ಎಚ್ಚರ! ಎಚ್ಚರ! ಅವಘಡಗಳು ಹೇಳಿ-ಕೇಳಿ ಬರುವುದಿಲ್ಲ; ನಿರ್ವಹಣೆಗೆ ನಿವೃತ್ತಿ ಇಲ್ಲ!

ಅವಘಡಗಳು ಹೇಳಿ-ಕೇಳಿ ಘಟಿಸುವುದಿಲ್ಲ. ಟೈಂ ಸರಿಯಿದ್ದರೆ ಏನೂ ಆಗುವುದಿಲ್ಲ. ಅದೇ ಅದು ಖೊಟ್ಟಿಯಾಗಿದ್ದರೆ ಇಷ್ಟೇ ಇಷ್ಟರಲ್ಲಿ ಭಾರೀ ಅನಾಹುತವೇ ಸಂಭವಿಸಿಹೋಗುತ್ತದೆ ಎಂಬ ಕುಂಟು ನೆಪಗಳನ್ನು ಹೇಳಿಕೊಂಡು ನಿರ್ವಹಿಸಬೇಕಾದ ಅಗತ್ಯ ಕರ್ತವ್ಯ, ಕಾಲಕಾಲಕ್ಕೆ ಮಾಡಿಕೊಳ್ಳಬೇಕಿರುವ ಪೂರ್ವಸಿದ್ಧತೆಗಳನ್ನು ಅಲಕ್ಷಿಸುವಂತೆಯೇ ಇಲ್ಲ, ಮತ್ತದು ಕೆಟ್ಟುಕೂತಾಗ ಸರಿಮಾಡಿಸಿದರಾಯಿತು ಎನ್ನುತ್ತಾ ನಿರಂತರ ನಿರ್ವಹಣೆಯ ಬಗೆಗೆ ಅಸಡ್ಡೆ ತೋರಿಸುವಂತೆಯೂ ಇಲ್ಲ. ಒಂದರೆಕ್ಷಣದ ಎಚ್ಚರ ರಾಹಿತ್ಯ ಭವಿಷ್ಯದ ಪ್ರತಿಕ್ಷಣದ ನೆಮ್ಮದಿಯನ್ನೂ ಕಿತ್ತುಕೊಳ್ಳಬಹುದು.
ಈ ಬೆಳಗ್ಗೆ ಹಾಗೇ ಆಯಿತು. ಶಾಲಾ ಪ್ರಾರಂಭದ ಮೊದಲ ವಾರದಲ್ಲೇ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಕಲಬುರಗಿಯವರು ಅಗ್ನಿ ಅವಘಡ ಸುರಕ್ಷತಾ ಮಾರ್ಗೋಪಾಯಗಳ ಅಣಕು ಕಾರ್ಯಾಚಾರಣೆ ಮಾಡಿದರು. ಅದರಲ್ಲಿ ಶಿಕ್ಷಕರು, ಮಕ್ಕಳಾದಿಯಾಗಿ ಎಲ್ಲರೂ ಭಾಗವಹಿಸಿದ್ದರು. ಸುರಕ್ಷಿತವಾಗಿದ್ದರಷ್ಟೇ ಸುಶಿಕ್ಷಣ ಸಾಧ್ಯ ಅಲ್ಲವೇ! ಎಂದು ಹೆಮ್ಮೆಪಡುತ್ತಾ ಆನಂದವಾಗಿದ್ದಾಗ ಬೆಂಗಳೂರಿನ ಕೆಂಗೇರಿಯ ಚಿತ್ರಕೂಟ ಕೌಶಲ್ಯ ಶಾಲೆಯೊಳಗಿನ ಬೆಂಕಿ ಅವಘಡದ ಸುದ್ದಿ ಬಂತು.
