• June 13, 2026
  • RP
  • 0
With a smile of gratitude, World Blood Donor Day – 2026: One Drop of Humanity. Give Blood. Save Lives.
While performing Bhoodana (donation of land), Godana (donation of cows), Swarnadana (donation of gold), and Annadana (donation of food) earns spiritual merit, it also involves financial expense. However, donating the blood that God has gifted to everyone brings both profound merit and the immense satisfaction of saving a life.
Anyone who is 18 to 65 years old, weighs over 45 kg, and has a hemoglobin level of 12.5 g/dl can donate blood every 3 to 4 months. Come, let us donate blood, save lives, and build a healthy and sustainable society.

ಧನ್ಯತೆಯ ನಗುಮೊಗದೊಳಗೆ ವಿಶ್ವ ರಕ್ತದಾನಿಗಳ ದಿನ – 2026: One Drop of Humanity. Give Blood. Save Lives

ಭೂದಾನ, ಗೋದಾನ, ಸ್ವರ್ಣದಾನ, ಅನ್ನದಾನ ಮಾಡಿ ಪುಣ್ಯಪ್ರಾಪ್ತಿಯಾದರೂ, ಹಣವೂ ವ್ಯಯವಾಗುವುದು. ಆದರೆ, ದೇವರು ಎಲ್ಲರಿಗೂ ಕೊಟ್ಟಿರುವ ರಕ್ತವನ್ನು ದಾನ ಮಾಡಿದಲ್ಲಿ ಪುಣ್ಯದೊಟ್ಟಿಗೆ ಜೀವ ಉಳಿಸಿದ ತೃಪ್ತಿಯೂ ನಮ್ಮದಾಗುತ್ತದೆ. 18 ರಿಂದ 65 ವರ್ಷ ವಯಸ್ಸಿನ, 45 ಕೆ.ಜಿ. ಗಿಂತ ಹೆಚ್ಚು ತೂಕವುಳ್ಳ, 12.5 g/dl ಹಿಮೋಗ್ಲೋಬಿನ್ ಇರುವ ಯಾರಾದರೂ ಪ್ರತಿ 3-4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಬನ್ನಿ, ರಕ್ತದಾನ ಮಾಡೋಣ, ಜೀವ ಉಳಿಸೋಣ, ಸ್ವಸ್ಥ-ಸುಸ್ಥಿರ ಸಮಾಜನಿರ್ಮಿಸೋಣ.

 

“ಅನ್ನದಾನಂ ಪರಂ ದಾನಂ, ವಿದ್ಯಾದಾನಂ ಅತಃ ಪರಮ್” – ಎಂಬ ಸುಭಾಷಿತದಂತೆ ಅನ್ನದಾನವು ಉತ್ತಮವಾದ ದಾನ, ಅದು ಹಸಿವನ್ನು ನೀಗಿಸಿದರೆ, ವಿದ್ಯಾದಾನವು ಅದಕ್ಕಿಂತ ಮಿಗಿಲು. ಕಾರಣ, ಅದು ಜೀವಮಾನದ ಹಸಿವನ್ನೂ ನೀಗಿಸಬಲ್ಲದು! ಭೌತಿಕ ಸ್ತರದಲ್ಲಾದರೆ, ಮಾನವನ ಮಾನಸಿಕ, ಆಧ್ಯಾತ್ಮಿಕ ಸ್ತರದಲ್ಲಿ ವಿಶ್ಲೇಷಿಸಿದಾಗ ಕ್ಷಮಾದಾನ, ಉಪವಾಸ, ಬ್ರಹ್ಮಚರ್ಯ, ಸನ್ಯಾಸಗಳಲ್ಲೂ ತ್ಯಾಗರೂಪದ ದಾನವೇ ಅಸ್ತಿತ್ವ ತೋರುತ್ತದೆ. ಹೀಗೆ ದಾನದ ಮೌಲ್ಯ ಕೇವಲ ನೀಡುವ ಕ್ರಿಯೆಯಲ್ಲ, ಅದು ಮಾನವೀಯತೆಯ ಅತ್ಯುತ್ಕೃಷ್ಟ ಅಭಿವ್ಯಕ್ತಿಯಾಗಿದ್ದು ಅದು ದಯೆ ಮತ್ತು ಧರ್ಮದ ಪ್ರತೀಕವೆನಿಸಿದೆ.

