O Varamahalakshmi, Bestow Upon Us the Boon of Fearlessness and Blessings…
Repeated salutations to the Goddess who dwells in all beings in the form of Lakshmi. This verse from the Devi Mahatmya resounds in homes and hearts on the day of the Varamahalakshmi festival in the month of Shravana, awakening feelings of devotion, prosperity, and joy.
In Indian culture, although everyone, from the learned to the ordinary, knows that “Lakshmi” is not limited to being merely the presiding deity of money and wealth, the word carries many more shades of meaning. Auspiciousness, good fortune, wealth, grain, knowledge, courage, victory, progeny, health, happiness, peace, and prosperity are all forms of Lakshmi! She is the embodiment of every matter, object, and quality that enriches human life and helps in the attainment of the purusharthas (the four aims of human life).
ಅಭಯ-ವರದಗಳ ವರವ ಕರುಣಿಸೆಮ್ಮ ವರಮಹಾಲಕ್ಷ್ಮೀ…

ಯಾ ದೇವೀ ಸರ್ವಭೂತೇಷು ಲಕ್ಷ್ಮೀರೂಪೇಣ ಸಂಸ್ಥಿತಾ |
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ ||
ಎಲ್ಲ ಪ್ರಾಣಿಗಳಲ್ಲೂ ಲಕ್ಷ್ಮೀ ರೂಪದಲ್ಲಿ ನೆಲೆಸಿರುವ ದೇವಿಗೆ ಮತ್ತೆ ಮತ್ತೆ ನಮಸ್ಕಾರ. ದೇವೀ ಮಹಾತ್ಮೆಯ ಈ ಶ್ಲೋಕವು ಶ್ರಾವಣ ಮಾಸದ ವರಮಹಾಲಕ್ಷ್ಮೀ ಹಬ್ಬದಂದು ಮನೆ-ಮನಗಳಲ್ಲಿ ಮೊಳಗಿ ಭಕ್ತಿ-ಸಮೃದ್ಧಿ-ಸಂತೋಷದ ಭಾವಗಳಿಗೆ ಮೂಡಿಸುತ್ತದೆ.
ಭಾರತೀಯ ಸಂಸ್ಕೃತಿಯಲ್ಲಿ ‘ಲಕ್ಷ್ಮೀ’ ಎಂದರೆ ಬರೀ ಹಣ-ಸಂಪತ್ತಿನ ಅಧಿದೇವತೆ ಎಂಬ ಸೀಮಿತ ಅರ್ಥವಿರುವುದನ್ನು ಶ್ರೀ-ಸಾಮಾನ್ಯರೆಲ್ಲ ಅರಿತಿದ್ದರೂ, ಆ ಪದಕ್ಕೆ ಇನ್ನೂ ಅನೇಕ ಅರ್ಥವಿಶೇಷಗಳಿವೆ. ಶ್ರೇಯಸ್ಸು, ಸೌಭಾಗ್ಯ, ಧನ,, ಧಾನ್ಯ, ಜ್ಞಾನ, ಧೈರ್ಯ, ವಿಜಯ, ಸಂತಾನ, ಆರೋಗ್ಯ, ಸಂತೋಷ, ಶಾಂತಿ ಮತ್ತು ಸಮೃದ್ಧಿ ಎಲ್ಲವೂ ಲಕ್ಷ್ಮೀಸ್ವರೂಪವೇ ಆಗಿವೆ! ಮಾನವ ಜೀವನವನ್ನು ಸಮೃದ್ಧವಾಗಿಸುವ, ಪುರುಷಾರ್ಥಗಳ ಸಿದ್ಧಿಗೆ ಸಹಕಾರಿಯಾದ ಎಲ್ಲ ವಿಷಯ-ವಸ್ತು-ವಿಶೇಷಣಗಳ ರೂಪವೇ ಲಕ್ಷ್ಮೀ.