ಬೆಳಗ್ಗೆ 10ರ ಸುಮಾರಿಗೆ ತರಗತಿಗಳು ನಡೆಯುತ್ತಿದ್ದಾಗಲೇ ಮೇಲಂತಸ್ತಿನಲ್ಲಿ ಹೊಗೆ ಕಾಣಿಸಿಕೊಂಡು ಮುಂದೆ 3ನೇ ಮಹಡಿಗೆ ಬೆಂಕಿಯ ಕೆನ್ನಾಲಗೆಗಳು ವ್ಯಾಪಿಸಿದವು. ಆಗ ಶಾಲಾ ಆವರಣದಲ್ಲಿ ಸರಿಸುಮಾರು 2,000 ಮಕ್ಕಳಿದ್ದು, ಶಿಕ್ಷಕರ ಸಮಯಪ್ರಜ್ಞೆಯಿಂದ ಯಾರಿಗೂ ಏನೂ ಆಗಲಿಲ್ಲ ಎಂಬ ವಿಚಾರ ಒಂದಷ್ಟು ಸಮಾಧಾನ ತಂದಿತಾದರೂ ವಿದ್ಯುತ್ ದೋಷದಿಂದ ಹೀಗಾಗಿರಬಹುದು, ಫೈರ್ ಅಲಾರ್ಮ್ ಇರಲಿಲ್ಲವಂತೆ ಎಂಬೆಲ್ಲ ಸಂಗತಿಗಳು ಆತಂಕಕ್ಕೆ ದೂಡಿದ್ದಂತೂ ಸುಳ್ಳಲ್ಲ.
ಶ್ರದ್ಧೆ-ಕಾಳಜಿಗಳೊಂದಿಗೆ ಹೊಸ ವ್ಯವಸ್ಥೆ ಕಟ್ಟುತ್ತೇವೆ. ಕಾಲಕ್ರಮೇಣ ಕಾಲಕಾಲದ ಶಿಸ್ತಿನ ನಿರ್ವಹಣಾ ಪ್ರಕ್ರಿಯೆಯ ಬಗೆಗೆ ಸದರವೊಂದು ಬಂದುಬಿಡುತ್ತದೆ. ಕಳೆದ ಕೆಲವಾರು ವರ್ಷಗಳಲ್ಲಿ ಏನೂ ಸಮಸ್ಯೆ ಆಗಲಿಲ್ಲ. ಸುಮ್ಮನೆ ನಿರ್ವಹಣೆಗೆ ಅಂತ ದುಡ್ಡು ಸುರಿದೆವು. ಅದು ದಂಡವಾಯಿತೇನೋ? ಮುಂದೆ ಹಾಳಾದಾಗ ರಿಪೇರಿಗೆ ಕೈ ಹಚ್ಚಿದರೆ ಸಾಕಲ್ಲವೇ ಎಂದು ನಮಗೆ ನಾವೇ ಸಮಾಧಾನ ತಂದುಕೊಳ್ಳುತ್ತೇವೆ (ವಾಹನಗಳು ಹಳತಾದಂತೆ ಸರ್ವೀಸ್ ಪದ್ಧತಿಯಿಂದ ರಿಪೇರಿಯ ಕೂಪಕ್ಕೆ ಧುಮುಕಿದ ಹಾಗೆ).
ಎಷ್ಟೆಂದರೂ ಅಪಘಾತ, ಅವಘಡಗಳು ಆಕಸ್ಮಿಕಗಳು, ಅವು ಹೇಳಿ-ಕೇಳಿ ಬರುವುದಿಲ್ಲ. ಮತ್ತೆ ವ್ಯವಸ್ಥೆಗಳು ಒಳಗೇ ಗೆದ್ದಲು ತಿಂದದ್ದೂ ಮೇಲ್ನೋಟಕ್ಕೆ ಕಾಣುವುದೂ ಇಲ್ಲ. ಒಳಗಿನ ಶೈಥಿಲ್ಯ ತೀವ್ರಗೊಂಡರೆ ಹೊರಗಿನ ಇಷ್ಟೇ ಇಷ್ಟು ಮಳೆಗಾಳಿಯೂ ನೆಪವಾಗಿ ಅಪ್ಪಳಿಸಲು ಸಾಕಾಗುತ್ತದೆ.
ಹಾಗಾಗಿ ವ್ಯವಸ್ಥಾ ಸೌಧಗಳನ್ನು ಕಟ್ಟಿ ಎಷ್ಟೇ ವರ್ಷ ಆಗಿರಲಿ ನಿರಂತರ ಕಾಳಜಿಪೂರ್ಣ ನಿರ್ವಹಣತೆಯ ಅಗತ್ಯ ಇದ್ದೇಇದೆ. ಅದಕ್ಕೆ ನಿವೃತ್ತಿ, ರಿಟೈರ್ಮೆಂಟ್ ಯಾವುದೂ ಇಲ್ಲ.
