Kargil Vijay Diwas – 2026: Jai Jawan, Balidan Amar Rahe! (Glory to the Soldier, May the Sacrifice Be Immortal!)
As history has shown, the sacrifices of our brave soldiers are the fortified bastions that have protected us, and the Indian Army itself is the pillar upon which the survival of our democracy rests. National defense is the very strength of the nation’s freedom and democracy. The creation of opportunities for establishing long-term peace and harmony in any region of the world is what inspires the progress of the entire world.
If one observes the history of the Indian subcontinent, for centuries this land has witnessed numerous invasions and wars. The 1947-48 invasion of Kashmir, the 1965 war, the 1971 war, and even afterward, Pakistan has been a country that has continued to follow the misguided policy of persistent border violations and encouragement of terrorism. It is indeed an event the nation must not forget: Pakistan — a country born just one day before India gained independence in 1947, formed by dividing undivided India into two and establishing itself as its own Islamic republic — has made attempts to build its very existence on the foundation of anti-India sentiment.
ಕಾರ್ಗಿಲ್ ವಿಜಯ್ ದಿವಸ್ – 2026: ಜೈ ಜವಾನ್, ಬಲಿದಾನ್ ಅಮರ್ ರಹೇ!

ಇತಿಹಾಸವು ತೋರಿಸಿರುವಂತೆ ನಮ್ಮ ವೀರ ಸೈನಿಕರ ಬಲಿದಾನವೇ ನಮ್ಮನ್ನು ರಕ್ಷಿಸಿದ ಭದ್ರಕೋಟೆಗಳು ಮತ್ತು ಭಾರತೀಯ ಸೈನ್ಯವೇ ನಮ್ಮ ಪ್ರಜಾಪ್ರಭುತ್ವದ ಉಳಿವಿಗೆ ಆಧಾರಸ್ತಂಭ. ರಾಷ್ಟ್ರರಕ್ಷಣೆಯೇ ರಾಷ್ಟ್ರದ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವದ ಬಲ. ವಿಶ್ವದ ಒಂದು ಪ್ರದೇಶದಲ್ಲಿ ದೀರ್ಘಕಾಲೀನ ಶಾಂತಿ ಹಾಗೂ ಸೌಹಾರ್ದ ಸ್ಥಾಪನೆಗೆ ಅವಕಾಶಗಳ ನಿರ್ಮಾಣವೇ ವಿಶ್ವೋನ್ನತಿಗೆ ಸ್ಫೂರ್ತಿ.
ಭಾರತೀಯ ಉಪಖಂಡದ ಇತಿಹಾಸವನ್ನೊಮ್ಮೆ ಗಮನಿಸಿದರೆ, ಶತಶತಮಾನಗಳಿಂದ ಈ ಭೂಭಾಗವು ಅನೇಕ ಆಕ್ರಮಣಗಳು ಮತ್ತು ಯುದ್ಧ-ಸಮರಗಳಿಗೆ ಸಾಕ್ಷಿಯಾಗಿದೆ. 1947-48ರ ಕಾಶ್ಮೀರ ಆಕ್ರಮಣ, 1965ರ ಯುದ್ಧ, 1971ರ ಯುದ್ಧ ಹಾಗೂ ಅದರ ನಂತರವೂ ನಿರಂತರ ಗಡಿ ಉಲ್ಲಂಘನೆ ಮತ್ತು ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ದುರ್ನೀತಿಯನ್ನು ಅನುಸರಿಸುತ್ತಲೇ ಬಂದ ದೇಶ ಪಾಕಿಸ್ತಾನ. 1947ರಲ್ಲಿ ಭಾರತವು ಸ್ವಾತಂತ್ರ್ಯ ಪಡೆವುದಕ್ಕೆ ಒಂದು ದಿನ ಮುಂಚೆಯೇ ಅಖಂಡ ಭಾರತವನ್ನು ಇಬ್ಭಾಗ ಮಾಡಿ, ತನ್ನದೇ ಆದ ಒಂದು ಇಸ್ಲಾಮಿಕ್ ಗಣತಂತ್ರವಾಗಿ ಸ್ಥಾಪಿಸಿ, ಹುಟ್ಟಿಕೊಂಡ ದೇಶವಾದ ಪಾಕಿಸ್ತಾನವು, ತನ್ನ ಅಸ್ತಿತ್ವವನ್ನು ಭಾರತ-ವಿರೋಧದ ಅಡಿಪಾಯದ ಮೇಲೆಯೇ ಕಟ್ಟಿಕೊಳ್ಳುವ ಪ್ರಯತ್ನ ನಡೆಸಿದ್ದೂ ದೇಶದ ಮರೆಯಬಾರದ ಘಟನೆಯೇ ಸರಿ.
