• July 23, 2026
  • RP
  • 0

Swarajya ha maza janmasiddha hakka aahe… Swaraj (self-rule) is my birthright.

September 1893, Kesari Wada in Pune. A Ganesh Chaturthi morning. Crowds thronged the streets — the poor, the wealthy, merchants, laborers, all gathered together without any distinction of caste or community! The ‘Ganeshotsava’ of Bhadrapada Chaturthi, which until then had been confined to individual homes, began that day in the streets of Pune to the sound of bands, bhajans, dhol, and tasha.

Bal Gangadhar Tilak himself mingled among the people, stepping to the beat of the dhol. At a time when the British had banned public meetings and gatherings and kept a watchful eye on all activities, this was a shrewd strategy that brought together thousands of people under the pretext of a religious observance, giving fresh momentum to the freedom struggle! To the police, it appeared to be nothing more than a religious festival, but beneath the shelter of the pandals and canopies, the spark of revolution had been lit. Amid the devotional songs, messages of freedom were quietly spreading!

“ಸ್ವರಾಜ್ಯ ಹಾ ಮಾಝಾ ಜನ್ಮಸಿದ್ಧ ಹಕ್ಕ ಆಹೇ…”

ಸೆಪ್ಟೆಂಬರ್ 1893, ಪುಣೆಯ ಕೇಸರಿ ವಾಡಾ. ಗಣೇಶ ಚತುರ್ಥಿಯ ಮುಂಜಾನೆ. ಬೀದಿಯುದ್ದಕ್ಕೂ ಜನಸಂದಣಿ – ಬಡವ, ಬಲ್ಲಿದ, ವ್ಯಾಪಾರಿ, ಕಾರ್ಮಿಕ, ಜಾತಿ-ಪಂಗಡದ ಭೇದವಿಲ್ಲದೇ ಎಲ್ಲರೂ ನೆರೆದಿದ್ದರು! ಅದುವರೆಗೆ ಮನೆಮಟ್ಟಿಗೆ ಸೀಮಿತವಾಗಿದ್ದ ಭಾದ್ರಪದ ಚೌತಿಯ ‘ಗಣೇಶೋತ್ಸವ’ ಅಂದು ಪುಣೆಯ ಬೀದಿಬೀದಿಗಳಲ್ಲಿ ಬಾಜಾ-ಭಜಂತ್ರಿ, ಢೋಲ್-ತಾಶಾದ ಸದ್ದಿನೊಂದಿಗೆ ಆರಂಭವಾಗಿತ್ತು.

ಬಾಲಗಂಗಾಧರ ತಿಲಕರು ಸ್ವತಃ ಢೋಲಿನ ತಾಳಕ್ಕೆ ಹೆಜ್ಜೆ ಹಾಕುತ್ತಾ ಜನರ ನಡುವೆ ಬೆರೆತಿದ್ದರು. ಬ್ರಿಟಿಷರು ಸಾರ್ವಜನಿಕ ಸಭೆ-ಸಮಾರಂಭಗಳನ್ನು ನಿಷೇಧಿಸಿ ಎಲ್ಲ ಚಟುವಟಿಕೆಗಳ ಮೇಲೂ ಕಣ್ಣಿಟ್ಟಿದ್ದ ಕಾಲದಲ್ಲಿ, ಧಾರ್ಮಿಕ ಆಚರಣೆಯ ನೆಪದಲ್ಲಿ ಸಾವಿರಾರು ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಚಾಲನೆ ನೀಡಿದ ಚಾಣಾಕ್ಷ ಉಪಾಯ ಅದಾಗಿತ್ತು! ಪೊಲೀಸರಿಗೆ ಅದು ಕೇವಲ ಧಾರ್ಮಿಕ ಉತ್ಸವದಂತೆ ಕಂಡರೂ, ಚಪ್ಪರ-ಪೆಂಡಾಲುಗಳ ಮರೆಯಲ್ಲಿ ಕ್ರಾಂತಿಯ ಕಿಡಿ ಹೊತ್ತಿಕೊಂಡಿತ್ತು. ಕೀರ್ತನೆಗಳ ನಡುನಡುವೆ ಸ್ವಾತಂತ್ರ್ಯದ ಸಂದೇಶಗಳು ಸದ್ದಿಲ್ಲದೇ ಹರಡುತ್ತಿದ್ದವು!

