• June 19, 2026
  • RP
  • 0
A healthy old age does not happen by chance; it requires practicing yoga. By 2050, it is possible that one in every five people in India will be a senior citizen (347 million).
It is completely natural for everyone to desire a long life; but how much care do we actually take to ensure a healthy old age?
Health is not merely the absence of disease. As the World Health Organization (WHO) states, health is a combination of physical, mental, and social well-being. Life is meaningful only when there is good health. “Ayushaha kshana ekopi sarvaratnairnalabhyate” — a single lost moment of life cannot be regained even in exchange for all the precious gems in the world. Health is man’s most valuable wealth. It cannot be bought with money; instead, it can be achieved through a proper lifestyle, diet, exercise, and mental stability.
ಯೋಗಾಯೋಗದಿಂದಷ್ಟೇ ಆರೋಗ್ಯಕರ ವೃದ್ಧಾಪ್ಯ ನಮ್ಮದಾಗುವುದಿಲ್ಲ, ಅದಕ್ಕೆ ಯೋಗಾಭ್ಯಾಸವೂ ಬೇಕು

2050ರ ವೇಳೆಗೆ ಭಾರತದಲ್ಲಿ ಪ್ರತಿ ಐವರಲ್ಲಿ ಒಬ್ಬರು ಹಿರಿಯ ನಾಗರಿಕರಾಗಿರುವ (34.7 ಕೋಟಿ) ಸಾಧ್ಯತೆಯಿದೆ. ಪ್ರತಿಯೊಬ್ಬರೂ ದೀರ್ಘಾಯುಷ್ಯವನ್ನು ಬಯಸುವುದು ಸರ್ವೇಸಾಮಾನ್ಯ; ಆದರೆ ಆರೋಗ್ಯಕರ ವೃದ್ಧಾಪ್ಯಕ್ಕೆ ನಾವೆಷ್ಟು ಕಾಳಜಿ ಮಾಡುತ್ತೇವೆ?

ಆರೋಗ್ಯ ಎಂಬುದು ಕೇವಲ ರೋಗರಾಹಿತ್ಯ ಅಲ್ಲ. ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳಿದಂತೆ, ಆರೋಗ್ಯ ಎಂಬುದು ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸ್ವಾಸ್ಥ್ಯದ ಸಮ್ಮಿಲನ. ಒಳ್ಳೆಯ ಆರೋಗ್ಯ ಇದ್ದಾಗ ಮಾತ್ರ ಜೀವನ ಅರ್ಥಪೂರ್ಣ. “ಆಯುಷಃ ಕ್ಷಣ ಏಕೋऽಪಿ ಸರ್ವರತ್ನೈರ್ನಲಭ್ಯತೆ” — ಜೀವನದ ಕಳೆದು ಹೋದ ಕ್ಷಣವು ಅಮೂಲ್ಯ ರತ್ನಗಳನ್ನು ಕೊಟ್ಟರೂ ಮರಳಿ ಸಿಗದು. ಆರೋಗ್ಯ ಮನುಷ್ಯನ ಅತ್ಯಂತ ಅಮೂಲ್ಯ ಸಂಪತ್ತು. ಇದನ್ನು ದ್ರವ್ಯದಿಂದ ಕೊಳ್ಳಲಾಗದು; ಆದರೆ ಸರಿಯಾದ ಜೀವನಶೈಲಿ, ಆಹಾರ, ವ್ಯಾಯಾಮ ಹಾಗೂ ಮಾನಸಿಕ ಸ್ಥಿರತೆಯಿಂದ ಪಡೆದುಕೊಳ್ಳಬಹುದು.

