• August 28, 2026
  • RP
  • 0

The T20 World Crown Has Been Won — Let the Victory Not Turn to Intoxication!

There is a profound saying about war: “In war, the one who wins loses, and the one who loses dies.” At a time when many parts of the world are anxious about the dark clouds of war looming and attacks being carried out against one another, yesterday’s T20 series victory by the Indian team created an atmosphere of joy and celebration across the country. This is precisely the difference between such bitter, cutthroat warfare and the spirit of winning and competition found in sports. War today is no longer confined merely to protecting a nation’s borders or safeguarding the rights and peaceful life of its citizens. It has become a ghastly, senseless conflict waged out of greed for global profit, gains from a particular trade or business, or for the recognition of monopoly and the imposition of dominance. But sport or matches are not like that. They are social activities that fill people with joy and enthusiasm.

T20 ವಿಶ್ವಕಿರೀಟ ಮುಡಿಗೇರಿತು, ಗೆಲುವಿನ ಮತ್ತೇರದಿರಲಿ!

ಯುದ್ಧದ ಬಗೆಗೆ ಒಂದು ಅರ್ಥಗರ್ಭಿತವಾದ ಮಾತಿದೆ: “ಯುದ್ಧದಲ್ಲಿ ಗೆದ್ದವನು ಸೋತ, ಸೋತವನು ಸತ್ತ”. ವಿಶ್ವದ ಅನೇಕ ಕಡೆಗಳಲ್ಲಿ ಯುದ್ಧದ ಕಾರ್ಮೋಡ ಕವಿದು, ಪರಸ್ಪರ ದಾಳಿಗಳಾಗುತ್ತಿರುವುದರ ಬಗೆಗೆ ಆತಂಕಿತರಾಗಿರುವ ಈ ಹೊತ್ತಿನಲ್ಲಿ, ನಿನ್ನೆಯ ದಿನ ಭಾರತ ತಂಡದ T20 ಸರಣಿಯ ಗೆಲುವು ದೇಶದೆಲ್ಲೆಡೆ ಹರ್ಷೋಲ್ಲಾಸದ, ವಿಜಯೋತ್ಸವದ ವಾತಾವರಣ ನಿರ್ಮಿಸಿತ್ತು. ಇದೇ ಜಿದ್ದಾಜಿದ್ದಿನ ಯುದ್ಧಕ್ಕೂ, ಕ್ರೀಡೆಗಳಲ್ಲಿ ಗೆಲ್ಲುವ ಸ್ಫೂರ್ತಿ ಹಾಗೂ ಪೈಪೋಟಿಗೂ ಇರುವ ವ್ಯತ್ಯಾಸ. ಯುದ್ಧವು ಈಗ ದೇಶವೊಂದರ ಗಡಿಯ ರಕ್ಷಣೆಗಾಗಿ, ಪ್ರಜೆಗಳ ಹಕ್ಕು ಹಾಗೂ ನೆಮ್ಮದಿಯ ಜೀವನವನ್ನು ಕಾಪಾಡುವುದಕ್ಕಾಗಿ ಮಾತ್ರ ಸೀಮಿತವಾಗಿಲ್ಲ. ಅದು ಜಾಗತಿಕ, ಲಾಭದ, ಒಂದು ನಿರ್ದಿಷ್ಟ ವ್ಯಾಪಾರ-ವಹಿವಾಟಿನ ಲಾಭದ ದುರಾಸೆಗಾಗಿ ಅಥವಾ ಏಕಸ್ವಾಮ್ಯದ ಮನ್ನಣೆಗಾಗಿ, ಹೇರಿಕೆಯ ಸಲುವಾಗಿ ಮಾಡುವ ಘೋರ ಅವಿವೇಕದ ಜಗಳವಾಗಿದೆ. ಆದರೆ ಕ್ರೀಡೆ ಅಥವಾ ಪಂದ್ಯಾಟಗಳು ಹಾಗಲ್ಲ. ಅವು ಉಲ್ಲಾಸ, ಉತ್ಸಾಹ ತುಂಬುವ ಸಾಮಾಜಿಕ ಚಟುವಟಿಕಗಳಾಗಿವೆ.

