Even If the ‘Poison’ in the Poem Turns to Nectar… When Will We Ever Understand How, When, and How Much Education Should Be Given!?
Prof. S. T. Bhat. An English teacher by profession. A man of concern by temperament. Though not five feet tall, a ten-foot flood of learning. Though he has lived in Malenadu and continues to live there, he has cultivated the perspective of a linguist who reads between the lines.
Amid the pouring rain, for the twelfth-standard children within the roofed, sheltered classroom, a stream of English begins to flow as naturally as if it were our very own Kannada. Though it was a stream of nectar, what flowed was, of all things, through a subject titled ‘Poison’. Those fourteen lines of poetry began to unfold as ‘A Poison Tree’.
ಪದ್ಯದ ‘Poison’ ಅಮೃತವಾದರೂ… ಶಿಕ್ಷಣ ಯಾವಾಗ, ಎಷ್ಟು, ಹೇಗೆ ಅಂತ ಅರ್ಥವಾಗುವುದಾದರೂ ಯಾವಾಗ!?

ಪ್ರೊ. ಎಸ್ ಟಿ ಭಟ್. ವೃತ್ತಿಯಲ್ಲಿ ಇಂಗ್ಲಿಷ್ ಮೇಷ್ಟ್ರು. ಪ್ರವೃತ್ತಿಯಲ್ಲಿ ಕಾಳಜಿ ಭಟ್ರು. ಐದಡಿ ಎತ್ತರವಿಲ್ಲದಿದ್ದರೂ ಹತ್ತಡಿಯ ವಿದ್ಯಾ ಪ್ರವಾಹ. ಇದ್ದದ್ದು, ಇರುವುದು ಮಲೆನಾಡಿನಲ್ಲೇ ಆದರೂ ರೂಢಿಸಿಕೊಂಡದ್ದು ಸಾಲುಗಳ ಮಧ‍್ಯದಲ್ಲಿ ಓದುವ ಭಾಷಾ ವಿಜ್ಞಾನಿಯ ದೃಷ್ಟಿಕೋನವನ್ನು.
ಹನ್ನೆರಡನೇ ತರಗತಿಯ ಮಕ್ಕಳಿಗೆ ಧೋ ಎಂಬ ಮಳೆಯ ಮಧ್ಯದಲ್ಲಿ ತಾರಸಿಯಿಂದ ಆಚ್ಛಾದಿತ ಕಕ್ಷೆಯೊಳಗೆ ಇಂಗ್ಲಿಷಿನ ಸರಿತೆ ನಮ್ಮದೇ ಕನ್ನಡವೇನೋ ಎಂಬಷ್ಟು ಸಹಜವಾಗಿ ಹರಿಯಲು ಶುರುವಾಗುತ್ತದೆ. ಅದು ಅಮೃತದ ಸರಿತೆಯಾದರೂ ಹರಿದದ್ದು ಮಾತ್ರ ‘ವಿಷ’ವೆಂಬ ವಿಷಯದ ಮೂಲಕ. ಆ ಹದಿನಾಲ್ಕು ಸಾಲುಗಳ ಪದ್ಯ ‘A Poison Tree’ಯಾಗಿ ಬಿಚ್ಚಿಕೊಳ್ಳಹತ್ತಿತು.
ಅವರದ್ದೊಂದು ಜಿಜ್ಞಾಸೆ. ಅದು ‘Poison’ನ್ನೇ ಏಕೆ? ‘Poisonous’ ಏಕಲ್ಲ. ಏನು ಹೇಳುವುದು? ಮಕ್ಕಳೆಲ್ಲ ಪಿಟಿ-ಪಿಟಿ ನೋಡುತ್ತ ಕುಳಿತಿದ್ದರು. ಮಕ್ಕಳಿಗೆ ಉತ್ತರ ತಿಳಿಯಲಿಲ್ಲ, ಅವರೂ ಹೇಳಲಿಲ್ಲ, ಜಿಜ್ಞಾಸೆ ಮುಂದುವರೆಯುತ್ತಲೇ ಇತ್ತು. ಶನಿವಾರಗಳ 45 ನಿಮಿಷದ ಒಂದು ಅವಧಿಗಷ್ಟೇ ಸೀಮಿತವಾಗಿದ್ದ ಅವರ ಪಾಠದೊಳಗೆ ಈ ಶೀರ್ಷಿಕಾ ಜಿಜ್ಞಾಸಾ ಪ್ರಕರಣವು ಆಷಾಢ-ಶ್ರಾವಣಗಳ ಒಂದಷ್ಟು ವಾರ ಸಾಗಿತು.
