This is how Rashtrotthana Vidyakendras stand apart…
A school is not merely a colorful building standing on four pillars. It is a center for social transformation.
The Vidyakendras offer holistic development through five-fold education, cultural values alongside play and study, the maternal warmth of mother-tongue education, creative activities, service-oriented PTMs (Parent-Teacher Meetings), Matru Bharati–Matru Mandir service wings, the school’s service projects, and a vision of building a model school in every district.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳು ಭಿನ್ನವಾಗಿ ನಿಲ್ಲುವುದು ಹೀಗೆ…
ಶಾಲೆಯೆಂದರೆ ಕೇವಲ ನಾಲ್ಕು ಕಂಬಗಳ ಮೇಲಿರುವ ಬಣ್ಣಬಣ್ಣದ ಸೌಧವಲ್ಲ.
ಅದೊಂದು ಸಮಾಜ-ಪರಿವರ್ತನಾ ಕೇಂದ್ರ.
ವಿದ್ಯಾಕೇಂದ್ರಗಳಲ್ಲಿದೆ ಸರ್ವಾಂಗೀಣ ವಿಕಾಸದ ಪಂಚಮುಖೀ ಶಿಕ್ಷಣ, ಆಟ-ಪಾಠದೊಟ್ಟಿಗೆ ಸಂಸ್ಕಾರ, ಮಾತೃಭಾಷಾ ಶಿಕ್ಷಣದ ಮಾತೃಛಾಯಾ, ಸೃಜನಾತ್ಮಕ ಕಾರ್ಯಕಲಾಪಗಳು, ಸೇವಾ ಆಯಾಮದ PTMಗಳು, ಮಾತೃಭಾರತಿ-ಮಾತೃಮಂದಿರ ಸೇವಾ ವಿಭಾಗಗಳು, ಶಾಲೆಯ ಸೇವಾ ಪ್ರಕಲ್ಪಗಳು, ಜಿಲ್ಲೆಗೊಂದು ಮಾದರಿ ಶಾಲೆ ಕಟ್ಟುವ ನೋಟ.
- ಪಂಚಮುಖೀ ಶಿಕ್ಷಣ: ತೈತ್ತರೀಯ ಉಪನಿಷತ್ತಿನ ಸ್ಫೂರ್ತಿಯ ಚಿಂತನ-ಮಂಥನಗೊಳೊಂದಿಗೆ ಪಂಚಕೋಶಾತ್ಮಕ ಶರೀರದ (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ, ಆನಂದಮಯ) ಸರ್ವಾಂಗೀಣ ವಿಕಾಸದ ದೃಷ್ಟಿಯಿಂದ ರೂಪುಗೊಂಡಿರುವುದೇ ಪಂಚಮುಖೀ ಶಿಕ್ಷಣ (ಆಯಾಮಗಳು: ದೈಹಿಕ, ಬೌದ್ಧಿಕ, ಮಾನಸಿಕ, ಭಾವನಾತ್ಮಕ, ಆಧ್ಯಾತ್ಮಿಕ). ಆಟ, ಪಾಠ, ಓದು, ಮಾತು, ಪ್ರಾರ್ಥನೆ, ಭಜನೆ, ಅದು ಏನೇ ಇರಲಿ, ಒಂದೊಂದು ಆಯಾಮವನ್ನೂ ಆ ಚಟುವಟಿಕೆಗೆ ಒಪ್ಪುವ ಹದದಲ್ಲಿ ಪಾಕಗೊಳಿಸಿಕೊಳ್ಳುವುದನ್ನು ಪಂಚಮುಖೀ ಶಿಕ್ಷಣವು ಹೇಳುತ್ತದೆ.
- ಆಟ-ಪಾಠದೊಟ್ಟಿಗೆ ಸಂಸ್ಕಾರ: ವಿದ್ಯಾರ್ಥಿಗಳಲ್ಲಿ ಮೌಲ್ಯಗಳು ಹಾಗೂ ವ್ಯಕ್ತಿತ್ವವೈಶಿಷ್ಟ್ಯವನ್ನು ನೆಲೆಗೊಳಿಸುವ ವಿಧಾನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ಶಿಕ್ಷಣಕ್ರಮದಲ್ಲಿ ಹಾಸುಹೊಕ್ಕಾಗಿದೆ. ಇಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಹಬ್ಬಗಳು ನಮ್ಮ ದೇಶದ ಬಗೆಗೆ ಹೆಮ್ಮೆಯನ್ನು ಮೂಡಿಸುತ್ತವೆ.
- ಗೋಕುಲಂ – ಮಾತೃಛಾಯಾ: ಸುದೃಢ ಬುನಾದಿಯನ್ನು ನಿರ್ಮಿಸುವ ನಿಟ್ಟಿನಲ್ಲಿ ಪ್ರೀ-ಕೆಜಿಯಿಂದ 2ನೇ ತರಗತಿಯವರೆಗೆ ಕನ್ನಡ ಮಾಧ್ಯಮದಲ್ಲೇ ಆರಂಭಿಕ ಶಿಶುಶಿಕ್ಷಣ ನೀಡುವ ಪ್ರಕಲ್ಪ.