ಶ್ರೀಮನ್ನಾರಾಯಣನ ವಕ್ಷಸ್ಥಳದಲ್ಲಿ ಮನೆಮಾಡಿರುವ ಮಹಾಲಕ್ಷ್ಮೀ, ಸೃಷ್ಟಿಸ್ಥಿತಿಗಳ ಪಾಲನೆಯಲ್ಲಿರುವ ಶಕ್ತಿ ಮತ್ತು ಮಂಗಳದ ಪ್ರತೀಕ. ಜೊತೆಗೆ ಲಕ್ಷ್ಮೀ ದೇವಿಯು ಸಮೃದ್ಧಿ, ಸಂಪತ್ತು, ಸೌಭಾಗ್ಯ ಮತ್ತು ಶುಭ-ಮಂಗಳ ನೀಡುವ ಅಧಿದೇವತೆ. “ವರ” ಎಂದರೆ ವರದಾನ; “ಮಹಾಲಕ್ಷ್ಮೀ” ಎಂದರೆ ಶ್ರೀ, ಭೂ, ಧನ, ಧಾನ್ಯ, ವಿದ್ಯಾ, ಸಂತಾನ, ವಿಜಯ, ಹಾಗೂ ಧೈರ್ಯಗಳ ಪ್ರತೀಕಳಾದ, ಅಧಿದೇವತೆಯಾದ ಲಕ್ಷ್ಮಿಯ ಅಷ್ಟ ಸ್ವರೂಪಗಳ ಸಂಯುಕ್ತ ರೂಪ.
ಕರ್ನಾಟಕದಲ್ಲಿ ‘ವರಮಹಾಲಕ್ಷ್ಮೀ ಹಬ್ಬ’ವೆಂದೂ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ‘ವರಲಕ್ಷ್ಮೀ ವ್ರತಂ’ ಎಂದೂ, ತಮಿಳುನಾಡಿನಲ್ಲಿ ‘ವರಲಕ್ಷ್ಮೀ ನೊಂಬು’ ಎಂದೂ ಈ ಆಚರಣೆ ಪ್ರಸಿದ್ಧವಾಗಿದೆ. ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿಯೂ ಇದನ್ನು ಆಚರಿಸಲಾಗುತ್ತದೆ. 2026ರಲ್ಲಿ ಬಹುತೇಕ ಕನ್ನಡ, ತೆಲುಗು ಮತ್ತು ತಮಿಳು ಪಂಚಾಂಗಗಳ ಪ್ರಕಾರ ಆಗಸ್ಟ್ 21, ಶುಕ್ರವಾರ ಆಚರಣೆ ನಡೆಯಲಿದ್ದು, ಕೆಲವು ಪಂಚಾಂಗ ಪರಂಪರೆಗಳಲ್ಲಿ ಆಗಸ್ಟ್ 28ರಂದು ಆಚರಣೆ ಕಾಣುತ್ತದೆ. ಆದ್ದರಿಂದ ಕುಟುಂಬದ ಹಾಗೂ ಸ್ಥಳೀಯ ಪಂಚಾಂಗದ ಸಂಪ್ರದಾಯವನ್ನು ಅನುಸರಿಸುವುದು ಸೂಕ್ತ.
ಈ ಹಬ್ಬಕ್ಕೆ ಆಧಾರಗ್ರಂಥ ಸ್ಕಂದ ಪುರಾಣ. ಪಾರ್ವತೀ ದೇವಿ ಪರಮೇಶ್ವರನಲ್ಲಿ “ಸ್ತ್ರೀಯರಿಗೆ ಸಕಲ ಒಳಿತು ತರುವ ವ್ರತ ಯಾವುದು?” ಎಂದು ಕೇಳಿದಾಗ, ಶಿವನು ವಿದರ್ಭ ರಾಜ್ಯದ ಕುಂಡಿನಾಪುರದ ಪತಿವ್ರತೆ ಚಾರುಮತಿಯ ಕಥೆ ಹೇಳುತ್ತಾನೆ. ಶ್ರಾವಣ ಪೂರ್ಣಿಮೆಯ ಹಿಂದಿನ ಶುಕ್ರವಾರ ಲಕ್ಷ್ಮೀ ಸ್ವಪ್ನದಲ್ಲಿ ಚಾರುಮತಿಗೆ ದರ್ಶನ ನೀಡಿ ವರಮಹಾಲಕ್ಷ್ಮೀ ಪೂಜೆ ಮಾಡಲು ಆದೇಶಿಸುತ್ತಾಳೆ. ಆ ಪೂಜೆ ಆಚರಿಸಿದ ಚಾರುಮತಿ ಮತ್ತು ಅವಳ ನೆರೆಹೊರೆಯ ಮಹಿಳೆಯರೆಲ್ಲ ಧನ, ಧಾನ್ಯ, ಆಯು, ಆರೋಗ್ಯ ಮತ್ತು ಸೌಭಾಗ್ಯ ಪಡೆದರು. ಇದೇ ವರಮಹಾಲಕ್ಷ್ಮೀ ವ್ರತದ ಮೂಲ ಕಥೆ.