ವೃದ್ಧಾಪ್ಯ ಎಂಬುದು ಜೀವನ ಯಾತ್ರೆಯ ಒಂದು ಸ್ವಾಭಾವಿಕ ಹಂತ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳುತ್ತಾನೆ — “ದೇಹಿನೋऽಸ್ಮಿನ್ ಯಥಾ ದೇಹೇ ಕೌಮಾರಂ ಯೌವನಂ ಜರಾ” — ಈ ದೇಹದಲ್ಲಿ ಜೀವವು ಬಾಲ್ಯದಿಂದ ಯೌವನಕ್ಕೆ, ಅಲ್ಲಿಂದ ವೃದ್ಧಾಪ್ಯಕ್ಕೆ ಸಾಗುತ್ತದೆ. ಬುದ್ಧಿವಂತನಾದವನು ಈ ಬದಲಾವಣೆಯಿಂದ ಗೊಂದಲಗೊಳ್ಳುವುದಿಲ್ಲ. ದೇಹ ಬದಲಾದರೂ ಆತ್ಮ ಇದ್ದ ಹಾಗೆಯೇ ಇರುವುದು, ಅದು ಅಮರಚೇತನ. ಹಳೆಯ ಬಟ್ಟೆ ಬಿಚ್ಚಟ್ಟು ಹೊಸ ಬಟ್ಟೆಯನ್ನು ತೊಡುವಂತೆ ಆತ್ಮವು ಜೀರ್ಣ ದೇಹವ ಬಿಟ್ಟು ನೂತನ ಶರೀರವನ್ನು ಹೊಂದುತ್ತದೆ. ಆದ್ದರಿಂದ ವೃದ್ಧಾಪ್ಯವನ್ನು ಭಯದಿಂದ ಅಲ್ಲ, ಪ್ರಜ್ಞಾಪೂರ್ವಕ ಸ್ವೀಕೃತಿಯಿಂದ ಎದುರಿಸಬೇಕು.

ಭಾರತದಲ್ಲಿ 2022ರಲ್ಲಿ ಸುಮಾರು 14.9 ಕೋಟಿ ಜನರು 60 ವರ್ಷ ಮೇಲ್ಪಟ್ಟವರಿದ್ದರು; 2050ರ ವೇಳೆಗೆ ಈ ಸಂಖ್ಯೆ 34.7 ಕೋಟಿಗೆ ಏರಲಿದೆ. ಹೀಗಾಗಿ ವೃದ್ಧಾಪ್ಯ ಜೀವನದ ನಿರ್ವಹಣೆ, ಕೇವಲ ವೈಯಕ್ತಿಕ ವಿಷಯವಾಗಿರದೇ ಅದು ಸಾಮಾಜಿಕ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದ ಸವಾಲಾಗಿದೆ. ಆರೋಗ್ಯಕರ ವೃದ್ಧಾಪ್ಯ ಎಂದರೆ ಕೇವಲ ದೀರ್ಘ ಕಾಲ ಬದುಕುವುದಲ್ಲ, ಅದಕ್ಕೆ ಬದಲಾಗಿ, ಆಯುಷ್ಯದ ಹೆಚ್ಚಿನ ವರ್ಷಗಳನ್ನು ಚೈತನ್ಯ, ಸ್ವಾವಲಂಬನೆ ಮತ್ತು ಘನತೆಯೊಂದಿಗೆ ಜೀವಿಸುವುದು! WHO ವ್ಯಾಖ್ಯಾನಿಸಿದಂತೆ – ವಯಸ್ಸಾದ ಕಾಲದಲ್ಲಿ ಯೋಗಕ್ಷೇಮ ಸಾಧ್ಯವಾಗಿಸುವ ಕ್ರಿಯಾತ್ಮಕ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಿ, ಕಾಪಾಡಿಕೊಳ್ಳುವ ಪ್ರಕ್ರಿಯೆಯೇ ಆರೋಗ್ಯಕರ ವೃದ್ಧಾಪ್ಯ. ಇದು ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ; ಚಲನಶೀಲತೆ, ಆರ್ಥಿಕ ಹಾಗೂ ಶಾರೀರಿಕ ಸ್ವಾವಲಂಬನೆ, ಮಾನಸಿಕ ಸ್ಪಷ್ಟತೆ, ಅರ್ಥಪೂರ್ಣ ಸಂಬಂಧಗಳು ಮತ್ತು ಸಮಾಜದಲ್ಲಿ ಸಕ್ರಿಯವಾದ ಭಾಗವಹಿಸುವಿಕೆ – ಇವೆಲ್ಲವೂ ಅದರ ಅಂಗಗಳು.

