ಧರ್ಮೋತ್ಥಾನದ ಹರಿಕಾರಳಾದ ವೀರರಾಣಿ ಅಹಲ್ಯಾ ಬಾಯಿ ಹೋಳ್ಕರ್ ಜನ್ಮೋತ್ಸವ ಸಂಭ್ರಮ (ಮೇ 31) ಹಾಗೂ ಧನ್ಯಧನ್ಯ ಸ್ಮರಣೆಗಳು

ಸಾಮ್ರಾಜ್ಯಗಳನ್ನಾಳಿದ ರಾಣಿಯರಲ್ಲಿ ಮೇಲ್ಪಂಕ್ತಿಗೆ ಸೇರುವ ಅಹಲ್ಯಾಬಾಯಿ ಹೋಳ್ಕರ್ ಅವರ ಜೀವನ ಅಪೂರ್ವ ಹಾಗೂ ಅನನ್ಯ. ಶತಮಾನಗಳ (18ನೇ ಶತಮಾನ) ಹಿಂದೆ ಒಂದು ಹೆಣ್ಣಾಗಿ ಹುಟ್ಟಿ, ಅಂತಃಸತ್ವ, ಶೌರ್ಯ, ಸ್ಥೈರ್ಯ, ಜ್ಞಾನ ಹಾಗೂ ದೈವಭಕ್ತಿಯಿಂದ ಇತಿಹಾಸದಲ್ಲಿ ಅಮರಳಾದ ವೀರಮಾತೆ ಜನಿಸಿದ್ದು 1725ರಲ್ಲಿ ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲೆಯ ಚೊಂಡಿ ಎಂಬ ಪುಟ್ಟ ಗ್ರಾಮದಲ್ಲಿ.
ಒಮ್ಮೆ ಬಾಲಕಿ ಅಹಲ್ಯಾಬಾಯಿ ಗೆಳೆಯರೊಂದಿಗೆ ನದೀತೀರದಲ್ಲಿ ಮರಳಿನ ಶಿವಲಿಂಗ ಮಾಡಿ ಆಟವಾಡುತ್ತಿದ್ದಳು. ಅದೇ ಸಮಯದಲ್ಲಿ ಬಾಜೀರಾವ್ ಪೇಶ್ವೆಯ ಸೈನ್ಯವೂ ಅಲ್ಲಿ ತಂಗಿತ್ತು. ಸೈನ್ಯದ ಕುದುರೆಯೊಂದು ದಿಕ್ಕೆಟ್ಟು ಮಕ್ಕಳ ಕಡೆಗೆ ಓಡಿಬಂದಾಗ ಇತರ ಮಕ್ಕಳೆಲ್ಲ ಬೆದರಿ ಓಡಿಹೋದರು; ಆದರೆ ಅಹಲ್ಯಾ ಶಿವಲಿಂಗವನ್ನು ರಕ್ಷಿಸಲು ಅದನ್ನು ಗಟ್ಟಿಯಾಗಿ ಅಪ್ಪಿಕೊಂಡಳು. “ಕುದುರೆ ತುಳಿಯಬಹುದೆಂಬ ಭಯವಿರಲಿಲ್ಲವೇ?” ಎಂದು ಬಾಜೀರಾವ್ ಕೇಳಿದಾಗ, “ಪ್ರಾಣ ನೀಡಿಯಾದರೂ ಪರಂಪರೆಯನ್ನು ರಕ್ಷಿಸಬೇಕು ಎಂಬ ಹಿರಿಯರ ಮಾತಿನಂತೆ ನಾನು ಇದನ್ನು ಮಾಡಿದ್ದೇನೆ” ಎಂದು ಆ ಬಾಲಕಿ ಧೈರ್ಯದಿಂದ ಉತ್ತರಿಸಿದಳು.
