• July 23, 2026
  • RP
  • 0

“Dushman ki goliyon ka hum saamna karenge, Azad hi rahe hain, Azad hi rahenge” (We shall face the enemy’s bullets; we have remained free, and free we shall remain): I am “Chandrashekhar”; my father is “Azad”; my mother is “Swatantrata”

‘Azad’ — this very word became the war-cry of the struggle against the British Empire! When the mere 15-year-old Chandrashekhar Tiwari was arrested for participating in the Non-Cooperation Movement, he roared like a lion in court, declaring his father’s name as “Azad” (free), his mother’s name as “Swatantrata” (freedom/independence), and his address as “Jail” — refusing to bow before British justice. That young boy, Chandrashekhar Tiwari, has from that day on been known to every Indian as ‘Chandrashekhar Azad’!

Chandrashekhar was born on July 23, 1906, in the village of Bhabhra in Madhya Pradesh, to father Sitaram Tiwari and mother Jagrani Devi. In keeping with his mother’s wish that her son become a Sanskrit scholar, the boy joined the Vidyapeeth in Kashi. But upon hearing the news of the Jallianwala Bagh massacre, he was deeply anguished and plunged into the freedom struggle.

“ದುಶ್ಮನ್ ಕಿ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ, ಆಜಾದ್ ಹೀ ರಹೇ ಹೈಂ, ಆಜಾದ್ ಹೀ ರಹೇಂಗೆ”: ನಾನು “ಚಂದ್ರಶೇಖರ”, ತಂದೆ “ಆಜಾದ್”, ತಾಯಿ “ಸ್ವತಂತ್ರತಾ”

‘ಆಜಾದ್’ – ಈ ಪದವೇ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ಹೋರಾಟದ ರಣಕಹಳೆ! ಕೇವಲ 15 ವರ್ಷದ ಚಂದ್ರಶೇಖರ ತಿವಾರಿಯು ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ಬಂಧಿತನಾದಾಗ, ನ್ಯಾಯಾಲಯದಲ್ಲಿ ತನ್ನ ತಂದೆಯ ಹೆಸರನ್ನು “ಆಜಾದ್” (ಸ್ವತಂತ್ರ), ತಾಯಿಯ ಹೆಸರು “ಸ್ವತಂತ್ರತಾ” ಮತ್ತು ವಿಳಾಸ “ಜೈಲು” ಎಂದು ಸಿಂಹಘರ್ಜನೆ ಮಾಡಿ, ಬ್ರಿಟಿಷ್ ನ್ಯಾಯಾಂಗದ ಮುಂದೆ ತಲೆಬಾಗಲು ನಿರಾಕರಿಸಿದ ಚಂದ್ರಶೇಖರ ತಿವಾರಿ ಎಂಬ ಕುಮಾರ, ಅಂದಿನಿಂದ ಪ್ರತಿಯೊಬ್ಬ ಭಾರತೀಯನಿಗೂ  ‘ಚಂದ್ರಶೇಖರ ಆಜಾದ್’ ಆಗಿ ಚಿರಪರಿಚಿತನಾದನು!

ಜುಲೈ 23, 1906ರಂದು ಮಧ್ಯಪ್ರದೇಶದ ಭಾಬ್ರಾ ಗ್ರಾಮದಲ್ಲಿ ತಂದೆ ಸೀತಾರಾಮ ತಿವಾರಿ, ತಾಯಿ ಜಗ್ರಾನೀ ದೇವಿಯವರ ಮಗನಾಗಿ ಚಂದ್ರಶೇಖರ ಜನಿಸಿದ. ಮಗನನ್ನು ಸಂಸ್ಕೃತ ಪಂಡಿತನನ್ನಾಗಿಸಬೇಕೆಂಬ ತಾಯಿಯ ಬಯಕೆಯಂತೆ ಕಾಶಿಯ ವಿದ್ಯಾಪೀಠಕ್ಕೆ ಸೇರಿದ ಬಾಲಕ, ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡದ ಸುದ್ದಿ ಕೇಳಿ, ತೀವ್ರವಾಗಿ ಮನನೊಂದು ಸ್ವಾತಂತ್ರ್ಯ ಚಳವಳಿಗೆ ಧುಮುಕಿದನು.