ಸ್ವಾತಂತ್ರ್ಯ, ಸ್ವರಾಜ್ಯದ ಕನಸು ಕಂಡ ಯುವಕರು ಮುಂದಿನ ಹೋರಾಟದ ರೂಪುರೇಷೆಗಳನ್ನು ಪಿಸುಮಾತಿನಲ್ಲಿ ಚರ್ಚಿಸುತ್ತಿದ್ದರು. ‘ಕೇಸರಿ’ ಪತ್ರಿಕೆಯ ಪ್ರತಿಗಳು ಪ್ರಸಾದದ ಜೊತೆಯೇ ಜನರ ಕೈ ಸೇರುತ್ತಿದ್ದವು. ಬ್ರಿಟಿಷರ ಕಣ್ಣಿಗೆ ಬೀಳದಂತೆ ರಹಸ್ಯ ಸಭೆಗಳ ಸೂಚನೆ, ಕ್ರಾಂತಿಕಾರಿಗಳಿಗೆ ಸಂದೇಶ, ಬಂಧನಗಳ ಎಚ್ಚರಿಕೆ ಎಲ್ಲವೂ ಅದರ ಪುಟಗಳಲ್ಲಿ ಅಡಕವಾಗಿರುತ್ತಿತ್ತು. ತಿಲಕರ ಪಾಲಿಗೆ ಗಣೇಶೋತ್ಸವ ಕೇವಲ ದೈವಭಕ್ತಿಯ ಸಾಧನವಾಗಿರಲಿಲ್ಲ; ಜಾತಿ-ವರ್ಗ, ಮತಭೇದ ಮರೆತು ಸಮಾಜವನ್ನು ಸ್ವಾತಂತ್ರ್ಯದ ಕನಸಿಗೆ ಒಗ್ಗೂಡಿಸುವ ಪ್ರಬಲ ಆಯುಧವಾಗಿತ್ತು.

ಜುಲೈ 23, 1856ರಂದು ರತ್ನಗಿರಿಯ ‘ಚಿಖಳಿ’ ಗ್ರಾಮದಲ್ಲಿ ಜನಿಸಿದ ಕೇಶವ ಗಂಗಾಧರ ತಿಲಕರು (ಟಿಳಕ್) ಬಾಲ್ಯದಿಂದಲೇ ಮೇಧಾವಿ ಹಾಗೂ ನಿರ್ಭೀತ ಸ್ವಭಾವದವರಾಗಿದ್ದರು. ಸದಾ ನ್ಯಾಯದ ಪರವಾಗಿ ದನಿ ಎತ್ತುತ್ತಿದ್ದರು. ಡೆಕ್ಕನ್ ಕಾಲೇಜಿನಲ್ಲಿ ಗಣಿತ, ಸಂಸ್ಕೃತ ಅಧ್ಯಯನ ಮಾಡಿ ಕಾನೂನು ಪದವಿ ಪಡೆದ ಅವರು, ಬ್ರಿಟಿಷರ ಶಿಕ್ಷಣ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿ ವಿಷ್ಣುಶಾಸ್ತ್ರಿ ಚಿಪ್ಳೂಣಕರ್ ಹಾಗೂ ಗೋಪಾಲ್ ಗಣೇಶ್ ಅಗರ್ಕರರೊಂದಿಗೆ ‘ಡೆಕ್ಕನ್ ಎಜುಕೇಶನ್ ಸೊಸೈಟಿ’ ಸ್ಥಾಪಿಸಿದರು. 1881ರಲ್ಲಿ ಆರಂಭಿಸಿದ ‘ಕೇಸರಿ’ (ಮರಾಠಿ) ಮತ್ತು ‘ಮರಾಠಾ’ (ಇಂಗ್ಲಿಷ್) ಪತ್ರಿಕೆಗಳು ಬ್ರಿಟಿಷರ ದಮನಕಾರಿ ಆಡಳಿತದ ವಿರುದ್ಧ ಪ್ರಬಲ ಅಸ್ತ್ರಗಳಾದವು.