ಅಂಕ, ಸಾಧನೆಯ ಆತುರದೊಳಗಿದ್ದ ವಿಜ್ಞಾನದ ವಿದ್ಯಾರ್ಥಿಗಳಿಗೆ ಇದೊಂದು ವೃಥಾ ಕಾಲಕ್ಷೇಪವೆನಿಸಿದರೆ, ವಾಣಿಜ್ಯ ವಿದ್ಯಾರ್ಥಿಗಳಿಗೆ ಅರ್ಥವಾಗದ ಕಬ್ಬಿಣದ ಕಡಲೆಯಾಯಿತು.
ಏನು ಮಾಡುವುದೆಂದು ತಿಳಿಯದೇ ವಾಣಿಜ್ಯದಲ್ಲಿ ವ್ಯಾಪಾರ ಶುರುಮಾಡಿಕೊಂಡಿದ್ದ ಒಬ್ಬನಿಗೆ ಏನೋ ಒಂದು ಹೊಸತರ ದರ್ಶನದಂತೆ. ಐದರಿಂದ ಹನ್ನೆರಡನೇ ತರಗತಿಯವರೆಗೂ ತಾನು ಏಕೆ ಇಂಗ್ಲಿಷನ್ನು ಕನ್ನಡದಂತೆಯೇ ಒಂದು ಭಾಷೆಯಾಗಿ, ಭಾವ ಸಂವಹನದ ಸಹಜ ನುಡಿಗಟ್ಟಾಗಿ ಸ್ವೀಕರಿಸಲಾಗಲಿಲ್ಲ ಎಂದು ಮನವರಿಕೆಯಾಗತೊಡಗಿತು.
ಮೈತುಂಬ ವಿಷವಿದ್ದರೆ ಅಥವಾ ವಿಷವೇ ಮೈಯಾಗಿದ್ದರೆ ‘Poison’ ಎಂದೂ, ಹಾವಿನಂತೆ ದವಡೆಯ ಯಾವುದೋ ಒಂದು ಮೂಲೆಯಲ್ಲಷ್ಟೇ ವಿಷವಿದ್ದರೆ ‘Poisonous’ ಎಂದೂ ಭಾದ್ರಪದದ ತುದಿಯಲ್ಲೆಲ್ಲೋ ಭಟ್ಟರು ಹೇಳಿದಾಗ ಹದಿನಾಲ್ಕು ಸಾಲುಗಳ ಆ ಸಾನೆಟ್‍ಗಿಂತ ಆ ಸಾಲುಗಳ ಮಧ್ಯದಲ್ಲಿದ್ದ ಸಿಟ್ಟಿನ ವಿಶ್ವರೂಪ ಅಷ್ಟಷ್ಟೇ ಅಷ್ಟಷ್ಟೇ ಕಾಣಹತ್ತಿತು. ಅಷ್ಟರಲ್ಲಾಗಲೇ ಕಾರ್ತೀಕ ಕಳೆದು ಡಿಸೆಂಬರ್ ಕೂಡ ಬಂದಿತ್ತೆಂಬ ನೆನಪು.
ಕಾಲೇಜಿನ ಹುಡುಗಾಟ ಹಾಗೂ ಹೈಸ್ಕೂಲಿನ ಎಳಸಿದ್ದ ಆ ಮಕ್ಕಳಿಗೆ ಆಗಬೇಕಾದದ್ದು ಆಗುತ್ತಿಲ್ಲ, ವರ್ಷ ಮುಗಿಯುತ್ತಾ ಬಂದರೂ ಸಿಲೆಬಸ್ ಮುಗಿಯುತ್ತಿಲ್ಲವೆಂಬ ಆತಂಕಿತ ಹಳಹಳಿಕೆಯಲ್ಲಿ ಆ ಸಾನೆಟ್ ಅಕ್ಷರಶಃ ‘Poison’ನ್ನೇ ಆಗಿಬಿಟ್ಟಿತ್ತು. ಆದರೆ ಇವನಿಗೆ ಮಾತ್ರ ಲೋಕದ ಪರಿವೆಯೇ ಇಲ್ಲ, ‘Poisonous’ನಿಂದ ‘Poison’ವರೆಗಿನ ಧ್ವನಿ ಚಿಂತನೆಗಳು ರಿಂಗಿಣಿಸುತ್ತಲೇ ಇದ್ದವು.
