• July 18, 2026
  • RP
  • 0

Mangal Pandey: The Foremost National Offering to the First War of Independence

Mangal Pandey was not just an ordinary military leader, but a brave warrior who lit the flame of religious devotion, self-respect, and freedom in the heart of every common soldier. May the stories of courageous patriots like Mangal Pandey be told to our children and future generations, so that the devotion, courage, resolve, and sacrifices of all such heroes forever shine as a flame of national consciousness in our hearts. Countless salutations to this ever-memorable, great soul!

ಮಂಗಲ್ ಪಾಂಡೆ: ಮೊದಲ ಸ್ವಾತಂತ್ರ್ಯ ಸಂಗ್ರಾಮಯಜ್ಞದ ಅಗ್ರ ರಾಷ್ಟ್ರಾಹುತಿ

ಮಂಗಲ್ ಪಾಂಡೆ ಒಬ್ಬ ಸಾಮಾನ್ಯ ಸೇನಾನಾಯಕನಾಗಿರದೇ, ಪ್ರತಿ ಸಾಮಾನ್ಯ ಸಿಪಾಯಿಯ ಎದೆಯಲ್ಲಿಯೂ ಧರ್ಮನಿಷ್ಠೆ, ಸ್ವಾಭಿಮಾನ ಹಾಗೂ ಸ್ವಾತಂತ್ರ್ಯದ ದೀಪ ಹಚ್ಚಿದ ವೀರಯೋಧ. ನಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಮಂಗಲ್ ಪಾಂಡೆಯಂತಹ ಧೀರ ರಾಷ್ಟ್ರಭಕ್ತರ ಕಥೆಗಳನ್ನು ಹೇಳುತ್ತಾ ಅಂಥವರೆಲ್ಲರ ಧರ್ಮನಿಷ್ಠೆ, ಧೈರ್ಯ, ಛಲ ಹಾಗೂ ತ್ಯಾಗಗಳು ಎಂದೆಂದಿಗೂ ಎದೆಯಲ್ಲಿ ರಾಷ್ಟ್ರಪ್ರಜ್ಞೆಯ ಜ್ಯೋತಿಯಾಗಿ ಬೆಳಗುತ್ತಿರಲಿ. ಈ ಚಿರಸ್ಮರಣೀಯ ಮಹಾಚೇತನಕ್ಕೆ ಕೋಟಿ ಕೋಟಿ ನಮನಗಳು!

1857ರ ಮಾರ್ಚ್ 29ರ ಆ ಮಧ್ಯಾಹ್ನ ಕಲ್ಕತ್ತೆಯ ಬಳಿಯ ಬ್ಯಾರಕ್‌ಪುರ ಪೆರೇಡ್ ಮೈದಾನದಲ್ಲಿ ಒಂದು ಕಿಡಿ ಹೊತ್ತಿಕೊಂಡಿತು – ಅದು ಮುಂದೆ, ವ್ಯಾಪಾರಿಗಳಂತೆ ಬಂದು ಕುತಂತ್ರಗಳಿಂದಲೇ ಇಡೀ ಭರತಖಂಡವನ್ನು ವಸಾಹತು ಮಾಡಿಕೊಂಡಿದ್ದ ಬ್ರಿಟಿಷರ ವಿರುದ್ಧ ದ್ವೇಷದ ಜ್ವಾಲೆಯನ್ನೇ ಉರಿಸಿತು! ಆ ಕಿಡಿಗೆ ಕಾರಣರಾದವರೇ ವೀರಯೋಧ ಮಂಗಲ್ ಪಾಂಡೆ. ಇತಿಹಾಸದ ಪುಟಗಳಲ್ಲಿ ವಿದೇಶೀ ಬರಹಗಾರರು ಇದನ್ನು ಕೇವಲ “ಸಿಪಾಯಿ ದಂಗೆ” ಎಂದು ಹಗುರವಾಗಿ ಬಿಂಬಿಸಲು ಯತ್ನಿಸಿದರೂ, ನಿಜವಾಗಿ ಅದು ರಾಷ್ಟ್ರಪ್ರಜ್ಞೆಯ ಮೊದಲ ಸ್ಫೋಟ – ಸ್ವಾಭಿಮಾನದ ಮತ್ತು ಸ್ವರಾಜ್ಯದ ರಣಕಹಳೆ. ವೀರ ಸಾವರ್ಕರರು ತಮ್ಮ ಚಾರಿತ್ರಿಕ ಕೃತಿಯಲ್ಲಿ ಸಾರಿದಂತೆ, ಇದೇ ನಿಜವಾದ ಅರ್ಥದಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ!

