• June 26, 2026
  • RP
  • 0

In the heart of Bankim Chandra, author of the 150-year-old “Vande Mataram,” burned a fervent concern and contemplation for India’s welfare.

The history of India’s freedom struggle is rich, filled with the unforgettable contributions of thousands of talented great souls and lives of sacrifice. While some of the nation’s revolutionary heroes fought to win freedom through courage, adventure and valour, most of the other freedom fighters accomplished the great task of awakening the nation’s spirit through gentler, peaceable paths — writing, proclamations, condemnation, satyagraha and movements — sounding the trumpet of the freedom struggle, and thereby fulfilled their purpose.

Today (June 27) is the birthday of Bankim Chandra Chattopadhyay, who occupies a foremost place among such wise and great thinkers, and who gave the world “Vande Mataram,” India’s national song.

150ರ ‘ವಂದೇ ಮಾತರಂ’ನ ಬಂಕಿಮಚಂದ್ರರ ಅಂತರಂಗದಲ್ಲಿತ್ತು ಜಾಜ್ವಲ್ಯಮಾನ ಭಾರತಕಲ್ಯಾಣ ಚಿಂತೆ-ಚಿಂತನೆ

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವು ಸಾವಿರಾರು ಪ್ರತಿಭಾಶಾಲಿ ಮಹಾನುಭಾವರ, ತ್ಯಾಗಜೀವಿಗಳ ಅವಿಸ್ಮರಣೀಯವಾದ ಕೊಡುಗೆಗಳಿಂದ ತುಂಬಿ ಶ್ರೀಮಂತವಾಗಿದೆ. ದೇಶದ ಕೆಲವು ಕ್ರಾಂತಿಕಾರಿ ಕಲಿಗಳು ಧೈರ್ಯ, ಸಾಹಸ, ಶೌರ್ಯಗಳ ಸುಯೋಗದಿಂದ ಸ್ವಾತಂತ್ರ್ಯ ಸಂಪಾದಿಸಲು ಸೆಣಸಿದರೆ, ಮಿಕ್ಕ ಬಹುತೇಕ ಹೋರಟಗಾರರು ಮೃದು-ಸಾಧು ಮಾರ್ಗಗಳಾದ ಬರವಣಿಗೆ, ಘೋಷಣೆ, ಖಂಡನೆ, ಸತ್ಯಾಗ್ರಹ, ಚಳವಳಿಗಳ ದ್ವಾರಾ ಸ್ವಾತಂತ್ರ್ಯ ಸಂಗ್ರಾಮದ ಕಹಳೆಯೂದಿ, ರಾಷ್ಟ್ರದ ಆತ್ಮವನ್ನು ಜಾಗೃತಗೊಳಿಸುವ ಮಹತ್ಕಾರ್ಯ ಮಾಡಿ ಕೃತಕೃತರಾಗಿದ್ದಾರೆ.

ಅಂತಹ ಪ್ರಾಜ್ಞ ಮಹಾಚಿಂತಕರಲ್ಲಿ ಅಗ್ರಗಣ್ಯ ಸ್ಥಾನವನ್ನು ಅಲಂಕರಿಸಿ, ಭಾರತದ ರಾಷ್ಟ್ರೀಯ ಗೀತೆಯಾದ ‘ವಂದೇ ಮಾತರಂ’ನ್ನು ಲೋಕಕ್ಕೆ ನೀಡಿದ ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಜನ್ಮದಿನವಿಂದು (ಜೂನ್ 27).