ಸಂಸ್ಕೃತದ “ಕ್ರೀಡ್” ಧಾತುವಿನಿಂದ ಹುಟ್ಟಿದ “ಕ್ರೀಡೆ” ಎಂಬ ಪದದ ಅರ್ಥ – ಆಟ, ಉಲ್ಲಾಸ ಹಾಗೂ ವಿನೋದ. ಕ್ರೀಡೆ ಅಥವಾ ಪಂದ್ಯಗಳು ಕೇವಲ ಮನೋರಂಜನೆಗೆ ಸೀಮಿತವಲ್ಲ, ಅವು ದೇಹ, ಮನಸ್ಸು ಮತ್ತು ಆತ್ಮವನ್ನು ಪೋಷಿಸುವ ಒಂದು ಉತ್ತಮ ಚಟುವಟಿಕೆ ಅಥವಾ ಅದೊಂದು ಜೀವನ ಮೌಲ್ಯವೆಂದರೂ ತಪ್ಪಾಗಲಿಕ್ಕಿಲ್ಲ. ಕ್ರೀಡೆ ಶಿಸ್ತು ಕಲಿಸುತ್ತದೆ, ಸಮಯ ಪ್ರಜ್ಞೆ, ಛಲ, ಸಾಹಸ, ಸಾತತ್ಯ (ನೈರಂತರ್ಯ) ಮತ್ತು ಏಕಾಗ್ರಚಿತ್ತ ಬೆಳೆಸುತ್ತದೆ. ಸ್ಪರ್ಧಿಗಳ ನಡುವೆ ಸ್ನೇಹ, ಸಹಕಾರ, ಸ್ಫೂರ್ತಿಯನ್ನೂ ತುಂಬುತ್ತದೆ. ಗೆಲುವಿನಿಂದ ಸಡಗರ, ಸಂತೃಪ್ತಿ ಹಾಗೂ ಸಂತೋಷ ಸಿಕ್ಕರೆ, ಸೋಲಿನಿಂದ ಮತ್ತೆ ಪುಟಿದೇಳುವ ಪಾಠ ಅಥವಾ ಅನುಭವ-ಶಿಕ್ಷಣ ದೊರಕುವುದು. ಇವೆರಡೂ ಉತ್ತಮ ವ್ಯಕ್ತಿತ್ವ ನಿರ್ಮಾಣಗಾಥೆಯ ಅಮೂಲ್ಯ ಅಧ್ಯಾಯಗಳು!