ಭಟ್ಟರು ಯಾವುದಕ್ಕೂ ಅಂಜದೇ, ಅಳುಕದೇ ಅಪ್ಪಣೆ ಕೊಡಿಸಿಯೇಬಿಟ್ಟರು. “ನೀವು ಕಾಲೇಜಿಗೆ ಬಂದಿದ್ದೀರಿ. ಹೈಸ್ಕೂಲ್‍ನಂತಲ್ಲ. ನೀವು ಮುಂದಿನ ಹಂತಕ್ಕೆ ಬಂದಿದ್ದೀರಿ. ಇಲ್ಲಿ ನಾನು ಸಿಲೆಬಸ್ ಮುಗಿಸಲು ಹಪಹಪಿಸುವುದಿಲ್ಲ. ಹತ್ತು-ಹದಿನೈದು ಪಾಠಗಳಲ್ಲಿ ಒಂದಾದರೂ ಸರಿ, ಎರಡಾದರೂ ಸರಿ, ಓದುವುದು ಹೇಗೆ ಅಂತಷ್ಟೇ ಕಲಿಸುತ್ತೇನೆ. ಸಾಲುಗಳ ಮಧ್ಯದಲ್ಲಿ ನುಗ್ಗುವ ಸುಖಾನುಭವವನ್ನು ಮಾಡಿಸುತ್ತೇನೆ. ಹೇಳದೇ ಬಿಟ್ಟಿರುವುದನ್ನು ಅರ್ಥೈಸಿಕೊಳ್ಳುವ ಪ್ರಕ್ರಿಯೆಯನ್ನೂ ತಿಳಿಸುತ್ತೇನೆ.” ಎಂದೆನ್ನುತ್ತಿದ್ದರೆ ಹಲವು ಮಕ್ಕಳ ಜಂಘಾಬಲವೇ ಉಡುಗಿಹೋಯಿತು. ಆದರೆ ಇವನೊಳಗೆ ಇಂಗ್ಲಿಷಿನ ಶ, ಷ, ಸಗಳೆಲ್ಲ ಬಿಚ್ಚಿಕೊಳ್ಳುವುದಕ್ಕೆ ತೊಡಗಿಕೊಂಡವು. ಇಂಗ್ಲಿಷ್ ಭಾಷೆಯ ಮೊಗ್ಗೂ ಅರಳಹತ್ತಿತು, ಭಾವದ ಬೀಜ ಬಿರಿಯತೊಡಗಿತು, ಸಾಲುಗಳ ಮಧ್ಯ ಹೇಳದೇ ಉಳಿದದ್ದೂ ಕೇಳಹತ್ತಿತು.
ಯಾವ ಶಿಕ್ಷಕನಿಗೂ ಹೀಗಾಗಬಾರದು. ಆದರೇನು ಮಾಡುವುದು ವಿಧಿ ಲೀಲೆ ಹಾಗೇ ಇತ್ತಲ್ಲ. ಓದುವುದನ್ನು ಕಲಿಸುವ, ಓದಿನ ರುಚಿ ಹತ್ತಿಸುವ ಸ್ವಭಾವದಲ್ಲೇ ಆತ್ಮಾರಾಮರಾಗಿದ್ದ ಅವರಿಗೆ ನಿವೃತ್ತಿಯು ಹತ್ತಿರ-ಹತ್ತಿರಕ್ಕೆ ಬರುತ್ತಿದ್ದಂತೆ ಸಿಲೆಬಸ್ ಮುಗಿಸುವುದು ಮಾತ್ರವಲ್ಲ, ಅದನ್ನು ಮಲೆನಾಡ ಮಕ್ಕಳೂ ಅರ್ಥೈಸಿಕೊಳ್ಳುವಂತೆ ಕನ್ನಡದಲ್ಲೂ ಬೋಧಿಸುವ ಕಟ್ಟಪ್ಪಣೆ ಮೇಲಿಂದ ಬಂತು. ಭಟ್ಟರು ಶಿಕ್ಷಣದ ಶಿಕ್ಷೆಯ ಭಾರದಲ್ಲಿ ಸಂಕಟದಿಂದ ಮರುಗಿದರು.
ಶಿಕ್ಷಣ ಯಾವಾಗ, ಎಷ್ಟು, ಹೇಗೆ ಅಂತ ಅರ್ಥವಾಗುವುದಾದರೂ ಯಾವಾಗ!?
#Rashtrotthana #RashtrotthanaParishat #rashtrotthanainrashtraseva #learningskills #learntolearn #inspirationalteaching #readingbetweenthelines







