An Atmosphere of Commitment in the Bond of Brothers and Sisters: Raksha Bandhan
Raksha Bandhan, celebrated on the full-moon day (Purnima) of the month of Shravana, is one of the many sacred and emotionally rich festivals of Indian culture. A symbol of selfless love, protection, and trust between brothers and sisters, this observance has both mythological and historical roots. It is doubtful that a festival of this stature, devoted so wholly to the spirit of siblinghood, exists anywhere else in the world!
The true meaning of Raksha Bandhan lies in the unwavering love and assurance between brothers and sisters. The thread of that sacred wellspring of love is woven into the very act of tying the rakhi. This bond nurtures a sense of security, cooperation, and mutual respect within families. It teaches us to be each other’s support through life’s joys and hardships. In this fast-paced modern age, the need to express such sacred sentiments, to breathe life into human relationships and hold family and society together, is greater now than ever before.
ಭ್ರಾತೃ–ಭಗಿನಿಯರ ಬಾಂಧವ್ಯಕ್ಕೆ ಬದ್ಧತೆಯ ಭಾವಾವರಣ: ರಕ್ಷಾಬಂಧನ

ಶ್ರಾವಣ ಮಾಸದ ಪೂರ್ಣಿಮೆಯಂದು ಆಚರಿಸಲಾಗುವ ರಕ್ಷಾಬಂಧನ ಭಾರತೀಯ ಸಂಸ್ಕೃತಿಯ ಅನೇಕ ಪವಿತ್ರ ಹಾಗೂ ಭಾವನಾತ್ಮಕ ಹಬ್ಬಗಳಲ್ಲಿ ಒಂದಾಗಿದೆ. ಸಹೋದರ-ಸಹೋದರಿಯರ ನಡುವಿನ ನಿಸ್ವಾರ್ಥ ಪ್ರೀತಿ, ರಕ್ಷಣೆ ಮತ್ತು ನಂಬಿಕೆಯ ಸಂಕೇತವಾಗಿರುವ ಈ ಆಚರಣೆಯು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ. ವಿಶ್ವದ ಬೇರೆಲ್ಲೂ ಭ್ರಾತೃತ್ವಕ್ಕಾಗಿ ಮುಡಿಪಾಗಿರುವ ಈ ಮಟ್ಟದ ಪರ್ವ ಅಥವಾ ಉತ್ಸವದ ಆಚರಣೆಯು ಅಸ್ತಿತ್ವದಲ್ಲಿರುವುದು ಅನುಮಾನವೇ ಸರಿ!
‘ರಕ್ಷಾಬಂಧನ’ ಎಂಬ ಪದವು ಸಂಸ್ಕೃತದ ‘ರಕ್ಷಾ’ (ರಕ್ಷಣೆ) ಮತ್ತು ‘ಬಂಧನ’ (ಕಟ್ಟುವುದು) ಎಂಬ ಪದಗಳಿಂದ ಬಂದಿದ್ದು, ಮಣಿಕಟ್ಟಿಗೆ ಕಟ್ಟುವ ‘ರಾಖಿ’ ಅಥವಾ ‘ರಕ್ಷೆ’ಯು ಪ್ರೀತಿ, ಭರವಸೆ ಹಾಗೂ ಕರ್ತವ್ಯಪ್ರಜ್ಞೆಯನ್ನು ಬೆಸೆಯುವ ಪವಿತ್ರ ಸಂಕೇತವಾಗಿದೆ. ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯ, ಶ್ರೇಯಸ್ಸು ಹಾಗೂ ಯಶಸ್ಸಿಗಾಗಿ ಪ್ರಾರ್ಥಿಸಿ ರಾಖಿ ಕಟ್ಟಿದರೆ, ಪ್ರತಿಯಾಗಿ ಸಹೋದರನು ಆಕೆಗೆ ಜೀವನದ ಪ್ರತಿಯೊಂದು ಹಂತದಲ್ಲೂ ಬೆನ್ನೆಲುಬಾಗಿ ನಿಂತು ರಕ್ಷಣೆ ನೀಡುವ ಅಭಯವನ್ನು ನೀಡುತ್ತಾನೆ.