ಈ ಒಂದು ವ್ರತ ಆಚರಿಸಿದರೆ ಅಷ್ಟ ಲಕ್ಷ್ಮೀಯರು ಏಕಕಾಲದಲ್ಲಿ ಪ್ರಸನ್ನರಾಗುತ್ತಾರೆ ಎಂಬ ನಂಬಿಕೆಯಿದೆ. ಕುಟುಂಬದ ಸ್ತ್ರೀಯರು ಮುಖ್ಯವಾಗಿ ಸುಮಂಗಲಿಯರು, ಕಲಶ ಸ್ಥಾಪಿಸಿ, ವಸ್ತ್ರ-ಆಭರಣ ಅಲಂಕಾರ, ಪಂಚೋಪಚಾರ ಪೂಜೆ, ನೈವೇದ್ಯ, ಆರತಿ, ಕಥಾಶ್ರವಣ, ಮಂಗಳಾಷ್ಟಕ, ಸ್ತೋತ್ರ, ಭಜನೆ ಹಾಡಿ ಪೂಜಿಸುತ್ತಾರೆ.
ಈ ವ್ರತವು ಮುಖ್ಯವಾಗಿ ಕುಟುಂಬದ ಕ್ಷೇಮ, ಸೌಭಾಗ್ಯ, ಆರೋಗ್ಯ, ದೀರ್ಘಾಯುಷ್ಯ, ಸಂತಾನಪ್ರಾಪ್ತಿ, ವಿಜಯ ಹಾಗೂ ಸಮೃದ್ಧಿಗಾಗಿ ಆಚರಿಸಲ್ಪಡುತ್ತದೆ. ಮಹಾಲಕ್ಷ್ಮಿಯ ಕೃಪೆಯಿಂದ, ಅವೆಲ್ಲಗಳನ್ನು ಹೊಂದುವ ಸದಿಚ್ಛೆಯ ಪ್ರಾರ್ಥನೆಯೊಂದಿಗೆ, ಹಿರಿಯರ, ಪುರೋಹಿತರ ಆಶೀರ್ವಚನಗಳು ಹಬ್ಬಕ್ಕೆ ಹೆಚ್ಚಿನ ಅರ್ಥ ಕೊಡುತ್ತದೆ. ಸವಿಸವಿ ಹಬ್ಬದೂಟದೊಂದಿಗೆ ಹಗಲು ಕಳೆ ಕಳೆಯಾಗಿ ಕಳೆದರೆ, ಮುಸ್ಸಂಜೆ ಹೊತ್ತಲ್ಲಿ ಮುತ್ತೈದೆ ಹಾಗೂ ಕುಮಾರಿಕೆಯರನ್ನು ಮನೆಗೆ ಕರೆದು ಅರಿಶಿನ-ಕುಂಕುಮ-ಹೂ-ಬಾಗಿನಗಳನ್ನು ಕೊಟ್ಟು ಸ್ತ್ರೀಯರು ಸಂಭ್ರಮಿಸುತ್ತಾರೆ.