- ಸೃಜನಾತ್ಮಕ ಕಾರ್ಯಕಲಾಪಗಳು: 7 ರಿಂದ 9ನೇ ತರಗತಿಯ ಮಕ್ಕಳ ಸಮಗ್ರ ವಿಕಾಸಕ್ಕಾಗಿ ಸೃಷ್ಟಿ ಶಿಬಿರಗಳು – ಭಾರತದ ಹಳ್ಳಿಮೂಲೆಯ ಜನಜೀವನದೊಂದಿಗೆ ಬೆರೆತು (ಕಳೆದ ಸಾರಿ ಈಶಾನ್ಯ ಭಾರತ, ಈ ಬಾರಿ ಮಧ್ಯಪ್ರದೇಶ), ಭಾರತೀಯ ಸಂಸ್ಕೃತಿ-ಪರಂಪರೆಯ ಅಭಿವ್ಯಕ್ತಿಗಳೊಂದಿಗೆ ರಾಷ್ಟ್ರೋತ್ಸವಗಳು (ವಾರ್ಷಿಕೋತ್ಸವ), ವೈಜ್ಞಾನಿಕ-ಸಾಂಸ್ಕೃತಿಕ ಕೌಶಲಾಭಿವೃದ್ಧಿಗೆ ಸೃಜನೋತ್ಸವ, ಕ್ರೀಡೋತ್ಸವ, ವಿಜ್ಞಾನ-ಗಣಿತ-ಕನ್ನಡ-ಸಂಸ್ಕೃತ-ಹಿಂದೀ ಸಪ್ತಾಹಗಳು, ಹಬ್ಬ-ಹರಿದಿನಗಳು, ಹುಟ್ಟಿದ ಹಬ್ಬಗಳು.
- ಸೇವಾ ಆಯಾಮದ ಪೋಷಕ-ಶಿಕ್ಷಕರ ಸಭೆಗಳು (PTM): ಸಭೆಗಳು ಮಕ್ಕಳ ಪ್ರಗತಿ ಚಿಂತನೆಗಷ್ಟೇ ಸೀಮಿತವಾಗದೇ, ರಕ್ತದಾನ ಸೇವೆ, ಸಾಹಿತ್ಯ ಪ್ರದರ್ಶನ-ಮಾರಾಟ ಅಭಿರುಚಿಗಳಿಗೂ ಸಾಕ್ಷಿಯಾಗುತ್ತಿವೆ.
- ಪೋಷಕರ ಪಾಲ್ಗೊಳ್ಳುವಿಕೆಗೆ ವೇದಿಕೆಗಳು: ಮಾತೆಯರಿಗೆ ಮಾತೃಭಾರತಿ ಹಾಗೂ ಭಜನೆ-ಸತ್ಸಂಗಗಳ ಮಾತೃಮಂದಿರ ಸೇವಾ ವಿಭಾಗಗಳು, ಪೋಷಕರಿಗೆ ರಂಗೋಲಿ ಸ್ಪರ್ಧೆಗಳು, ಆಟೋಟಗಳು, ಕುಟುಂಬಮಿಲನ ಕಾರ್ಯಕ್ರಮ, ಅಜ್ಜ-ಅಜ್ಜಿಯರ ದಿನಾಚರಣೆ, ಬೆಳದಿಂಗಳ ಕೂಟ-ಊಟ, ಮಕ್ಕಳಿಗೆ ಕೈತುತ್ತು ಸಮಾರಾಧನೆ.
- ಶಾಲೆಯ ಸೇವಾ ಆಯಾಮ: 400+ ಹೆಚ್ಚಿನ ಸರ್ಕಾರಿ ಶಾಲೆಗಳಲ್ಲಿ ಯೋಗ-ಸಂಗೀತ ಮೊದಲಾದ ತರಗತಿಗಳನ್ನು ವಿದ್ಯಾಕೇಂದ್ರಗಳೇ ನಡೆಸಿಕೊಡುತ್ತಿವೆ. ಒಂದಷ್ಟು ಶಾಲೆಗಳಿಗೆ ಪಾಠ್ಯಸಾಮಗ್ರಿಯ ಉಚಿತ ವಿತರಣೆ, ವಿದ್ಯಾಕೇಂದ್ರಗಳಲ್ಲೇ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರಗಳು, ಶಾಲೆಯ ಸಹಾಯಕ ಸಿಬ್ಬಂದಿಗಳ (ಆಯಮ್ಮ, ಡ್ರೈವರ್, ಸ್ವಚ್ಛತಾ ಸಿಬ್ಬಂದಿ, ಮಾಲಿ) ಉಚಿತ ಆರೋಗ್ಯ ತಪಾಸಣೆ ಹಾಗೂ ಅವರ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಮಾತೃಭಾರತಿ ವಿಭಾಗದ ಮಾತೆಯರ ಸೇವೆಗೂ ಅವಕಾಶ ಮಾಡಿಕೊಡಲಾಗುತ್ತದೆ.