ಕಳೆದ 12-13 ವರ್ಷಗಳ ಅವಧಿಯಲ್ಲಿ ಭಾರತ ಸರ್ಕಾರವು ಕ್ರೀಡೆಗಳನ್ನು ಸುವ್ಯವಸ್ಥಿತವಾಗಿ ಬೆಳೆಸಲು ಹಾಗೂ ನಡೆಸಲು ಭಾರತೀಯ ಕ್ರೀಡಾ ಪ್ರಾಧಿಕಾರದ (ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ಮೂಲಕ ಕ್ರೀಡಾಳುಗಳಿಗೆ ಉತ್ತಮ ಸೌಲಭ್ಯಗಳು, ಸೌಕರ್ಯಗಳು ಹಾಗೂ ತರಬೇತಿಗಳನ್ನು ಏರ್ಪಡಿಸುತ್ತಿದೆ. ಆ ಕ್ರಿಯಾತ್ಮಕ ಬದಲಾವಣೆಗಳ ಪರಿಣಾಮವಾಗಿ ಕ್ರೀಡೆಯ ಎಲ್ಲ ಕ್ಷೇತ್ರಗಳಲ್ಲಿಯೂ ಪ್ರಗತಿ ಎದ್ದು ಕಾಣುತ್ತಿದೆ. ನಮ್ಮ ರಾಷ್ಟ್ರೀಯ ಕ್ರೀಡೆಯಾದ ಹಾಕಿ, ಭಾರತಕ್ಕೆ ವಿಶ್ವಮಟ್ಟದಲ್ಲಿ ಅತಿದೊಡ್ಡ ಗೌರವ ತಂದುಕೊಟ್ಟಿದೆ. ಮೇಜರ್ ಧ್ಯಾನ್‌ಚಂದ್ ಅವರ ಕಾಲದ ಸುವರ್ಣ ಯುಗದಿಂದ ಹಿಡಿದು, ಇತ್ತೀಚಿನ ಒಲಿಂಪಿಕ್ಸ್ ಪದಕಗಳವರೆಗಿನ ರೋಚಕ ಹಾದಿ ಒಂದು ಹೆಮ್ಮೆಯ ವಿಷಯ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಮುಂತಾದ ಮಹಾ ಕ್ರೀಡಾ ಸ್ಪರ್ಧೆಗಳಲ್ಲಿ ಭಾರತ ಮತ್ತೆ ಮತ್ತೆ ತನ್ನ ಛಾಪು ಮೂಡಿಸುತ್ತ ಬಂದಿದೆ. ನೀರಜ್ ಛೋಪ್ರಾ ಅವರ ಭಾಲೆ (ಜಾವೆಲಿನ್) ಎಸೆತ ದೇಶಕ್ಕೆ ಚಿನ್ನ ತಂದಾಗ ಕೋಟ್ಯಂತರ ಭಾರತೀಯರ ಹೃದಯ ಅರಳಿತು. ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಳುಗಳು ದೈಹಿಕ ಮಿತಿಗಳ ಮೇಲೆ ಜಯ ಸಾಧಿಸಿ, ಶಕ್ತಿ ಮತ್ತು ಸ್ಫೂರ್ತಿಯ ಹೊಸ ವ್ಯಾಖ್ಯಾನ ಬರೆದಿದ್ದಾರೆ. 2036ರ ಒಲಿಂಪಿಕ್ಸ್‌ ಆಯೋಜನೆಗೆ ಭಾರತವು ಅಹ್ಮದಾಬಾದ್ ನಗರವನ್ನು ಮುಂದಿಟ್ಟುಕೊಂಡು ಸ್ಪರ್ಧಿಸುತ್ತಿರುವುದು ಭಾರತದ ಕ್ರೀಡಾ ಮಹತ್ವಾಕಾಂಕ್ಷೆಯ ಹೊಸ ಆಯಾಮವನ್ನು ಹುಟ್ಟುಹಾಕಿದೆ.

ಆದರೆ ಭಾರತದ ನಾಡಿಮಿಡಿತ ಮಿಡಿಯುವ ಕ್ರೀಡೆ ಎಂದರೆ ಅದು ಕ್ರಿಕೆಟ್. ಅದು ಬರೀ ಕ್ರೀಡೆಯಲ್ಲ ಅದೊಂದು ಸಂಸ್ಕೃತಿಯಂತೆ ಆಗಿಬಿಟ್ಟಿದೆ. ಒಂದು ಚೆಂಡು, ಒಂದು ಬ್ಯಾಟ್, ಮನೆಯ ಹಜಾರವೋ, ಅಂಗಳವೋ ಅಥವಾ ಹತ್ತಿರದ ಬಯಲೋ… ಅಷ್ಟೇ ಸಾಕು! ಓಣಿ ಕ್ರಿಕೆಟ್ಟಿನಿಂದ (ಗಲ್ಲಿ ಕ್ರಿಕೆಟ್) ಅಂತಾರಾಷ್ಟ್ರೀಯ ಮೈದಾನದವರೆಗೆ ಕ್ರಿಕೆಟ್ ಸದಾ ಜೀವಂತ. ಯಾವ ಸಂಖ್ಯೆಯ ಆಟಗಾರರಿದ್ದರೂ, ಯಾವ ಊರಿನಲ್ಲಿ, ಯಾವ ಹೊತ್ತಿನಲ್ಲಿ, ಅಥವಾ ಎಂದಾದರೂ ಆಡಬಹುದಾದ ಈ ಆಟ ಭಾರತದ ಎಲ್ಲ ಸ್ತರದ ಜನರನ್ನೂ ಒಗ್ಗೂಡಿಸುತ್ತದೆ. BCCIಯ ನೇತೃತ್ವದಲ್ಲಿ ಟೆಸ್ಟ್ ಕ್ರಿಕೆಟ್‌ನ ಘನತೆ, ಏಕದಿನ ಸ್ಪರ್ಧೆಯ ರೋಮಾಂಚನ ಮತ್ತು T20ನ ಮಿಂಚಿನಾಟದ ಸ್ವರೂಪ – ಮೂರೂ ತಲೆಮಾರುಗಳ ಅಭಿರುಚಿಯ ಆಸ್ವಾದಕ್ಕೆ ಅವಕಾಶ ಮಾಡಿಕೊಟ್ಟಿವೆ.