वरलक्ष्मी महालक्ष्मी विष्णुवक्षःस्थलस्थिते ।
भक्तानामभयं कुरु देवि दारिद्र्यनाशिनि ॥
ವರಲಕ್ಷ್ಮೀ ಮಹಾಲಕ್ಷ್ಮೀ, ವಿಷ್ಣುವಿನ ವಕ್ಷಸ್ಥಲದಲ್ಲಿ ನೆಲೆಸಿರುವ ದೇವೀ, ಭಕ್ತರಿಗೆ ಅಭಯವನ್ನು ನೀಡಿ, ದಾರಿದ್ರ್ಯವನ್ನು ನಾಶಮಾಡು.
सिद्धलक्ष्मीर्मोक्षलक्ष्मीः जयलक्ष्मीः सरस्वती ।
श्रीलक्ष्मीर्वरलक्ष्मीश्च प्रसन्ना मम सर्वदा ॥
ಇಲ್ಲಿ ಸಿದ್ಧಲಕ್ಷ್ಮೀ, ಮೋಕ್ಷಲಕ್ಷ್ಮೀ, ಜಯಲಕ್ಷ್ಮೀ, ಸರಸ್ವತೀ, ಶ್ರೀಲಕ್ಷ್ಮೀ ಮತ್ತು ವರಲಕ್ಷ್ಮೀ ಎಂಬ ರೂಪಗಳನ್ನು ಒಟ್ಟಾಗಿ ಸ್ಮರಿಸಲಾಗಿದೆ.
ಹಬ್ಬದ ನಿಜವಾದ ಆಶಯ ‘ಇನ್ನಷ್ಟು ಸಂಪತ್ತು ಬೇಕು’ ಎನ್ನುವುದಕ್ಕಿಂತ, ದೊರೆತ ಸಂಪತ್ತು ಧರ್ಮಮಾರ್ಗದಲ್ಲಿ ಬಳಕೆಯಾಗಲಿ, ಮನೆಯಲ್ಲಿ ಆರೋಗ್ಯ-ಸಂತೋಷ-ಸೌಹಾರ್ದ ನೆಲೆಸಲಿ ಎಂಬ ಪ್ರಾರ್ಥನೆಯಾಗಿದೆ. ಆದರೆ ಒಂದು ಎಚ್ಚರಿಕೆ ಅಗತ್ಯ. ಈ ಹಬ್ಬ ಐಶ್ವರ್ಯದ ಆಡಂಬರದ ಪ್ರದರ್ಶನವಾಗದಂತೆ ಎಚ್ಚರ ವಹಿಸಬೇಕು. ಈ ವ್ರತಕ್ಕೆ ಯಾವುದೇ ಕಠಿಣ ನಿಯಮವಿಲ್ಲ, ಸರಳ ಪ್ರಾರ್ಥನೆಯೂ ದೇವಿಯನ್ನು ತೃಪ್ತಿಪಡಿಸಬಲ್ಲದು. ಮನೆ ಹಾಗೂ ಮನದ ಶುದ್ಧಿಯೇ ಪೂಜೆ. ಸರಳತೆ, ಶ್ರದ್ಧೆ, ಸ್ವಚ್ಛತೆ, ಸಾತ್ತ್ವಿಕತೆ ಮತ್ತು ಭಕ್ತಿಗಳೇ ವರಮಹಾಲಕ್ಷ್ಮೀ ಪೂಜೆಯ ನಿಜವಾದ ಅಲಂಕಾರವಾಗಲಿ. ಬೆಳಗುವ ಬೆಳ್ಳಿ ದೀಪಕ್ಕಿಂತ ನಮ್ಮ ಹೃದಯದಲ್ಲಿ ಬೆಳಗುವ ಹಣತೆಯಂತಹ ಸರಳ ಭಕ್ತಿಯೇ ಮಹಾಲಕ್ಷ್ಮಿಯನ್ನು ವರದಾನಗೈಯುವಂತೆ ಒಲಿಸಲಿ.
#Rashtrotthana #RashtrotthanaParishat #rashtrotthanainrashtraseva #varamahalakshmi #lakshmi #varamahalakshmivratam