ಮಂಗಲ್ ಪಾಂಡೆ 1827ರ ಜುಲೈ 19ರಂದು ಇಂದಿನ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಒಂದು ಸಂಪ್ರದಾಯನಿಷ್ಠ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ಸನಾತನ ಧರ್ಮದ ಸಂಸ್ಕಾರಗಳಲ್ಲೇ ಬೆಳೆದ ಅವರಿಗೆ ಧರ್ಮ, ಮಾತೃಭೂಮಿ ಮತ್ತು ಆತ್ಮಗೌರವ ಇವೇ ಜೀವನದ ಮೂಲಮಂತ್ರಗಳಾಗಿದ್ದವು. 1849ರಲ್ಲಿ, ತಮ್ಮ 22ನೇ ವಯಸ್ಸಿನಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯದ 34ನೇ ಬಂಗಾಳ ನೇಟಿವ್ ಇನ್‌ಫೆಂಟ್ರಿಗೆ ಸೇರ್ಪಡೆಗೊಂಡರು. ಆ ಕಾಲದಲ್ಲಿ ಬ್ರಾಹ್ಮಣ ಮತ್ತು ಕ್ಷತ್ರಿಯ ಕುಲದ ಯುವಕರೇ ಬಂಗಾಳ ಸೇನೆಯ ಬೆನ್ನೆಲುಬಾಗಿದ್ದರು – ಧರ್ಮ ಮತ್ತು ಪರಂಪರೆಗಳ ಬಗ್ಗೆ ಅಚಲ ನಿಷ್ಠೆ ಹೊಂದಿದ್ದ ಈ ವೀರರೇ ಮುಂದೆ ವಿದೇಶೀ ಆಡಳಿತದ ಅನ್ಯಾಯ, ಅಪಮಾನಗಳ ವಿರುದ್ಧ ಸಿಡಿದೇಳುವಿಕೆಗೆ ಕಾರಣರಾದದ್ದು.

‘ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ’, ಕೇವಲ ಭಾರತದ ಸಂಪತ್ತನ್ನು ಲೂಟಿ ಮಾಡುತ್ತಿದ್ದುದಷ್ಟೇ ಅಲ್ಲ – ಅದು ಭಾರತೀಯರ ಆತ್ಮಗೌರವ, ಸಂಸ್ಕೃತಿ ಮತ್ತು ಸನಾತನ ಧರ್ಮದ ಬೇರುಗಳನ್ನೇ ಕಿತ್ತೊಗೆಯುವ ಹುನ್ನಾರದಲ್ಲಿತ್ತು. ಭಾರತೀಯ ಹಿಂದೂ ಸಿಪಾಯಿಗಳಿಗೆ ತಿಲಕಧಾರಣೆ, ಜನಿವಾರ ನಿಷೇಧಿಸಿ, ಮುಸಲ್ಮಾನರಿಗೆ ಗಡ್ಡ-ಮೀಸೆಗಳನ್ನು ಬೆಳೆಸುವಂಥ ಅನೇಕ ಮತೀಯ ಆಚರಣೆಗಳ ಮೇಲೂ ನಿರ್ಬಂಧ ಹೇರಿತ್ತು. ಮತಾಂತರದ ಹುನ್ನಾರದೊಂದಿಗೆ ಕ್ರೈಸ್ತ ಮತಬೋಧನಾ ಕರಪತ್ರಗಳನ್ನು ದೇವನಾಗರಿ ಹಾಗೂ ಉರ್ದು ಲಿಪಿಗಳಲ್ಲಿ ಹಂಚಿ, ಹಿಂದೂ-ಮುಸ್ಲಿಂ ಸೈನಿಕರ ಶ್ರದ್ಧೆಯನ್ನೇ ಘಾಸಿಗೊಳಿಸುವ ಪ್ರಯತ್ನಗಳು ಅವ್ಯಾಹತವಾಗಿ ನಡೆಯುತ್ತಿದ್ದ ಕಾಲವದು.

