• August 28, 2026
  • RP
  • 0

On the Birth Anniversary of DVG, the Author of the Kagga Who Said, “Become One Among All”.

Among the poetic lines that remain forever etched, unfading, in the hearts of lovers of the Kannada language, verses such as “Leaving behind all that exists, for that which does not exist…”, “Become one among all, Mankuthimma”, and “Remembering Hari, march forward, become immortal in this mortal world, Mankuthimma” are exceptionally meaningful. Is it even possible to write about D. V. Gundappa, the author of the Kagga, without recalling Mankuthimmana Kagga — that towering work which conveys the essence of the Bhagavad Gita in simple language usable even in everyday life? Even if one were to attempt it, it would not do him justice.

ಎಲ್ಲರೊಳಗೊಂದಾಗು ಎಂದ ಕಗ್ಗದ ಕರ್ತೃ ಡಿವಿಜಿಯವರ ಜನ್ಮೋತ್ಸವದ ಹೊತ್ತಿನಲ್ಲಿ… ನಮನಗಳು!

ಕನ್ನಡ ಭಾಷಾ ಪ್ರೇಮಿಗಳ ಮನದಲ್ಲಿ ಸದಾ ಅಚ್ಚಳಿಯದೇ ಉಳಿದಿರುವ ಕಾವ್ಯಸಾಲುಗಳಲ್ಲಿ “ಇರುವುದೆಲ್ಲವ ಬಿಟ್ಟು ಇರದುದರ…”, “ಎಲ್ಲರೊಳಗೊಂದಾಗು ಮಂಕುತಿಮ್ಮ”, “ಹರಿಯ ನೆನೆದು ಮುನ್ನಡೆಯು ಮರ್ತ್ಯದೊಳು ಅಮರವಾಗು ಮಂಕುತಿಮ್ಮ” ಮುಂತಾದವು ಅತ್ಯಂತ ಅರ್ಥಪೂರ್ಣವಾದವು. ದೈನಂದಿನ ಜೀವನದಲ್ಲೂ ಬಳಸುವಂತಹ, ಸರಳ ಭಾಷೆಯಲ್ಲಿ ಭಗವದ್ಗೀತಾಸಾರ ಹೇಳುವ ಮೇರು ಕೃತಿಯಾಗಿರುವ ಮಂಕುತಿಮ್ಮನ ಕಗ್ಗವ ನೆನಯದೆಯೇ, ಕಗ್ಗದ ಕರ್ತೃ, ಡಿ. ವಿ. ಗುಂಡಪ್ಪನವರ ಬಗೆಗೆ ಬರೆಯಲು ಸಾಧ್ಯವೇ? ಒಂದೊಮ್ಮೆ ಬರೆದರೂ ಅದು ನ್ಯಾಯಸಮ್ಮತವಾಗದು.

‘ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು’ ಮುಂತಾದ ಹಲವು ಸುಂದರ, ಅರ್ಥಗರ್ಭಿತ ಅಮರವಾಣಿಯ ಒಡೆಯ, ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ, ಅಂದರೆ ನಮ್ಮ ಪ್ರಿಯ ಸಾಹಿತಿ ಡಿವಿಜಿ! ಡಿವಿಜಿಯವರ ಹೆಸರು ಕೇಳಿದಾಗ ಕನ್ನಡಿಗರ ಮನಸ್ಸಿನಲ್ಲಿ ಮೊದಲು ಮೂಡುವುದು “ಮಂಕುತಿಮ್ಮನ ಕಗ್ಗ”. ಜೀವನದ ಸಂಕೀರ್ಣ ಪ್ರಶ್ನೆಗಳಿಗೆ ಸರಳವಾದ ಆದರೆ ಗಾಢವಾದ ಉತ್ತರಗಳನ್ನು ನೀಡುವ ಕೃತಿಯಿದು.

ಅವರು ಈ ಯುಗದ ದಾರಿದೀಪದಂತೆ ಬೆಳಗುವ ಮಹಾನ್ ಚಿಂತಕ. 1887ರ ಮಾರ್ಚ್ 17ರಂದು ಜನಿಸಿದ ಈ ಮಹನೀಯರು ಕವಿ, ತತ್ತ್ವಚಿಂತಕ, ಪತ್ರಕರ್ತ, ರಾಷ್ಟ್ರಚೇತನ ಹಾಗೂ ಸಮಾಜಸೇವಕ – ಈ ಎಲ್ಲ ರೂಪಗಳಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದವರು.

