ರಣರಾಗಿಣಿ ಝಾನ್ಸಿರಾಣಿಯ ಸತ್ಯ-ಸತ್ವ-ವೀರ-ಪ್ರತಾಪಗಳು ಅಮರವಾಗಿರಲಿ

1857ರ ಹೋರಾಟವನ್ನು ಇಂದು “ಭಾರತದ ಪ್ರಥಮ ಸ್ವಾತಂತ್ರ್ಯ ಸಮರ” ಎಂದು ಕರೆಯಲಾಗುತ್ತದೆ. ಜಗತ್ತಿನಾದ್ಯಂತ ಹರಡಿದ್ದ ಕ್ರಾಂತಿಕಾರಿಗಳಿಗೆ, ಸರ್ದಾರ್ ಭಗತ್‌ಸಿಂಗ್ ಅವರ ಸಂಘಟನೆಗೆ, ವೀರ ಸಾವರ್ಕರರಿಗೆ, ಮತ್ತು ಕೊನೆಗೆ ನೇತಾಜಿ ಸುಭಾಷಚಂದ್ರ ಬೋಸ್ ಅವರ ಸೇನೆಗೆ ಇದೇ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಅವರ ಶೌರ್ಯ ಸ್ಫೂರ್ತಿ ನೀಡಿತು. ಹಿಂದೂಸ್ತಾನದ ಅನೇಕ ಪೀಳಿಗೆಗಳಿಗೆ ಸ್ಫೂರ್ತಿ ನೀಡುತ್ತ ಝಾನ್ಸಿಯ ರಾಣಿ ಕೇವಲ 23ನೇ ವಯಸ್ಸಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅಮರರಾದರು. ಅವರು ಕೇವಲ ಝಾನ್ಸಿಯ ರಾಣಿಯಲ್ಲ; ಭಾರತದ ಸ್ವಾಭಿಮಾನ, ಸಾಹಸ ಮತ್ತು ಸ್ವಾತಂತ್ರ್ಯಾಕಾಂಕ್ಷೆಯ ಶಾಶ್ವತ ಪ್ರತೀಕ. ಅವರ ಪುಣ್ಯತಿಥಿಯಂದು ವೀರಾಂಗನೆ ಝಾನ್ಸಿಯ ರಾಣಿ ಲಕ್ಷ್ಮೀಬಾಯಿಯವರ ಚರಣಗಳಲ್ಲಿ ಶತಶತ ಪ್ರಣಾಮಗಳು.
ಹಿಂದೂಸ್ಥಾನದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮಹಿಳಾ ಕ್ರಾಂತಿಕಾರಿಗಳು ಭಾಗವಹಿಸಿ, ತಮ್ಮ ಮಾತೃಭೂಮಿಗಾಗಿ ಪ್ರಾಣತ್ಯಾಗ ಮಾಡಿದ್ದಾರೆ. ಅವರಲ್ಲಿ ಅತ್ಯಂತ ಪ್ರಮುಖ ಹಾಗೂ ಪ್ರಭಾವಶಾಲಿ ವ್ಯಕ್ತಿತ್ವವೆಂದರೆ ಝಾನ್ಸಿ ರಾಣಿ ಲಕ್ಷ್ಮೀಬಾಯಿಯವರದು. ಮಣಿಕರ್ಣಿಕಾ ಅಥವಾ ಲಕ್ಷ್ಮೀಬಾಯಿಯವರು ಬ್ರಿಟಿಷರ ದುಷ್ಟ ಕಾನೂನಿಗೆ ತಲೆಬಾಗಿ ಝಾನ್ಸಿಯ ಸಿಂಹಾಸನವನ್ನು ಸುಲಭವಾಗಿ ಒಪ್ಪಿಸದೇ ಸ್ವಾತಂತ್ರ್ಯ ಮತ್ತು ಸ್ವಾಭಿಮಾನಕ್ಕಾಗಿ ಹೋರಾಟ ನಡೆಸಿ, 1857ರ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಚಾಲನೆ ಕೊಟ್ಟ ದಿಟ್ಟ ನಾಯಕಿ.