1838ರ ಜೂನ್ 27ರಂದು, ಇಂದಿನ ಪಶ್ಚಿಮ ಬಂಗಾಳದ ಕಂಠಾಲಪಾರಾ ಎಂಬ ಊರಿನಲ್ಲಿ ಜನಿಸಿದ ಬಂಕಿಮಚಂದ್ರರು ಪ್ರತಿಭಾನ್ವಿತ ಬಾಲಕರಾಗಿದ್ದರು. ಕಲ್ಕತ್ತಾ ವಿಶ್ವವಿದ್ಯಾಲಯದ ಮೊದಲ ಪದವೀಧರರಲ್ಲಿ ಒಬ್ಬರಾಗಿದ್ದ ಅವರು ನಂತರ ಬ್ರಿಟಿಷ್ ಆಡಳಿತದಲ್ಲಿ ಡೆಪ್ಯುಟಿ ಮ್ಯಾಜಿಸ್ಟ್ರೇಟ್ ಆಗಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಅಧಿಕಾರದಲ್ಲಿದ್ದರೂ ಅವರ ಮನಸ್ಸು ಸದಾ ಭಾರತದ ಸಂಸ್ಕೃತಿ, ಸಾಹಿತ್ಯ ಮತ್ತು ರಾಷ್ಟ್ರೀಯ ಚಿಂತನೆಯ ಕಡೆಗೇ ಹರಿಯುತ್ತಿತ್ತು. ಆಡಳಿತದ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಿದ್ದ ಈ ಮಹಾನ್ ವ್ಯಕ್ತಿಯೊಳಗೆ ಒಬ್ಬ ದೇಶಭಕ್ತ, ತತ್ತ್ವಚಿಂತಕ ಹಾಗೂ ಅದ್ಭುತ ಕಾದಂಬರಿಕಾರ ಸದಾ ಜಾಗೃತವಾಗೇ ಇದ್ದನು.

ಬಂಕಿಮಚಂದ್ರರು ಭಾರತೀಯ ಸಾಹಿತ್ಯಕ್ಕೆ ಹೊಸ ದಿಕ್ಕನ್ನು ನೀಡಿದವರಾಗಿ ಗುರುತಿಸಲ್ಪಡುತ್ತಾರೆ. ಬಂಗಾಳೀ ಭಾಷೆಯ ಗದ್ಯವನ್ನು ಹೊಸ ಉತ್ತುಂಗಕ್ಕೆ ಕೊಂಡೊಯ್ದ ಮಹಾಶಯರು. ಕಾದಂಬರಿ ಎಂಬ ಸಾಹಿತ್ಯ ಪ್ರಕಾರವನ್ನು ಭಾರತೀಯರ ಭಾವಾಭಿವ್ಯಕ್ತಿಯ ಹೊಸ ಮಾಧ್ಯಮವನ್ನಾಗಿ ರೂಪಿಸಿದರು. ದುರ್ಗೇಶನಂದಿನಿ, ಕಪಾಲಕುಂಡಲಾ, ಮೃಣಾಲಿನಿ, ದೇವಿ ಚೌಧುರಾಣಿ, ಸೀತಾರಾಮ ಮುಂತಾದ ಕೃತಿಗಳ ಮೂಲಕ ಅವರು ಕೇವಲ ಕಾಲ್ಪನಿಕ, ಸಾಂಸಾರಿಕ, ಪೌರಾಣಿಕ ಕಥೆಗಳನ್ನಷ್ಟೇ ಹೇಳಲಿಲ್ಲ; ಧರ್ಮ, ಸಮಾಜ, ನೈತಿಕತೆ, ಶೌರ್ಯ ಮತ್ತು ರಾಷ್ಟ್ರಪ್ರಜ್ಞೆಯ ಮೌಲ್ಯಗಳನ್ನೂ ಜನಮಾನಸದಲ್ಲಿ ಬಿತ್ತಿದರು. ಅವರ ಸಾಹಿತ್ಯದಲ್ಲಿ ಭಾರತದ ಇತಿಹಾಸ, ಸಂಸ್ಕೃತಿ ಮತ್ತು ಆತ್ಮಗೌರವಗಳು ಪಾತ್ರಗಳ ಮೂಲಕ ಹೊರ ಅಭಿವ್ಯಕ್ತಿಗೊಳ್ಳುತ್ತಿದ್ದವು.