 

ಸಂಸ್ಕೃತ ಭಾಷೆಯಲ್ಲಿ ದಾನವೆಂಬ ಪದಕ್ಕೆ ಸರಳವಾದ ಅರ್ಥವಿದೆ. “ದಾ” ಧಾತುವಿನಿಂದ ಉದ್ಭವಿಸಿರುವ ಈ ಪದಕ್ಕೆ “ಕೊಡುವುದು”, “ಅರ್ಪಿಸುವುದು” ಎಂಬ ಮೂಲ ಅರ್ಥ. ತನ್ನಲ್ಲಿರುವ ವಸ್ತುವಿನ ಮೇಲಿನ ಸ್ವಾಮ್ಯವನ್ನು ಸಂಪೂರ್ಣವಾಗಿ ತೊರೆದು, ಪ್ರತಿಫಲದ ನಿರೀಕ್ಷೆಯಿಲ್ಲದೇ ಪರರ ಹಿತಕ್ಕಾಗಿ ಅರ್ಪಿಸುವ ಕ್ರಿಯೆಯೇ ನಿಜವಾದ ದಾನ ಎಂಬ ಭಾವಾರ್ಥವೇ ಹೆಚ್ಚು ಪ್ರಚಲಿತ ಹಾಗೂ ಅರ್ಥಗರ್ಭಿತವಾದದ್ದು. ಭಗವದ್ಗೀತೆಯಲ್ಲಿ ಕೃಷ್ಣ ಹೇಳುವಂತೆ, “ದಾತವ್ಯಮಿತಿ ಯದ್ದಾನಂ…” — ಕರ್ತವ್ಯ ಭಾವದಿಂದ, ಸರಿಯಾದ ದೇಶ-ಕಾಲ-ಪಾತ್ರದಲ್ಲಿ ಪ್ರತ್ಯುಪಕರಿಸಲು ಆಗದ ದೀನರಿಗೆ ನೀಡಿದ ದಾನವೇ ಸಾತ್ತ್ವಿಕ ದಾನ.

 

ಜೂನ್ ತಿಂಗಳ 14ನೇ ದಿನಾಂಕವನ್ನು “ವಿಶ್ವ ರಕ್ತದಾನಿಗಳ ದಿನ”ವಾಗಿ ಆಚರಿಸಲಾಗುತ್ತದೆ. ಇಂದು ಈ ದಾನ ಪರಂಪರೆ ಹೊಸ ಸ್ವರೂಪದಲ್ಲಿ ಮುಂದುವರೆದಿದೆ – ರಕ್ತದಾನ, ಅಂಗಾಂಗ ದಾನ, ನೇತ್ರದಾನ. ಇವೆಲ್ಲವುಗಳಲ್ಲಿ ರಕ್ತದಾನವೂ ಮುಖ್ಯವಾದದ್ದು. ಯಾವ ಕಾರ್ಖಾನೆಯಲ್ಲೂ ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿ ಎಷ್ಟೇ ತಾಂತ್ರಿಕ ಹಾಗೂ ವೈಜ್ಞಾನಿಕ ಆವಿಷ್ಕಾರಗಳಾಗಿದ್ದರೂ, ರಕ್ತ ಹಾಗೂ ಕೃತಕ ಅಂಗಾಂಗಗಳ ಸೃಷ್ಟಿ ಸಾಧ್ಯವಾಗಿಲ್ಲ, ದಾನದ ಮೂಲಕ ಪಡೆವುದೊಂದೇ ಇದಕ್ಕೆ ಪರ್ಯಾಯ.

 

ಒಂದು ಯೂನಿಟ್ ರಕ್ತವು ಮೂರು ಜೀವಗಳನ್ನು ಉಳಿಸಬಲ್ಲದು. ಅಪಘಾತ, ಹೆರಿಗೆ, ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ, ತಲಸ್ಸೆಮಿಯಾದಂತಹ ತುರ್ತು ಚಿಕಿತ್ಸೆಯ ಸಂದರ್ಭಗಳಲ್ಲಿನ ರಕ್ತದ ಆವಶ್ಯಕತೆಗೆ ದಾನವೇ ಏಕೈಕ ಪರಿಹಾರ. ರಕ್ತದಾನ ಮಾಡಿದ 24-48 ಗಂಟೆಗಳಲ್ಲಿ ದಾನಿಯ ದೇಹವು ಹೊಸ ರಕ್ತವನ್ನು ಉತ್ಪಾದಿಸಿ ನಷ್ಟ ಪೂರೈಸಿಕೊಳ್ಳುತ್ತದೆ. ದಾನಿಯ ಆರೋಗ್ಯಕ್ಕೂ ಅದು ಬಹಳ ಪ್ರಯೋಜನಕಾರಿ. ಪ್ರಸ್ತುತ, ಭಾರತದಲ್ಲಿ ಪ್ರತಿವರ್ಷ ಸಾವಿರಾರು ಯೂನಿಟ್ಗಳ ರಕ್ತದ ಕೊರತೆ ಉಂಟಾಗುತ್ತಿದೆ. ಅರ್ಹ ದಾನಿಗಳಲ್ಲಿ ಕೇವಲ ಶೇ. 5ರಷ್ಟು ಮಂದಿ ಮಾತ್ರ ರಕ್ತದಾನ ಮಾಡುತ್ತಿದ್ದಾರೆ.