ಈ ದಿಟ್ಟತನವನ್ನು ಕಂಡು ಆಶ್ಚರ್ಯ-ಆನಂದಿತರಾದ ಬಾಜೀರಾಯರು, ಇಂದೋರ್ನ ಸುಬೇದಾರ್ ಮಲ್ಹಾರ್ ರಾವ್ ಹೋಳ್ಕರ್ ಅವರ ಪುತ್ರ ಖಂಡೇರಾವ್ ಜೊತೆಗೆ, ಅಹಲ್ಯಾಬಾಯಿಯ ವಿವಾಹವನ್ನು 1737ರಲ್ಲಿ ನೆರವೇರಿಸಿದರು. 1741ರಲ್ಲಿ ಮಲ್ಹಾರ್ ರಾವ್ ಇಂದೋರಿನಲ್ಲಿ ಅರಮನೆ ಕಟ್ಟಿಸಿ ಅದನ್ನು ವ್ಯಾಪಾರ-ವಹಿವಾಟಿನ ಕೇಂದ್ರವಾಗಿ ಬೆಳೆಸಿದರು. ಇಂದ್ರಪುರಿ ಎಂಬ ಸಣ್ಣ ಪಟ್ಟಣ ಇಂದು ಸಂಪದ್ಭರಿತ ಇಂದೋರ್ ನಗರವಾಗಿ ಬೆಳೆಯಲು ಬೀಜಾಂಕುವಾಗಿದ್ದು ಹೀಗೆ.
ಮರಾಠಾ ಸಾಮ್ರಾಜ್ಯದ ಪರವಾಗಿ ಪತಿ ಹಾಗೂ ಮಾವ ನಿರಂತರ ಯುದ್ಧಗಳಲ್ಲಿ ಪಾಲ್ಗೊಳ್ಳುತ್ತಿದ್ದ ಕಾರಣ ಇಂದೋರಿನ ಆಡಳಿತ ನೋಡಿಕೊಳ್ಳುವ ಹೊಣೆ ಅಹಲ್ಯಾಬಾಯಿ ಹೆಗಲಿಗೇರುತ್ತಿತ್ತು. 1754ರಲ್ಲಿ ಆಕಸ್ಮಿಕವಾಗಿ ಸಿಡಿಮದ್ದು ಬಡಿದು ಖಂಡೇರಾವ್ ಕೊನೆಯುಸಿರೆಳೆದಾಗ ಅಹಲ್ಯಾಬಾಯಿಗೆ ಕೇವಲ 29 ವರ್ಷ! ಅಂದಿನ ಕಾಲದ ರೂಢಿಯಂತೆ ಸಹಗಮನ ಮಾಡಲು ನಿರ್ಧರಿಸಿದ ಆಕೆಯನ್ನು ಆಕೆಯ ಅತ್ತೆ-ಮಾವಂದಿರು ಮನವೊಲಿಸಿ, “ಬದುಕಿ ಸಾಮ್ರಾಜ್ಯವನ್ನು ಕಾಪಾಡು” ಎಂದು ವಿನಂತಿಸಿದಾಗ, ಅವರ ಮಾತಿಗೆ ಒಪ್ಪಿ ಮತ್ತೆ ಬದುಕುವ ಭರವಸೆ ತಾಳಿ ರಾಜಾಡಳಿತದ ಸೂತ್ರ ಹಿಡಿದರು. ಆದರೆ ಇದ್ದ ಒಬ್ಬನೇ ಮಗ ಮಾಲೋಜೀ, ಮಾನಸಿಕ ಅಸ್ವಸ್ಥತೆ ಹಾಗೂ ಇತರ ಸಮಸ್ಯೆಗಳ ಕಾರಣ 1767ರಲ್ಲಿ ಮೃತನಾದ ಮೇಲೆ, ತನ್ನ 42ನೇ ವಯಸ್ಸಿನಲ್ಲಿ ರಾಣಿಯಾಗಿ ಸಿಂಹಾಸನ ಏರಿ, 28 ವರ್ಷಗಳ ಸುದೀರ್ಘ ಅವಧಿಗೆ ಯಶಸ್ವೀ ಆಳ್ವಿಕೆ ನಡೆಸಿದರು.
