• August 29, 2026
  • RP
  • 0

Unveiling India’s Sporting Journey in the Spotlight of National Sports Day

Although the words “aata” (play/game) and “kreede” (sport) are commonly used interchangeably, there is a subtle difference between them. Play can happen freely, simply for entertainment, joy, or relaxation; sport, on the other hand, generally involves rules, training, skill, discipline, and competition. A thrilling indigenous game like kabaddi, played in school grounds and home courtyards, may one day grow into a national-level sport; the ancient chessboard may become the stage for a world championship.

In the Indian tradition, physical activity was not seen merely as entertainment, but as a way of life that cultivates harmony of body and mind, courage, concentration, self-control, and self-confidence. This is why our history and mythology contain abundant references to archery, wrestling, mace combat, chariot driving, horse riding, running, and a variety of intellectual games.

ರಾಷ್ಟ್ರೀಯ ಕ್ರೀಡಾ ದಿನದ ಮುಂಬೆಳಕಿನಲ್ಲಿ ಭಾರತದ ಕ್ರೀಡಾ ಪಯಣದ ಅನಾವರಣ

“ಆಟ” ಮತ್ತು “ಕ್ರೀಡೆ” ಎಂಬ ಪದಗಳನ್ನು ಸಾಮಾನ್ಯವಾಗಿ ಒಂದೇ ಅರ್ಥದಲ್ಲಿ ಬಳಸಿದರೂ, ಅವುಗಳ ನಡುವೆ ಸೂಕ್ಷ್ಮ ವ್ಯತ್ಯಾಸವಿದೆ. ಆಟ ಮನರಂಜನೆ, ಸಂತೋಷ ಅಥವಾ ವಿಶ್ರಾಂತಿಗಾಗಿ ಸ್ವಚ್ಛಂದವಾಗಿ ನಡೆಯಬಹುದು; ಆದರೆ ಕ್ರೀಡೆ ಸಾಮಾನ್ಯವಾಗಿ ನಿಯಮ, ತರಬೇತಿ, ಕೌಶಲ್ಯ, ಶಿಸ್ತು ಮತ್ತು ಸ್ಪರ್ಧೆಯನ್ನು ಒಳಗೊಂಡಿರುತ್ತದೆ. ಶಾಲೆಯಲ್ಲಿ, ಮನೆಯಂಗಳದಲ್ಲಿ ಆಡುವ ಕಬಡ್ಡಿಯಂತಹ ರೋಚಕ ದೇಸೀ ಆಟಗಳೇ ಮುಂದೆ ರಾಷ್ಟ್ರೀಯ ಮಟ್ಟದ ಕ್ರೀಡೆಯಾಗಬಹುದು; ಪುರಾತನ ಚದುರಂಗದ ಮಣೆಯೇ ವಿಶ್ವ ಚಾಂಪಿಯನ್‌ಶಿಪ್‌ನ ವೇದಿಕೆಯಾಗಬಹುದು.

ಭಾರತೀಯ ಪರಂಪರೆಯಲ್ಲಿ ದೈಹಿಕ ಚಟುವಟಿಕೆಯನ್ನು ಕೇವಲ ಮನರಂಜನೆಯಾಗಿ ನೋಡದೇ, ದೇಹ–ಮನಸ್ಸಿನ ಸಮನ್ವಯ, ಧೈರ್ಯ, ಏಕಾಗ್ರತೆ, ಆತ್ಮನಿಗ್ರಹ ಮತ್ತು ಆತ್ಮವಿಶ್ವಾಸ ಬೆಳೆಸುವ ಜೀವನವಿದ್ಯೆಯಾಗಿ ಪರಿಗಣಿಸಲಾಗುತ್ತಿತ್ತು. ಆದ್ದರಿಂದಲೇ ನಮ್ಮ ಇತಿಹಾಸ–ಪುರಾಣಗಳಲ್ಲಿ ಧನುರ್ವಿದ್ಯೆ, ಮಲ್ಲಯುದ್ಧ, ಗದಾಯುದ್ಧ, ರಥಚಾಲನೆ, ಅಶ್ವಾರೋಹಣ, ಓಟ ಹಾಗೂ ವಿವಿಧ ಬೌದ್ಧಿಕ ಆಟಗಳ ಉಲ್ಲೇಖಗಳು ಹೇರಳವಾಗಿ ಕಾಣುತ್ತವೆ.