ಕಗ್ಗದ ಒಂದು ಪದ್ಯವು ಜೀವನಧರ್ಮವನ್ನು ಎಷ್ಟು ಸರಳವಾಗಿ ಹೇಳುತ್ತದೆ…

ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು
ಕಲ್ಲಾಗು ಕಷ್ಟಗಳ ವಿಧಿ ಮಳೆಯ ಸುರಿಸೆ
ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ
ಎಲ್ಲರೊಳಗೊಂದಾಗು – ಮಂಕುತಿಮ್ಮ

ಇದು ಕೇವಲ ಕಾವ್ಯವಲ್ಲ; ಬದುಕನ್ನು ಹೇಗೆ ನಡೆಸಬೇಕು ಎಂಬ ಜೀವನದ ಮಾರ್ಗದರ್ಶನ. ಕಗ್ಗದ ಪ್ರತಿಯೊಂದು ಪದ್ಯವೂ ಒಬ್ಬ ಮಿತ್ರನಂತೆ ನಮ್ಮ ಜೊತೆ ನಡೆಯುತ್ತದೆ. ಮನಸ್ಸು ಕುಗ್ಗಿದಾಗ ಧೈರ್ಯ ಕೊಡುತ್ತದೆ, ಗೊಂದಲ ಬಂದಾಗ ದಾರಿತೋರಿಸುತ್ತದೆ. ಅವರನ್ನು ನೆನೆಯುವಾಗ ನಮ್ಮ ಮನದಲ್ಲಿ ಮೂಡುವುದು ಕೇವಲ ಗೌರವವಲ್ಲ; ಅದು ಒಂದು ಕೃತಜ್ಞತಾ ಭಾವ.

ಶತಾವಧಾನಿ ಆರ್. ಗಣೇಶ್ ಅವರು ಹೇಳುವಂತೆ, “ಕಗ್ಗವು ಕೇವಲ ಕವಿತೆಗಳ ಸಂಕಲನ ಅಲ್ಲ; ಅದು ಬದುಕಿನ ದಾರ್ಶನಿಕ ಸಂವಾದ.” ಡಿವಿಜಿಯವರು ಒಬ್ಬ ಉತ್ತಮ ಕವಿ ಮಾತ್ರವಲ್ಲದೇ, ಅವರು ಸಾರ್ವಜನಿಕ ಜೀವನದಲ್ಲಿ ಅಪಾರ ಪರಿಶ್ರಮ ಮಾಡಿದ ಚಿಂತಕರು. ಪತ್ರಿಕೋದ್ಯಮದ ಮೂಲಕ ಸಮಾಜಮುಖೀ ವಿಚಾರಗಳನ್ನು ವಿಶ್ಲೇಷಿಸಿ ಜನಜಾಗೃತಿ ಮೂಡಿಸುವ ಸಲುವಾಗಿ, ‘ಸೂರ್ಯೋದಯ ಪ್ರಕಾಶಿಕಾ’, ‘ಮೈಸೂರು ಸ್ಟ್ಯಾಂಡರ್ಡ್’, ‘ಮೈಸೂರು ಟೈಮ್ಸ್’ ಮೊದಲಾದ ಪತ್ರಿಕೆಗಳೊಂದಿಗೆ ಅವರ ಪತ್ರಿಕಾ ಜೀವನವೂ ಸಾಗಿತು. ನಂತರದ ವರ್ಷಗಳಲ್ಲಿ ‘ಕರ್ನಾಟಕ’ ಎಂಬ ಪತ್ರಿಕೆಯನ್ನು ಆರಂಭಿಸಿ ಸಾರ್ವಜನಿಕ ವಿಚಾರಗಳನ್ನು ಪ್ರಾಮಾಣಿಕವಾಗಿ ಚರ್ಚಿಸುವ ವೇದಿಕೆಯಾಗಿಸಿದರು. ಸಾಹಿತ್ಯ ಮತ್ತು ಸಮಾಜ, ಈ ಎರಡೂ ಕ್ಷೇತ್ರಗಳು ಡಿವಿಜಿಯವರಿಗೆ ಎಂದಿಗೂ ಬೇರೆ ಬೇರೆ ಎನಿಸುತ್ತಿರಲಿಲ್ಲ. “ಸತ್ಯಾನ್ವೇಷಣೆ ಶಾಸ್ತ್ರ; ಹೃತ್ತೋಷಣೆ ಕಾವ್ಯ”, ಅಂದರೆ ಜ್ಞಾನ ಮತ್ತು ಕಾವ್ಯಗಳು ಮನಸ್ಸು ಮತ್ತು ಬುದ್ಧಿಗಳ ದಾಂಪತ್ಯವಿದ್ದಂತೆ ಎಂಬಂತಹಾ ಸಮನ್ವಯದ ಚಿಂತನೆ ಅವರದ್ದಾಗಿತ್ತು.