1947-48ರ ಯುದ್ಧದಲ್ಲಿ ಭಾರತವು ಕಾಶ್ಮೀರದ ಬಹುಭಾಗವನ್ನು ರಕ್ಷಿಸಿದರೂ, ಅದರ ಒಂದು ಭಾಗ ಪಾಕಿಸ್ತಾನದ ಅಕ್ರಮ ಆಕ್ರಮಣದಲ್ಲಿಯೇ ಉಳಿಯಿತು. 1971ರ ಯುದ್ಧದಲ್ಲಿ ಭಾರತವು ಐತಿಹಾಸಿಕ ವಿಜಯ ಸಾಧಿಸಿ, ಬಾಂಗ್ಲಾದೇಶದ ಉದಯಕ್ಕೆ ಕಾರಣವಾಯಿತು ಮತ್ತು ಸುಮಾರು 93,000 ಪಾಕಿಸ್ತಾನಿ ಸೈನಿಕರು ಶರಣಾದರು. 1999ರ ಸಮಯವು ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖವಾಗಿದೆ. ಏಕೆಂದರೆ, ಇಡೀ ಜಗತ್ತು ಭಾರತವನ್ನು ಹೊಸ ಶಕ್ತಿಯಾಗಿ ನೋಡುತ್ತಿದ್ದ ಸಂದರ್ಭದಲ್ಲಿ, ಪಾಕಿಸ್ತಾನದ ಈ ಹೇಡಿತನದ ಕೃತ್ಯವು ದೇಶದ ಭದ್ರತೆಗೆ ಒಡ್ಡಿದ ನೇರ ಸವಾಲಾಗಿತ್ತು.
ಜಾಗತಿಕವಾಗಿ ಸೂಕ್ಷ್ಮವೆನಿಸುವ ರಾಜಕೀಯ ಪರಿಸ್ಥಿತಿಗಳು ಉಪಖಂಡದಲ್ಲಿ ಇದ್ದ ಒಂದು ಕಾಲ. ಆ ಸಮಯದಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಶಾಂತಿಗೆ ಆದ್ಯತೆ ನೀಡಿ ಲಾಹೋರ್ ಬಸ್ ಯಾತ್ರೆಯ ಮೂಲಕ ಸ್ನೇಹದ ಹಸ್ತ ಚಾಚಿದ್ದರು. ಆದರೆ ಅದಕ್ಕೆ ಪ್ರತಿಯಾಗಿ ಪಾಕಿಸ್ತಾನವು ವಿಶ್ವಾಸಘಾತಕ ಕೃತ್ಯ ಎಸಗಿತು. 1999ರ ಮೇ ತಿಂಗಳಲ್ಲಿ, ಲಾಹೋರ್ ಘೋಷಣೆಗೆ ಸಹಿ ಹಾಕಿದ ಕೆಲವೇ ತಿಂಗಳುಗಳಲ್ಲಿ, ಪಾಕಿಸ್ತಾನದ ಸೇನೆ ಮತ್ತು ಅವರ ಬೆಂಬಲಿತ ಒಳನುಗ್ಗುವವರು ಜಮ್ಮು-ಕಾಶ್ಮೀರದ ಕಾರ್ಗಿಲ್ ಪ್ರದೇಶದ ಎತ್ತರದ ಶಿಖರಗಳನ್ನು ರಹಸ್ಯವಾಗಿ ಆಕ್ರಮಿಸಿಕೊಂಡರು. ಇದು ಕೇವಲ ಒಂದು ಸೇನಾ ದುಸ್ಸಾಹಸವಲ್ಲ, ಬದಲಿಗೆ ಶಾಂತಿ ಮಾತುಕತೆಗಳ ಬೆನ್ನಿಗೇ ಚುಚ್ಚಿದ ವಿಶ್ವಾಸಘಾತುಕ ಇರಿತವಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಗಿಲ್ ವಿಜಯವು ಕೇವಲ ಸೈನಿಕ ಸಾಧನೆಯಲ್ಲ; ಭಾರತದ ಸಂಯಮವನ್ನು ದುರ್ಬಲತೆ ಎಂದು ಭಾವಿಸುವವರಿಗೆ ನೀಡಿದ ಸ್ಪಷ್ಟ ಉತ್ತರವಾಗಿತ್ತು. ಇದು ಕೇವಲ ಒಂದು ಮಿಲಿಟರಿ ಕಾರ್ಯಾಚರಣೆಯಾಗಿರದೇ, ಭಾರತದ ಸಂಕಲ್ಪ ಶಕ್ತಿ ಮತ್ತು ರಾಜತಾಂತ್ರಿಕ ಮುತ್ಸದ್ದಿತನದ ಅಗ್ನಿಪರೀಕ್ಷೆಯಾಗಿತ್ತು.