ಭಾರತದ Longitudinal Ageing Study in India (LASI) ಅಧ್ಯಯನಗಳ ಆಧಾರದಂತೆ, ನಮ್ಮ 75% ಹಿರಿಯ ನಾಗರಿಕರು ದೀರ್ಘಕಾಲೀನ ರೋಗಗಳಿಂದ ಬಾಧಿತರಾಗಿದ್ದಾರೆ! ಆದರೆ ತಜ್ಞರ ಅಭಿಮತದಂತೆ, ಆ 75% ಜನರಲ್ಲಿ ಬಹುಶಃ ಜನರು ಅನುಭವಿಸುವ ಹೃದ್ರೋಗ, ಮಧುಮೇಹ ಮತ್ತು ಪಾರ್ಶ್ವವಾಯುವಿನ 80% ಪ್ರಕರಣಗಳನ್ನು ಸಮರ್ಪಕವಾದ ಜೀವನಶೈಲಿಯಲ್ಲಿನ ಬದಲಾವಣೆಯಿಂದ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.

ಆರೋಗ್ಯಕರ ವೃದ್ಧಾಪ್ಯ ಹೊಂದಲು ಯೋಗ (ಯೋಗಾಭ್ಯಾಸ) ಒಂದು ಅಮೋಘ ಸಾಧನ ಎಂಬುದು ಜನಜನಿತ ವಿಷಯವಾಗಿದೆ. ವಿಶ್ವಸಂಸ್ಥೆಯು ವರ್ಷಂಪ್ರತಿ, ಜೂನ್ 21ನ್ನು ‘ಅಂತಾರಾಷ್ಟ್ರೀಯ ಯೋಗ ದಿನ’ವಾಗಿ ಘೋಷಿಸಿದೆ. 2026ರ ಯೋಗ ದಿನದ ಧ್ಯೇಯ, “Yoga for Healthy Ageing” ಎಂಬುದಾಗಿದ್ದು, ಇದು ಜಾಗತಿಕ ಮಟ್ಟದಲ್ಲಿ ಅತಿ ಸೂಕ್ತ ಹಾಗೂ ಸಮಯೋಚಿತ ವಿಚಾರವಾಗಿದೆ ಎಂದರೆ ತಪ್ಪಾಗದು. ಅಷ್ಟಾಂಗಯೋಗದ ಅನುಸಾರ, ಆಸನ, ಪ್ರಾಣಾಯಾಮ ಮತ್ತು ಧ್ಯಾನಗಳನ್ನೊಳಗೊಂಡ ಯೋಗ ದೈಹಿಕ ಬಲ, ನಮ್ಯತೆ (Flexibility), ಸಮತೋಲನ, ಮಾನಸಿಕ ಸ್ಪಷ್ಟತೆ ಮತ್ತು ಭಾವನಾತ್ಮಕ ಸ್ಥಿರತೆಯನ್ನು ಒಟ್ಟೊಟ್ಟಿಗೆ ಸಾಧಿಸಲು ಸಹಕರಿಸುತ್ತದೆ.

ವೃದ್ಧಾಪ್ಯದಲ್ಲಿ ಸ್ನಾಯುಗಳು ಕ್ಷೀಣಿಸುತ್ತವೆ, ಮೂಳೆ ದುರ್ಬಲವಾಗುತ್ತದೆ, ಇಂದ್ರಿಯಗಳು ಪಾಟವ ಕಳೆದುಕೊಳ್ಳುತ್ತವೆಯಾದರೂ, ಇವನ್ನು ನಿಯಮಿತ ಯೋಗಾಭ್ಯಾಸದಿಂದ ನಿಯಂತ್ರಿಸಬಹುದು. ಭಾರತ ಸರ್ಕಾರದ ಆಯುಷ್ ಸಚಿವಾಲಯವು ರೂಪಿಸಿದ “10 Yoga Protocols for Non-Communicable Diseases” ಹಿರಿಯರಿಗಾಗಿ ವಿಶೇಷ ಯೋಗ ಕ್ರಮಗಳನ್ನು ಒಳಗೊಂಡಿದ್ದು, ತ್ರಾಸದಾಯಕ ಚಲನವಲನ ಹೊಂದಿರುವವರೂ ಸಾಮಾನ್ಯ ಕುರ್ಚಿಯನ್ನು ಬಳಸಿ ಯೋಗಾಭ್ಯಾಸ ಮಾಡಬಹುದೆಂಬ ವಿಶ್ವಾಸಕೊಟ್ಟಿದೆ.

