Knowledge does not come merely from reading books. It is the one who has understood the meaning of the two syllables “love” who is the true scholar. – A couplet by Sant Kabirdas, the foundation of the Bhakti path
In the Bhakti tradition of the sacred land of India, many poet-sage-saints, yogis, munis, and great ascetics have lived their lives as embodiments of wisdom, spreading profound truths in simple words, and have shown the way to cross the ocean of worldly existence in the boat called devotion!
In the holy city of Kashi, the abode of liberation, on the auspicious day of Jyeshtha Purnima around 1398, a weaver named Neeru had gone with his wife Neema to a pond called Lahar Talav. There they saw an infant lying on a lotus leaf. The childless couple took the infant home with them. When they asked the local Qazi to give the child a good name, he opened the Quran and exclaimed, “This child’s name is Kabir” (in Arabic, Kabir means “great”).
ಸಂತ ಕಬೀರದಾಸರ ದ್ವಿಪದಿ, ಭಕ್ತಿಪಂಥದ ತಳಹದಿ: ಕೇವಲ ಪುಸ್ತಕ ಓದುವುದರಿಂದ ಜ್ಞಾನ ಬರುವುದಿಲ್ಲ. “ಪ್ರೇಮ” ಎಂಬ ಎರಡು ಅಕ್ಷರಗಳ ಅರ್ಥ ಅರಿತವನೇ ನಿಜವಾದ ಪಂಡಿತ.

ಪುಣ್ಯಭೂಮಿ ಭಾರತದ ಭಕ್ತಿ ಪರಂಪರೆಯಲ್ಲಿ ಅನೇಕ ಕವಿ-ಋಷಿ-ಸಂತರು, ಯೋಗಿ-ಮುನಿ-ಸಾಧುವರ್ಯರು, ಜ್ಞಾನ-ಅವತಾರಗಳಾಗಿ ಬಾಳಿ ಬದುಕಿ, ಆಳವಾದ ತತ್ತ್ವವನ್ನು ಸರಳ ಶಬ್ದಗಳಲ್ಲಿ ಬಿತ್ತರಿಸಿ, ಭವಸಾಗರವನ್ನು ಭಕ್ತಿಯೆಂಬ ದೋಣಿಯಲ್ಲಿ ದಾಟುವ ಪರಿಯನ್ನು ತಿಳಿಸಿ ಹೋಗಿದ್ದಾರೆ!
ಪುಣ್ಯ-ಮೋಕ್ಷನಗರಿ ಕಾಶಿಯಲ್ಲಿ, ಸುಮಾರು 1398ರ ಜ್ಯೇಷ್ಠ ಪೂರ್ಣಿಮೆಯ ಮಂಗಳ ದಿನದಂದು, ನೇಕಾರನಾಗಿದ್ದ ನೀರೂ ತನ್ನ ಪತ್ನಿ ನೀಮಾಳೊಂದಿಗೆ ಲಹರ್ ತಲಾವ್ ಎಂಬ ಕೆರೆಗೆ ಹೋಗಿದ್ದರು. ಕಮಲದೆಲೆಯ ಮೇಲೆ ಒಂದು ಶಿಶುವು ಮಲಗಿದ್ದುದನ್ನು ಕಂಡರು. ಮಕ್ಕಳಿಲ್ಲದ ಆ ದಂಪತಿ ತಮ್ಮ ಮನೆಗೆ ಆ ಶಿಶುವನ್ನು ಕರೆದೊಯ್ದರು. ಆ ಮಗುವಿಗೆ ಒಂದು ಒಳ್ಳೆಯ ಹೆಸರಿಡಬೇಕು ಎಂದು ತಮ್ಮ ಊರಿನಲ್ಲಿದ್ದ ಖಾಜಿಯನ್ನು ಕೇಳಿದಾಗ, ಆತನು ಕುರಾನ್ ಗ್ರಂಥವನ್ನು ತೆರೆದು, ‘ಈ ಮಗುವಿನ ಹೆಸರು ಕಬೀರ್’ ಎಂದು ಉದ್ಗರಿಸಿದ (ಅರಬ್ಬಿಯಲ್ಲಿ ಕಬೀರ್ ಎಂದರೆ ‘ಮಹಾನ್’ ಎಂದಾಗಿದೆ).