 

ಭಾರತದಾದ್ಯಂತ ಸರಾಸರಿ ಪ್ರತಿ 2 ಸೆಕೆಂಡಿಗೊಮ್ಮೆ ತುರ್ತು ರಕ್ತದ ಅವಶ್ಯಕತೆ ಉದ್ಭವಿಸುತ್ತದೆ. ಸರಾಸರಿ ವಾರ್ಷಿಕ 14.6 ಮಿಲಿಯನ್ ಯೂನಿಟ್-ಗಳಷ್ಟು ರಕ್ತ ಬೇಡಿಕೆಯಿದೆ; ಆದರೆ ಯಾವಾಗಲೂ 1 ಮಿಲಿಯನ್ ಯೂನಿಟ್-ಗಳಷ್ಟು ಕೊರತೆಯಾಗುತ್ತಿದೆ. ಪ್ರಾಚೀನ ಕಾಲದಲ್ಲಿ ದಧೀಚಿ ಎಂಬ ಋಷಿಯು ಲೋಕದ ರಕ್ಷಣೆಗಾಗಿ ತನ್ನ ಬೆನ್ನುಮೂಳೆಯನ್ನೇ ವಜ್ರಾಯುಧ ತಯಾರಿಸಲು ದಾನ ನೀಡಿದಂತೆ, ಅನೇಕ ಜೀವಗಳ ರಕ್ಷಣೆಗಾಗಿ ರಕ್ತದಾನವನ್ನು ಅವಶ್ಯವಾಗಿ ಮಾಡಬೇಕಾಗಿದೆ.

 

ರಕ್ತದ ಕೊರತೆಯ ಸಮಸ್ಯೆಯನ್ನು ನೀಗಿಸಲು ನಿರಂತರ ಶ್ರಮಿಸುತ್ತಿರುವ ಸಂಸ್ಥೆಗಳಲ್ಲಿ ರಾಷ್ಟ್ರೋತ್ಥಾನ ರಕ್ತಕೇಂದ್ರವೂ ಅಗ್ರಗಣ್ಯವಾಗಿದ್ದು, 1993ರ ಮೇ 30ರಂದು ಸ್ಥಾಪಿತವಾಯಿತು. ಇಂದು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಅಹರ್ನಿಶಿ (24×7) ಸೇವೆ ನೀಡುತ್ತಾ ಬಂದಿದೆ. 1993ರಿಂದ 2026ರ ಮಾರ್ಚ್ ತಿಂಗಳ 33 ವರ್ಷಗಳ ಅವಧಿಯಲ್ಲಿ ಈ ಕೇಂದ್ರವು ಅಭೂತಪೂರ್ವ ಸಾಧನೆಗಳನ್ನು ಮಾಡಿದೆ.

 

ಅವುಗಳಲ್ಲಿ ಪ್ರಮುಖವಾದವುಗಳು:

  • ಒಟ್ಟು 6,369 ರಕ್ತದಾನ ಶಿಬಿರಗಳು
  • 11,23,553 ಯೂನಿಟ್ ರಕ್ತಸಂಗ್ರಹ
  • 5,39,139 ಸ್ವಯಂಪ್ರೇರಿತ ದಾನಿಗಳು
  • 10,88,827 ಯೂನಿಟ್ ವಿತರಣೆ
  • 4,07,932 ಫಲಾನುಭವಿಗಳು

 

ಈ ಅಂಕಿ-ಅಂಶಗಳು ಸೇವಾಕಾರ್ಯಗಳ ಆಳ ಮತ್ತು ವ್ಯಾಪ್ತಿಯನ್ನು ಸ್ಪಷ್ಟಪಡಿಸುತ್ತವೆ. “ರಕ್ತಕ್ಕಾಗಿ ಬಂದವರಾರೂ ಬರಿಗೈಯಲ್ಲಿ ಹಿಂದಿರುಗಬಾರದು” ಎಂಬುದೇ ರಾಷ್ಟ್ರೋತ್ಥಾನ ರಕ್ತಕೇಂದ್ರದ ಉನ್ನತ ಧ್ಯೇಯಗಳಲ್ಲೊಂದು. ಕರ್ನಾಟಕ ಸರ್ಕಾರದಿಂದ “ಅತ್ಯುತ್ತಮ ರಕ್ತ ಬ್ಯಾಂಕ್” (2011-12) ಮತ್ತು ಕೋವಿಡ್ ಸಮಯದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹದ ಗುರಿ ದಾಟಿದ ಸಾಧನೆಯು ರಕ್ತಕೇಂದ್ರದ ವಿಶ್ವಾಸಾರ್ಹತೆಗೆ ಸಂದ ಗೌರವವಾಗಿದೆ.