ಹಳೆಯ ಕಾಲದಲ್ಲಿ, ರಾಖಿಗಳನ್ನು ತಯಾರಿಸಲು ಸಂಪ್ರದಾಯದಂತೆ ರೇಷ್ಮೆ ದಾರ, ಹತ್ತಿಯ ದಾರದ ಕೆಂಪು-ಹಳದಿ ಬಣ್ಣದ ಮೌಲಿ/ ಕಲಾವಾ (ರಕ್ಷಾಸೂತ್ರ), ಅಕ್ಷತೆ (ಅಕ್ಕಿ ಕಾಳುಗಳು), ಅರಶಿನ, ಕುಂಕುಮ, ಚಂದನ ಮತ್ತು ತುಳಸಿಯ ಮಣಿಗಳು, ರುದ್ರಾಕ್ಷಿ ಮತ್ತು ಮುತ್ತುಗಳಂತಹ ನೈಸರ್ಗಿಕ ಹಾಗೂ ಪರಂಪರಾಗತ ವಸ್ತುಗಳನ್ನು ಬಳಸುವ ಪದ್ಧತಿ ಇತ್ತು. ಇಂದಿನ ರಾಖಿಗಳಲ್ಲಿ ಕೃತಕ ಮಣಿಗಳು, ಬೊಟ್ಟುಗಳು, ಜರತಾರೀ, ಕೃತಕ ಮುತ್ತು, ಹರಳು, ಲೋಹ, ಬೆಳ್ಳಿ ಮುಂತಾದವುಗಳ ಬಳಕೆ ಹೆಚ್ಚಾಗಿದೆ.
ಈ ಹಬ್ಬದ ಹಿನ್ನೆಲೆಯನ್ನು ಹುಡುಕುತ್ತಾ ಹೋದಾಗ ಸ್ವಾರಸ್ಯಕರ ವಿಷಯಗಳು ತಿಳಿಯುತ್ತವೆ! ಪುರಾಣಗಳ ಆಧಾರದ ಪ್ರಕಾರ, ಒಮ್ಮೆ ಶ್ರೀಕೃಷ್ಣನ ಬೆರಳಿಗೆ ಗಾಯವಾದಾಗ ದ್ರೌಪದಿ ತನ್ನ ಸೀರೆಯ ಅಂಚನ್ನು ಹರಿದು ಕಟ್ಟುತ್ತಾಳೆ. ಮುಂದೆ, ಅವಳಿಗೆ ವಿಪತ್ತು ಬಂದಾಗ ರಕ್ಷಿಸುವ ಅಭಯ ನೀಡಿದ ಕೃಷ್ಣನ ಪ್ರಸಂಗವು ರಕ್ಷಾಬಂಧನದ ಮೂಲ ಪ್ರೇರಣೆಯಾಗಿದೆ. ದೇವ-ಅಸುರ ಸಂಗ್ರಾಮದಲ್ಲಿ ಇಂದ್ರಾಣಿಯು (ಶಚಿ), ಇಂದ್ರನಿಗೆ ರಕ್ಷಾಸೂತ್ರ ಕಟ್ಟಿದ ಕಥೆಯೂ ಉಲ್ಲೇಖದಲ್ಲಿದೆ. ಯಮ-ಯಮುನೆಯರ ಬಾಂಧವ್ಯದ ಕಥೆ ಹಾಗೂ ಬಲಿ ಚಕ್ರವರ್ತಿಗೆ ಲಕ್ಷ್ಮೀದೇವಿಯು ರಕ್ಷಾಬಂಧನ ಮಾಡಿ, ವಿಷ್ಣುವನ್ನು ಮರಳಿ ಪಡೆದ ಕಥೆಯೂ ಪ್ರಖ್ಯಾತವಾಗಿದೆ.
ಐತಿಹಾಸಿಕವಾಗಿ, 1905ರ ಬಂಗಾಳ ವಿಭಜನೆಯ ಸಂದರ್ಭದಲ್ಲಿ ರವೀಂದ್ರನಾಥ ಠಾಕೂರರು ಹಿಂದೂ-ಮುಸ್ಲಿಂ ಐಕ್ಯತೆಗಾಗಿ ಪ್ರತಿಯೊಬ್ಬರಿಗೂ ರಕ್ಷಾಸೂತ್ರ ಕಟ್ಟಲು ಕರೆ ನೀಡಿದ್ದು, ಈ ಹಬ್ಬದ ಸಾಮಾಜಿಕ ವ್ಯಾಪ್ತಿ ಹಾಗೂ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
ಉತ್ತರ ಭಾರತವು ಇತಿಹಾಸದುದ್ದಕ್ಕೂ ನಿರಂತರ ವಿದೇಶೀಯರ ಆಕ್ರಮಣಗಳಿಗೆ ತುತ್ತಾಗಿದ್ದರಿಂದ, ಮಹಿಳೆಯರ ಸುರಕ್ಷತೆ ಮತ್ತು ಸಾಮಾಜಿಕ ರಕ್ಷಣೆಗಾಗಿ ಬದ್ಧರಾಗಿ ನಿಲ್ಲುವ ಅಣ್ಣ-ತಮ್ಮಂದಿರಿಗೆ, ರಕ್ಷಾಸೂತ್ರ ಕಟ್ಟುವ ಸಂಪ್ರದಾಯವು ಬೆಳೆದುಬಂದಿರಬಹುದು. ರಜಪೂತ್ ಹಾಗೂ ಮರಾಠಾ ಸಂಸ್ಥಾನಗಳಲ್ಲಿ ಈ ಹಬ್ಬಕ್ಕೆ ರಾಜಕೀಯ-ಸಾಮಾಜಿಕ ಮಹತ್ವವಿತ್ತು.