1922ರಲ್ಲಿ ಗಾಂಧೀಜಿ ಚೌರಿಚೌರಾ ಘಟನೆಯ ಬಳಿಕ ಅಸಹಕಾರ ಚಳವಳಿಯನ್ನೇ ಹಿಂಪಡೆದ ನಂತರ, ಕೇವಲ ಮನವಿ-ಬೇಡಿಕೆಗಳಿಂದ ಸ್ವಾತಂತ್ರ್ಯ ದಕ್ಕದೆಂದು ಅರಿತ ಆಜಾದ್, ಸಶಸ್ತ್ರ ಕ್ರಾಂತಿಯ ದಾರಿಹಿಡಿದು, ಭಗತ್ ಸಿಂಗ್, ಸುಖದೇವ್, ರಾಜಗುರು ಮುಂತಾದ ಯುವ ಕ್ರಾಂತಿಕಾರಿಗಳೊಂದಿಗೆ ಹಿಂದೂಸ್ತಾನ್ ಸೋಶಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್‌ನ (HSRA) ಪ್ರಮುಖ ನಾಯಕನಾಗಿ ಹೊರಹೊಮ್ಮಿದ. 1925ರ ಕಾಕೋರಿ ರೈಲು ದರೋಡೆಯಲ್ಲಿ ಸಂಘಟನೆಗಾಗಿ ಹಣ ಸಂಗ್ರಹಿಸಿ, ಬಂಧಿತನಾಗದೇ ತಪ್ಪಿಸಿಕೊಂಡ ಪ್ರಮುಖ ಕ್ರಾಂತಿಕಾರಿಗಳಲ್ಲಿ ಆಜಾದ್ ಕೂಡ ಒಬ್ಬ! 1928ರಲ್ಲಿ ಲಾಲಾ ಲಜಪತ್ ರಾಯ್ ಅವರ ಸಾವಿಗೆ ಪ್ರತೀಕಾರವಾಗಿ ಬ್ರಿಟಿಷ್ ಅಧಿಕಾರಿ ಸಾಂಡರ್ಸ್‌ನ ಹತ್ಯೆಯ ರಹಸ್ಯ ಯೋಜನೆಯಲ್ಲೂ ಪ್ರಮುಖ ಪಾತ್ರವಹಿಸಿದ.

“ಬಲರಾಜ್” ಎಂಬ ಗುಪ್ತನಾಮದಲ್ಲಿ ಸಂಘಟನೆಯ ಎಲ್ಲ ಆದೇಶ ಹೊರಡಿಸುತ್ತಿದ್ದ ಅವನು, ಝಾನ್ಸಿಯಲ್ಲಿ ‘ಹರಿಶಂಕರ್’ ಎಂಬ ಶಿಕ್ಷಕನ ವೇಷದಲ್ಲಿ, ಮತ್ತೆಲ್ಲೋ ಸಾಧುವಿನ ವೇಷದಲ್ಲಿ ವರ್ಷಗಟ್ಟಲೆ ಪೊಲೀಸರ ಕಣ್ತಪ್ಪಿಸಿದ್ದುಕೊಂಡೇ ಹೋರಾಡಿದ್ದು ಅದ್ಭುತ ಸಂಗತಿ. ಭಗವತೀ ಚರಣ್ ವೋಹ್ರಾ, ಸುಶೀಲಾ ದೀದಿ ಮೊದಲಾದ ನಂಬಿಕಸ್ಥ ಸಂದೇಶವಾಹಕರ ಮೂಲಕ ಗುಪ್ತ ಪತ್ರಗಳು, ಸಂಕೇತ ಭಾಷೆಯ ಚೀಟಿಗಳು ನಗರದಿಂದ ನಗರಕ್ಕೆ ಸಂಚರಿಸುತ್ತಿದ್ದವು. ಸುರಕ್ಷಿತ ತಂಗುದಾಣಗಳು, ರಹಸ್ಯ ಬಾಂಬ್ ತಯಾರಿಕಾ ಕೇಂದ್ರಗಳು ಹಾಗೂ ಗುಪ್ತ ಸಭೆಗಳ ಜಾಲವನ್ನು ಹೆಣೆದಿದ್ದ ಆಜಾದ್, ಹಲವು ವರ್ಷಗಳ ಕಾಲ ಸ್ವತಃ ಒಂದೇ ಸ್ಥಳದಲ್ಲಿ ಎರಡು ದಿನಗಳಿಗೂ ಹೆಚ್ಚು ಕಾಲ ಉಳಿಯದೇ, ಸುಳಿವು ಹತ್ತದಂತೆ, ಪೊಲೀಸರ ಕೈಗೆ ಸಿಗದಂತೆ ಚಾತುರ್ಯದಿಂದ ಮುನ್ನುಗ್ಗುತ್ತಿದ್ದ.