ಇವೆಲ್ಲದರ ಪರಾಕಾಷ್ಠೆ ತಲುಪಿದ್ದು ಹೊಸದಾಗಿ ಬಂದ ಎನ್‌ಫೀಲ್ಡ್ ರೈಫಲ್‌ ಎಂಬ ಸೇನಾಧಿಕಾರಿಯ ನೇಮಕಗೊಂಡಾಗ. ಆತನು ಗೋವು ಮತ್ತು ಹಂದಿಗಳ ಕೊಬ್ಬು ಲೇಪಿಸಿದ ಹೊಸ ಗುಂಡುಚೀಟುಗಳನ್ನು ಸೈನಿಕರು ಬಳಸಬೇಕೆಂದು ಹೊಸ ನಿಯಮ-ಕಟ್ಟಳೆಯನ್ನು ಜಾರಿಗೊಳಿಸಿದಾಗ! ಗುಂಡುಚೀಟುಗಳನ್ನು ಹಲ್ಲಿನಿಂದ ಕಚ್ಚಿಯೇ ಬಳಸಬೇಕಾದ ಅನಿವಾರ್ಯವಿದ್ದ ಕಾರಣ, ಅದು ಕೇವಲ ಒಂದು ಶಸ್ತ್ರಾಸ್ತ್ರ ಸಂಬಂಧಿತ ತಾಂತ್ರಿಕ ಸಮಸ್ಯೆಯಾಗಿ ಉಳಿಯದೇ, ಹಿಂದೂಗಳಿಗೆ ಗೋಮಾತೆಯ ಮೇಲಿನ ಅನಾದಿ ಕಾಲದ ಧರ್ಮಶ್ರದ್ಧೆಯ ಮೇಲಾದ ನೇರ ದಾಳಿಯೆಂಬಂತೆ ಪರಿಣಮಿಸಿತು! ಮುಸಲ್ಮಾನರಿಗಂತೂ ಹಂದಿ ಅಥವಾ ಹಂದಿಕೊಬ್ಬು ಎಂದರೆ ಅಪವಿತ್ರ; ಧಾರ್ಮಿಕವಾಗಿ ಅತಿ ದೊಡ್ಡ ಅಪಚಾರ ಎಂಬ ಭಾವನೆ ಸಹಜವಾಗಿತ್ತು. ಹಾಗಾಗಿ ಪ್ರತಿಯೊಬ್ಬ ಹಿಂದೂ-ಮುಸಲ್ಮಾನ ಸಿಪಾಯಿಯ ಎದೆಯಲ್ಲಿಯೂ ಕಿಚ್ಚು ಹೊತ್ತಿದ್ದರಲ್ಲಿ ಅಚ್ಚರಿಯಿಲ್ಲ.

1857ರ ಮಾರ್ಚ್ 29ರಂದು, ಸಹನೆಯ ಕಟ್ಟೆಯೊಡೆದಂತಾಗಿ ಬ್ಯಾರಕ್‌ಪುರದ ಪೆರೇಡ್ ಮೈದಾನದಲ್ಲಿ ಮಂಗಲ್ ಪಾಂಡೆ ತಲವಾರು-ಕೋವಿ ಹಿಡಿದು ಎದ್ದು ನಿಂತ! “ಧರ್ಮಕ್ಕಾಗಿ ಎದ್ದೇಳಿ, ಸಹೋದರರೇ!” ಎಂದು ಸಹಸೈನಿಕರಿಗೆ ಕರೆ ಕೊಟ್ಟರಲ್ಲದೇ, ತಮ್ಮನ್ನು ಬಂಧಿಸಲು ಬಂದ ಸಾರ್ಜೆಂಟ್-ಮೇಜರ್ ಹ್ಯೂಸನ್ ಮೇಲೆ ಗುಂಡು ಹಾರಿಸಿ ಗಾಯಗೊಳಿಸಿದರು. ಘಟನಾಸ್ಥಳಕ್ಕೆ ಧಾವಿಸಿ ಬಂದ ಲೆಫ್ಟಿನೆಂಟ್ ಬಾಘ್‌ನ ಮೇಲೂ ಕತ್ತಿಯಿಂದ ಎರಗಿದರು. ಮರುಕ್ಷಣದಲ್ಲಿಯೇ ಅವರನ್ನು ಬಂಧಿಸುವ ಆಜ್ಞೆಗೊಳಗಾದ ಜಮಾದಾರ್ ಈಶ್ವರೀಪ್ರಸಾದ್ ನಿರಾಕರಿಸಿದ್ದು ಸಹ ಗಮನಾರ್ಹ ಸಂಗತಿ – ಅಂದು ಬಹುತೇಕ ಭಾರತೀಯ ಸಿಪಾಯಿಗಳ ಹೃದಯದಲ್ಲಿ ಪಾಂಡೆಯವರ ಬಗೆಗೆ ಗೌರವ, ಸಹಾನುಭೂತಿ ಬೆಳೆದಿತ್ತು ಎಂಬುದಕ್ಕೆ ಸಾಕ್ಷಿಯಿದು.