ರಾಷ್ಟ್ರಜೀವನದ ವಿಚಾರಗಳಲ್ಲಿ ಡಿವಿಜಿಯವರಿಗೆ ಪ್ರೇರಣೆ ನೀಡಿದ ಮಹನೀಯರಲ್ಲಿ ಗೋಪಾಲಕೃಷ್ಣ ಗೋಖಲೆ ಪ್ರಮುಖರು. ಗೋಖಲೆಯವರ “ಸಾರ್ವಜನಿಕ ಜೀವನವನ್ನು ಧರ್ಮಮಯವನ್ನಾಗಿಸಬೇಕು” ಎಂಬ ಆದರ್ಶವು ಡಿವಿಜಿಯವರ ಜೀವನವನ್ನು ಮುನ್ನಡೆಸಿತು. ಈ ಪ್ರೇರಣೆಯಿಂದಲೇ ಅವರು ಸಮಾಜದಲ್ಲಿ ಚಿಂತನೆ ಮತ್ತು ಸಾರ್ವಜನಿಕ ಶಿಕ್ಷಣವನ್ನು ಬೆಳೆಸಲು 1915ರ ಸುಮಾರಿನಲ್ಲಿ ಸೋಷಿಯಲ್ ಸರ್ವೀಸ್ ಲೀಗ್ ಸ್ಥಾಪಿಸಿದರು. ನಂತರ ಅದು ಬೆಳೆಯುತ್ತಾ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ (Gokhale Institute of Public Affairs – GIPA) ಆಗಿ ರೂಪಾಂತರಗೊಂಡಿತು. ಈ ಸಂಸ್ಥೆ ಜನರಲ್ಲಿ ಸಾರ್ವಜನಿಕ ವಿಚಾರಗಳ ಬಗೆಗೆ ಜಾಗೃತಿ ಮೂಡಿಸುವ ಮಹತ್ವದ ವೇದಿಕೆಯಾಗಿ ಇಂದಿಗೂ ಸಕ್ರಿಯವಾಗಿದೆ.

ಶಾಸನ ಪರಿಷತ್ತಿನ ಸದಸ್ಯರಾಗಿ, ಮೈಸೂರು ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ, ಬಟ್ಲರ್ ಆಯೋಗ ಮತ್ತು ಕ್ರಿಪ್ಸ್ ಆಯೋಗಕ್ಕೆ ಮನವಿ ಸಲ್ಲಿಸಿದ ರಾಷ್ಟ್ರ ತಪಸ್ವಿ – ಡಿವಿಜಿ ಅವರ ಸಾರ್ವಜನಿಕ ಜೀವನ ಅವರ ಸಾಹಿತ್ಯ ಕಾರ್ಯದಷ್ಟೇ ಪ್ರಭಾವಶಾಲಿ. ಸರ್ ಎಂ. ವಿಶ್ವೇಶ್ವರಯ್ಯ ಅವರಂಥ ದಿಗ್ಗಜರ ಕಾರ್ಯದರ್ಶಿಯಾಗಿ ದುಡಿದ ಅವರು, ಪದ್ಮಭೂಷಣ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ವಿನಮ್ರರಾಗಿ ಹೇಳಿದ್ದು: ‘ನನಗೆ ಸಂದ ಅತ್ಯಂತ ದೊಡ್ಡ ಪ್ರಶಸ್ತಿ ಜನಾದರಣೆ’ ಎಂದು. ಇಂಥದೊಂದು ನಿರಭಿಮಾನ, ನಿರ್ಮಲ ಭಾವವೇ ಡಿವಿಜಿಯವರನ್ನು ಒಬ್ಬ ರಾಜರ್ಷಿಯನ್ನಾಗಿಸಿತು.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಚಿಂತನೆ ಮತ್ತು ರಾಷ್ಟ್ರೋತ್ಥಾನ ಪರಿಷತ್ತಿನ ಧ್ಯೇಯೋದ್ದೇಶಗಳ ನಡುವೆ ಸಾಮ್ಯ ಹಾಗೂ ಸಾಮರಸ್ಯವನ್ನು ಕಾಣಬಹುದು. ಎರಡೂ ಸಂಸ್ಥೆಗಳ ಹಿಂದಿರುವುದು ಭಾರತೀಯ ಸಮಾಜದಲ್ಲಿ ರಾಷ್ಟ್ರಚೇತನ, ಶಿಕ್ಷಣ ಮತ್ತು ಸಂಸ್ಕಾರಗಳನ್ನು ಬೆಳೆಸುವುದು ಮತ್ತು ಅದರ ಮೂಲಕ ಜನಸೇವೆ. ಡಿವಿಜಿಯವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ (GIPA) ಮತ್ತು ರಾಷ್ಟ್ರೋತ್ಥಾನ ಪರಿಷತ್ ಎರಡೂ ಸಮಾಜಮುಖಿ ಮತ್ತು ಬೌದ್ಧಿಕ ಜಾಗೃತಿಯ ಕೆಲಸಗಳಲ್ಲಿ ಒಂದೇ ರೀತಿಯ ತತ್ತ್ವ , ಆದರ್ಶ ಮತ್ತು ಆಶಯಗಳನ್ನು ಹೊಂದಿವೆ.