ದೇಶಾದ್ಯಂತ ಇಸ್ಲಾಮೀ ಆಕ್ರಮಣಕಾರ ದೊರೆಗಳಾಗಿದ್ದ ಖಿಲ್ಜಿ, ತುಘಲಕ್, ಮೊಘಲ್, ನಿಜಾಮರು ಮತ್ತಿತರ ವಿಗ್ರಹಭಂಜಕರಿಂದ ನಾಶವಾಗಿದ್ದ ಹಿಂದೂ ದೇವಾಲಯಗಳನ್ನು ಹಾಗೂ ಪುಣ್ಯಕ್ಷೇತ್ರಗಳನ್ನು ಪುನರುಜ್ಜೀವನಗೊಳಿಸಿದ ಮಹಾಸಾಧ್ವಿಯೇ ಅಹಲ್ಯಾಬಾಯಿ. ಔರಂಗಜೇಬನು ಕಾಶಿಯ ವಿಶ್ವನಾಥ ದೇಗುಲವನ್ನು ಧ್ವಂಸಮಾಡಿ ಆ ಜಾಗದಲ್ಲಿ ಗ್ಯಾನವಾಪಿ ಮಸೀದಿ ನಿರ್ವಿುಸಿದ್ದ. ಅದೇ ಪವಿತ್ರ ನೆಲದಲ್ಲಿ ಕಾಶಿ ವಿಶ್ವನಾಥ ಮಂದಿರವನ್ನು 1780ರಲ್ಲಿ ಪುನರ್ನಿರ್ಮಿಸಿದ ಅಹಲ್ಯಾಬಾಯಿ, 111 ವರ್ಷಗಳ ನಂತರ ಕಾಶಿಯನ್ನು ಮತ್ತೆ ಹಿಂದೂಗಳ ಪುಣ್ಯಭೂಮಿಯನ್ನು ಅವರಿಗೇ ಮರಳಿಸಿದರು.
ಶತಮಾನಗಳಿಂದ ದಾಳಿಗೆ ತುತ್ತಾಗಿದ್ದ ಸೋಮನಾಥ ದೇವಾಲಯ 1783ರಲ್ಲಿ ಪುನರ್ನಿರ್ಮಾಣಗೊಂಡಿರುವುದರಲ್ಲೂ ರಾಣಿಯವರ ಕೊಡುಗೆ ದೊಡ್ಡದಿತ್ತು. ದ್ವಾರಕಾ, ಭೀಮಾಶಂಕರ, ತ್ರ್ಯಂಬಕೇಶ್ವರ, ಕೇದಾರನಾಥ, ಶ್ರೀಶೈಲ, ಓಂಕಾರೇಶ್ವರ, ಉಜ್ಜಯಿನಿ, ಗಯಾದ ವಿಷ್ಣುಪಾದ ದೇಗುಲ, ಪುರಿಯ ರಾಮಚಂದ್ರ ದೇಗುಲ, ರಾಮೇಶ್ವರದ ಹನುಮಾನ್ ಮಂದಿರ, ಪರ್ಲಿ ವೈಜನಾಥದ ವೈದ್ಯನಾಥ ಮಂದಿರ, ಅಯೋಧ್ಯೆಯ ಸರಯೂ ಘಾಟ್, ಗಂಗಾರತಿಗೆ ಪ್ರಸಿದ್ಧವಾದ ದಶಾಶ್ವಮೇಧ ಘಾಟ್ ಮತ್ತು ಮಣಿಕರ್ಣಿಕಾ ಘಾಟ್ — ಇವೆಲ್ಲವುಗಳ ಪುನರುದ್ಧಾರಕ್ಕೆ ಆಕೆ ಕಾರಣರಾದರು. ಈ ಎಲ್ಲ ಜ್ಯೋತಿರ್ಲಿಂಗ ಹಾಗೂ ಪುಣ್ಯಕ್ಷೇತ್ರಗಳ ಅಭಿವೃದ್ಧಿಗೆ ಅಹಲ್ಯಾಬಾಯಿ ಸಲ್ಲಿಸಿದ ಕೊಡುಗೆ ಅತುಲ್ಯ. ಅದೆಲ್ಲವೂ ಅಪಾರ ಭಕ್ತಿ ಹಾಗೂ ಧಾರ್ಮಿಕ ಶ್ರದ್ಧೆಯಿಂದ ಮೂಡಿದ್ದೇ ಹೊರತು, ರಾಜಕೀಯ ಪ್ರದರ್ಶನಕ್ಕಾಗಿ ಅಲ್ಲ.