ರಾಮಾಯಣ ಮತ್ತು ಮಹಾಭಾರತಗಳಲ್ಲೂ ಕ್ರೀಡೆ, ದೈಹಿಕ ಕೌಶಲ್ಯ ಮತ್ತು ಯುದ್ಧವಿದ್ಯೆಯ ಅನೇಕ ಸ್ವಾರಸ್ಯಕರ ಪ್ರಸಂಗಗಳಿವೆ. ವಿಶ್ವಾಮಿತ್ರರಿಂದ ರಾಮ–ಲಕ್ಷ್ಮಣರು ಕಲಿತ ಅಸ್ತ್ರ–ಶಸ್ತ್ರ ವಿದ್ಯೆ, ಸೀತಾ ಸ್ವಯಂವರದಲ್ಲಿ ಶಿವಧನುಸ್ಸನ್ನು ಎತ್ತಿ ಮುರಿದ ರಾಮನ ಶಕ್ತಿ–ಏಕಾಗ್ರತೆ, ವಾಲಿ–ಸುಗ್ರೀವರ ಮಲ್ಲಯುದ್ಧ, ರಥಚಾಲನೆ ಮತ್ತು ಅಶ್ವವಿದ್ಯೆಗಳು ರಾಮಾಯಣದ ಪ್ರಮುಖ ದೃಶ್ಯಗಳು. ಮಹಾಭಾರತದಲ್ಲಿ ದ್ರೌಪದಿ ಸ್ವಯಂವರದ ಅರ್ಜುನನ ಅಸಾಧಾರಣ ಗುರಿಸಾಧನೆ, ಭೀಮ–ದುರ್ಯೋಧನರ ಗದಾಯುದ್ಧ, ಭೀಮ–ಜರಾಸಂಧರ ಮಲ್ಲಯುದ್ಧ ಮತ್ತು ಅರ್ಜುನನ ಸಾಹಸಗಳು ರೋಮಾಂಚನ ಮೂಡಿಸುತ್ತವೆ. ಆದರೆ ಶಕುನಿಯ ಕುತಂತ್ರಕ್ಕೆ ಸಿಲುಕಿ ಧರ್ಮರಾಯನು ರಾಜ್ಯವನ್ನೇ ಕಳೆದುಕೊಂಡ ಪಗಡೆಯಾಟವು ಮತ್ತೊಂದು ಪಾಠ ನೀಡುತ್ತದೆ—ಕ್ರೀಡೆಯಲ್ಲಿ ಕೌಶಲ್ಯದಷ್ಟೇ ವಿವೇಕ, ಸಂಯಮ ಮತ್ತು ಆತ್ಮನಿಯಂತ್ರಣವೂ ಮುಖ್ಯ.

ನಳ–ದಮಯಂತಿಯರ ಕಥೆಯಲ್ಲಿರುವ ಒಂದು ಪ್ರಸಂಗವೂ ಕ್ರೀಡಾ ಇತಿಹಾಸದ ದೃಷ್ಟಿಯಿಂದ ಸ್ವಾರಸ್ಯಕರ. ಪಗಡೆಯಲ್ಲಿ ಸೋತು ರಾಜ್ಯ ಕಳೆದುಕೊಂಡ ನಳನು ‘ಬಾಹುಕ’ನಾಗಿ ಋತುಪರ್ಣನ ಸಾರಥಿಯಾಗುತ್ತಾನೆ. ದಮಯಂತಿಯ ಎರಡನೇ ಸ್ವಯಂವರದ ಸುದ್ದಿ ಕೇಳಿ ಒಂದೇ ದಿನದಲ್ಲಿ ವಿದರ್ಭ ತಲುಪಬೇಕಾದಾಗ, ನೋಡಲು ಸಾಮಾನ್ಯವಾಗಿದ್ದ ಕುದುರೆಗಳನ್ನು ಬಾಹುಕನು ರಥಕ್ಕೆ ಜೋಡಿಸುತ್ತಾನೆ. ಅವುಗಳ ಅದ್ಭುತ ವೇಗವನ್ನು ಕಂಡ ಋತುಪರ್ಣ ಬೆರಗಾಗುತ್ತಾನೆ. ಪ್ರಯಾಣದ ವೇಳೆ ಋತುಪರ್ಣನ ಅಸಾಧಾರಣ ಸಂಖ್ಯಾಜ್ಞಾನ ಮತ್ತು ಅಕ್ಷವಿದ್ಯೆಗೆ ಪ್ರತಿಯಾಗಿ ನಳನು ತನ್ನ ಅಶ್ವವಿದ್ಯೆಯನ್ನು ಹಂಚಿಕೊಳ್ಳುತ್ತಾನೆ. ಹೀಗೆ ಎರಡು ಕೌಶಲ್ಯಗಳ ವಿನಿಮಯವಾಗುತ್ತದೆ; ಮುಂದೆ ಇದೇ ಜ್ಞಾನದಿಂದ ನಳನು ಪುಷ್ಕರನನ್ನು ಪಗಡೆಯಲ್ಲಿ ಸೋಲಿಸಿ ರಾಜ್ಯವನ್ನು ಮರಳಿ ಪಡೆಯುತ್ತಾನೆ.