ದೇಶಾದ್ಯಂತ ‘ದೇವಧರ್ ಟ್ರೋಫಿ’, ‘ದುಲೀಪ್ ಟ್ರೋಫಿ’, ‘ರಣಜಿ ಟ್ರೋಫಿ’, ಮೊದಲಾದ ಪಂದ್ಯಗಳು ಹೊಸ-ಹೊಸ ಕ್ರಿಕೆಟ್ ಪ್ರತಿಭೆಗಳನ್ನು ದೇಶಕ್ಕೆ ಪರಿಚಯಿಸುವ ಮಾಧ್ಯಮಗಳಾಗಿವೆ. ಇದೇ ವರ್ಷ, 2026ರಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡ ರಣಜಿ ಟ್ರೋಫಿ ಗೆದ್ದದ್ದು ಯಕಶ್ಚಿತ್ ಪಾರಿತೋಷಕದ ಗೆಲುವಲ್ಲ – ಅದು ರಾಷ್ಟ್ರೀಯ ಏಕತೆಯ ಸಂದೇಶ; ಸದಾ ದೇಶದ್ರೋಹಿ ಮತೀಯ ಭಯೋತ್ಪಾದಕರ ಪ್ರಭಾವದಿಂದ ದಾರಿತಪ್ಪಿ ತ್ರಸ್ತವಾದ ರಾಜ್ಯದ ತರುಣ ಆಟಗಾರರು ಮೈದಾನದಲ್ಲಿ ತಮ್ಮ ಶ್ರೇಷ್ಠತೆ ಸಾಬೀತುಪಡಿಸಿದ್ದು, ಭಾರತದ ರಾಜಕೀಯ ಮತ್ತು ಸಾಮಾಜಿಕ ಗಾಯಗಳನ್ನು ಕ್ರೀಡೆ ಗುಣಪಡಿಸಬಲ್ಲದು ಎಂಬ ನಿರೀಕ್ಷೆಯನ್ನು ಮತ್ತಷ್ಟು ಬಲಪಡಿಸಿದೆ. ಕಾಶ್ಮೀರದ ಮಣ್ಣಿನ ವಿಶೇಷತೆಯಾದ ದೇವದಾರು (ಮತ್ತು ವಿಲೋ) ಮರಗಳಿಂದ ತಯಾರಾಗುವ ಮರದ ಕಟ್ಟಿಗೆಯಿಂದ ಕ್ರಿಕೆಟ್ ಬ್ಯಾಟ್‌ಗಳು ತಯಾರಾಗುತ್ತವೆ – ಆ ನೆಲ ಮೈದಾನಕ್ಕೆ ಮರ ಮಾತ್ರವಲ್ಲ, ಚಾಂಪಿಯನ್ನರನ್ನೂ ನೀಡುತ್ತಿದೆ.

ಭಾರತ ಮಹಿಳಾ ಕ್ರಿಕೆಟ್ ತಂಡ ಇಂದು ಹೊಸ ಅಲೆಯನ್ನೇ ಎಬ್ಬಿಸಿದೆ. ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡ ಜಾಗತಿಕ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಿಸುತ್ತಿದೆ. ಈ ತಂಡ ಪಡೆದ ಅಭೂತಪೂರ್ವ ಸಾರ್ವಜನಿಕ ಬೆಂಬಲ ಸಮಾಜದ ಮನೋಭಾವ ಬದಲಾಗುತ್ತಿದೆ ಎಂಬ ಶುಭ ಸಂಕೇತ ಸೂಚಿಸುತ್ತಿದೆ. ಮಾರ್ಚ್ 8ರ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಉತ್ತಮ ಆಟದ ಪ್ರದರ್ಶನ ಹಾಗೂ ಸಾಧನೆಯನ್ನು ಸ್ಮರಿಸಲು ಒಂದು ಸುಸಂದರ್ಭ.