ಮೇಲ್ಛಾವಣಿಯು ನೀರು ಕುಡಿಯುವುದು, ಗೋಡೆಯು ಬಿರುಕು ಬಿಡುವುದು, ಸ್ವಿಚ್-ಪ್ಲಗ್ ಪಾಯಿಂಟ್ಗಳಲ್ಲಿ ಸ್ಪಾರ್ಕಿಂಗ್, ಟ್ರಿಪ್ಪರ್ಗಳ ಅದಕ್ಷತೆ, ಚಿಂತಾಕ್ರಾಂತ ಅರ್ತಿಂಗ್, ಸೋರುವ ನಲ್ಲಿ, ಉಕ್ಕುವ ಮೋರಿ, ಜಂಗು ತಿಂದ ಗೇಟು, ಮಣ್ಣಿನ ಭಾರದಲ್ಲಿ ಒದ್ದಾಡುವ ತಡೆಗೋಡೆ, ಫೈರ್ ಅಲಾರ್ಮ್ ನಿಷ್ಕ್ರಿಯತೆ, ಅಗ್ನಿಶಾಮಕ ವ್ಯವಸ್ಥೆಯ ವೈಫಲ್ಯ, ಗಾಳಿ-ಬೆಳಕು ಆಡದ ಜಾಗದಲ್ಲಿ ಸ್ಥಾಪಿತ ಗ್ಯಾಸ್ ಸಿಲಿಂಡರ್ಗಳು, ಸುರಕ್ಷತಾ ಮಾರ್ಗೋಪಾಯ ತರಬೇತಿ-ಪರಿಚಯಗಳೇ ಇಲ್ಲದಿರುವ ಪರಿಸ್ಥಿತಿ, ರೆಂಬೆ-ಕೊಂಬೆ ಮುರಿದು ಬೀಳುವ ಅಂದಾಜು ಮಾಡಲಾಗದ ಅಸಹಾಯಕತೆ, ವಾತಾವರಣದ ವ್ಯಾಪಕ ಏರುಪೇರಿನ ಬಗೆಗಿಲ್ಲದ ಸಾಮಾನ್ಯ ಜ್ಞಾನ, ಹೀಗೆ ಪಟ್ಟಿ ಮಾಡುತ್ತಾ ಹೋದರೆ ಬೆಳಗೆದ್ದು, ಹಗಲೆಲ್ಲ ಒಂದಿಲ್ಲೊಂದು ಚಟುವಟಿಕೆಯಲ್ಲಿ ತೊಡಗಿಸಿಕೊಂಡು, ರಾತ್ರಿ ಮಲಗಿದ ಮೇಲೂ ಕಾಳಜಿ ಮಾಡಬೇಕಾದ ಸಾಕಷ್ಟು ಅಂಶಗಳು ಹಾಗೇ ಉಳಿದೇಬಿಡುತ್ತವೆ.
ಹಾಗಾಗಿ ಕಟ್ಟಿಬೆಳೆಸಿದ ವ್ಯವಸ್ಥೆಯನ್ನು ಕುಟ್ಟಿಪುಡಿಯಾಗದಂತೆ ಉಳಿಸಿಕೊಳ್ಳಲು ನಿರಂತರ ಎಚ್ಚರ ಹಾಗೂ ಪುಟ್ಟಮಗುವನ್ನು ಬೆಳೆಸುವಾಗಿನ ಕಾಳಜಿ-ಕಕ್ಕುಲಾತಿಗಳು ಅನಿವಾರ್ಯವೇ ಅನಿವಾರ್ಯ. ಇದಕ್ಕೆ ವಿನಾಯಿತಿ, ರಿಯಾಯಿತಿ, ಯಾವುದೂ ಇಲ್ಲವೂ ಇಲ್ಲ ಮತ್ತು ಅಪೇಕ್ಷಿಸಲೂಬಾರದು.
ಶ್ರೀ ಭಾರತೀಶ ಪಿ, ಸಂಚಾಲಕರು, ರಾಷ್ಟ್ರೋತ್ಥಾನ ಮಾಧ್ಯಮ ಕೇಂದ್ರ
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #maintenance #buildingmaintenance #firesafety #firealarm #maintenancenegligence #fireextinguisher