ಬಂಕಿಮಚಂದ್ರರು ಜನಜನಿತರಾಗಲು ಕಾರಣವಾದುದು ಅವರ ಆನಂದಮಠ ಕಾದಂಬರಿ, ಮತ್ತೂ ವಿಶೇಷವಾಗಿ ಅದರ ಕೂಸಾದ ವಂದೇ ಮಾತರಂ ಗೀತೆ. 1875-76ರ ಅವಧಿಯಲ್ಲಿ ರಚಿತವಾದ ಈ ಗೀತೆಯು ನಂತರ 1882ರಲ್ಲಿ ಮೊದಲು ಬಂಗದರ್ಶನ್ ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಈ ಗೀತೆ ಕೇವಲ ಒಂದು ರಾಷ್ಟ್ರಭಕ್ತಿ ಜಾಗರಣೆಯ ಗೀತೆಯಾಗಿರದೇ, ಬ್ರಿಟಿಷರ ಆಕ್ರಮಣಕಾರೀ ಸಂಕೋಲೆಗಳಲ್ಲಿ ನರಳುತ್ತಿದ್ದ ಭಾರತಮಾತೆಯ ಅಂತರಂಗದ ನೋವಿನ ಕುದಿಯಾಗಿತ್ತು. ಮಾತೃಭೂಮಿಯನ್ನು ದುರ್ಗಾಮಾತೆಯ ರೂಪದಲ್ಲಿ ಕಂಡು, ಆಕೆಯನ್ನು ವಂದಿಸಿ, ಸ್ತುತಿಸುವ ಈ ಗೀತೆಯು, ದೇಶಭಕ್ತಿಯ ಭಾವನೆಯನ್ನು ಲಕ್ಷಾಂತರ ಭಾರತೀಯರ ಹೃದಯಗಳಲ್ಲಿ ಹೊತ್ತಿಸಿತು.

‘ವಂದೇ ಮಾತರಂ’ ಎಂಬ ಕೇವಲ ಎರಡು ದಿವ್ಯ ಪದಗಳು ಬ್ರಿಟಿಷರ ಎದೆಯಲ್ಲಿ ನಡುಕ ಹುಟ್ಟಿಸಿದವು ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಗೆ ಅಭೂತಪೂರ್ವ ಚೈತನ್ಯವನ್ನು ತುಂಬಿದವು. ಬ್ರಿಟಿಷ್ ಆಡಳಿತದ ದಬ್ಬಾಳಿಕೆಯ ವಿರುದ್ಧ ದೇಶದ ಮೂಲೆ-ಮೂಲೆಗಳಲ್ಲಿ ನಡೆದ ಅನೇಕ ಪ್ರತಿಭಟನೆಗಳು, ಉಗ್ರ ಮೆರವಣಿಗೆಗಳು ಮತ್ತು ಸಾರ್ವಜನಿಕ ಸಭೆಗಳಲ್ಲಿ ಇದೇ ಮಂತ್ರವು ಸಿಂಹಘರ್ಜನೆಯಾಗಿತ್ತು. ಈ ಗೀತೆಯನ್ನು ಹಾಡಬಾರದೆಂದು ಬ್ರಿಟಿಷ್ ಸರ್ಕಾರವು ನಿರ್ಬಂಧವನ್ನೂ ಹೇರಿದ ಸಂದರ್ಭಗಳೂ ಹಲವಾರು! ಆದರೆ, ಅದೇ ನಿಷೇಧವು ಘೋಷಣೆಯ ಶಕ್ತಿಯನ್ನು ನೂರ್ಮಡಿಯಾಗಿಸಿ, ದೇಶದ ಉದ್ದಗಲಕ್ಕೂ, ಜನರನ್ನು ಇನ್ನಷ್ಟು ತೀವ್ರವಾಗಿ ಪ್ರೇರೇಪಿಸಿತು.