ವಾರಾಣಾಸಿಯ ವಾಸಿಯಾದರೂ, ಮನೆಯಲ್ಲಿ ಇಸ್ಲಾಮೀ ಸಂಸ್ಕಾರ; ಅಂತರಂಗದಲ್ಲಿ ಮಾತ್ರ ಸದಾ ರಾಮನಾಮದ ರಾಗ! ಇಂಥಾ ವಿರೋಧಾಭಾಸಗಳ ನಡುವೆ ಕಬೀರರ ಬದುಕು ಆರಂಭವಾಗಿತ್ತು. ಬಾಲ್ಯದಿಂದಲೇ ಅವರಿಗೆ ತಮ್ಮ ಮನೆಯ ವಾತಾವರಣ, ಮುಲ್ಲಾಗಳ ಬೋಧನೆಗಳಲ್ಲಿ ಮನಸ್ಸು ನಿಲ್ಲುತ್ತಿರಲಿಲ್ಲ. ಅವರ ಕಿವಿಗಳು ಕಾಶಿಯ ಮಂದಿರಗಳ ಗಂಟೆ ಸದ್ದಿಗೆ ಚುರುಕಾಗಿ, ಕಣ್ಣಗಳು ಅರಳಿ ‘ರಾಮ-ಹರಿ’ ನಾಮಗಳೇ ಹೃದಯವೀಣೆಯಿಂದ ಹೊಮ್ಮುತ್ತಿದ್ದವು!
ಪರಿವಾರದ ಮುಸ್ಲಿಂ ಜನರು ಆತನನ್ನು ‘ಧರ್ಮಭ್ರಷ್ಟ’ ಎಂದರೂ, ಕಬೀರರು ಮುಗುಳ್ನಕ್ಕು, ‘ಜಾತಿ-ಮತ ಕೇಳಬೇಡ ಸಾಧೂ, ಕರ್ಮ ನೋಡು ಕರ್ಮ’ ಎನ್ನುತ್ತಿದ್ದರು! ಕಬೀರರ ಮನದಾಳದಲ್ಲಿ ಮೊದಲಿಂದಲೂ ಒಂದು ತೀರ್ಮಾನವಾಗಿ ಹೋಗಿತ್ತು, ‘ಈ ಲೋಕದಲ್ಲಿ ನನ್ನ ಗುರು ಎಂಬುವರು ಯಾರಾದರೂ ಇದ್ದರೆ ಅವರು ಸ್ವಾಮೀ ರಾಮಾನಂದರು ಮಾತ್ರ’ ಎಂದು. ಆದರೆ ರಾಮಾನಂದ ಸ್ವಾಮಿಯವರು ಮುಸಲ್ಮಾನನಾದ ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸಲಿಕ್ಕಿಲ್ಲ ಎಂಬ ಭಯವೂ ಅವರನ್ನು ಕಾಡುತ್ತಿತ್ತು.