ಕಾರ್ಗಿಲ್ ಯುದ್ಧ ಅತ್ಯಂತ ಅಪಾಯಕಾರಿ ಹಾಗೂ ಭಿನ್ನವಾಗಿತ್ತು. ಇದು ಪೂರ್ಣ ಪ್ರಮಾಣದ ಯುದ್ಧವಲ್ಲದಿದ್ದರೂ, 18,000 ಅಡಿ ಎತ್ತರದ ಹಿಮ ಶಿಖರಗಳ ಮೇಲೆ, ಗಾಳಿಯಲ್ಲಿ ಆಮ್ಲಜನಕದ ಕೊರತೆಯಿದ್ದು ಸೈನಿಕರು ಉಸಿರಾಡಲು ಸಹಾ ಕಷ್ಟವಾದ ಪರಿಸ್ಥಿತಿ! ಕಡಿದಾದ ಪರ್ವತಗಳಲ್ಲಿ ನಡೆದ ಅಸಾಧಾರಣ ಸಾಹಸ. ಭೂ ಸೀಮಿತ ಯುದ್ಧವಾದರೂ, ನಮ್ಮ ಮಾತೃಭೂಮಿಯ ರಕ್ಷಣೆಗಾಗಿ ದುರ್ಗಮವಾದ ಪರ್ವತಗಳಲ್ಲಿ ಹೋರಾಡಿದ ನಮ್ಮ ಹೆಮ್ಮೆಯ ಸೇನೆಯು ಶತ್ರುಗಳಿಗೆ ಸಿಂಹಸ್ವಪ್ನವಾಯಿತು. ಸರ್ಕಾರವು ಗಡಿ ನಿಯಂತ್ರಣ ರೇಖೆಯನ್ನು (LoC) ದಾಟದೇ, ಅಪಾರ ಸಂಯಮ ಮತ್ತು ದೃಢತೆಯಿಂದ ಶತ್ರುಗಳನ್ನು ನಮ್ಮ ನೆಲದಿಂದ ಓಡಿಸುವ ಮೂಲಕ ಇಡೀ ವಿಶ್ವದ ಬೆಂಬಲವನ್ನು ಗಳಿಸಿತು.
ರಕ್ಷಣಾ ಸಚಿವಾಲಯದ ಅಧಿಕೃತ ಮಾಹಿತಿಯಂತೆ ಸುಮಾರು 85 ದಿನಗಳ (ಸುಮಾರು ಮೂರು ತಿಂಗಳ) ಕಾಲ ನಡೆದ ಈ ಯುದ್ಧದಲ್ಲಿ ಭಾರತವು ತನ್ನ 527 ಅಪ್ರತಿಮ ಯೋಧರು ವೀರಮರಣ ಹೊಂದಿದರು ಮತ್ತು 1,300ಕ್ಕೂ ಹೆಚ್ಚು ಯೋಧರು ಗಾಯಗೊಂಡರು! ಅವರ ಅಪಾರ ತ್ಯಾಗದ ಫಲವಾಗಿ ಭಾರತೀಯ ಸೇನೆಯು ಟೈಗರ್ ಹಿಲ್, ಟೋಲೋಲಿಂಗ್ ಸೇರಿದಂತೆ ಪ್ರಮುಖ ಶಿಖರಗಳನ್ನು ಮರಳಿ ವಶಪಡಿಸಿಕೊಂಡಿತು. ಈ ಯುದ್ಧದಲ್ಲಿ ಅಪರೂಪದ ಶೌರ್ಯ ಪ್ರದರ್ಶಿಸಿದ 4 ಯೋಧರಿಗೆ ಪರಮ ವೀರ ಚಕ್ರ ಪ್ರದಾನ ಮಾಡಲಾಯಿತು. ಶತ್ರುಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಕ್ಯಾಪ್ಟನ್ ವಿಕ್ರಮ್ ಬಾತ್ರಾ, ಲೆಫ್ಟಿನೆಂಟ್ ಮನೋಜ್ ಕುಮಾರ್ ಪಾಂಡೆ, ಗ್ರೆನೇಡಿಯರ್ ಯೋಗೇಂದ್ರ ಸಿಂಗ್ ಯಾದವ್ ಮತ್ತು ರೈಫಲ್ ಮ್ಯಾನ್ ಸಂಜಯ್ ಕುಮಾರ್ ಸೇರಿದಂತೆ ಒಟ್ಟು 4 ಶೂರರಿಗೆ ಭಾರತದ ಅತ್ಯುನ್ನತ ಸೇನಾ ಪುರಸ್ಕಾರವಾದ ಪರಮ ವೀರ ಚಕ್ರವನ್ನು ನೀಡಿ ಗೌರವಿಸಲಾಯಿತು. ಅವರೆಲ್ಲರ ಹೆಸರುಗಳು ಭಾರತೀಯ ಸೇನೆಯ ಇತಿಹಾಸದಲ್ಲಿ ಅಮರವಾಗಿ ಉಳಿಯುವುವು.