ರಾಷ್ಟ್ರೋತ್ಥಾನ ಪರಿಷತ್ ಹೊರತಂದ ಪ್ರಸಿದ್ಧ “ಭಾರತ-ಭಾರತಿ” ಪುಸ್ತಕ ಮಾಲಿಕೆಯ ಮೊದಲ ಪುಸ್ತಕವಾದ ಕನಕದಾಸರು ಕೃತಿಗೆ ಡಿ.ವಿ. ಗುಂಡಪ್ಪನವರೇ ಮುನ್ನುಡಿ ಬರೆದಿದ್ದರು. ಇದು ಪರಿಷತ್ತಿನ ಸಾಹಿತ್ಯಿಕ ಚಟುವಟಿಕೆಗಳಿಗೆ ಅವರು ನೀಡಿದ ಬೆಂಬಲಕ್ಕೆ ಸಾಕ್ಷಿಯಾಗಿದೆ. ಡಿವಿಜಿಯವರ ಆಪ್ತ ಶಿಷ್ಯರಾದ ಮತ್ತು ಅವರ ಗೀತಾತಾತ್ಪರ್ಯ ವಿಚಾರಗಳನ್ನು ಮುಂದುವರಿಸುತ್ತಿರುವ ಹಿರಿಯ ವಿದ್ವಾಂಸ ಡಾ. ಎಸ್. ಆರ್. ರಾಮಸ್ವಾಮಿಯವರು ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾಗಿ, ಉತ್ಥಾನ ಮಾಸ ಪತ್ರಿಕೆಯ ಗೌರವ ಸಂಪಾದಕರಾಗಿ ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಎಸ್. ಆರ್. ರಾಮಸ್ವಾಮಿ ಅವರು ತಮ್ಮ ‘ಸಾಲು ದೀಪಗಳು’ ಕೃತಿಯಲ್ಲಿ ವಿಶ್ಲೇಷಿಸಿರುವಂತೆ, ಡಿವಿಜಿ ಅವರ ಪಾಂಡಿತ್ಯ-ಸಹೃದಯತೆ, ದಾರ್ಶನಿಕತೆ-ಲೌಕಿಕಾಸಕ್ತಿ, ವೈಚಾರಿಕತೆ-ಪರಂಪರಾಶ್ರದ್ಧೆ, ಇವೆಲ್ಲ ಗುಣಗಳ ಸಮನ್ವಯವನ್ನು ಅವರಂತೆ ಮೆರೆದವರು ಕನ್ನಡ ಸಾಹಿತ್ಯದಲ್ಲಿ ವಿರಳ.

ಸಂತ ಕುಸುಮಾಂಜಲಿ, ನಿವೇದನ, ಉಮರನ ಒಸಗೆ, ಶ್ರೀರಾಮಪರೀಕ್ಷಣ, ಶ್ರೀಕೃಷ್ಣಪರೀಕ್ಷಣ, ಜ್ಞಾಪಕಚಿತ್ರಶಾಲೆ ಮೊದಲಾದ ಅನೇಕ ಕೃತಿಗಳು ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿವೆ. ರಾಜಕೀಯ, ಸಂಸ್ಕೃತಿ, ದಾರ್ಶನಿಕತೆ, ಅಧ್ಯಾತ್ಮ – ಈ ಎಲ್ಲ ಕ್ಷೇತ್ರಗಳಲ್ಲಿ ಅವರ ಚಿಂತನೆ ಹರಿದಿತ್ತಾದರೂ, ಅವರ ಸಾಹಿತ್ಯದ ಕೇಂದ್ರಬಿಂದು ಒಂದೇ – ಮಾನವನ ಮನಸ್ಸು ಹಾಗೂ ಬುದ್ಧಿಗಳನ್ನು ಉನ್ನತ ವಿಚಾರಗಳೆಡೆಗೆ ಹೊರಳಿಸಿ ಅವರ ಜೀವನವನ್ನು ಉತ್ತಮಗೊಳಿಸುವುದು.