ಎರಡನೇ ಬಾಜೀರಾವ್ ಪೇಶ್ವೆಯವರ ಸಹೋದರ ಚಿಮಾಜಿ ಅಪ್ಪಾ ಅವರ ವ್ಯವಸ್ಥಾಪಕರಾಗಿದ್ದ ಮೋರೋಪಂತ್ ತಾಂಬೆ ಮತ್ತು ಭಾಗೀರಥಿಬಾಯಿ ದಂಪತಿಗೆ 19ನೇ ನವೆಂಬರ್ 1835ರಂದು ಮಣಿಕರ್ಣಿಕಾ (ಮನೂತಾಯಿ) ಅವರು ಜನಿಸಿದರು. ಪೇಶ್ವೆಯವರ ವಾಡೆಯಲ್ಲಿ ನಾನಾಸಾಹೇಬ್ ಪೇಶ್ವೆಯವರು ತಮ್ಮ ಸಹೋದರ ರಾವ್‌ಸಾಹೇಬರೊಂದಿಗೆ, ಮನುತಾಯಿ ಸಹಾ ತಲವಾರು, ದಂಡ ಮತ್ತು ಬಂದೂಕು ಚಲಾಯಿಸುವುದು ಹಾಗೂ ಕುದುರೆ ಸವಾರಿಯ ಜೊತೆಗೆ ಯುದ್ಧಕಲೆಯ ಶಿಕ್ಷಣ ಪಡೆದು ಅದರ ತಂತ್ರಗಳನ್ನು ಕರಗತ ಮಾಡಿಕೊಂಡಳು. ಮೋಡಿ ಲಿಪಿ ಓದುವುದು ಮತ್ತು ಬರೆಯುವುದನ್ನೂ ಭಾವೀ ಝಾನ್ಸೀರಾಣಿ, ಅವರೊಂದಿಗೆ ಕಲಿತಳು.
ಇಸವಿ 1842ರಲ್ಲಿ ಝಾನ್ಸಿಯ ಮಹಾರಾಜ ಗಂಗಾಧರರಾವ್ ಅವರೊಂದಿಗೆ ಆಕೆಯ ವಿವಾಹವಾಯಿತು. 1851 ರಲ್ಲಿ ಮಹಾರಾಣಿ ಲಕ್ಷ್ಮೀಬಾಯಿಯವರಿಗೆ ಒಬ್ಬ ಮಗ ಜನಿಸಿದನು. ಆದರೆ, ದುಷ್ಟ ವಿಧಿಯಾಟದಿಂದಾಗಿ ಮಗು ಮೂರು ತಿಂಗಳೊಳಗಾಗಿಯೇ ಮರಣ ಹೊಂದಿತು. ರಾಜ್ಯಕ್ಕೆ ಉತ್ತರಾಧಿಕಾರಿಯಾಗಿ ದಾಮೋದರರಾವ್ ಎಂಬ ಬಾಲಕನನ್ನು ದತ್ತು ಪಡೆಯಲಾಯಿತು. ಅದಾದ ಕೆಲವೇ ದಿನಗಳಲ್ಲಿ ಮಹಾರಾಜ ಗಂಗಾಧರರಾವ್ ನಿಧನರಾಗಿ, ಕೇವಲ 18ನೇ ವಯಸ್ಸಿನಲ್ಲಿಯೇ ವಿಧವೆಯಾದ ಲಕ್ಷ್ಮೀಬಾಯಿಯವರು ರಾಜ್ಯಭಾರದ ಸಂಪೂರ್ಣ ಹೊಣೆ ಹೊರಬೇಕಾಯ್ತು.