ದೇಶಕ್ಕಾಗಿ ಬದುಕಬೇಕು, ಅಗತ್ಯ ಬಿದ್ದರೆ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಅರ್ಪಿಸಬೇಕು ಎಂಬ ಉದಾತ್ತ ಸಂಕಲ್ಪವನ್ನು ಈ ಗೀತೆಯು, ಅಸಂಖ್ಯ ಯುವ ಕ್ರಾಂತಿಕಾರಿಗಳಲ್ಲೂ ಕಿಚ್ಚೆಬ್ಬಿಸಿತು. 1896ರಲ್ಲಿ ಮಹಾಕವಿ ರವೀಂದ್ರನಾಥ ಠಾಕೂರ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದಲ್ಲಿ ವಂದೇ ಮಾತರಂ ಗೀತೆಯನ್ನು ಮೊದಲ ಬಾರಿಗೆ ಸಾರ್ವಜನಿಕವಾಗಿ ಗಾಯನ ಮಾಡಿದ ನಂತರ ಅದರ ಪ್ರಭಾವ ಸಂಪೂರ್ಣ ಭಾರತ ಉಪಖಂಡದಲ್ಲಿ ಅತ್ಯಂತ ವ್ಯಾಪಕವಾಯಿತು. ಭಾರತವನ್ನು ಕೇವಲ ಭೌಗೋಳಿಕ ಪ್ರದೇಶವಾಗಿ ಮಾತ್ರವಲ್ಲ, ಮಾತೃಭೂಮಿಯಾಗಿ ಕಾಣುವ ದೃಷ್ಟಿಕೋನವನ್ನು ಬಂಕಿಮಚಂದ್ರರು ನಮಗೆ ನೀಡಿದ್ದಾರೆ.

1950ರ ಜನವರಿ 24ರಂದು ಭಾರತದ ಸಂವಿಧಾನ ಸಭೆಯು ‘ಜನ ಗಣ ಮನ’ ಗೀತೆಯನ್ನು ‘ರಾಷ್ಟ್ರಗೀತೆ’ (National Anthem) ಎಂದೂ, ಮತ್ತು ‘ವಂದೇ ಮಾತರಂ’ ಗೀತೆಯನ್ನು ‘ರಾಷ್ಟ್ರೀಯ ಗೀತೆ’ (National Song) ಎಂದೂ ಅಧಿಕೃತವಾಗಿ ಅಂಗೀಕರಿಸಿತು. ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು, “ವಂದೇ ಮಾತರಂ ಗೀತೆಗೆ ಜನ ಗಣ ಮನ ಗೀತೆಯಷ್ಟೇ ಸಮಾನ ಗೌರವ ಮತ್ತು ಸಮಾನ ಸ್ಥಾನಮಾನ ಇರುತ್ತದೆ” ಎಂದು ಸ್ಪಷ್ಟವಾಗಿ ಘೋಷಿಸಿದ್ದರು. ಆದರೆ, ಅನೇಕ ವರ್ಷಗಳವರೆಗೆ, ವಂದೇ ಮಾತರಂ ಗೀತೆಯನ್ನು, ಯಾವುದೋ ಕ್ಷುಲ್ಲಕ, ಮತಾಂಧ ದೃಷ್ಟಿಕೋನದ ಕಾರಣದಿಂದಾಗಿ ಪೂರ್ಣ ಸ್ವರೂಪದಲ್ಲಿ ಹಾಡದೇ ಇದ್ದುದು ಮತ್ತು ಯೋಗ್ಯ ಮನ್ನಣೆ ಕೊಡದೇ ಇದ್ದುದು ಅಕ್ಷಮ್ಯ! ವಂದೇ ಮಾತರಂ ಗೀತೆಗೆ, ತನ್ಮೂಲಕ ಅದರ ಕರ್ತೃವನ್ನು ಅವಮಾನಗೊಳಿಸುವ ವಿದ್ಯಮಾನಗಳು ಈ ದೇಶದಲ್ಲಿ ನಡೆದದ್ದು ನಿಜಕ್ಕೂ ದುರದೃಷ್ಟಕರ ಸಂಗತಿ.

ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯವು ರಾಷ್ಟ್ರೀಯ ಗೀತೆಯ 150 ವರ್ಷಗಳ ಅವಧಿ ಪೂರೈಸಿದ್ದಕ್ಕಾಗಿ ಒಂದು ವಿಶೇಷ ರಾಷ್ಟ್ರೀಯ ಸ್ಮರಣೋತ್ಸವ ಕಾರ್ಯಕ್ರಮವನ್ನು 2025ರ ನವೆಂಬರ್ 7ರಂದು ನವದೆಹಲಿಯಲ್ಲಿ ಉದ್ಘಾಟಿಸಿದರು; ಅದರ ಸ್ಮರಣಾರ್ಥ ನಾಣ್ಯ ಮತ್ತು ಅಂಚೆಚೀಟಿಯನ್ನೂ ಬಿಡುಗಡೆ ಮಾಡಿದರು. ಈ ಆಚರಣೆಗಳು 2026ರ ನವೆಂಬರ್ 7ರವರೆಗೆ ವರ್ಷಪೂರ್ತಿ ನಡೆಸಲಾಗುತ್ತದೆ. ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸಚಿವಾಲಯಗಳು ಬೆಳಿಗ್ಗೆ 10:00 ಗಂಟೆಗೆ ತಂತಮ್ಮ ಕಚೇರಿಗಳಲ್ಲೇ ವಂದೇ ಮಾತರಂ ಸಾಮೂಹಿಕ ಗಾಯನವನ್ನೂ ಮಾಡಲೇಬೇಕೆಂಬ ಸುತ್ತೋಲೆಯನ್ನೂ ಹೊರಡಿಸಲಾಯಿತು.

ಅವರ ಜನ್ಮದಿನದ ಈ ಮಹತ್ವದ ಸಂದರ್ಭದಲ್ಲಿ ನಾವು ಬಂಕಿಮಚಂದ್ರರಿಗೆ ಸಲ್ಲಿಸಬಹುದಾದ ನಿಜವಾದ ಮತ್ತು ಸಾರ್ಥಕ ಗೌರವವೆಂದರೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾದ ಪ್ರತಿಯೊಬ್ಬ ಮಹನೀಯರನ್ನು ಆದರ, ಗೌರವದಿಂದ ಸ್ಮರಿಸುವುದು, ನಮ್ಮೊಳಗಿನ ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದು. 1894ರ ಏಪ್ರಿಲ್ 8ರಂದು ಬಂಕಿಮಚಂದ್ರರು ಇಹಲೋಕ ತ್ಯಜಿಸಿದ್ದರೂ, ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಚೇತನಗಳ ಸ್ಫೂರ್ತಿಯಾಗಿದ್ದ ‘ವಂದೇ ಮಾತರಂ’ ಮತ್ತವರ ಚಿಂತನೆಗಳು ತಮ್ಮ ದೇಶಭಕ್ತಿ ಜಾಗರಣ ಯಾನವನ್ನು ಮುಂದುವರೆಸಿವೆ.

ರಾಷ್ಟ್ರಪ್ರೇಮವು ಕೇವಲ ಜೈ ಜೈ ಘೋಷಣೆಯಾಗಿರದೇ ಜೀವನಮೌಲ್ಯವೂ ಆಗಬೇಕು ಎಂಬ ಸಂದೇಶವನ್ನು ಬಂಕಿಮಚಂದ್ರರ ಜೀವನ ಹಾಗೂ ಲೇಖನಗಳು ನಮಗೆ ನೀಡುತ್ತವೆ. ಅವರ ಲೇಖನಿಯಿಂದ ಬೆಳಗಿದ ದೇಶಭಕ್ತಿಯ ದಿವ್ಯಜ್ಯೋತಿಯು ಮುಂದಿನ ಪೀಳಿಗೆಗಳಿಗೂ ಸದಾ ಬೆಳಕು ಚೆಲ್ಲುತ್ತಲೇ ಇರಲಿ.

 

ವಂದೇಮಾತರಂ

#Rashtrotthana #RashtrotthanaParishat #rashtrotthanainrashtraseva #bankimchandra #bankimachandrachattopadhyay #bankimchandrachatterjee #vandemataram #vandemataram150 #anandamath #nationalsong #rashtriyageeth

Leave a Reply

Your email address will not be published. Required fields are marked *