ಬಿ. ಜಿ. ತಿಲಕರ ಬದುಕು ನಿರಂತರ ಹೋರಾಟದ ಪಯಣವಾಗಿತ್ತು – ಒಂದೆಡೆ ಬ್ರಿಟಿಷರ ಕ್ರೂರ ದಮನ, ಮತ್ತೊಂದೆಡೆ ಕಾಂಗ್ರೆಸ್‌ನ ಮಿತವಾದಿಗಳ ಭಿನ್ನಾಭಿಪ್ರಾಯ! ಚಾಫೇಕರ್ ಸಹೋದರರು ಮತ್ತು ಖುದಿರಾಮ್ ಬೋಸ್‌ರಂತಹ ಕ್ರಾಂತಿಕಾರಿಗಳನ್ನು ಬೆಂಬಲಿಸಿದ್ದಕ್ಕಾಗಿ 1908ರಲ್ಲಿ ರಾಜದ್ರೋಹದ ಆರೋಪದಡಿ ಆರು ವರ್ಷಗಳ ಶಿಕ್ಷೆ ವಿಧಿಸಿ ಬರ್ಮಾದ ಮಂಡಲೇ ಜೈಲಿಗೆ ಕಳುಹಿಸಲಾಯಿತು. ಮಧುಮೇಹದಿಂದ ಬಳಲುತ್ತಿದ್ದರೂ, ಕಿರಿದಾದ ತಣ್ಣನೆಯ ಕೋಣೆಯಲ್ಲಿ ಬಂಧಿಯಾಗಿದ್ದರೂ ಸ್ವರಾಜ್ಯದ ಸಂಕಲ್ಪ ಕುಗ್ಗಲಿಲ್ಲ. ಆದರೆ 1912ರಲ್ಲಿ ಪತ್ನಿ ಸತ್ಯಭಾಮಾಬಾಯಿಯ ನಿಧನದ ಸುದ್ದಿ ಮಂಡಲೇ ಜೈಲಿನಲ್ಲಿ ಅವರಿಗೆ ತಲುಪಿದಾಗ, ಕೊನೆಯ ಬಾರಿ ಮುಖ ನೋಡುವ ಅವಕಾಶವೂ ಸಿಗದೇ ಒಬ್ಬಂಟಿಯಾಗಿ ಕಣ್ಣೀರಿಟ್ಟರು. ಈ ಮೊದಲೇ ಹಲವು ಮಕ್ಕಳನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ಅದು ಮತ್ತೊಂದು ಬಲವಾದ ಹೊಡೆತವಾಗಿತ್ತು. ಇಂತಹ ದುಃಖದ ನಡುವೆಯೂ ಅದೇ ಸೆರೆಮನೆಯಲ್ಲಿ ಭಾರತೀಯ ತತ್ತ್ವಚಿಂತನೆಯ ಮೇರುಕೃತಿ ‘ಗೀತಾ ರಹಸ್ಯ’ ರಚಿಸಿದರು. ಇದು ಭಗವದ್ಗೀತೆಯ ಶ್ರೇಷ್ಠ ವ್ಯಾಖ್ಯಾನಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

“ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ” ಎಂಬ ಅವರ ಘೋಷಣೆ ದೇಶಾದ್ಯಂತ ಮೊಳಗಿತು. ಗಣೇಶೋತ್ಸವದ ಜೊತೆಗೆ ಶಿವಾಜಿ ಜಯಂತಿಯನ್ನೂ ಸಾರ್ವಜನಿಕವಾಗಿ ಆಚರಿಸುವ ಪರಂಪರೆ ಬೆಳೆಸಿ ಯುವಕರಲ್ಲಿ ಶೌರ್ಯ, ಸ್ವಾಭಿಮಾನ ತುಂಬಿದರು. 1914ರಲ್ಲಿ ಬಿಡುಗಡೆಯಾದ ಬಳಿಕವೂ ಹೋರಾಟ ನಿಲ್ಲಲಿಲ್ಲ. 1916ರಲ್ಲಿ ಅನಿ ಬೆಸೆಂಟ್ ಜೊತೆ ‘ಹೋಮ್ ರೂಲ್ ಲೀಗ್’ ಸ್ಥಾಪಿಸಿ ಸಂಪೂರ್ಣ ಸ್ವರಾಜ್ಯದ ಬೇಡಿಕೆಯನ್ನು ದೇಶದ ಮೂಲೆಮೂಲೆಗೂ ಕೊಂಡೊಯ್ದರು.

