“ಗಣರಾಜ್ಯವೇ ಕಲ್ಪತರು, ಸ್ವಾತಂತ್ರ್ಯವೇ ತಾಯಿಬೇರು”
0
“ಗಣತಂತ್ರ ದಿನವೆನ್ನಿ, ಸಂವಿಧಾನ ದಿನವೆನ್ನಿ, ಕಾನೂನು ದಿನವೆನ್ನಿ, ಹೆಸರಾಗುವುದು ಗೌಣ, ಪ್ರಜಾಪ್ರಭುತ್ವವೇ ಸತ್ಪ್ರಜೆಗಳ ಮೂಲಗುಣ”.
ಭಾರತ ಪುಣ್ಯಭೂಮಿಯಲ್ಲಿ ಅಗಣಿತ ರಾಷ್ಟ್ರಭಕ್ತರು ಸ್ವತಂತ್ರ ಗಣರಾಜ್ಯಕ್ಕಾಗಿ ಹುತಾತ್ಮರಾದರು. ಸಂವಿಧಾನವಿಲ್ಲದ ದೇಶ ಅತಂತ್ರ, ಪ್ರಜಾಪ್ರಭುತ್ವವೇ ಏಳಿಗೆಯ ಮೂಲ ಮಂತ್ರ ಎಂಬುದು ಈ ನೆಲದ ಸತ್ಪ್ರಜೆಗಳ ಪ್ರಾಚೀನ ಸಿದ್ಧಾಂತ. ವಿಶ್ವದ ಅತಿ ಹೆಚ್ಚು ಜನರು ನೆಲೆಸಿರುವ ದೇಶವಾಗಿರುವ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಆರಂಭವಾಗಿ 76 ವರ್ಷಗಳೇ ಸಂದಿವೆ. ಭಾರತವಿಂದು ದಕ್ಷ, ದೃಢ ನಾಯಕತ್ವದಿಂದಾಗಿ ಭೂಗೋಳದ ಗಣ್ಯ ದೇಶವಾಗಿ ಹೊರಹೊಮ್ಮಿದೆ.
ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ನಮ್ಮ ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳೆಂಬ ಮೂರು ಮುಖ್ಯ ಅಂಗಗಳಾಗಿ ವಿಂಗಡಿಸಲ್ಪಟ್ಟಿದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೇ, ಅವುಗಳ ಜವಾಬ್ದಾರಿಯನ್ನೂ, ವ್ಯಾಪ್ತಿಯನ್ನೂ ಖಚಿತಗೊಳಿಸುತ್ತದೆ.
ಸಂವಿಧಾನದ ಹಿನ್ನೆಲೆ:
ಸ್ವಾತಂತ್ರ್ಯ ಸಿಕ್ಕ ನಂತರ, 1947ರಲ್ಲಿ ಸಂವಿಧಾನ ರಚನೆಗಾಗಿ ಸಿದ್ಧತೆ ಪ್ರಾರಂಭವಾಗಿತ್ತು ಹಾಗೂ ಅದಕ್ಕಾಗಿ ಭಾರತದ ಸಂವಿಧಾನ ರಚನಾ ಸಭೆಯನ್ನು (ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿ) ರೂಪಿಸಿದ್ದು 1946ರಲ್ಲಿ. 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಲಾಗಿ, 1950ರ ಜನವರಿ 26ರಂದು ಅಧಿಕೃತವಾಗಿ ಜಾರಿಗೆ ತರಲಾಯಿತು. ಭಾರತೀಯ ಸಂವಿಧಾನದ ಎರಡು ಪ್ರತಿಗಳನ್ನು ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಕೈಬರಹದಲ್ಲೇ ರಚಿಸಲಾಗಿದ್ದು, ಅವುಗಳನ್ನು ಸಂಸತ್ ಭವನದ ಗ್ರಂಥಾಲಯದಲ್ಲಿ ಸಂರಕ್ಷಿಸಿಡಲಾಗಿದೆ.