ಸಾದಾ ಬಿಳಿ ಉಡುಪು ಧರಿಸಿ, ಸಾಮಾನ್ಯ ಕುರ್ಚಿಯಲ್ಲೇ ಕುಳಿತು ಆಡಳಿತ ನಡೆಸುತ್ತಿದ್ದ ಅಹಲ್ಯಾಬಾಯಿ, ಪೂಜೆ-ಪುನಸ್ಕಾರಗಳ ನಂತರವೇ ಸಸ್ಯಾಹಾರ ಸೇವಿಸುವ ಅತ್ಯಂತ ಸರಳ ಜೀವನ ನಡೆಸುತ್ತಿದ್ದರು. ನರ್ಮದೆಯ ತಟದಲ್ಲಿ ಮಾಹೇಶ್ವರವನ್ನು ರಾಜಧಾನಿಯಾಗಿಸಿ ಇಂದೋರನ್ನು ಆರ್ಥಿಕ ಕೇಂದ್ರವಾಗಿ ಬೆಳೆಸಿದರು. ಬುರ್ಹಾನ್ಪುರದ ನೇಕಾರರಿಗೆ ಆಶ್ರಯ ನೀಡಿ ಪ್ರಸಿದ್ಧ ‘ಮಾಹೇಶ್ವರಿ ಸೀರೆ’ಗಳ ಉದ್ಯಮಕ್ಕೆ ನಾಂದಿ ಹಾಡಿದರು. ಆಡಳಿತ ಸುಗಮಗೊಳಿಸಲು ಮಹೇಶ್ವರದಿಂದ ಪುಣೆಯವರೆಗೆ 20 ಹಳ್ಳಿಗಳ ಮೂಲಕ 34 ಜೋಡಿ ಅಂಚೆ ಅಣ್ಣಂದಿರ ದಕ್ಷ ವ್ಯವಸ್ಥೆಯನ್ನು ರೂಪಿಸಿದರು — ಇದು ಪ್ರಜೆಗಳ ಸಮಸ್ಯೆಗಳ ತ್ವರಿತ ಪರಿಹಾರಕ್ಕೂ ಪೇಶ್ವೆ ದರ್ಬಾರ್ನೊಂದಿಗೆ ನಿರಂತರ ಸಂಪರ್ಕಕ್ಕೂ ಅನುಕೂಲಿಸಿತು.
ಮಕ್ಕಳಿಲ್ಲದ ವಿಧವೆಯರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದ ಸಾಂಪ್ರದಾಯಿಕ ಕಾನೂನನ್ನು ರದ್ದುಗೊಳಿಸಿ ಅಹಲ್ಯಾಬಾಯಿ ಜನರ ಮನ ಗೆದ್ದರು. ರಾಜ್ಯದ ಬೊಕ್ಕಸ ಹಾಗೂ ಕುಟುಂಬದ ಆದಾಯ-ವೆಚ್ಚವನ್ನು ಪ್ರತ್ಯೇಕವಾಗಿರಿಸಿ, ಸಾರ್ವಜನಿಕ ಸಂಪತ್ತನ್ನು ವೈಯಕ್ತಿಕ ಭೋಗಕ್ಕೆ ಬಳಸದ ಈ ರಾಣಿ ಇಂದಿನ ಆಡಳಿತಗಾರರಿಗೂ ಮಾದರಿ.
ಅಹಲ್ಯಾಬಾಯಿ ಹೋಳ್ಕರ್ ಅವರ ಆಡಳಿತ ಕಾಲ ಹಿಂದೂ ಪುನರುತ್ಥಾನದ ಸುವರ್ಣಯುಗವಾಗಿತ್ತು — ಮತ್ತು ಒಬ್ಬ ಸ್ತ್ರೀ ಸ್ಥೈರ್ಯ, ಶ್ರದ್ಧೆ ಹಾಗೂ ಧರ್ಮನಿಷ್ಠೆಯಿಂದ ಇತಿಹಾಸವನ್ನೇ ಬದಲಿಸಬಲ್ಲಳು ಎಂಬುದಕ್ಕೆ ಅವರ ಜೀವನ ಶಾಶ್ವತ ನಿದರ್ಶನ.
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #ahalyabai #ahalyabaiholkar #ahalyabaiholkarjayanti #ahalyabaiholkarjayanthi







