• June 10, 2026
  • RP
  • 0
Dr. S. R. Ramaswamy, who recently left us, remains a guiding light of inspiration for all of us through his harmonious blend of conduct and speech, expression and silence, intellect and emotion, vast reading habits, unwavering loyalty, and profound compassion for all living beings.
Forty-eight years ago, when he realized he could contribute to the service of core principles and national duty, he slung a bag over his shoulder and stood as the leading light (Adhvaryu) in the noble mission of Rashtrotthana. For a remarkably long span of 48 years (equivalent to a full Mandala), completely disregarding his age-related ailments, he continuously advanced his service to literature. Even while retiring from active service, he folded his hands in gratitude for divine grace and blessed the institution to shine as long as the moon and sun endure—a heartwarming moment that truly brought tears to everyone’s eyes.

ಇತ್ತೀಚೆಗೆ ನಮ್ಮನ್ನಗಲಿದ ಡಾ. ಎಸ್ ಆರ್ ರಾಮಸ್ವಾಮಿಗಳು ನಡೆ-ನುಡಿ, ಮಾತು-ಮೌನ, ಅಭಿರುಚಿ-ಓದು, ನಿಷ್ಠೆ-ಭಕ್ತಿ, ಬುದ್ಧಿ-ಹೃದಯ, ಜೀವಕಾರುಣ್ಯದ ಪ್ರೀತ್ಯಾದರಗಳಿಂದ ನಮಗೆಲ್ಲ ಅಭಿಮಾನದ ಮೇಲ್ಪಂಕ್ತಿಯಾಗಿದ್ದಾರೆ. ತತ್ತ್ವಸೇವೆ, ರಾಷ್ಟ್ರಕಾರ್ಯಕ್ಕೆ ತಮ್ಮಿಂದೊಂದು ಪ್ರಯೋಜನ ಇದೆ ಎಂದು ತಿಳಿದಾಗ (48 ವರ್ಷಗಳ ಹಿಂದೆ) ಹೆಗಲಿಗೊಂದು ಚೀಲವೇರಿಸಿಕೊಂಡು ರಾಷ್ಟ್ರೋತ್ಥಾನದ ಈಶ ಕಾರ್ಯದಲ್ಲಿ ಅಧ‍್ವರ್ಯುವಾಗಿ ನಿಂತರು, ಅದೂ 48 ವರ್ಷದಷ್ಟು (ಒಂದು ಮಂಡಲ) ದೀರ್ಘಕಾಲ, ವಯೋಸಹಜ ಅಸೌಖ್ಯಗಳನ್ನೆಲ್ಲ ಲೆಕ್ಕಿಸದೇ ಸಾಹಿತ್ಯಸೇವೆಯನ್ನು ನಿರಂತರ ಮುಂದುವರೆಸಿ, ಸೇವಾನಿವೃತ್ತಿ ತೆಗೆದುಕೊಳ್ಳುವಾಗ ಕೂಡ ದೈವಕಾರುಣ್ಯಕ್ಕಾಗಿ ಕೈಮುಗಿಯುತ್ತಾ, ಸಂಸ್ಥೆಯು ಆಚಂದ್ರಾರ್ಕವಾಗಿ ಬೆಳಗಲಿ ಎಂದು ಹರಸಿದ್ದು, ಹೃದ್ಯವಾಗಿ ಕಣ್ಣಾಲಿಗಳನ್ನು ಆಡಿಸಿದ್ದಂತೂ ಸತ್ಯ.

ಸೇವಾಸಂಸ್ಥೆಗಳಲ್ಲಿ ಸೇವೆಯ ಆದಿ-ಅಂತ್ಯ ಮಂಗಳಗಳು ಸರ್ಕಾರಿ ಉದ್ಯೋಗದಂತಲ್ಲ. ಸಂಸ್ಥೆಗಳಲ್ಲಿ ಒಳಪ್ರವೇಶ, ಹೊರನಡೆ ಎರಡೂ ಸಲೀಸು. ಸರಳ ಪ್ರವೇಶ ಖುಷಿ ಕೊಟ್ಟರೆ, ಕ್ಷಿಪ್ರ ವಿದಾಯ ದುಃಖ ತರುತ್ತದೆ, ‘ಅಯ್ಯೋ! ನಮಗೆ ಹೀಗೇಕಾಯಿತು’ ಎಂದು ಹಳಹಳಿಸುವಂತೆಲ್ಲ ಮಾಡುತ್ತದೆ. ಆ ಎಲ್ಲ ಸಂದರ್ಭಗಳಲ್ಲಿ ರಾಮಸ್ವಾಮಿಗಳ ರಾಷ್ಟ್ರೋತ್ಥಾನ ಸೇವಾಮಂಗಳಗಳು (ಆದಿ-ಅಂತ್ಯ) ಹಾಗೂ ಅದರ ಮಧ್ಯದಲ್ಲಿ ಹರಿದ ಸೇವಾಸರಿತೆ ನಮ್ಮಗಳ ಬುದ್ಧಿ-ಭಾವಗಳಿಗೆ ದೊಡ್ಡ ಆದರ್ಶದ ಬುತ್ತಿಯನ್ನೇ ಕಟ್ಟಿಕೊಡುತ್ತದೆ.