ಬ್ರಿಟಿಷ್ ಸೇನಾಬಲ ಜಮಾಯಿಸಿದಾಗ, ಶತ್ರುವಿನ ಕೈಯಲ್ಲಿ ಸಿಲುಕುವುದಕ್ಕಿಂತ ಆತ್ಮಬಲಿದಾನವನ್ನೇ ಆಯ್ದುಕೊಂಡ ಸ್ವಾಭಿಮಾನೀ ಪಾಂಡೆಯವರು ತಮ್ಮ ಮೇಲೆ ತಾವೇ ಗುಂಡು ಹಾರಿಸಿಕೊಂಡರು – ಆದರೆ ಆ ಪ್ರಯತ್ನ ವಿಫಲವಾಯಿತು.

ಮಂಗಲ್ ಪಾಂಡೆಯವರನ್ನು ಸೆರೆಹಿಡಿದ ಬ್ರಿಟಿಷ್ ಸರ್ಕಾರವು ಸೇನಾನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಮರಣದಂಡನೆ ಶಿಕ್ಷೆ ವಿಧಿಸಿತು. ಸಿಪಾಯಿಗಳ ಆಕ್ರೋಶ ಮತ್ತಷ್ಟು ಸ್ಫೋಟಗೊಳ್ಳುವ ಭೀತಿಯಿಂದ, ಬ್ರಿಟಿಷರು ಭಯಗ್ರಸ್ತರಾಗಿ ಗಲ್ಲಿನ ದಿನಾಂಕವನ್ನೂ ಮುಂಚಿತವಾಗಿ ಗೊತ್ತುಮಾಡಿ, 1857ರ ಏಪ್ರಿಲ್ 8ರಂದು ಬ್ಯಾರಕ್‌ಪುರದಲ್ಲಿ ಪುರುಷಸಿಂಹ ಮಂಗಲ್ ಪಾಂಡೆಯವರನ್ನು ಗಲ್ಲಿಗೇರಿಸಿದರು. ಹಾಗೂ ಮಂಗಲಪಾಂಡೆಯನ್ನು ಬಂಧಿಸಲು ನಿರಾಕರಿಸಿದ್ದ ಜಮಾದಾರ್ ಈಶ್ವರೀಪ್ರಸಾದ್‍ರನ್ನು ಕೂಡ ಏಪ್ರಿಲ್ 21ರಂದು ಗಲ್ಲಿಗೇರಿಸಲಾಯಿತು.

ಪಾಂಡೆಯವರ ಬಲಿದಾನದ ಸುದ್ದಿಯು ಬಂಗಾಳ ಸೇನೆಯ ಎಲ್ಲ ತುಕಡಿಗಳಿಗೂ ಕಾಳ್ಗಿಚ್ಚಿನಂತೆ ಹಬ್ಬಿತು. 1857ರ ಮೇ 10ರಂದು ಮೀರತ್‌ನಲ್ಲಿ ಸಿಪಾಯಿಗಳು ಸಂಘಟಿತರಾಗಿ ದಂಗೆಯೆದ್ದು ದೆಹಲಿಯತ್ತ ಮುನ್ನುಗ್ಗಿದರು, ಮತ್ತು ವಯೋವೃದ್ಧ ಮೊಘಲ್ ದೊರೆ ಬಹಾದೂರ್ ಷಾ ಜಾಫರ್‌ನನ್ನು ಸಂಕೇತಿಕವಾಗಿ ಭಾರತದ ನಾಯಕನೆಂದು ಘೋಷಿಸಲಾಯಿತು. ಮುಂದೆ ನಾನಾ ಸಾಹೇಬ್ ಪೇಶ್ವೆ, ತಾತ್ಯಾ ಟೋಪೆ, ಝಾನ್ಸಿರಾಣಿ ಲಕ್ಷ್ಮೀಬಾಯಿ, ಅವಧ್‌ನ ಬೇಗಂ ಹಜ್ರತ್ ಮಹಲ್, ಬಿಹಾರದ ಕುನ್ವರ್ ಸಿಂಗ್, ಮೌಲ್ವಿ ಅಹಮದುಲ್ಲಾ ಶಾಹ್ ಮುಂತಾದ ವೀರರು ವಿವಿಧ ಪ್ರಾಂತ್ಯಗಳಲ್ಲಿ ಈ ಕ್ರಾಂತಿಯ ನೇತೃತ್ವ ವಹಿಸಿದರು.