ಯುದ್ಧವು ಎಂದಿಗೂ ಮೊದಲ ಆಯ್ಕೆಯಾಗಬಾರದು; ಆದರೆ ಕೆಲವೊಮ್ಮೆ ಶಾಂತಿಯನ್ನು ಸ್ಥಾಪಿಸಲು ಯುದ್ಧವೇ ಅನಿವಾರ್ಯ ಅಸ್ತ್ರವಾಗುತ್ತದೆ. ಬಲವಾದ ರಾಷ್ಟ್ರೀಯತೆ ಮತ್ತು ಶತ್ರುಗಳನ್ನು ಸದೆಬಡಿಯುವ ಇಚ್ಛಾಶಕ್ತಿಯಿಂದ ಮಾತ್ರವೇ ದೇಶದ ಭದ್ರತೆ ಸಾಧ್ಯ. ಭಯೋತ್ಪಾದನೆಗೆ ಆಶ್ರಯ ನೀಡುವ ಗಡಿಯಾಚೆಗಿನ ದುಷ್ಟ ಶಕ್ತಿಗಳಿಗೆ ತಕ್ಕ ಉತ್ತರ ಕೊಟ್ಟಾಗ ಮಾತ್ರ ಭಯೋತ್ಪಾದನೆಗೆ ತಡೆ ಬೀಳುತ್ತದೆ. ರಾಷ್ಟ್ರದ ಭದ್ರತೆ, ಗಡಿಗಳ ಅಖಂಡತೆ ಮತ್ತು ನಾಗರಿಕರ ಸುರಕ್ಷತೆ ಅಪಾಯದಲ್ಲಿದ್ದಾಗ ದೃಢವಾದ ಪ್ರತಿರೋಧವೇ ಶಾಶ್ವತ ಶಾಂತಿಯ ಆಧಾರ.
ಕಾರ್ಗಿಲ್ ವಿಜಯ ದಿವಸವನ್ನು ಸ್ಮರಿಸುವಾಗ, ಯುದ್ಧ ಎಂಬುದು ಕೇವಲ ವಿನಾಶದ ಸಂಕೇತವಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಬಲಿಷ್ಠ ಪ್ರತಿರೋಧ, ದೃಢ ರಾಷ್ಟ್ರೀಯ ಇಚ್ಛಾಶಕ್ತಿ ಮತ್ತು ಸನ್ನದ್ಧ ಸೇನೆ – ಇವು ದೀರ್ಘಕಾಲೀನ ಶಾಂತಿ ಮತ್ತು ಸಾಮರಸ್ಯದ ಅಡಿಪಾಯಗಳಾಗಿವೆ. ಕಾರ್ಗಿಲ್ನಂತಹ ನಿರ್ಣಾಯಕ ಯುದ್ಧಗಳು ದೀರ್ಘಕಾಲೀನ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ ಸಾಧನಗಳಾಗಿವೆ.
ಭಾರತೀಯ ಸೈನ್ಯಕ್ಕೆ ಹಾಗೂ ವೀರ ಯೋಧರಿಗೆ ಮತ್ತೆ ಮತ್ತೆ ಶಿರಬಾಗಿ ನಮನ ಸಲ್ಲಿಸೋಣ. ಜೈ ಹಿಂದ್!
#Rashtrotthana #RashtrotthanaParishat #rashtrotthanainrashtraseva #kargilvijaydiwas #jaijvan #balidanamarrahe