ಕ್ರೀಡಾ ಮನೋಭಾವ ಎಂದರೆ ಕೇವಲ ಗೆಲ್ಲಬೇಕೆಂಬ ಹಂಬಲವಷ್ಟೇ ಅಲ್ಲ, ಬಂದ ಗೆಲುವನ್ನು ಸಮಚಿತ್ತದಿಂದ ನಿಭಾಯಿಸುವುದು, ಸೋಲನ್ನು ಸಂತೋಷದಿಂದ ಸ್ವೀಕರಿಸುವ ಔದಾರ್ಯ, ಎದುರಾಳಿ ಹಾಗೂ ಅವರ ಪ್ರತಿಭೆಯನ್ನು ಗೌರವಿಸುವ ಶ್ರೇಷ್ಠ ಗುಣ, ಆಟದ ನಿಯಮಗಳಿಗೆ ತೋರುವ ನಿಷ್ಠೆ, ಇವೆಲ್ಲ ಕ್ರೀಡಾಸ್ಫೂರ್ತಿಯ ತಿರುಳು. ಮೈದಾನದಲ್ಲಿ ಕಲಿತ ಶಿಸ್ತು, ತಾಳ್ಮೆ, ತಂಡದಲ್ಲಿ ಒಗ್ಗಟ್ಟಿನ ಭಾವನೆ ಮತ್ತು ಸಮಯ-ನ್ಯಾಯ ಪ್ರಜ್ಞೆ ಜೀವನದ ಎಲ್ಲ ಕ್ಷೇತ್ರಗಳಲ್ಲೂ ಉಪಯೋಗಕ್ಕೆ ಬರುತ್ತವೆ. ಕ್ರೀಡೆ ವ್ಯಕ್ತಿ ನಿರ್ಮಾಣ ಮಾಡುತ್ತದೆ; ವ್ಯಕ್ತಿ ರಾಷ್ಟ್ರ ನಿರ್ಮಾಣ ಮಾಡುತ್ತಾನೆ.

ಭಾರತದ ಕ್ರೀಡಾ ಪರಂಪರೆ ಸಾವಿರಾರು ವರ್ಷಗಳಷ್ಟು ಹಳೆಯದು. ಚದುರಂಗ (ಚಾತುರಂಗ/ ಶತ್ರಂಜ್), ಅರ್ಥಾತ್ ಇಂದಿನ Chess! ಅದು ಭಾರತ ಜಗತ್ತಿಗೆ ನೀಡಿದ ಒಂದು ಬುದ್ಧಿವಂತ ಕೊಡುಗೆಗಳಲ್ಲೊಂದು. ಕಬಡ್ಡಿ, ಹಾವು-ಏಣಿ ಆಟ, ಭಾರತೀಯ ಪೋಲೊ, ಇವೆಲ್ಲ ನಮ್ಮ ನೆಲದಲ್ಲೇ ಹುಟ್ಟಿ ಜಗತ್ತಿಗೆ ಹರಡಿದ ಆಟಗಳು. ಖೋ-ಖೋ ಆಟವು ಭಾರತದ ಮಹಾರಾಷ್ಟ್ರದಲ್ಲಿ ಹುಟ್ಟಿಕೊಂಡಿತು. ಬುದ್ಧಿಮತ್ತೆ, ಸಾಂಘಿಕ ಶಕ್ತಿ, ಮತ್ತು ದೈಹಿಕ ಚಾಕಚಕ್ಯತೆಯನ್ನು ಬೆಳೆಸುವ ಈ ಕ್ರೀಡೆಗಳು ಭಾರತದ ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಗೆ ಸಾಕ್ಷಿ. ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ. ಒಲಿಂಪಿಕ್ ಇತಿಹಾಸದಲ್ಲಿ ಎಂಟು ಚಿನ್ನದ ಪದಕ ಗೆದ್ದ ಭಾರತದ ಹಾಕಿ ತಂಡ, ಧ್ಯಾನ್‌ಚಂದ್ ಅವರ ಜಾದೂ ಸ್ಟಿಕ್‌ನ ಹೆಮ್ಮೆಯ ಪ್ರತೀಕ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ (2020) ಕಂಚಿನ ಪದಕ ಗೆದ್ದ ಭಾರತ ತಂಡದ ಆ ವೈಭವ ಮರಳಿ ತರುವ ಭರವಸೆ ಮೂಡಿಸಿದೆ.

