರ್ಷ ಮೇಲ್ಪಟ್ಟವರಾಗಿದ್ದಾರೆ. ಅಲ್ಲಿನ ಪ್ರಧಾನಿ ಶಿಗೆರು ಇಶಿಬಾ ಇದನ್ನು “ಮೌನ ತುರ್ತುಪರಿಸ್ಥಿತಿ” ಎಂದಿದ್ದಾರೆ. ಇಟಲಿ, ಸ್ಪೇನ್ ಮತ್ತು ಪೂರ್ವ ಯೂರೋಪ್ ದೇಶಗಳಲ್ಲೂ TFR 2.1ಕ್ಕಿಂತ ಕೆಳಗಿದ್ದು, ಜನನಕ್ಕಿಂತ ಮರಣ ಸಂಖ್ಯೆ ಹೆಚ್ಚಾಗಿ ಜನಸಂಖ್ಯೆ ಋಣಾತ್ಮಕವಾಗಿ ಬೆಳೆಯುತ್ತಿದೆ.

ಜರ್ಮನಿಯಲ್ಲಿ ಮಧ್ಯಪ್ರಾಚ್ಯದಿಂದ ವಲಸೆ ಬಂದ ಮುಸ್ಲಿಂ ಯುದ್ಧಸಂತ್ರಸ್ತರ ವಲಸೆಯೇ ಜನಸಂಖ್ಯಾ ಹೆಚ್ಚಳಕ್ಕೆ ಕಾರಣವೇ ಹೊರತು ಜರ್ಮನರ ಜನನ ಪ್ರಮಾಣವಲ್ಲ! ಜಗತ್ತಿನಲ್ಲೇ ಅತಿ ಕಡಿಮೆ ದರ (0.7–0.76) ಹೊಂದಿರುವ ದಕ್ಷಿಣ ಕೊರಿಯಾ ಇದನ್ನು “ರಾಷ್ಟ್ರೀಯ ತುರ್ತುಪರಿಸ್ಥಿತಿ” ಎಂದಿದೆ. ಈ ದೇಶಗಳಲ್ಲಿ ಕಾರ್ಮಿಕ ಕೊರತೆ, ಪಿಂಚಣಿ-ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡ ಮತ್ತು ಆರ್ಥಿಕ ಕುಂಠಿತದ ಆತಂಕ ಹೆಚ್ಚಿದೆ.

ಭಾರತವೂ ಇದೇ ಹಾದಿಯಲ್ಲಿದೆ. UNFPA-2025ರ ವರದಿ ಪ್ರಕಾರ, ಭಾರತದ TFR 2.1ರಿಂದ 1.9ಕ್ಕೆ ಇಳಿದಿದೆ. ದೆಹಲಿ (1.2), ತಮಿಳುನಾಡು-ಪಶ್ಚಿಮ ಬಂಗಾಳ (1.3) ದರ ಜಪಾನ್‌ಗಿಂತಲೂ ಕಡಿಮೆಯಿದ್ದರೆ; ಬಿಹಾರ (2.9) ಹಾಗೂ ಉತ್ತರಪ್ರದೇಶ (2.6) ಗಳಲ್ಲಿ ಇನ್ನೂ ಹೆಚ್ಚಿದೆ.

ಇದಕ್ಕೆ ಪರಿಹಾರವಾಗಿ ತಜ್ಞರು ಸೂಚಿಸುವ ಉಪಾಯಗಳೆಂದರೆ, ಕಡಿಮೆ TFR ಇರುವ ರಾಜ್ಯಗಳಲ್ಲಿ ಮಕ್ಕಳ ಪಾಲನೆ, ವಸತಿ, ಉದ್ಯೋಗ ಭದ್ರತೆಗೆ ಪ್ರೋತ್ಸಾಹ; ಹೆಚ್ಚಿನ TFR ಇರುವ ಕಡೆ ಹೆಣ್ಣುಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ಒತ್ತು ಕೊಡುವುದು. ಜೊತೆಗೆ, ಕೆಲಸದ ಸ್ಥಳಗಳಲ್ಲಿ ಪೋಷಕಸ್ನೇಹಿ ನೀತಿಗಳು ಹಾಗೂ ಕೌಶಲ್ಯಾಭಿವೃದ್ಧಿ ಮೂಲಕ ಜನಸಂಖ್ಯೆಯನ್ನು ವರದಾನವಾಗಿಸಿಕೊಳ್ಳುವುದು.

“ಎಷ್ಟು ಜನರಿದ್ದಾರೆ ಎಂಬುದಕ್ಕಿಂತ, ಹೇಗೆ ಬದುಕುತ್ತಿದ್ದಾರೆ” ಎಂಬುದು ಮುಖ್ಯ. ರಾಷ್ಟ್ರದ ಶಕ್ತಿಯು ಜನಸಂಖ್ಯೆಯ ಗಾತ್ರದಿಂದಲ್ಲ, ಜನರ ಆರೋಗ್ಯ, ಶಿಕ್ಷಣ, ಕೌಶಲ್ಯ ಮತ್ತು ಉತ್ಪಾದಕತೆಯಿಂದ ನಿರ್ಧಾರವಾಗುತ್ತದೆ. ಪ್ರತಿಯೊಬ್ಬರಿಗೂ ಘನತೆಯ ಜೀವನ ಹಾಗೂ ಸಮಾನ ಅವಕಾಶ ದೊರಕಿದಾಗ ಮಾತ್ರ ಜನಸಂಖ್ಯೆ ಹೊರೆಯಾಗದೇ ಅಮೂಲ್ಯ ಸಂಪತ್ತಾಗುತ್ತದೆ.

ಧಾರ್ಮಿಕ, ಮತೀಯ ಮೌಢ್ಯಗಳಿಂದ ಹೊರಬಂದು ಜನಸಂಖ್ಯಾ ಸ್ಫೋಟ ಮತ್ತು ಅಭಾವಗಳೆರಡರ ಬಗ್ಗೆಯೂ ನಾವು ಸಮಾನ ಹೊಣೆ ಹೊರಬೇಕು ಹಾಗೂ ವೈಜ್ಞಾನಿಕ ಹಾಗೂ ತಾತ್ತ್ವಿಕ ಪರಿಹಾರಗಳನ್ನು ವಿಶ್ವಸಂಸ್ಥೆಯು ಸಂಶೋಧನೆ ಮಾಡಿ ಸೂಚಿಸಬೇಕು. ಜನಸಂಖ್ಯೆಯ ನಿಯಂತ್ರಣ ಅಥವಾ ಹೆಚ್ಚಳಕ್ಕಾಗಿ ಮಾಡುವ ಕೃತಕ, ಅವೈಜ್ಞಾನಿಕ ಕಾನೂನುಗಳು ನಿಸರ್ಗದ ಸಮತೋಲನಕ್ಕೆ ಮಾರಕವೇ ಹೊರತು ಪೂರಕವಲ್ಲ ಎಂಬುದನ್ನು ಜಗತ್ತು ಇನ್ನು ಅರಿಯಬೇಕಿದೆ.

#Rashtrotthana #RashtrotthanaParishat #rashtrotthanainrashtraseva #worldpopulationday #populationday

Leave a Reply

Your email address will not be published. Required fields are marked *