ಮನದೊಳಗೆ ತಾನು ಬಯಸಿದ ಗುರುಗಳನ್ನು ಕಾಣುವ ಹಂಬಲ ದಿನೇ ದಿನೇ ಬಲವಾಗಿ ಕಾಡುತ್ತಿರುವಾಗ ಒಂದು ದಿನ, ಗಂಗಾ ಸ್ನಾನಕ್ಕಾಗಿ ಸಾಗುವ ಹಾದಿಯಲ್ಲಿ ಬ್ರಾಹ್ಮೀಮುಹೂರ್ತದ ಮುಂಜಾವಿನ ಕತ್ತಲಲ್ಲಿ, ರಾಮಾನಂದ ಸ್ವಾಮಿಗಳು ತಮ್ಮ ಪಾದ ಇಡಬೇಕಾಗಿದ್ದ ಕಲ್ಲಿನ ಮೆಟ್ಟಿಲೊಂದರ ಮೇಲೆ ಕಬೀರರು ದಾರಿಗೆ ಅಡ್ಡವಾಗಿ ಮೈಚಾಚಿ ಮಲಗಿಬಿಟ್ಟರು. ರಾಮಾನಂದ ಸ್ವಾಮಿಗಳು ಎಂದಿನಂತೆ ಕತ್ತಲಿನಲ್ಲಿ ಮೆಟ್ಟಿಲಿಳಿದು ಬರುತ್ತಿರಲು, ಅರಿವಿಲ್ಲದೇ ಕಬೀರರ ಎದೆ ಮೇಲೆ ಪಾದವನ್ನೂರುತ್ತಲೇ ‘ರಾಮ! ರಾಮಾ!’ ಎಂಬ ಉದ್ಗಾರವನ್ನು ತೆಗೆದರು! ಅವರ ಭಕ್ತಿ, ತೇಜಸ್ಸು ಕಂಡ ರಾಮಾನಂದರು ಶಿಷ್ಯತ್ವವನ್ನು ಒಪ್ಪಿಕೊಂಡರು. ಅದಕ್ಕೆ ಸಂತೋಷಗೊಂಡ ಕಬೀರರು,
‘ಕಾಶೀ ಮೇ ಪ್ರಗಟ ಭಯೇ |
ರಾಮಾನಂದ ಚೇತಾಯೇ ||’
“ಕಾಶಿಯಲ್ಲಿ ಹುಟ್ಟಿದ್ದರೂ ನನ್ನ ಚೇತನವನ್ನು ಜಾಗೃತಗೊಳಿಸಿದ್ದು ರಾಮಾನಂದರು” ಎಂದು ಹಾಡಿದರು.
ಹಿಂದೀ ಸಾಹಿತ್ಯಕ್ಷೇತ್ರದಲ್ಲಿ ಕಬೀರರ ದೋಹೆಗಳಿಗೆ ಅತ್ಯುನ್ನತ ಸ್ಥಾನವಿದೆ. ಕಬೀರರು ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಮತ್ತು ಸರಳವಾಗಿ ಓದಿ ಅರ್ಥವಾಗುವಂತೆ, ಲೀಲಾಜಾಲವಾಗಿ ದೋಹೆಗಳನ್ನು (ದ್ವಿಪದಿ) ರಚಿಸಿದರು. ಇವರ ಭಾಷೆಯನ್ನು ಸಾಮಾನ್ಯವಾಗಿ ‘ಸಾಧುಕ್ಕರಿ’ ಅಥವಾ ‘ಖಿಚಡಿ ಭಾಷೆ’ ಎಂದು ಕರೆಯಲಾಗುತ್ತದೆ, ಏಕೆಂದರೆ ಇದರಲ್ಲಿ ಅವಧಿ, ಭೋಜಪುರಿ, ಬ್ರಜ್ ಮತ್ತು ಪಂಜಾಬಿ ಭಾಷೆಗಳ ಸುಂದರ ಸಮ್ಮಿಲನವನ್ನು ಕಾಣಬಹುದು. ಪಾಮರರ ಅರಿವಿಗೆ ಬಾರದ ಸಂಸ್ಕೃತದ ಗ್ರಂಥಗಳಲ್ಲಿದ್ದ ಉನ್ನತವಾದ, ಆದರೆ ಕಠಿಣ ಅಧ್ಯಾತ್ಮಿಕ ಸತ್ಯಗಳನ್ನು ಕಬೀರರು ತಮ್ಮ ಎರಡು ಸಾಲುಗಳ ದೋಹೆಗಳ ಮೂಲಕ ಜಗತ್ತಿಗೆ ಸಾರಿದರು! ಅವರ ಈ ಅದ್ಭುತ ವಚನಗಳ ಸಂಕಲನವೇ ‘ಬೀಜಕ್’ ಎಂಬ ಹೆಸರಿನಿಂದ ಪ್ರಸಿದ್ಧವಾಗಿರುವ ಒಂದು ಕೃತಿ.