ಭಾರತ ತತ್ತ್ವಜ್ಞಾನ ಮತ್ತು ವಿಜ್ಞಾನ ಕ್ಷೇತ್ರಗಳಲ್ಲಿ ಮಾತ್ರವಲ್ಲದೇ ಜಗತ್ತಿಗೆ ಅದ್ಭುತ ಕ್ರೀಡೆಗಳನ್ನೂ ನೀಡಿದ ನಾಡು. ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಕಂಡುಹಿಡಿದ ಈ ಆಟಗಳು ಇಂದಿಗೂ ಜಗತ್ತಿನಾದ್ಯಂತ ಆಡಲ್ಪಡುತ್ತಿವೆ.

  1. ಚದುರಂಗ/ ಚಾತುರಂಗ ಇಂದಿನ Chessನ ಮೂಲ ಭಾರತದ ಗುಪ್ತರ ಸಾಮ್ರಾಜ್ಯದ ಕಾಲದಲ್ಲಿ (ಕ್ರಿ.ಶ. 6ನೇ ಶತಮಾನ) ಆಡಲ್ಪಡುತ್ತಿದ್ದ ಈ ಆಟ ಸೇನೆಯ ನಾಲ್ಕು ಭಾಗಗಳಾದ ಆನೆ, ಕುದುರೆ, ರಥ ಮತ್ತು ಕಾಲಾಳುಗಳನ್ನು ಪ್ರತಿನಿಧಿಸುತ್ತಿತ್ತು. ಅರಬ್ಬರ ಮೂಲಕ ಶತರಂಜ್ ಆಗಿ, ನಂತರ ಯುರೋಪಿಗೆ Chess ಆಗಿ ಹರಡಿತು.
  2. ಕಬಡ್ಡಿ ಉಸಿರು ಹಿಡಿದು “ಕಬಡ್ಡಿ ಕಬಡ್ಡಿ” ಎನ್ನುತ್ತ ಎದುರಾಳಿ ಪಾಳಯ ತಲುಪುವ ಈ ಆಟ ಶೌರ್ಯ ಮತ್ತು ಚಾಕಚಕ್ಯತೆಯ ಸಂಗಮ. ಮಹಾಭಾರತದ ಕಾಲದಲ್ಲಿ ಅಭಿಮನ್ಯು ಚಕ್ರವ್ಯೂಹ ಮುರಿದ ಕಥೆ ಕಬಡ್ಡಿಯ ರೂಪಕ ಎಂದು ಹೇಳಲಾಗುತ್ತದೆ.
  3. ಖೋ ಖೋ ಮಹಾರಾಷ್ಟ್ರದಲ್ಲಿ ಹುಟ್ಟಿದ ಖೋ ಖೋ ಚಿಕ್ಕ ಮೈದಾನ, ಕ್ಷಿಪ್ರ ಚಲನೆ, ತಂಡ ಸ್ಫೂರ್ತಿ ಬಯಸುವ ವಿಶಿಷ್ಟ ಆಟ.
  4. ಹಾವು-ಏಣಿ ಆಟ “ಮೋಕ್ಷಪಟ” ಅಥವಾ “ಗ್ಯಾನ್ ಚೌಪರ್” ಎಂಬ ಹೆಸರಿನ ಈ ಆಟ ಭಾರತದಲ್ಲಿ ಸುಮಾರು 2,000 ವರ್ಷಗಳ ಹಿಂದೆ ನೈತಿಕ ಶಿಕ್ಷಣಕ್ಕಾಗಿ ರಚಿಸಲ್ಪಟ್ಟಿತು. ಏಣಿ ಎಂದರೆ ಸದ್ಗುಣ, ಹಾವು ಎಂದರೆ ದುರ್ಗುಣ. ಒಳ್ಳೆಯ ಕೆಲಸ ಮೇಲೆ ಕರೆದೊಯ್ಯುತ್ತದೆ, ದುರ್ಗುಣ ಕೆಳಕ್ಕೆ ಎಳೆಯುತ್ತದೆ ಎಂಬ ತತ್ತ್ವದ ಆಧಾರ. ಬ್ರಿಟಿಷರು ಇಂಗ್ಲೆಂಡಿಗೆ ಒಯ್ದು “Snakes and Ladders” ಎಂಬ ಹೆಸರಿಟ್ಟು ಜಗತ್ತಿಗೆ ಹರಡಿದರು.