ಗಣಿತಜ್ಞ, ಸಂಸ್ಕೃತ ವಿದ್ವಾಂಸ, ತತ್ತ್ವಜ್ಞಾನಿ ಮತ್ತು ಪತ್ರಕರ್ತರಾಗಿಯೂ ತಿಲಕರು ಬಹುಮುಖ ಪ್ರತಿಭಯುಳ್ಳ ವ್ಯಕ್ತಿಯಾಗಿದ್ದರು. ‘ಓರಿಯನ್’ (The Orion; Researches into the Antiquity of the Vedas, 1893) ಎಂಬ ಸಂಶೋಧನಾ ಗ್ರಂಥದಲ್ಲಿ, ವೇದಗಳಲ್ಲಿ ಉಲ್ಲೇಖವಾಗಿರುವ ನಕ್ಷತ್ರಗಳ ಸ್ಥಾನ, ವಿಶೇಷವಾಗಿ ಮೃಗಶಿರಾ (ಓರಿಯನ್) ಹಾಗೂ ವಸಂತ ಸಂಪತ್ಪಾತದ ಚಲನೆಯ ಆಧಾರದ ಮೇಲೆ, ವೇದಗಳ ಕಾಲವನ್ನು ಕ್ರಿ.ಪೂ. 4000 ಅಥವಾ ಅದಕ್ಕೂ ಹಿಂದಿನದು ಎಂದು ಪ್ರತಿಪಾದಿಸಿದರು. ಈ ಮೂಲಕ ವೇದಗಳ ಪ್ರಾಚೀನತೆಯನ್ನು ಖಗೋಳಶಾಸ್ತ್ರೀಯ ಆಧಾರಗಳಿಂದ ವಿವರಿಸಲು ಪ್ರಯತ್ನಿಸಿದರು.

‘ಲಾಲ್-ಬಾಲ್-ಪಾಲ್’ ತ್ರಿಮೂರ್ತಿಗಳಾದ ಲೋಕಮಾನ್ಯ ಬಾಲ ಗಂಗಾಧರ ತಿಲಕ್, ಲಾಲಾ ಲಜಪತ್ ರಾಯ್ ಹಾಗೂ ಬಿಪಿನ್ ಚಂದ್ರ ಪಾಲ್ ಸಾಮ್ರಾಜ್ಯಶಾಹಿ ಬ್ರಿಟಿಷ್ ಆಡಳಿತದ ನಿದ್ದೆಗೆಡಿಸಿದ್ದರು. ಕೇವಲ ಮನವಿ ಮತ್ತು ಬೇಡಿಕೆಗಳಿಂದ ಸ್ವಾತಂತ್ರ್ಯ ದೊರೆಯುವುದಿಲ್ಲವೆಂದು ಸ್ಪಷ್ಟವಾಗಿ ಅರಿತಿದ್ದ ಅವರು, ವಿದೇಶೀ ವಸ್ತುಗಳ ಬಹಿಷ್ಕಾರ ಹಾಗೂ ಸ್ವದೇಶೀ ವಸ್ತುಗಳ ಬಳಕೆಯ ಕುರಿತು ದೇಶವ್ಯಾಪೀ ಜನಜಾಗೃತಿ ಮೂಡಿಸಿದರು. ರಾಷ್ಟ್ರೀಯ ಶಿಕ್ಷಣದ ಮೂಲಕ ಸ್ವಾತಂತ್ರ್ಯ ಮತ್ತು ಸ್ವರಾಜ್ಯದ ಕುರಿತು ಜನರಲ್ಲಿ ರಾಷ್ಟ್ರೀಯ ಚಿಂತನೆ ಹಾಗೂ ಆತ್ಮಗೌರವವನ್ನು ಬೆಳೆಸಲು ಅವಿರತವಾಗಿ ಪರಿಶ್ರಮಿಸಿದರು.