ದಕ್ಷಿಣ ಭಾರತದಲ್ಲಿ ನಾಗರಚೌತಿ-ಪಂಚಮಿಯ ಸಮಯದಲ್ಲಿ “ಅಕ್ಕನ-ತದಿಗೆ”ಯಂದು, ಸೋದರನು ಸೋದರಿಯ ಮನೆಗೆ ಹೋಗಿ ಔತಣ ಮಾಡುವ ಪದ್ಧತಿಯಿದೆ. ಕಾರ್ತೀಕ ಮಾಸದ ದೀಪಾವಳಿ ಸಮಯದಲ್ಲಿ, ಬಲಿಪಾಡ್ಯದ ಮಾರನೇ ದಿನವನ್ನು “ಭಾವನ ಬಿದಿಗೆ” ಎಂಬುದಾಗಿ ಆಚರಿಸುವ ಇನ್ನೊಂದು ಆಚರಣೆಯೂ ಸಹ ಆಚರಿಸುವ ಪರಿಪಾಠವಿದೆ. ಇವೆಲ್ಲ ಹಬ್ಬಗಳು ಇದ್ದುದರಿಂದಲೋ ಏನೋ, ರಕ್ಷಾಬಂಧನ ಹಬ್ಬದ ಆಚರಣೆ ದಕ್ಷಿಣದಲ್ಲಿ ತುಸು ಕಡಿಮೆ. ಶ್ರಾವಣ ಪೂರ್ಣಿಮೆಯಂದು ‘ಉಪಾಕರ್ಮ’ಕ್ಕೂ (ನೂಲಹುಣ್ಣಿಮೆ) ಇಲ್ಲಿ ಹೆಚ್ಚಿನ ಆದ್ಯತೆ ಸಿಕ್ಕಿದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು (RSS) ತನ್ನ ಸ್ಥಾಪನೆಯ ಆರಂಭಿಕ ದಿನಗಳಿಂದಲೇ (ಇಸವಿ 1925) ರಕ್ಷಾಬಂಧನವನ್ನು ತನ್ನ ಆರು ಪ್ರಮುಖ ಅಧಿಕೃತ ಉತ್ಸವಗಳಲ್ಲಿ ಒಂದಾಗಿ ಆಚರಿಸಿಕೊಂಡು ಬಂದಿದೆ. ಸ್ವಯಂಸೇವಕರು ರಾಷ್ಟ್ರರಕ್ಷಣೆಯ ಪ್ರತಿಜ್ಞೆಯಾಗಿ ‘ಭಗವಾಧ್ವಜ’ಕ್ಕೆ (ಕೇಸರಿ ಧ್ವಜ) ರಕ್ಷಾಸೂತ್ರ ಕಟ್ಟಿ, ನಂತರ ಪರಸ್ಪರ ಕಟ್ಟಿಕೊಳ್ಳುವ ಮೂಲಕ ಸಾಮಾಜಿಕ ಸಾಮರಸ್ಯ ಹಾಗೂ ಭ್ರಾತೃತ್ವದ ಸಂಕಲ್ಪ ಮಾಡುತ್ತಾರೆ. “ಹಿಂದೂ ಸಮಾಜ ಒಂದೇ ಕುಟುಂಬ” ಎಂಬ ಭಾವನೆ ಮೊಳೆಸುವ ಉದ್ದೇಶಕ್ಕಾಗಿ ಇದನ್ನು ಆಚರಿಸಲಾಗುತ್ತದೆ.