  5. ಪಚೀಸಿ/ ಚೌಪರ್ ಭಾರತದ ಚಕ್ರವರ್ತಿಗಳು ತಮ್ಮ ಅರಮನೆಯ ಅಂಗಳದಲ್ಲಿ ಆಳೆತ್ತರದ ಚೌಕದಲ್ಲಿ ತಮ್ಮ ಆಳುಗಳನ್ನೇ ದಾಳಗಳನ್ನಾಗಿ ಪಚೀಸಿ ಆಡುತ್ತಿದ್ದರು ಎಂಬ ಐತಿಹ್ಯವಿದೆ. ಈ ಆಟ ಬ್ರಿಟಿಷರ ಮೂಲಕ “Ludo” ಆಗಿ ಜಗತ್ತಿನ ಮನೆಮನೆ ಸೇರಿತು.
  6. ಕ್ಯಾರಂ (Carrom) ಭಾರತದ ಪಂಜಾಬ್ ರಾಜ್ಯದ ಪಟಿಯಾಲಾದ ರಾಜನ ಅರಮನೆಯಲ್ಲಿ ಮೊದಲು ಕಂಡುಬಂದ ಬೋರ್ಡ್ ಆಟ.
  7. ಮಲ್ಲಯುದ್ಧ (Indian Wrestling/ Kusti) ಮಹಾಭಾರತ ಮತ್ತು ರಾಮಾಯಣದಲ್ಲಿ ಉಲ್ಲೇಖವಾಗಿರುವ ಮಲ್ಲಯುದ್ಧ ಭಾರತದ ಅತ್ಯಂತ ಪ್ರಾಚೀನ ಕ್ರೀಡೆ. ಭೀಮ, ಕೃಷ್ಣ, ಹನುಮಂತ, ವಾಲಿ-ಸುಗ್ರೀವ, ಎಲ್ಲರೂ ಮಲ್ಲಯುದ್ಧದ ನಿಪುಣರು.
  8. ಗಿಲ್ಲಿ-ದಂಡ (ಚಿನ್ನಿ-ದಾಂಡ್) ಎಂಬ ಆಟವು ಕ್ರಿಕೆಟ್ನ ಪ್ರೇರಕ ಆಟ ಎಂದು ಹೇಳಲಾಗುತ್ತದೆ. ಒಂದು ಉದ್ದ ಕೋಲು, ಒಂದು ಚಿಕ್ಕ ಮರದ ತುಂಡು ಅಷ್ಟೇ ಸಾಕು ಈ ಆಟ ಆಡಲು!

ಕಳೆದೆರಡು ದಶಕಗಳಿಂದ ಮಕ್ಕಳು ಶಾರೀರಿಕ ಶ್ರಮ ವಹಿಸುವ ಆಟಗಳಾಡಲು ಆಸಕ್ತಿ ತೋರದೇ, ಕೇವಲ ಮನೆಯೊಳಗೆ ಕೂತು ಮೊಬೈಲ್ ಗೇಮ್ಸ್ ಆಡುತ್ತಾ ಸೋಮಾರಿಗಳಾಗುತ್ತಿದ್ದಾರೆ. ಪೋಷಕರೂ ಕೇವಲ ಅಂಕಗಳಿಕೆ ಹಾಗೂ ಹಣಗಳಿಕೆಯ ಗುಂಗಿನಲ್ಲಿ ಆಟ-ಪಾಠಗಳ ಕಡೆ ಉದಾಸೀನ ಧೋರಣೆ ತೋರುತ್ತಿದ್ದಾರೆ. ಇದೊಂದು ಕೆಟ್ಟ ಬೆಳವಣಿಗೆ. ಸಮಾಜದ ಭವಿಷ್ಯಕ್ಕೆ ಮಾರಕ. ಹಿಂದಿನ ತಲೆಮಾರುಗಳ ಮಕ್ಕಳಿಗೆ ಸಿಗುತ್ತಿದ್ದ ಸ್ವಾತಂತ್ರ್ಯ, ಮುಕ್ತ ವಿಶಾಲ ಪರಿಸರ, ಆಟದ ಅಂಗಳ, ಆನಂದದ ಅನುಭೂತಿ ಇಂದಿನ ಮಕ್ಕಳಿಗೆ ಮರೀಚಿಕೆಯಾಗುತ್ತಿದೆ.