ಇವೆಲ್ಲವನ್ನು ಇಂದು ನೆನಪಿಸಿಕೊಳ್ಳಲು ಒಂದು ವಿಶೇಷ ಕಾರಣವಿದೆ. ಇಂದು ರಾಷ್ಟ್ರೀಯ ಕ್ರೀಡಾದಿನ. ಆಗಸ್ಟ್ 29, 1905ರಂದು ಜನಿಸಿದ ಭಾರತೀಯ ಹಾಕಿಯ ಮಹಾನ್ ಆಟಗಾರ ಮೇಜರ್ ಧ್ಯಾನ್ ಚಂದ್ ಅವರ ಸ್ಮರಣಾರ್ಥವಾಗಿ ಈ ದಿನವನ್ನು ಆಚರಿಸಲಾಗುತ್ತದೆ. 1928, 1932 ಮತ್ತು 1936ರ ಒಲಿಂಪಿಕ್ಸ್‌ಗಳಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಅವರ ಅಸಾಧಾರಣ ಆಟದ ಕೌಶಲ್ಯದಿಂದಾಗಿ ಅವರು “ಹಾಕಿಯ ಮಾಂತ್ರಿಕ” ಎಂದೇ ಪ್ರಸಿದ್ಧರಾದರು.

ಇಂದು ಭಾರತದ ಕ್ರೀಡಾ ಕ್ಷೇತ್ರವೂ ದೊಡ್ಡ ಬದಲಾವಣೆಯ ಹಾದಿಯಲ್ಲಿದೆ. ಕಳೆದ ಒಂದು ದಶಕದಲ್ಲಿ TOPS ಮೂಲಕ ಉನ್ನತಮಟ್ಟದ ಆಟಗಾರರಿಗೆ ತರಬೇತಿ, ಉಪಕರಣ, ವಿದೇಶಿ ಅನುಭವ ಮತ್ತು ಕೋಚಿಂಗ್ ನೆರವು ಬಲಗೊಂಡರೆ, 2016-17ರಲ್ಲಿ ಆರಂಭವಾದ ಖೇಲೋ ಇಂಡಿಯಾ ಶಾಲೆ, ಗ್ರಾಮ ಮತ್ತು ಜಿಲ್ಲಾಮಟ್ಟದಿಂದಲೇ ಪ್ರತಿಭೆ ಗುರುತಿಸುವ ಮತ್ತು ಕ್ರೀಡಾ ಸಂಸ್ಕೃತಿ ಬೆಳೆಸುವ ವ್ಯವಸ್ಥೆಗೆ ವೇಗ ನೀಡಿದೆ. ಕ್ರೀಡಾ ವಿಜ್ಞಾನ, ಪೌಷ್ಟಿಕಾಂಶ, ಮಾನಸಿಕ ಸಿದ್ಧತೆ ಮತ್ತು ತಂತ್ರಜ್ಞಾನದ ಬಳಕೆಗೂ ಹೆಚ್ಚಿನ ಒತ್ತು ದೊರೆಯುತ್ತಿದೆ. 2026ರ ವೇಳೆಗೆ 1,067 ಖೇಲೋ ಇಂಡಿಯಾ ಕೇಂದ್ರಗಳು, 267 ಅಕಾಡೆಮಿಗಳು ಮತ್ತು 349 ಹೊಸ ಕ್ರೀಡಾ ಮೂಲಸೌಕರ್ಯ ಯೋಜನೆಗಳು ಬೆಳೆದಿವೆ.