ವ್ಯಾಪಾರಕ್ಕಾಗಿ ಭಾರತಕ್ಕೆ ಕಾಲಿಟ್ಟ ಬ್ರಿಟಿಷರು ‘ಈಸ್ಟ್ ಇಂಡಿಯಾ ಕಂಪನಿ’ಯ ಮೂಲಕ ರಾಜಕೀಯ ಅಧಿಕಾರವನ್ನು ಕಬಳಿಸತೊಡಗಿದರು. ಭಾರತದ ಪ್ರತಿಯೊಂದು ದುರ್ದೈವದ ಘಟನೆಯೂ ಅವರ ಸಾಮ್ರಾಜ್ಯ ವಿಸ್ತರಣೆಗೆ ನೆರವಾಯಿತು; ಒಪ್ಪಂದಗಳಲ್ಲಿ ನಷ್ಟ ಭಾರತೀಯರದ್ದೇ! ಪುತ್ರನಿಲ್ಲದೇ ತೀರಿದ ರಾಜನ ರಾಜ್ಯವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿತ್ತು; ದತ್ತು ಪುತ್ರನಿಗೆ ರಾಜ್ಯಾಧಿಕಾರವಿಲ್ಲ ಎಂಬ ನೀತಿಯಡಿ ಎಷ್ಟೋ ರಾಜ್ಯಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡವು.
ಇದೇ ನೆಪ ಒಡ್ಡಿ, ದತ್ತು ಪುತ್ರನನ್ನು ಮಾನ್ಯ ಉತ್ತರಾಧಿಕಾರಿಯೆಂದು ಒಪ್ಪದ ಬ್ರಿಟಿಷರು, ಝಾನ್ಸಿಯನ್ನು ತಮ್ಮ ಸಾಮ್ರಾಜ್ಯಕ್ಕೆ ವಿಲೀನಗೊಳಿಸುವ ನಿರ್ಧಾರ ಕೈಗೊಂಡರು. ಅನ್ಯಾಯದ ಈ ಘೋಷಣೆಯನ್ನು ಕೇಳಿದಾಗ ಲಕ್ಷ್ಮೀಬಾಯಿ, ತಪಸ್ವಿನಿಯ ರೂಪವನ್ನು ತ್ಯಜಿಸಿ ತೇಜಸ್ವಿನಿಯ ರೂಪವನ್ನು ತಾಳಿ, ವೀರಾವೇಶದಿಂದ “ಮೇರಿ ಝಾನ್ಸಿ ನಹೀ ದೂಂಗಿ” ಎಂದು ಘೋಷಿಸಿ, ಬ್ರಿಟಿಷರಿಗೆ ಗಟ್ಟಿಯಾದ ಎಚ್ಚರಿಕೆ ನೀಡಿ, ಪ್ರತಿರೋಧ ವ್ಯಕ್ತಪಡಿಸಿದರು. ಅದು ಎಲ್ಲ ಭಾರತೀಯರ ಸ್ವಾಭಿಮಾನದ ಮಾರ್ದನಿಯಾಗಿತ್ತು.
ರಾಣಿ ಲಕ್ಷ್ಮೀಬಾಯಿ, ಕುದುರೆ ಸವಾರಿ ಮಾಡುವಾಗ ಪುರುಷರ ವೇಷ ಧರಿಸುತ್ತಿದ್ದಳು. ಆಕೆ ಲೋಹದ ಶಿರಸ್ತ್ರಾಣವನ್ನು (ಟೋಪ್) ಧರಿಸಿ ಅದರ ಮೇಲೆ ಪೇಟವನ್ನು ಕಟ್ಟುತ್ತಿದ್ದಳು. ರಕ್ಷಣೆಗಾಗಿ ಆಕೆಯ ಎದೆಯ ಭಾಗಕ್ಕೆ ಲೋಹದ ಪಟ್ಟಿಯನ್ನು ಕಟ್ಟಲಾಗಿರುತ್ತಿತ್ತು. ಪೈಜಾಮಾ ಧರಿಸಿ ಅದರ ಮೇಲೊಂದು ಶಲ್ಯವನ್ನು ಕಟ್ಟಿಕೊಳ್ಳುತ್ತಿದ್ದಳು. ಎರಡೂ ಕಡೆ ಪಿಸ್ತೂಲು ಮತ್ತು ತಲ್ವಾರ್ ನೇತಾಡುತ್ತಿರುತ್ತಿದ್ದವು. ಇದರ ಜೊತೆಗೆ ಆಕೆ ತನ್ನ ಬಳಿ ಸಣ್ಣ ಕತ್ತಿಯನ್ನೂ (ಕೃಪಾಣ್) ಇಟ್ಟುಕೊಳ್ಳುತ್ತಿದ್ದಳು.