ಈ ದಿನಕ್ಕೆ ಸಂವಿಧಾನ ದಿನ ಎಂಬ ಹೆಸರು ಬಂದಿದ್ದು 2015ನೇ ಇಸವಿಯಿಂದ. ಅದಕ್ಕೂ ಮುನ್ನ ಕಾನೂನು ದಿನವಾಗಿ ಆಚರಿಸಲಾಗುತ್ತಿತ್ತು. ಇನ್ನು, ಕಾನ್ಸ್ಟಿಟ್ಯುಯೆಂಟ್ ಅಸೆಂಬ್ಲಿ ಅಥವಾ ಸಂವಿಧಾನ ರಚನಾ ಸಭೆಯನ್ನು ರೂಪಿಸಿದ್ದು 1946ರಲ್ಲಿಯೇ. ಆಗ ಭಾರತದ ಭಾಗವಾಗಿದ್ದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದಲೂ ಪ್ರತಿನಿಧಿಗಳು ಸಭೆಯಲ್ಲಿದ್ದರು. ದೇಶ ವಿಭಜನೆಯಾದ ಬಳಿಕ ಅವೆರಡೂ ದೇಶಗಳು ಪ್ರತ್ಯೇಕ ಸಂವಿಧಾನ ರಚನೆ ಮಾಡಿಕೊಂಡವು.
ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸಾರ್ವಭೌಮ, ಪ್ರಜಾಪ್ರಭುತ್ವ ಗಣರಾಜ್ಯಕ್ಕೆ ಪರಿವರ್ತನೆಗೊಂಡ ದಿನ ಇದಾಗಿದೆ. ಇದು ರಾಷ್ಟ್ರದ ಮಾರ್ಗದರ್ಶೀ ತತ್ತ್ವವಾಗಿ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವದ ಸಂಸ್ಥಾಪನೆಗೆ ದಿಗ್ದರ್ಶಕವಾಗಿದೆ.
ಸಂಘಟಿತ ಸಮಾಜದಿಂದಲೇ ರಾಷ್ಟ್ರೋನ್ನತಿ:
ಈ ದಿನವನ್ನು ದೇಶಾದ್ಯಂತ ಟ್ಯಾಬ್ಲೋಗಳು, ಮೆರವಣಿಗೆಗಳು, ಮಿಲಿಟರಿ ಕವಾಯತು ಮತ್ತು ಸಂಭ್ರಮಾಚರಣೆಯೊಂದಿಗೆ ಆಚರಿಸಲಾಗುತ್ತದೆ. ಸಂಪ್ರದಾಯದಂತೆ ಗಣರಾಜ್ಯೋತ್ಸವ ಪರೇಡನ್ನು ರಾಜಧಾನಿ ದೆಹಲಿ ನಗರದ ಕರ್ತವ್ಯ ಪಥದಲ್ಲಿ ರಾಷ್ಟ್ರದ ಸಾಂಸ್ಕೃತಿಕ ವೈವಿಧ್ಯ, ಮಿಲಿಟರಿ ಶಕ್ತಿ ಮತ್ತು ಪ್ರಗತಿಯನ್ನು ಪ್ರದರ್ಶಿಸುವುದಕ್ಕಾಗಿ ಹಮ್ಮಿಕೊಳ್ಳಲಾಗುತ್ತದೆ. ಇದು ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಂಸ್ಕೃತಿ ಮತ್ತು ಆಧುನೀಕರಣದ ಮೈಲಿಗಲ್ಲುಗಳನ್ನು ಪ್ರತಿಬಿಂಬಿಸುತ್ತದೆ.
ಗಣರಾಜ್ಯದಿನದ ಪಥಸಂಚಲನದ ಮಹತ್ವ:
ಭಾರತವು ಎಷ್ಟು ಸುಭದ್ರವಾಗಿದೆ ಮತ್ತು ನಮ್ಮ ರಕ್ಷಣಾ ವ್ಯವಸ್ಥೆ ಎಷ್ಟು ಪ್ರಬಲವಾಗಿದೆ ಎಂದು ಜಗಚ್ಚಕ್ಷುಗಳಿಗೆ ಅನಾವರಣಗೊಳಿಸಲು ಈ ಪರೇಡನ್ನು ನಡೆಸಲಾಗುತ್ತದೆ. ಭೂಸೇನೆ, ನೌಕಾಸೇನೆ ಹಾಗೂ ವಾಯುಸೇನೆಗಳು ತಮ್ಮ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಟ್ಯಾಂಕರ್-ಗಳು ಮತ್ತು ಕ್ಷಿಪಣಿಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ.
ವಿವಿಧ ರೀತಿಯ ಭೌಗೋಳಿಕ ಪ್ರದೇಶಗಳನ್ನು ಹಾಗೂ ನಾನಾ ಬಗೆಯ ಜನಾಂಗ, ವೇಷ, ಭಾಷೆಗಳ ಜನರನ್ನು ಹೊಂದಿರುವ ಭಾರತವು ‘ಭಿನ್ನತೆಯಲ್ಲಿ ಏಕತೆ’ (Unity in Diversity) ಬಿಂಬಿಸುವ ಅದ್ಭುತ ದೇಶ. ಪರೇಡ್ನಲ್ಲಿ ಬರುವ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು (Tableaus) ಆಯಾ ರಾಜ್ಯದ ಸಂಸ್ಕೃತಿ, ಕಲೆ ಮತ್ತು ಪರಂಪರೆಯನ್ನು ಇಡೀ ದೇಶಕ್ಕೆ ಪರಿಚಯಿಸುತ್ತವೆ.
ಭಾರತದ ರಾಷ್ಟ್ರಪತಿಗಳು ದೇಶದ ಮೂರೂ ಸೇನಾ ಪಡೆಗಳ ಮಹಾದಂಡನಾಯಕರು (Supreme Commander). ಆದ್ದರಿಂದ, ಗಣರಾಜ್ಯೋತ್ಸವದಂದು ಸೇನಾ ಪಡೆಗಳು ಅವರಿಗೆ ಗೌರವ ವಂದನೆ (Salute) ಸಲ್ಲಿಸುತ್ತವೆ.
1950ರ ಜನವರಿ 26ರಂದು ನಮ್ಮ ಸಂವಿಧಾನ ಜಾರಿಗೆ ಬಂತು. ಬ್ರಿಟಿಷರ ಆಳ್ವಿಕೆ ಸಂಪೂರ್ಣವಾಗಿ ಕೊನೆಗೊಂಡು, ಭಾರತವು ತನ್ನದೇ ಆದ ಸಂವಿಧಾನ ಹೊಂದಿರುವ “ಗಣರಾಜ್ಯ”ವಾಯಿತು. ಈ ಐತಿಹಾಸಿಕ ಬದಲಾವಣೆಯನ್ನು ಸಂಭ್ರಮಿಸಲು ರಾಷ್ಟ್ರದ ರಾಜಧಾನಿಯಾದ ದೆಹಲಿಯಲ್ಲಿ ಈ ಅದ್ದೂರಿ ಸಮಾರಂಭ ನಡೆಯುತ್ತದೆ.
ಒಟ್ಟಾರೆಯಾಗಿ, ಕರ್ತವ್ಯ ಪಥದಲ್ಲಿ (ಹಿಂದಿನ ರಾಜಪಥ) ನಡೆಯುವ ಗಣರಾಜ್ಯದಿನದ ಪರೇಡ್ ಭಾರತದ ಶಕ್ತಿ, ಸಂಸ್ಕೃತಿ ಮತ್ತು ಏಕತೆಯ ಸಂಕೇತವಾಗಿದೆ.
Learn More: https://www.rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rashtrotthanainrashtraseva #RepublicDay #77republicday #RepublicDay2026 #IndianConstitution #UnityInDiversity #democracy