ಅದು ರಾಜಕೀಯವಾಗಿ ಅತ್ಯಂತ ಅಪಾಯಕಾರಿಯಾದ ಕಾಲ – ಪ್ರತಿ ಹೆಜ್ಜೆಯಲ್ಲೂ ಬಂಧನ, ಮರಣದಂಡನೆಯ ಭಯ, ಬೆನ್ನಟ್ಟುವ ಬ್ರಿಟಿಷ್ ಗುಪ್ತಚರ ಪಡೆ. ಕಾಕೋರಿ ಪ್ರಕರಣದಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್ ಸೇರಿದಂತೆ ಆಪ್ತ ಸಂಗಾತಿಗಳಿಗೆ ಗಲ್ಲು ಶಿಕ್ಷೆಯಾದಾಗ ಆಜಾದ್ ಒಳಗೊಳಗೇ ಕುಸಿದಿದ್ದರೂ ಹೋರಾಟ ನಿಲ್ಲಿಸಲಿಲ್ಲ. ಅನಂತರ ಸ್ಯಾಂಡರ್ಸ್ ಹತ್ಯೆಯ ಬೆನ್ನಲ್ಲೇ ಭಗತ್ ಸಿಂಗ್, ರಾಜಗುರು, ಸುಖದೇವ್ ಬಂಧಿತರಾಗಿ ವಿಚಾರಣೆಗೆ ಒಳಗಾದಾಗ, ಅವರನ್ನು ಜೈಲಿನಿಂದ ಬಿಡುಗಡೆಗೊಳಿಸುವ ಹಲವು ಯೋಜನೆಗಳನ್ನು ಆಜಾದ್ ರೂಪಿಸಿದರೂ ಯಶಸ್ವಿಯಾಗಲಿಲ್ಲ; ಕೊನೆಗೆ ತನ್ನ ಕಣ್ಣೆದುರೇ ಆ ಮೂವರನ್ನೂ ಗಲ್ಲಿಗೇರಿಸಿದ್ದನ್ನು ಅಸಹಾಯಕನಾಗಿ ನೋಡಬೇಕಾಯಿತು.

ಫೆಬ್ರವರಿ 27, 1931, ಬೆಳಗಿನ ಜಾವ. ಅಲಹಾಬಾದ್‌ನ (ಪ್ರಯಾಗರಾಜ್) ಆಲ್‌ಫ್ರೆಡ್ ಪಾರ್ಕ್‌ನ ಮರಗಳ ನಡುವೆ ಚಂದ್ರಶೇಖರ ಆಜಾದ್ ತನ್ನ ಸಂಗಾತಿ ಸುಖದೇವ್ ರಾಜ್‌ನನ್ನು ಭೇಟಿಯಾಗಲು ಬಂದಿದ್ದ. ಇಬ್ಬರ ನಡುವಿನ ಆ ಮಾತುಕತೆ ಸಾಮಾನ್ಯ ಭೇಟಿಯಂತೆ ಕಂಡರೂ, ಅದರ ಹಿಂದೆ ಇಡೀ ಒಂದು ರಹಸ್ಯ ಸಂವಹನ ಜಾಲವಿತ್ತು. ಇದಕ್ಕೂ ಮುಂಚೆ ಹಲವಾರು ದಿನಗಳಿಂದ ಸಂಗಡಿಗರು ಸಂಕೇತ ಭಾಷೆಯಲ್ಲಿ ಸಂದೇಶ ರವಾನಿಸುತ್ತಿದ್ದರು. ಸಂಕೇತ ಪದಗಳ (Codeword) ಮೂಲಕ ಸಭೆಯ ಸ್ಥಳ, ಸಮಯ ನಿಗದಿಯಾಗುತ್ತಿತ್ತು.

ಆದರೆ ಆ ದಿನ ವಿಶ್ವಾಸಘಾತಕನೊಬ್ಬ ಪೊಲೀಸರಿಗೆ ಸುಳಿವು ನೀಡಿದ್ದ. ಉದ್ಯಾನ ಪ್ರವೇಶಿಸುತ್ತಿದ್ದಂತೆಯೇ ಆಜಾದ್ನನ್ನು ಪೊಲೀಸ್ ಪಡೆ ಸುತ್ತುವರಿಯಿತು. ಒಂಟಿಯಾಗಿ ನಿಂತ ಆಜಾದ್ ಎದೆಗುಂದದೇ ಗುಂಡು ಹಾರಿಸುತ್ತಾ ಮೂವರು ಪೊಲೀಸರನ್ನು ಗಾಯಗೊಳಿಸಿ, ಸುಖದೇವ್ ರಾಜ್‌ಗೆ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ. ಕೊನೆಗೆ ಪಿಸ್ತೂಲಿನಲ್ಲಿ ಉಳಿದದ್ದು ಒಂದೇ ಗುಂಡು. “ಜೀವಂತವಾಗಿ ಸೆರೆ ಸಿಗುವುದಿಲ್ಲ” ಎಂಬ ತನ್ನ ಪ್ರತಿಜ್ಞೆಗೆ ಬದ್ಧನಾಗಿ, ಆ ಕೊನೆಯ ಗುಂಡನ್ನು ತನ್ನ ಮೇಲೆಯೇ ಹಾರಿಸಿಕೊಂಡನು. ಆಗ ಆತನ ಪ್ರಾಯ ಕೇವಲ 24 ವರ್ಷ!