2025ರ ಖೇಲೋ ಭಾರತ್ ನೀತಿ ಕ್ರೀಡೆಯನ್ನು ಕೇವಲ ಪದಕ ಗೆಲ್ಲುವ ಸಾಧನವಾಗಿ ನೋಡದೇ, ರಾಷ್ಟ್ರನಿರ್ಮಾಣ, ಆರೋಗ್ಯ, ಸಾಮಾಜಿಕ – ಆರ್ಥಿಕ ಅಭಿವೃದ್ಧಿ ಮತ್ತು ಪ್ರತಿಭಾ ವಿಕಾಸದ ಸಾಧನವಾಗಿ ನೋಡುವ ವಿಶಾಲ ದೃಷ್ಟಿಕೋನ ನೀಡಿದೆ. 2036ರ ಒಲಿಂಪಿಕ್ಸ್‌ನ್ನು ಗಮನದಲ್ಲಿಟ್ಟುಕೊಂಡು ತಳಮಟ್ಟದಿಂದ Olympic podiumವರೆಗೆ ಸಮಗ್ರ ಕ್ರೀಡಾ ವ್ಯವಸ್ಥೆ ನಿರ್ಮಿಸುವ ಗುರಿಯನ್ನೂ ಇದು ಹೊಂದಿದೆ. 2026-27ರಿಂದ 2030-31ರವರೆಗೆ ಖೇಲೋ ಇಂಡಿಯಾ ಯೋಜನೆ ಮತ್ತು ರಾಷ್ಟ್ರೀಯ ಕ್ರೀಡಾ ಒಕ್ಕೂಟಗಳ ನೆರವಿಗೆ ₹36,441 ಕೋಟಿ ಮೊತ್ತದ ಸಂಯುಕ್ತ ಹೂಡಿಕೆಗೆ ಅನುಮೋದನೆ ದೊರೆತಿರುವುದು ಈ ಬದಲಾವಣೆಯ ಮತ್ತೊಂದು ದೊಡ್ಡ ಹೆಜ್ಜೆ.

ಆದರೆ ಕ್ರೀಡೆಯ ನಿಜವಾದ ಉದ್ದೇಶ ಕೇವಲ ಪದಕ, ಪಾರಿತೋಷಕ ಅಥವಾ ಟ್ರೋಫಿಗಳನ್ನು ಗೆಲ್ಲುವುದಲ್ಲ. ಮಕ್ಕಳು ಕೇವಲ ಕಂಪ್ಯೂಟರ್, ಟೀವಿ ಅಥವಾ ಮೊಬೈಲ್ ಪರದೆಯ ಮುಂದೆ ಬೆಳೆಯಬಾರದು; ಆಟದ ಮೈದಾನದಲ್ಲೂ ಓಡಿ, ಆಡಿ, ಎಡವಿ, ಬಿದ್ದು, ಎದ್ದು, ಧೂಳು ಕೊಡವಿ ಬೆಳೆಯಬೇಕು! ಶಾಲೆಗಳು ಕೇವಲ ಪರೀಕ್ಷೆಯ ಅಂಕಗಳನ್ನು ನೀಡದೇ, ದೈಹಿಕ ಸಾಮರ್ಥ್ಯ, ಏಕಾಗ್ರತೆ, ತಂಡ ಸ್ಫೂರ್ತಿ, ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸವನ್ನೂ ಬೆಳೆಸಬೇಕು. ಪೋಷಕರು ಕ್ರೀಡೆಯನ್ನು ಓದಿಗೆ ಅಡ್ಡಿ ಎಂದು ನೋಡುವ ಬದಲು, ಉತ್ತಮ ಜೀವನದ ಅವಿಭಾಜ್ಯ ಅಂಗವೆಂದು ನೋಡಬೇಕು.

ಒಂದು ಬೃಹತ್ ರಾಷ್ಟ್ರವಾಗಿ ನಮ್ಮ ಗುರಿ ಹೆಚ್ಚು ಪದಕಗಳನ್ನು ಗೆಲ್ಲುವುದರ ಜೊತೆಗೆ, ಆರೋಗ್ಯವಂತ, ಆತ್ಮವಿಶ್ವಾಸೀ, ಪರಿಶ್ರಮೀ, ಶಿಸ್ತಿನ ಯುವಜನತೆಯನ್ನು ನಿರ್ಮಿಸುವುದಾಗಿರಬೇಕು. ಅದೇ ನಿಜವಾದ ಕ್ರೀಡಾ ಸ್ಫೂರ್ತಿ. ಅದೇ ಕ್ರೀಡಾ ಸಂಸ್ಕೃತಿ. ಅದೇ ರಾಷ್ಟ್ರೀಯ ಕ್ರೀಡಾದಿನದ ಸಂದೇಶ.

#Rashtrotthana #RashtrotthanaParishat #RashtrotthanaInRashtraseva #sportsday #nationalsportsday #dhyanchand #majordhyanchand

 

Leave a Reply

Your email address will not be published. Required fields are marked *