ವಿಶೇಷವೆಂದರೆ, ಸಿಖ್ ಪಂಥದ ಪವಿತ್ರ ಗ್ರಂಥವಾದ ‘ಗುರುಗ್ರಂಥ ಸಾಹಿಬ್’ನಲ್ಲೂ ಕಬೀರರ ಅನೇಕ ದೋಹೆಗಳನ್ನು ಭಕ್ತಿ-ಗೌರವಪೂರ್ವಕವಾಗಿ ಅಳವಡಿಸಿಕೊಳ್ಳಲಾಗಿದೆ. ರವೀಂದ್ರನಾಥ ಠಾಕೂರ್ ಅಂತಹ ಮಹಾನ್ ಕವಿಗಳು ಕಬೀರರ ನೂರು ಪ್ರಮುಖ ಪದ್ಯಗಳನ್ನು ಇಂಗ್ಲಿಷ್‌ಗೆ ಅನುವಾದಿಸಿ ಜಗತ್ತಿಗೆ ಪರಿಚಯಿಸಿದ್ದಾರೆ.
ಕಬೀರರ ಕೆಲವು ಅತ್ಯಂತ ಜನಪ್ರಿಯ ದೋಹೆಗಳು…
ಗುರು ಗೋಬಿಂದ್ ದೋವೂ ಖಡೆ, ಕಾಕೆ ಲಾಗೂ ಪಾಯ್ |
ಬಲಿಹಾರಿ ಗುರು ಆಪ್ನೆ, ಗೋಬಿಂದ್ ದಿಯೋ ಬತಾಯ್ ||
ಗುರು ಮತ್ತು ಗೋವಿಂದ ಇಬ್ಬರೂ ಎದುರು ನಿಂತರೆ, ಮೊದಲು ಗುರುವಿನ ಪಾದಗಳಿಗೆ ನಮಸ್ಕರಿಸುತ್ತೇನೆ. ಏಕೆಂದರೆ, ಭಗವಂತನನ್ನು ತೋರಿಸಿದವರೂ, ತಲುಪುವ ದಾರಿಯನ್ನು ತಿಳಿಸಿದವರೂ ಗುರುವೇ.
ಕಲ್ ಕರೇ ಸೋ ಆಜ್ ಕರ್, ಆಜ್ ಕರೇ ಸೋ ಅಬ್ |
ಪಲ್-ಮೇ ಪ್ರಳಯ್ ಹೋಯೇಗೀ, ಬಹುರೀ ಕರೇಗೋ ಕಬ್ ||
ನಾಳೆಯ ಕೆಲಸವನ್ನು ಇಂದೇ, ಇಂದಿನ ಕೆಲಸವನ್ನು ಈಗಲೇ ಮಾಡು. ಸಮಯ ಕೈಮೀರಿದ ಮೇಲೆ ಕೆಲಸ ಮಾಡುವುದಾದರೂ ಯಾವಾಗ?
ಬುರಾ ಜೋ ದೇಖನ್ ಮೈ ಚಲಾ, ಬುರಾ ನ ಮಿಲಿಯಾ ಕೋಯ್ |
ಜೋ ದಿಲ್ ಖೋಜಾ ಆಪ್ನಾ, ಮುಝ್‌ಸೇ ಬುರಾ ನ ಕೋಯ್ ||
ಕೆಟ್ಟವರನ್ನು ಹುಡುಕಲು ಹೊರಟೆ, ಕೆಟ್ಟವರೇ ಕಾಣದಾದರು, ಯಾವಾಗ ನಾನು ನನ್ನ ಒಡಲಾಳವನ್ನು ಇಣುಕಿ ನೋಡಿಕೊಂಡೆನೋ, ನನಗಿಂತ ಕೆಟ್ಟವರಾರೂ ಇಲ್ಲ ಎಂಬುದ ಅರಿತೆ ನಾನಾಗ! ಇತರರಲ್ಲಿ ದೋಷ ಹುಡುಕುವ ಮೊದಲು ತನ್ನೊಳಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬ ಸಂದೇಶವನ್ನು ಈ ದೋಹೆ ಸಾರುತ್ತದೆ.