ಇಂದು ಭಾರತ ಎದುರಿಸುತ್ತಿರುವ ಸವಾಲೆಂದರೆ ಮಕ್ಕಳು ಗ್ರಾಮಮಟ್ಟ ಮತ್ತು ರಾಷ್ಟ್ರಮಟ್ಟದ ಮೂಲಸೌಕರ್ಯದ ನಡುವಿನ ಅಂತರ. ಭಾರತೀಯ ಕ್ರೀಡಾ ಪ್ರಾಧಿಕಾರವು ರಾಜ್ಯ ಸರ್ಕಾರಗಳೊಂದಿಗೆ ಸೇರಿ, ಈ ಅಂತರ ಕಡಿಮೆ ಮಾಡಲು ಕ್ರೀಡಾ ತರಬೇತಿ ಕೇಂದ್ರಗಳ ಮೂಲಕ ಕ್ರೀಡಾಪ್ರತಿಭೆ ಗುರುತಿಸಿ ಬೆಳೆಸಲು ಶ್ರಮಿಸುತ್ತಿವೆ. ಪ್ರತಿ ಪಟ್ಟಣಗಳಲ್ಲಿ ಒಂದು ಸುಸಜ್ಜಿತ ಕ್ರೀಡಾಂಗಣ, ಪ್ರತಿ ಶಾಲೆಯಲ್ಲಿ ಒಬ್ಬ ಒಳ್ಳೆಯ ಕ್ರೀಡಾ ಶಿಕ್ಷಕ, ಇಷ್ಟಿದ್ದರೆ ಸಾಕು, ಮುಂದಿನ ನೀರಜ್ ಛೋಪ್ರಾ ಮತ್ತು ಮಿತಾಲಿ ರಾಜ್ ಪ್ರತಿ ರಾಜ್ಯದಿಂದಲೂ ಬರುತ್ತಾರೆ. ಭಾರತದಲ್ಲಿ ಕ್ರಿಕೆಟ್ ಹಾಗೆಯೇ, ಉಳಿದ ಕ್ರೀಡೆಗಳಿಗೂ ಇನ್ನೂ ಹೆಚ್ಚಿನ ಪ್ರೋತ್ಸಾಹ ಹಾಗೂ ಸವಲತ್ತುಗಳು ಸಿಕ್ಕಾಗ ಭಾರತ ನಿಜಕ್ಕೂ ಕ್ರೀಡಾ ಮಹಾಶಕ್ತಿ (ಸೂಪರ್ ಪವರ್) ಆಗುವುದರಲ್ಲಿ ದ್ವಂದ್ವವಿಲ್ಲ.

ಆಟದ ಮೈದಾನದಲ್ಲಿ ಬೆವರು ಹರಿಸುವ ಪ್ರತಿ ಕ್ರೀಡಾಪಟುವು ದೇಶದ ಶಕ್ತಿಯಾಗಿದ್ದು, ಕ್ರೀಡೆಯೇ ಸುಸ್ಥಿರ ಮತ್ತು ಸಶಕ್ತ ರಾಷ್ಟ್ರ ನಿರ್ಮಾಣಕ್ಕೆ ದಾರಿದೀಪವಾಗಿದೆ.

 

Learn More: https://www.rashtrotthana.org/
#Rashtrotthana #RashtrotthanaParishat #T20WorldCup #SportsInIndia #SportsmanSpirit

Leave a Reply

Your email address will not be published. Required fields are marked *