ತಿಲಕರು ಸಮಾಜೋದ್ಧಾರಕ್ಕಾಗಿ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದರು! ಬೀದಿ-ಬೀದಿ ಸುತ್ತಿ ಜನಸಾಮಾನ್ಯರ ಭಾಷೆಯಲ್ಲಿ ಸ್ವಾತಂತ್ರ್ಯದ ಪಾಠ ಹೇಳುತ್ತಿದ್ದರು. ಬ್ರಿಟಿಷ್ ಸರ್ಕಾರ ಎಷ್ಟೇ ದಮನ ಮಾಡಿದರೂ, ಪತ್ರಿಕೆ ಮುಟ್ಟುಗೋಲು ಹಾಕಿದರೂ, ಜೈಲಿಗಟ್ಟಿದರೂ ಅವರ ಲೇಖನಿಯ ಹರಿತ ಕಡಿಮೆಯಾಗಲಿಲ್ಲ. ಸ್ನೇಹಿತರು, ಸಹೋದ್ಯೋಗಿಗಳು ಬಂಧನಕ್ಕೊಳಗಾಗುತ್ತಿದ್ದಾಗಲೂ, ಕಾಂಗ್ರೆಸ್‌ನ ಮಿತವಾದಿಗಳು ಮೌನ ವಹಿಸಿದಾಗಲೂ ತಿಲಕರು ಒಂಟಿಯಾಗಿಯೇ ಹೋರಾಟ ಮುಂದುವರಿಸಿದರು. ಇಂತಹ ಸಂಕಷ್ಟದಲ್ಲಿ ಸಾಮಾನ್ಯ ವ್ಯಕ್ತಿ ಎದೆಗುಂದಬಹುದಿತ್ತು; ಆದರೆ ತಿಲಕರು ಪ್ರತಿ ಸೋಲು, ನಷ್ಟವನ್ನೂ ಮುಂದಿನ ಹೆಜ್ಜೆಗೆ ಬಲವನ್ನಾಗಿ ಪರಿವರ್ತಿಸಿಕೊಂಡರು.

“ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ” ಎಂಬ ಘೋಷಣೆ ದೇಶಾದ್ಯಂತ ಮಹಾಮಂತ್ರವಾಯಿತು. ಪದೇಪದೇ ಸೆರೆಮನೆವಾಸ, ಆರೋಗ್ಯದ ಕುಸಿತ, ಪತ್ನಿ-ಮಕ್ಕಳ ಅಗಲಿಕೆ – ಇಷ್ಟೆಲ್ಲಾ ನೋವಿನ ನಡುವೆಯೂ ಅವರು ದೇಶಸೇವೆಯಿಂದ ಒಂದಿನಿತೂ ವಿಮುಖರಾಗಲಿಲ್ಲ. 1920ರ ಆಗಸ್ಟ್ 1ರಂದು ಮುಂಬೈಯಲ್ಲಿ ಅವರು ಇಹಲೋಕ ತ್ಯಜಿಸಿದಾಗ, ಸಾವಿರಾರು ಜನ ಬೀದಿಗಿಳಿದು ಕಣ್ಣೀರಿಟ್ಟರು.

ಎಂ. ಕೆ. ಗಾಂಧಿಯವರು ಅವರನ್ನು “ಆಧುನಿಕ ಭಾರತದ ನಿರ್ಮಾತೃ” ಎಂದು ಕರೆದರು. ಭಗತ್ ಸಿಂಗ್‌ ಮುಂತಾದ ಸ್ವಾತಂತ್ರ್ಯವೀರರಿಗೆ, ಅನೇಕ ನಾಯಕರ ಚಿಂತನೆಗೆ ಸ್ಫೂರ್ತಿಯಾದ ‘ಲೋಕಮಾನ್ಯ’ ತಿಲಕರ ಸ್ವರಾಜ್ಯದ ಕನಸು, ಅವರ ತ್ಯಾಗ ಮತ್ತು ಶ್ರಮಜೀವನ, ಭಾರತೀಯರ ಹೃದಯದಲ್ಲಿ ಇಂದಿಗೂ ಚಿರಸ್ಥಾಯಿಯಾಗಿ ಜೀವಂತವಾಗಿದೆ.

#Rashtrotthana #RashtrotthanaParishat #rashtrotthanainrashtraseva #balagangadhartilak #tilak #ganeshotsav #sarvajanikganeshotsav #swarajya #swarajyaismybirthright #swarajyaismybirthrightandishallhaveit

Leave a Reply

Your email address will not be published. Required fields are marked *