ಜ್ಞಾಪಕ ಚಿತ್ರಶಾಲೆಯ ಕಥೆಗಳು ಕಾಲಮ್ ಮೀರಿ ಜೀವಂತವಾಗಿ ನಿಲ್ಲುತ್ತವೆ. ಅವರ ಮಾತಿನಲ್ಲೇ ಹೇಳುವುದಾದರೆ:

ಒಲ್ಲೆನೆನದಿರು ಬಾಳನ್, ಒಲವದೇನೆನ್ನದಿರು

ಉಲ್ಲಾಸಕೆಡೆಮಾಡು ನಿನ್ನಿನಾದನಿತು

ನಿಲ್ಲು ಕೆಚ್ಚೆದೆಯಿಂದಲನ್ಯಾಯಗಳನಳಿಸೆ

ಎಲ್ಲಕಂ ಸಿದ್ಧನಿರು –  ಮಂಕುತಿಮ್ಮ||

ರಾಷ್ಟ್ರಕಾರ್ಯಕ್ಕೆ ಸಿದ್ಧರಾಗಿ, ಅನ್ಯಾಯಗಳ ವಿರುದ್ಧ ಎದ್ದುನಿಲ್ಲಿ, ಜಗತ್ತಿಗೆ ಕಿಂಚಿತ್ ಒಳಿತು ಮಾಡಿ – ಎಂಬುದು ಇದರ ಸಂದೇಶ.

 

ಮರ್ತ್ಯವೆಂದಿಹ ಈ ಜಗವ ತೃಣದಂತೆ ಕಾಣದಿರು

ಕರ್ತವ್ಯ ಕರ್ಮಗಳ ನೀ ನಿರ್ವಹಿಸು

ಸರ್ತಿ ಸರ್ತಿಗೆ ಹರಿಯ ನೆನೆದು ಮುನ್ನಡೆಯು

ಮರ್ತ್ಯದೊಳು ಅಮರವಾಗು — ಮಂಕುತಿಮ್ಮ||

“ಈ ಜಗತ್ತು ಹೇಗೂ ನಾಶವಾಗುವುದು” ಎಂದು ಕರ್ತವ್ಯ ತಪ್ಪಿಸಿಕೊಳ್ಳಬೇಡ. ನಶ್ವರ ಜಗತ್ತಿನಲ್ಲೂ ನಿನ್ನ ಜವಾಬ್ದಾರಿ ನಿಭಾಯಿಸು. ಭಗವಂತನ ನೆನಕೆಯಿಂದ ಮುನ್ನಡೆ. ಹೀಗೆ ಶ್ರದ್ಧೆ-ಕರ್ತವ್ಯ-ಭಕ್ತಿಯಿಂದ ಬಾಳಿದಾಗ ನಶ್ವರ ದೇಹ ಹೋದರೂ ನಿನ್ನ ಕರ್ಮ ಅಮರವಾಗುತ್ತದೆ.

ಇಂದು ಈ ಜಗತ್ತು ಅವಿರತ ಯುದ್ಧ ಮಾಡುತ್ತಾ, ಜನ-ಜಾನುವಾರುಗಳ ಜೀವವು ದುರ್ಭರ, ದುಃಖಕರವಾಗಿದ್ದಾಗಲೂ ನಮಗೆ ಕಷ್ಟಗಳನ್ನೆದುರಿಸುವ, ಕರ್ತವ್ಯ ಲೋಪವಾಗದಂತೆ ದುಡಿಯುವ ಸ್ಫೂರ್ತಿ ತುಂಬುವ ಅದ್ಭುತ ಸಾಹಿತ್ಯ ಕರುಣಿಸಿದ ಆ ರಾಜರ್ಷಿ ಡಿ. ವಿ. ಗುಂಡಪ್ಪನವರ ಮಹಾಚೇತನಕ್ಕೆ ನಮೋನ್ನಮಃ.

 

Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #dvg #dvgundappa #kagga #mankutimmanakagga #gipa

Leave a Reply

Your email address will not be published. Required fields are marked *