ನಮ್ಮ ಪೂರ್ವಜರು ಸಹ ಆರೋಗ್ಯಕರ ವೃದ್ಧಾಪ್ಯದ ರಹಸ್ಯವನ್ನು ಚೆನ್ನಾಗಿಯೇ ಅರಿತಿದ್ದರು. 12ನೇ ಶತಮಾನದ ಮಹಾ ಶರಣ ಬಸವಣ್ಣನವರು “ದೇಹವೇ ದೇಗುಲ…”, “ಕಾಯಕವೇ ಕೈಲಾಸ” ಎಂದು ಸಾರಿ, ಕ್ರಿಯಾಶೀಲತೆ ಮತ್ತು ಸೇವೆ ಮಾಡಿದಷ್ಟೂ ಜೀವನ ಪಾವನ ಎಂದಿದ್ದರು. ಇದು ಆಧುನಿಕ ವಿಜ್ಞಾನದ ಪ್ರಕಾರವೂ ದೃಢಪಟ್ಟಿರುವ ಸಂಗತಿಯಾಗಿದೆ! ವೃದ್ಧಾಪ್ಯದಲ್ಲಿ ಚಟುವಟಿಕೆಯಿಂದ ತುಂಬಿದ ದಿನಚರಿ ಮತ್ತು ಸಾಮಾಜಿಕ ಭಾಗವಹಿಸುವಿಕೆಗಳು ದೀರ್ಘಾಯುಷ್ಯವನ್ನು ಸುಲಭ ಸಾಧ್ಯವಾಗಿಸುತ್ತದೆ.

ಆರೋಗ್ಯಕರ ವೃದ್ಧಾಪ್ಯಕ್ಕೆ ಮಿತ ಆಹಾರ, ತರಕಾರಿ-ಹಣ್ಣುಗಳ ಸೇವನೆ, ನಿಯಮಿತ ನಿದ್ರೆ, ವೈದ್ಯರ ಸಲಹೆ ಮೇರೆಗೆ ನಿಯಮಿತ ಔಷಧಗಳ ಸೇವನೆ ಮತ್ತು ಸಕ್ರಿಯ ಜೀವನಶೈಲಿ ಎಷ್ಟು ಮುಖ್ಯವೋ, ಮಾನಸಿಕ ಆರೋಗ್ಯಕ್ಕಾಗಿ ಸಾಮಾಜಿಕ ಸಂಪರ್ಕ ಮತ್ತು ಅರ್ಥಪೂರ್ಣ ಸಂಬಂಧಗಳೂ ಅಷ್ಟೇ ಅನಿವಾರ್ಯ. ಸಂಶೋಧನೆಗಳ ಪ್ರಕಾರ, ಒಂಟಿತನ ಹಾಗೂ ಕ್ರಿಯಾಶೀಲವಲ್ಲದ ದೇಹಾಲಸ್ಯವೇ ವೃದ್ಧಾಪ್ಯದ ಅನೇಕ ರೋಗಗಳಿಗೆ ಮೂಲ ಕಾರಣ. ಮಕ್ಕಳು-ಮೊಮ್ಮಕ್ಕಳ ಒಡನಾಟ, ನಿಯಮಿತ ದೈನಂದಿನ ಚಟುವಟಿಕೆಗಳು ಹಾಗೂ ವ್ಯಾಯಾಮ, ಸಮಾಜ ಸೇವೆ, ಧ್ಯಾನ ಮತ್ತು ಭಕ್ತಿಯೇ ಈ ಒಂಟಿತನಕ್ಕೆ ನಿಜವಾದ ಔಷಧಗಳು.