ಆಪ್ತ ಸ್ನೇಹಿತರು, ಗುರುಗಳು, ಶಿಷ್ಯರು ಒಬ್ಬೊಬ್ಬರಾಗಿ ಬಲಿಯಾಗುತ್ತಿದ್ದಾಗಲೂ ಸ್ವಂತ ಮನೆ, ಕುಟುಂಬ ಜೀವನ, ವಿವಾಹ ಎಲ್ಲವನ್ನೂ ತ್ಯಜಿಸಿ, ಅಜ್ಞಾತನಾಗಿದ್ದುಕೊಂಡೇ ನಿರಂತರ ಓಡಾಟ, ವಲಸೆ ಹೋಗುತ್ತಾ ಬದುಕಿದ ಆಜಾದ್ ಎಂದೂ ಸಂಘಟನೆಯ ಹೊಣೆಯಿಂದ ಹಿಂಜರಿಯಲಿಲ್ಲ. ಹಣಕಾಸಿನ ಕೊರತೆ, ಆಶ್ರಯ ಸಿಗದ ರಾತ್ರಿಗಳು, ಜೊತೆಗಾರರ ಸಾಲುಸಾಲು ಬಂಧನಗಳ ನಡುವೆಯೂ ಎಂದೂ ಆತ್ಮವಿಶ್ವಾಸ ಕಳೆದುಕೊಳ್ಳದ ಆ ಧೀರ ಯುವಕ ಮುಂದಿನ ಪೀಳಿಗೆಗೆ ಧೈರ್ಯದ ಮೂರ್ತರೂಪವಾಗಿ ನಿಲ್ಲುತ್ತಾನೆ. ಶಿಸ್ತು, ಸರಳತೆ ಮತ್ತು ಗುಪ್ತ ಸ್ವಾತಂತ್ರ್ಯ ಹೋರಾಟಕ್ಕೆ ಬೇಕಾದ ಜಾಣ್ಮೆಗೆ ಹೆಸರಾಗಿದ್ದ ಆಜಾದ್, ಸಂಘಟನೆಯ ಹಣವನ್ನು ಸ್ವಂತಕ್ಕೆ ಬಳಸದೇ, ಸಹ ಕ್ರಾಂತಿಕಾರಿಗಳ ಬಡ ಕುಟುಂಬಗಳ ಪೋಷಣೆಗೂ ವಿನಿಯೋಗಿಸುತ್ತಿದ್ದ.

“ದುಶ್ಮನ್ ಕೀ ಗೋಲಿಯೋಂ ಕಾ ಹಮ್ ಸಾಮ್ನಾ ಕರೇಂಗೆ, ಆಜಾದ್ ಹೀ ರಹೇ ಹೈಂ, ಆಜಾದ್ ಹೀ ರಹೇಂಗೆ” (ಶತ್ರುಗಳ ಗುಂಡುಗಳನ್ನು ನಾವು ಎದುರಿಸುತ್ತೇವೆ, ನಾವು ಸ್ವತಂತ್ರರಾಗಿದ್ದೇವೆ, ಸ್ವತಂತ್ರರಾಗಿಯೇ ಇರುತ್ತೇವೆ) ಎಂಬ ಘೋಷಣೆ ಇಂದಿಗೂ ಪ್ರತಿ ಯುವಕನನ್ನು ದೇಶಕ್ಕಾಗಿ ತುಡಿಯುವಂತೆ ಮಾಡುತ್ತದೆ. ಸ್ವಾಭಿಮಾನ ಹಾಗೂ ರಾಷ್ಟ್ರಪ್ರೇಮದ ಸಲುವಾಗಿ, ಬ್ರಿಟಿಷ್ ಪೊಲೀಸರ ಕೈಗೆ ಸಿಗದೇ ಆತ್ಮಾಹುತಿ ಕೊಟ್ಟ ಆಜಾದ್ನ ಗಂಡೆದೆ, ಸ್ವಾಭಿಮಾನ ಹಾಗೂ ಅಚಲ ದೇಶಭಕ್ತಿಗಳು ಸ್ವಾತಂತ್ರ್ಯ ಸಂಗ್ರಾಮದ ಅಚ್ಚಳಯದೇ ಉಳಿವ ಅಧ್ಯಾಯಗಳಲ್ಲಿ ಒಂದು!

#Rashtrotthana #RashtrotthanaParishat #rashtrotthanainrashtraseva #chandrashekharaazad #azad #krantikari #HSRA #Alfredpark #prayagraj #noncooperativemovement #Kakoritrainconspiracy #KakoriConspiracy

Leave a Reply

Your email address will not be published. Required fields are marked *