- ಸಮಾಜ-ಪರಿವರ್ತನಾ ಕೇಂದ್ರಗಳಾಗಿ ಶಾಲೆಗಳು: ಇಂದಿನ ಮಕ್ಕಳೇ ನಾಳಿನ ಪ್ರಜೆಗಳು. ಮಕ್ಕಳಿಗೆ ಕಲಿಸ್ತಾ-ಕಲಿಸ್ತಾ, ಸಂಸ್ಕಾರಗಳಿಂದ ತಟ್ಟುತ್ತಾ, ಆ ಮಕ್ಕಳ ಮನೆಗಳನ್ನು ಶಾಲೆಗಳು ತಲಪಬೇಕು, ಅಲ್ಲಿಂದ ಮುಂದಕ್ಕೆ ಸಮಾಜದೊಳಗೆ ಹೋಗಿ, ಮಕ್ಕಳ ಶಿಕ್ಷಣದಲ್ಲಿ ಶಿಕ್ಷಕರು-ಪೋಷಕರು-ಸಾಮಾಜಿಕರು ಹೀಗೆ ಎಲ್ಲರೂ ಶಾಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ತಂತಮ್ಮ ಜವಾಬ್ದಾರಿಗಳನ್ನು ಸಂಭ್ರಮದಿಂದ ನಿರ್ವಹಿಸುವಂತೆ ಆಗಬೇಕು ಎನ್ನುವುದೇ ಶಾಲೆಗಳು ಸಮಾಜ-ಪರಿವರ್ತನಾ ಕೇಂದ್ರಗಳಾಗಬೇಕೆಂಬ ಚಿಂತನೆಯ ಹಿನ್ನೆಲೆ.
- ಜಿಲ್ಲೆಗೊಂದು ಮಾದರಿ ಶಾಲೆ: ಎಲ್ಲವನ್ನೂ ರಾಷ್ಟ್ರೋತ್ಥಾನವೇ ಮಾಡಬೇಕೆಂಬ ಉದ್ವೇಗಕ್ಕೆ ಒಳಗಾಗಬಾರದೆಂಬುದು ಪರಿಷತ್‍ನ ಧ‍್ಯೇಯಗಳಲ್ಲೇ ಸೂಚ್ಯವಾಗಿ ಹೇಳಿದೆ. ಏನಿದ್ದರೂ ಎಲ್ಲ ಚಟುವಟಿಕೆಗಳಲ್ಲೂ ಉತ್ಕೃಷ್ಟ ಕಾರ್ಯಮಾದರಿಗಳ ಸೃಷ್ಟಿ ಮತ್ತು ಅವುಗಳ ವ್ಯಾಪಕ ಅಳಡಿಕೆಗೆ ಪ್ರೋತ್ಸಾಹ ಎಂಬ ನೇರದಲ್ಲಿ ಜಿಲ್ಲೆಗೊಂದು ಮಾದರಿ ಶಾಲೆಗೆ ಸಂಕಲ್ಪಿಸಿದ್ದು. ಅದರಂತೆ ಬೆಂಗಳೂರು (ನಗರ-ಗ್ರಾಮಾಂತರ), ಧಾರವಾಡ, ವಿಜಯನಗರ, ದಾವಣಗೆರೆಯಲ್ಲಷ್ಟೇ ಇದ್ದ ರಾಷ್ಟ್ರೋತ್ಥಾನದ ಶಾಲೆಗಳು ಮೈಸೂರು, ಬಾಗಲಕೋಟ, ಕಲಬುರಗಿ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಹಾವೇರಿ, ಗದಗವೂ ಸೇರಿ ಕರ್ನಾಟಕದ 13 ಜಿಲ್ಲೆಗಳಿಗೆ (31ರ ಪೈಕಿ) ಪಾದಾರ್ಪಣೆ ಮಾಡಿವೆ. ಶಾಲೆಗಳು ಆಲದಮರದಂತೆ ಬೆಳೆಯುತ್ತಾ ಸುತ್ತಲಿನ ಪರಿಸರದಲ್ಲಿನ ಸಂಘ-ಸಂಸ್ಥೆಗಳಿಗೆ ಮೇಲ್ಪಂಕ್ತಿ, ಆಧಾರ, ನೆರಳೆಲ್ಲ ಆಗುತ್ತ ಸಾಗಬೇಕೆಂಬುದು ದೊಡ್ಡ ಕನಸು.
Learn More: https://rvkcbse.in/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rvk #rvkcbse #rashtrotthanaschools #rashtrotthanavidyakendra #PanchamukhiShikshana #matruchaya #Matrubharati #matrumandira #samajaparivartanakendra #modelschool