ಡಾ. ಎಸ್. ಆರ್. ರಾಮಸ್ವಾಮಿಗಳು ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆಯವರಿಗೆ ಬರೆದ ಭಾವ ನಿವೇದನ ಸಹಿತ ಸೇವಾ ನಿವೃತ್ತಿ ಪತ್ರ

24 ನವೆಂಬರ್ 25

ಆತ್ಮೀಯ ದಿನೇಶ್ ಹೆಗ್ಡೆ ಅವರಿಗೆ ನಮನಗಳು. ನಾನು ವೈಯಕ್ತಿಕವಾಗಿ ಬಂದು ಈ ನಿವೇದನೆ ಮಾಡಬಯಸಿದ್ದೆ. ಅದು ಸಾಧ್ಯವಾಗದುದಕ್ಕಾಗಿ ಕ್ಷಮೆ ಕೋರುವೆ. ನನ್ನ ದೇಹಸ್ಥಿತಿ ಕ್ಷೀಣಿಸುತ್ತಿದ್ದುದು ನಿಮಗೆ ತಿಳಿದಿದೆ. ಕಣ್ಣಿನ ಶಕ್ತಿಯ ಪೂರ್ಣ ನಷ್ಟ, ಕಿವಿಯ ಶಕ್ತಿಯ ಪೂರ್ಣ ಅಭಾವ, ಮಂಡಿಯ ಚಿಪ್ಪಿನ ಸೆವೆತದಿಂದಾಗಿ ನಿಲ್ಲಲೂ ನಡೆಯಲೂ ಆಗದ ಅಸಹಾಯಕತೆ, ಎಲ್ಲ ಅಂಗಗಳ ಪಾಟವದ ಕುಸಿತ, ಇತ್ಯಾದಿ. ಆದರೂ ಮೊಂಡುತನದಿಂದ ಶನಿವಾರ 22ರಂದು ಆಫೀಸಿಗೆ ಬಂದೆನಾದರೂ ಸ್ವಲ್ಪ ಸಮಯ ಕಳೆದ ಮೇಲೆ wheeled-chairನಲ್ಲಿ ಕೆಳಕ್ಕೆ ಬಂದು ಮನೆ ಸೇರಿಕೊಳ್ಳಬೇಕಾಯಿತು. ಕಳೆದ ಬುಧವಾರ 19ರಂದು ಮನೆಯಲ್ಲೇ ಬಿದ್ದು ಹೊಸ ಸಮಸ್ಯೆಗಳ ಸೇರ್ಪಡೆಯಾಗಿ ಪೂರ್ಣ ನಿತ್ರಾಣನಾಗಿದ್ದೇನೆ. ಆಸ್ಪತ್ರೆಗಳ ಸತತ ಯಾತ್ರೆ, ನ. 22 ಸಂಜೆಯಿಂದ. ತುಂಬಾ ಹೇಳಿದೆ, ಅನುದ್ದಿಷ್ಟವಾಗಿ. ಈ ಅಸಹ್ಯ ವರ್ತನೆಗಾಗಿ ಕ್ಷಮಿಸಿರಿ.

 

ಪರಿಷತ್ತಿನ ಆರಂಭದಿಂದಲೂ, ಅನಂತರ ಪೂರ್ಣಾವಧಿಯಾಗಿ ನಲವತ್ತೆಂಟು ವರ್ಷಗಳಿಂದಲೂ ನನ್ನ ಪಾಲಿಗೆ ಸ್ವರ್ಗತುಲ್ಯವನ್ನಾಗಿಸಿದಿರಿ ನೀವೆಲ್ಲ. ನನ್ನ ಮಾತು ಸೋಲುತ್ತಿದೆ. ಮೈ. ಚ. ಜಯದೇವರಾದಿಯಾಗಿ ಎಲ್ಲರೂ ನನ್ನನ್ನು ಮಗುವಿನಂತೆ ನೋಡಿಕೊಂಡಿದ್ದೀರಿ. ಮಾತಿನಲ್ಲಷ್ಟೆ ಹೇಳಬೇಕಾಗಿರುವುದರಿಂದ ‘ಕೃತಜ್ಞನಾಗಿದ್ದೇನೆ’ ಎಂದು ಹೇಳಿ ದೈವಕಾರುಣ್ಯಕ್ಕಾಗಿ ಕೈಮುಗಿಯುತ್ತಿದ್ದೇನೆ.

 

ದಾಖಲೆಗಾಗಿ: 2025 ನವೆಂಬರ್ 1 ರಿಂದ ನಾನು ನಿವೃತ್ತನಾಗಿದ್ದೇನೆಂದು ದಾಖಲಿಸಬಹುದು.

 

ಎಲ್ಲರಿಗೂ ಮತ್ತೊಮ್ಮೆ ವಿನಮ್ರ ಸಹಸ್ರ ವಂದನೆಗಳು. ಸಂಸ್ಥೆಯು ಆಚಂದ್ರಾರ್ಕವಾಗಿ ಬೆಳಗಲಿ.

 

ಇಂತಿ

ಎಸ್. ಆರ್. ರಾಮಸ್ವಾಮಿ

Learn More: https://sevavasati.rashtrotthana.org/
#Rashtrotthana #RashtrotthanaParishat #RashtrotthanaInRashtraseva #srramaswamy #srr

Leave a Reply

Your email address will not be published. Required fields are marked *