ಪೋಥಿ ಪಢಿ, ಪಢಿ ಜಗ ಮುಆ, ಪಂಡಿತ ಭಯಾ ನ ಕೋಯ |
ಢಾಈ ಆಖರ ಪ್ರೇಮ ಕಾ, ಪಢೇ ಸೋ ಪಂಡಿತ ಹೋಯ ||
ಕೇವಲ ಪುಸ್ತಕ ಓದುವುದರಿಂದ ಜ್ಞಾನ ಬರುವುದಿಲ್ಲ. ‘ಪ್ರೇಮ’ ಎಂಬ ಎರಡಕ್ಷರಗಳ ಅರ್ಥ ಅರಿತವನೇ ನಿಜವಾದ ಪಂಡಿತ.
ಸಂತ ಕಬೀರರ ಜೀವನವು ಕರ್ಮ, ಜ್ಞಾನ ಮತ್ತು ಭಕ್ತಿಯ ಸಮ್ಮಿಲನವಾಗಿತ್ತು. ಜಾತಿ ಪದ್ಧತಿ, ಆಡಂಬರ, ಡಂಭಾಚಾರ, ಕಂದಾಚಾರಗಳನ್ನು ವಿರೋಧಿಸಿ, ನಿರ್ಗುಣ ಭಕ್ತಿ, ಗುರು ಮಹಿಮೆ ಮತ್ತು ಸರ್ವಧರ್ಮ ಸಮಭಾವವನ್ನು ಸಾರಿದರು. ರಾಮ ಮತ್ತು ರಹೀಮ ಇಬ್ಬರೂ ಒಂದೇ ಎಂದು ನಂಬಿ ಹಾಗೆಯೇ ಬದುಕಿದರು.
ಕಾಶಿಯಲ್ಲೇ ಮರಣ ಹೊಂದಿದರೆ ಮಾತ್ರ ಮೋಕ್ಷ ಎಂಬ ಅಂದಿನ ಕಾಲದಲ್ಲಿ ಬಲವಾಗಿ ಬೇರೂರಿದ್ದ ನಂಬಿಕೆಯನ್ನು ಖಂಡಿಸಲು ಮಗಹರ್‌ನಲ್ಲಿ ಪ್ರಾಣತ್ಯಾಗ ಮಾಡಿ ಸಮಾಜಕ್ಕೆ ಹೊಸ ದಿಕ್ಕು ತೋರಿದ ಕ್ರಾಂತಿಕಾರಿ ಸಂತರವರು! ಕಬೀರರ ಮರಣದ ನಂತರ ಹಿಂದೂ-ಮುಸ್ಲಿಂ ಇಬ್ಬರೂ ಅವರ ದೇಹದ ಮೇಲೆ ಹಕ್ಕು ಸಾಧಿಸಿ ಹೋರಾಡಿದಾಗ ಅಲ್ಲಿ ಹೂವಿನ ರಾಶಿ ಮಾತ್ರ ಕಂಡಿತು ಎಂಬ ಪವಾಡ ಕಥೆಯೂ ಇದೆ, ತನ್ಮೂಲಕ ಸತ್ತ ಮೇಲೂ ಅವರ ಸರ್ವಧರ್ಮ ಸಮಭಾವದ ಅಂತಿಮ ಸಂಕೇತವನ್ನವರು ಬಿಟ್ಟು ಹೋದುದು ಒಂದು ರೋಚಕ ವಿಷಯವಾಗಿದೆ!
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #kabir #santkabir #santkabirdas #kabirdohe