ಹಿಂದೂ ಜಾಗರಣ ವೇದಿಕೆ, ಭಜರಂಗದಳ, ಸನಾತನ ಸಂಸ್ಥೆ, ಬ್ರಹ್ಮಕುಮಾರೀ ಈಶ್ವರೀಯ ಮುಂತಾದ ಸಂಘಟನೆಗಳೂ ಈ ಹಬ್ಬವನ್ನು ಸಾಮಾಜಿಕ ಹಾಗೂ ಆಧ್ಯಾತ್ಮಿಕ ದೃಷ್ಟಿಕೋನದಿಂದ ಆಚರಿಸುತ್ತವೆ. ರಕ್ಷೆಯ (ರಾಖೀ) ದಾರಕ್ಕಿರುವ ಧಾರ್ಮಿಕ ಶಕ್ತಿಯನ್ನು ತಿಳಿಸುವುದು ಮತ್ತು ಈ ಆಚರಣೆಯ ಮೂಲಕ ಈಶ್ವರೀಯ ರಕ್ಷಣೆಯ ಭಾವನೆಯನ್ನು ಜಾಗೃತಗೊಳಿಸುವುದಕ್ಕೆ ಒತ್ತು ನೀಡುವುದು, ಹಬ್ಬದ ಸಾತ್ವಿಕ ಮತ್ತು ಉದಾತ್ತವಾದ ಸಂಪ್ರದಾಯಗಳನ್ನು ಕಾಯ್ದುಕೊಳ್ಳುವುದೂ ಇದರ ಮೂಲ ಉದ್ದೇಶವಾಗಿದೆ.
ಭಾರತದಲ್ಲಿ ರಕ್ಷಾಬಂಧನ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ಮಾರುಕಟ್ಟೆಗಳಲ್ಲಿ ಅತ್ಯಂತ ಬೃಹತ್ ಪ್ರಮಾಣದ ವ್ಯಾಪಾರ-ವಹಿವಾಟು ನಡೆಯುತ್ತಲಿದ್ದು, ಭಾರತೀಯ ವರ್ತಕರ ಮಹಾಮಂಡಳದ (CAIT) ಅಂದಾಜಿನ ಪ್ರಕಾರ ಈ ಅವಧಿಯಲ್ಲಿ ರಾಖಿ, ಸಿಹಿತಿಂಡಿ, ಉಡುಗೊರೆ ಹಾಗೂ ಉಡುಪುಗಳ ಮಾರಾಟವೂ ಸೇರಿ ಒಟ್ಟು ವಹಿವಾಟು ಸುಮಾರು ₹30,000 ಕೋಟಿ ರೂಪಾಯಿಗಳನ್ನು ಮೀರುತ್ತದೆ. ರಾಖಿ ಉತ್ಪಾದನೆಯಲ್ಲಿ ರಾಜಸ್ಥಾನ (ಜೈಪುರದ ಸಾಂಗನೇರಿ ಕಲೆ), ಗುಜರಾತ್ (ಅಹಮದಾಬಾದ್, ಸೂರತ್) ಮತ್ತು ಮಹಾರಾಷ್ಟ್ರ (ಮುಂಬೈ, ಪುಣೆ) ಪ್ರಮುಖ ಉತ್ಪಾದನಾ ಕೇಂದ್ರಗಳಾಗಿದ್ದು, ಇಲ್ಲಿನ ಗೃಹ ಕೈಗಾರಿಕೆಗಳು, ಮಹಿಳಾ ಸ್ವಸಹಾಯ ಸಂಘಗಳು ಹಾಗೂ ಸ್ಥಳೀಯ ಕುಶಲಕರ್ಮಿಗಳು ಪ್ರತಿವರ್ಷ ಕೋಟ್ಯಂತರ ರಾಖಿಗಳನ್ನು ಸಿದ್ಧಪಡಿಸಿ ದೇಶದೆಲ್ಲೆಡೆ ಪೂರೈಸುವ ಮೂಲಕ ಬಹುದೊಡ್ಡ ಮಟ್ಟದ ಕಿರುಚ-ಆರ್ಥಿಕ ಟುವಟಿಕೆಗೆ ಕಾರಣರಾಗಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಕ್ಯಾಡ್ಬರೀಸ್ ಚಾಕೊಲೇಟ್, ದುಬಾರಿ ಜ್ಯುವೆಲ್ಲರಿ ಬ್ರ್ಯಾಂಡ್ಗಳು ಹಾಗೂ ಇ-ಕಾಮರ್ಸ್ ಸಂಸ್ಥೆಗಳ ಜಾಹೀರಾತುಗಳು ಈ ಹಬ್ಬವನ್ನು ವಿಪರೀತ ವಾಣಿಜ್ಯೀಕರಣಗೊಳಿಸಿವೆ. ಪವಿತ್ರವಾದ ದಾರ (ರಕ್ಷಾಸೂತ್ರ), ಆರತಿ ಬೆಳಗುವಿಕೆ, ಕುಂಕುಮ-ತಿಲಕಗಳು ಹಾಗೂ ಸಿಹಿಮಿಠಾಯಿಗಳ ಸ್ಥಾನವನ್ನು ದುಬಾರಿ ಆಭರಣಗಳು ಹಾಗೂ ಚಾಕೊಲೇಟ್ ಗಿಫ್ಟ್-ಗಳು ಆಕ್ರಮಿಸಿಕೊಂಡಿವೆ. ಕೆಲವು ಜಾಹೀರಾತುಗಳಲ್ಲಂತೂ ಈ ಹಬ್ಬವನ್ನು ಗೊಡ್ಡು ಆಚಾರವೆಂದು ಅಪಹಾಸ್ಯ ಮಾಡುವುದು ಅಥವಾ ಅದನ್ನು ಸನಾತನ ಹಿಂದೂ ಸಂಪ್ರದಾಯದ ಹಬ್ಬವೇ ಅಲ್ಲವೇನೋ ಎಂಬಂತೆ ಹಗುರವಾಗಿ, ನೀರಸವಾಗಿ, ಅಸಂಬದ್ಧವಾಗಿ ತೋರುವ ಚಾಳಿ ಶುರುವಾಗಿದೆ! ಹಬ್ಬದ ಮೂಲ ಉದ್ದೇಶ, ಸರಳತೆ ಹಾಗೂ ಸಹಜತೆಯನ್ನು ಕಡೆಗಣಿಸಿ, ಕೇವಲ ವಸ್ತುವಿಷಯ, ಉಡುಗೊರೆಗಳ ವಿನಿಮಯದ ಶುಷ್ಕ ಆಚರಣೆಯನ್ನಾಗಿ ಬಿಂಬಿಸಿ, ಸಾಂಪ್ರದಾಯಿಕ ಭಾವನೆಗಳನ್ನು ಮತ್ತು ಧಾರ್ಮಿಕ ಪಾವಿತ್ರ್ಯವನ್ನು ವ್ಯಾಪಾರೀಕರಣಗೊಳಿಸಲು ಬಳಸುತ್ತಿರುವುದು ಅತ್ಯಂತ ಖೇದಕರ! ಇದರಿಂದಾಗಿ, ಸಂಸ್ಕೃತಿಯನ್ನು ಗೌರವಿಸುವ ಸಮಾಜದ ವಲಯದಲ್ಲಿ ತೀವ್ರ ಆಕ್ರೋಶ ಮತ್ತು ವಿವಾದಗಳು ಎದ್ದಿವೆ.
ರಕ್ಷಾಬಂಧನದ ನಿಜವಾದ ಅರ್ಥ, ಸಹೋದರ-ಸಹೋದರಿಯರ ನಡುವಿನ ಅಚಲ ಪ್ರೀತಿ ಮತ್ತು ಭರವಸೆಯಲ್ಲಿದೆ. ಪ್ರೀತಿಯ ಆ ಪವಿತ್ರ ಸೆಲೆಯ ಎಳೆಯೇ ರಕ್ಷಾಬಂಧನ ಕಟ್ಟುವಿಕೆಯ ಕ್ರಿಯೆಯಲ್ಲಿ ಅಡಕವಾಗಿದೆ. ಈ ಬಾಂಧವ್ಯ ಕುಟುಂಬಗಳಲ್ಲಿ ಭದ್ರತೆ, ಸಹಕಾರ ಮತ್ತು ಪರಸ್ಪರ ಗೌರವದ ಭಾವನೆಯನ್ನು ಬೆಳೆಸುತ್ತದೆ. ಜೀವನದ ಕಷ್ಟ-ಸುಖಗಳಲ್ಲಿ ಒಬ್ಬರಿಗೊಬ್ಬರು ಆಸರೆಯಾಗುವ ಪಾಠ ಕಲಿಸುತ್ತದೆ. ಈ ಆಧುನಿಕ ವೇಗದ ಯುಗದಲ್ಲಿ, ಮಾನವೀಯ ಸಂಬಂಧಗಳಿಗೆ ಜೀವತುಂಬಲು ಮತ್ತು ಕುಟುಂಬ ಹಾಗೂ ಸಮಾಜವನ್ನು ಒಂದಾಗಿ ಹಿಡಿದಿಡಲು ಇಂತಹ ಪವಿತ್ರ ಭಾವನೆಗಳ ಅಭಿವ್ಯಕ್ತಿಯ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.
#Rashtrotthana #RashtrotthanaParishat #rashtrotthanainrashtraseva #rakshabandhan #rakhi