 

ತಲಸ್ಸೆಮಿಯಾ ಒಂದು ಆನುವಂಶೀಯ ಕಾಯಿಲೆಯಾಗಿದ್ದು, ರಕ್ತದಲ್ಲಿರುವ ಕೆಂಪು ರಕ್ತಕಣಗಳ ಅವ್ಯವಸ್ಥೆಯಿಂದಾಗಿ (ಏರುಪೇರು) ಉಂಟಾಗುವ ಸಮಸ್ಯೆ. ಆ ಸಮಸ್ಯೆಯಿಂದಾಗಿ ಕೆಂಪು ರಕ್ತಕಣಗಳ ಉತ್ಪಾದನೆಯನ್ನು ಕ್ರಮೇಣ ಕುಂಠಿತಗೊಳಿಸಿ ರಕ್ತಹೀನತೆಗೆ ದಾರಿ ಮಾಡಿಕೊಟ್ಟು, ರೋಗಿಯು ನಿತ್ರಾಣಗೊಂಡು ಸಾಯುವ ಸನ್ನಿವೇಶ ಎದುರಾಗುತ್ತದೆ. ಇದು ಅತ್ಯಂತ ವಿರಳ ರೋಗವಾಗಿದ್ದು, ಪ್ರತಿ 15 ದಿನಕ್ಕೊಮ್ಮೆ ದೇಹದ ರಕ್ತವನ್ನು ಬದಲಿಸಿ ಮರುಪೂರಣ ಮಾಡುವುದೊಂದೇ ಈ ರೋಗಕ್ಕಿರುವ ಪರಿಹಾರೋಪಾಯ. ಆದರೆ, ರೋಗಿಯು ಬಡ ಅಥವಾ ಕೆಳಮಧ್ಯಮ ವರ್ಗಕ್ಕೆ ಸೇರಿದ ಕುಟುಂಬದವನಾಗಿದ್ದರೆ ಈ ಚಿಕಿತ್ಸೆಯು ದೊಡ್ಡ ಖರ್ಚಿನ ಬಾಬತ್ತು ಎಂಬಂತಾಗಿ, ಜೀವನ ದುರ್ಭರಗೊಂಡು ಇಡಿಯ ಕುಟುಂಬವೇ ಸಾಲದ ಹೊರೆ ಹೊರುವ ಭೀತಿ ಎದುರಾಗಬಹುದು.

 

ಇಂತಹ ರೋಗಿಗಳ ಶುಶ್ರೂಷೆಗಾಗಿ, 2013ರಲ್ಲಿ ಆರಂಭಗೊಂಡ “ಸಂರಕ್ಷಾ”, ‘ತಲಸ್ಸೆಮಿಯಾ ಆರೈಕೆ ಯೋಜನೆ’ಯ ಮೂಲಕ 400ಕ್ಕೂ ಅಧಿಕ ಮಕ್ಕಳಿಗೆ ಉಚಿತ ರಕ್ತಪೂರಣ ಹಾಗೂ ಪೂರಕ ಚಿಕಿತ್ಸೆ ಒದಗಿಸಲಾಗುತ್ತಿದೆ. ಪ್ರತಿ ವರ್ಷ ಜೂನ್ 14ರಂದು ಆಚರಿಸಲ್ಪಡುವ ವಿಶ್ವ ರಕ್ತದಾನಿಗಳ ದಿನ, ನಿಸ್ವಾರ್ಥ ದಾನಿಗಳನ್ನು ಸ್ಮರಿಸುವ, ಸಮ್ಮಾನಿಸುವ, ಕೃತಜ್ಞತೆ ಸಲ್ಲಿಸುವ ಸುಸಂದರ್ಭ. ತನ್ಮೂಲಕ ಸಮಾಜದಲ್ಲಿ ರಕ್ತದಾನದ ಅರಿವು ಮೂಡಿಸುವ ಒಂದು ಸದವಕಾಶವೂ ಹೌದು.

 

Learn More: https://bloodcentre.rashtrotthana.org/
#Rashtrotthana #RashtrotthanaParishat #rashtrotthanainrashtraseva #worldblooddonorsday #blooddonorsday #blooddonation #rashtrotthanabloodcentre

Leave a Reply

Your email address will not be published. Required fields are marked *