ಝಾನ್ಸಿಯ ರಾಣಿಯಂತೂ ಕುದುರೆ ಏರಿ ಖಡ್ಗ ಝಳಪಿಸಿ ಯುದ್ಧರಂಗದಲ್ಲೇ ವೀರಮರಣ ಹೊಂದಿದ್ದು ಇಂದಿಗೂ ಮರೆಯಲಾಗದ ಕಥೆ. ಈ ಒಂದು ವರ್ಷದ ಸಂಗ್ರಾಮ ಹಿಂದೂ-ಮುಸ್ಲಿಂ ಎಂಬ ಭೇದವಿಲ್ಲದೇ, ಎಲ್ಲ ಸಮುದಾಯಗಳಿಗೆ ಸೇರಿದ ಭಾರತೀಯರನ್ನು ಒಂದೇ ಮಾತೃಭೂಮಿಯ ಸುಪುತ್ರರೆಂಬ ಸೂತ್ರದಲ್ಲಿ ಬಲವಾಗಿ ಬೆಸೆದಿದ್ದು ಮಾತ್ರ ಸುಳ್ಳಲ್ಲ ಎಂಬುದನ್ನೂ ನಾವು ಸ್ಮರಿಸಲೇಬೇಕು.

ಬ್ರಿಟಿಷರು ಮತ್ತು ಅವರ ಮಾನಸಪುತ್ರರಾದ ವಾಮಪಂಥೀ ಇತಿಹಾಸಕಾರರು ಒಂದು ಶತಮಾನದ ಕಾಲ, ಇದೊಂದು ಚಿಕ್ಕ “ಸಿಪಾಯಿ ದಂಗೆ” (Sepoy Mutiny), ಸಣ್ಣದಾದ ಸ್ಥಳೀಯ ಅಸಮಾಧಾನದ ಸ್ಫೋಟವಷ್ಟೇ ಎಂದು ಬಿಂಬಿಸಿದರು! ಎಲ್ಲಿ ಭಾರತೀಯರಿಗೆ ಇದೊಂದು ಸಂಘಟಿತ ರಾಷ್ಟ್ರೀಯ ಸ್ವಾತಂತ್ರ್ಯ ಸಂಗ್ರಾಮವಾಗಿತ್ತೆಂಬ ಸತ್ಯ ಗೊತ್ತಾಗಿ ತಮ್ಮ ಸಾಮ್ರಾಜ್ಯದ ಬುನಾದಿಯೇ ಅಲುಗಾಡುವುದೋ ಎಂಬ ಭಯವಿತ್ತು ಬ್ರಟಿಷರಿಗೆ. ಈ ಸುಳ್ಳು ಸುದ್ದಿಯ ಕಂತೆಯನ್ನು ಸೀಳಿ, ಸತ್ಯವನ್ನು ಜಗತ್ತಿಗೆಲ್ಲ ಸಾರಿದವರು ಸ್ವಾತಂತ್ರ್ಯವೀರ ವಿನಾಯಕ ದಾಮೋದರ ಸಾವರ್ಕರ್! 1857ರ ಘಟನೆ ನಿಜವಾಗಿಯೂ ‘ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಎಂದು ಅವರು ಬರೆದ ಒಂದು ಪುಸ್ತಕವು ಬ್ರಿಟಿಷ್ ಸರ್ಕಾರದ ನಿಷೇಧದ ನಡುವೆಯೂ, ಭಾರತೀಯ ಯುವಜನತೆಯ ಎದೆಯಲ್ಲಿ ರಾಷ್ಟ್ರಾಭಿಮಾನದ ಕಿಚ್ಚು ಹೊತ್ತಿಸಿ, ಮುಂದಿನ ಸ್ವಾತಂತ್ರ್ಯ ಚಳವಳಿಗೆ ಸೈದ್ಧಾಂತಿಕ ಬುನಾದಿ ಹಾಕಿತು.

#Rashtrotthana #RashtrotthanaParishat #rashtrotthanainrashtraseva #indianfreedommovement #firstindianfreedommovement #mangalpandey

Leave a Reply

Your email address will not be published. Required fields are marked *