ಮಂಕುತಿಮ್ಮನ ಕಗ್ಗದಲ್ಲಿ ಡಿ.ವಿ.ಜಿ. ಅವರು ಹೇಳಿದಂತೆ:
ಹೊಟ್ಟೆರಾಯನ ನಿತ್ಯದಟ್ಟಹಾಸವೊ ಬಾಳು |
ಧೃಷ್ಟ ಧಣಿಯೂಳಿಗಕೆ ಸೊಟ್ಟು ಮೈಬಾಗು ||
ಹಿಟ್ಟಿಗಗಲಿದ ಬಾಯಿ; ಬಟ್ಟೆಗೊಡ್ಡಿದ ಕೈಯಿ |
ಇಷ್ಟೆ ನಮ್ಮೆಲ್ಲ ಕಥೆ — ಮಂಕುತಿಮ್ಮ ||

ಹೊಟ್ಟೆ ಎಂಬ ರಾಜನ ನಿತ್ಯದ ಆಜ್ಞೆಗೆ ಬಾಗಿ ಬದುಕು ಸವೆಯುತ್ತದೆ. ಆಹಾರಕ್ಕಾಗಿ ತೆರೆದ ಬಾಯಿ, ಬಟ್ಟೆಗಾಗಿ ಚಾಚಿದ ಕೈ — ಇಷ್ಟೇ ಮನುಷ್ಯನ ಕಥೆ ಎಂದು ಡಿವಿಜಿ ವ್ಯಂಗ್ಯವಾಗಿ ನುಡಿಯುತ್ತಾರೆ. ಆರೋಗ್ಯದ ದೃಷ್ಟಿಯಿಂದ, ದೇಹ ನಿರ್ವಹಣೆ ಅನಿವಾರ್ಯ; ಆದರೆ ಅದಕ್ಕಾಗಿಯೇ ಜೀವನವನ್ನು ಮೀಸಲಿಡಬಾರದು. ಸಂತುಲಿತ ಆಹಾರ, ಮಿತ ಆಸೆ — ಇವು ಆರೋಗ್ಯಕರ ವೃದ್ಧಾಪ್ಯದ ಸೂತ್ರಗಳು. ವಿನಮ್ರತೆ ಮತ್ತು ಒತ್ತಡ-ನಿರ್ವಹಣೆ ವೃದ್ಧಾಪ್ಯ ಸ್ವಾಸ್ಥ್ಯದ ಮೂಲ ಸೂತ್ರ.

ಯಾವತ್ತೂ, ಅದರಲ್ಲೂ ವಿಶೇಷವಾಗಿ ವೃದ್ಧಾಪ್ಯದಲ್ಲಿ ಕಾಯದ ಆರೋಗ್ಯದ ಜೊತೆಗೆ ಬುದ್ಧಿ, ಮನಸ್ಸು ಹಾಗೂ ಆತ್ಮದ ಸುಸ್ಥಿತಿಯೂ ಮಹತ್ವದ್ದು. ದೇಹ ದೃಢವಾಗಿದ್ದಾಗ ಮನಸ್ಸು ಪ್ರಶಾಂತವಾಗಿ ಸಾತ್ವಿಕ ಚಿಂತನೆಗಳಲ್ಲಿ ತೊಡಗುತ್ತದೆ. ಸನಾತನಧರ್ಮ ಪರಂಪರೆಯ ಪ್ರಕಾರ, ಈ ಜನ್ಮದ ಸತ್ಕರ್ಮಗಳೇ ಮುಂದಿನ ಜನ್ಮದಲ್ಲಿನ ಸುಖ-ಸಂತೋಷಗಳಿಗೆ ಮೂಲಾಧಾರ. ಹೀಗೆ ವೃದ್ಧಾಪ್ಯದ ಆರೋಗ್ಯ ರಕ್ಷಣೆ ಎನ್ನುವುದು ಕೇವಲ ಈ ಜನ್ಮದ ಸೌಖ್ಯಕ್ಕಾಗಿ ಮಾತ್ರವಲ್ಲ, ಅನಂತ ಸಂಸಾರ ಯಾತ್ರೆಯಲ್ಲಿ ಊರ್ಧ್ವಗತಿಗಳಿಗೂ ದಾರಿಮಾಡಿಕೊಡುತ್ತದೆ.

Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #yoga #IDY #IDY2026 #InternationalDayofYoga #yogaforhealthyageing #healthyageing

Leave a Reply

Your email address will not be published. Required fields are marked *