1857ರ ಸ್ವಾತಂತ್ರ್ಯ ಸಮರ ಮೀರತ್, ದೆಹಲಿ, ಬರೇಲಿ ಸೇರಿದಂತೆ ಝಾನ್ಸಿಗೂ ವ್ಯಾಪಿಸಿದಾಗ, ಝಾನ್ಸಿ ಇಂಗ್ಲಿಷರ ಆಡಳಿತದಿಂದ ಮುಕ್ತವಾಯಿತು. 3 ವರ್ಷಗಳ ನಂತರ ಆಡಳಿತ ಸೂತ್ರ ಕೈಗೆತ್ತಿಕೊಂಡ ರಾಣಿ ಲಕ್ಷ್ಮೀಬಾಯಿ, ಇಂಗ್ಲಿಷರ ಸಂಭಾವ್ಯ ದಾಳಿಯಿಂದ ರಾಜ್ಯವನ್ನು ರಕ್ಷಿಸಲು ಸಜ್ಜಾದರು. 20 ಮಾರ್ಚ್ 1858ರಂದು ಸರ್ ಹ್ಯೂ ರೋಸ್ ಅವರ ಸೈನ್ಯ ಝಾನ್ಸಿಗೆ ಮುತ್ತಿಗೆ ಹಾಕಿ ಶರಣಾಗತಿಯನ್ನು ಕೇಳಿದಾಗ, ಲಕ್ಷ್ಮೀಬಾಯಿ ಅದನ್ನು ನಿರಾಕರಿಸಿ ಕೋಟೆಯ ಗೋಡೆಯ ಮೇಲೆಯೇ ನಿಂತು ಸೈನ್ಯಕ್ಕೆ ಸ್ಫೂರ್ತಿ ತುಂಬಿದರು. ತಾತ್ಯಾ ಟೋಪೆ 15,000 ಸೈನಿಕರೊಂದಿಗೆ ಸಹಾಯಕ್ಕೆ ಬಂದನು.
ಆದರೆ ಕೋಟೆಯಲ್ಲಿದ್ದ ಮದ್ದುಗುಂಡುಗಳು ಖಾಲಿಯಾದವು ಮತ್ತು ದೇಶದ್ರೋಹ (ಪಿತೂರಿ) ಹೆಚ್ಚಾಯಿತು. ದ್ರೋಹದ ಮಾರ್ಗ ಅನುಸರಿಸಿದ ಶತ್ರು ಏಪ್ರಿಲ್ 3ರಂದು ಕೋಟೆಯೊಳಗೆ ಪ್ರವೇಶಿಸಿತು. ಆದ್ದರಿಂದ ಪಲಾಯನ ಮಾಡುವುದನ್ನು ಬಿಟ್ಟು ಬೇರೆ ದಾರಿ ಕಾಣದೇ, ಆಕೆ 12 ವರ್ಷದ ದತ್ತು ಮಗನನ್ನು ಬೆನ್ನಿಗೆ ಕಟ್ಟಿಕೊಂಡು, ಪುರುಷ ವೇಷದಲ್ಲಿ ಸುಮಾರು ಆಯ್ದ 300 ಜನರ ತುಕಡಿಯೊಂದಿಗೆ ಬ್ರಿಟಿಷರ ವ್ಯೂಹವನ್ನು ಭೇದಿಸಿ ಝಾನ್ಸಿಯಿಂದ ತಪ್ಪಿಸಿಕೊಂಡಳು. ನಿರಂತರ 24 ಗಂಟೆಗಳ ಕುದುರೆ ಸವಾರಿ ಮಾಡಿ 102 ಮೈಲು ದೂರದ ಕಾಲ್ಪಿ ತಲುಪಿದ ರಾಣಿ ಲಕ್ಷ್ಮೀಬಾಯಿ ಅವರಿಗೆ ಪೇಶ್ವೆಗಳು ಸಂಪೂರ್ಣ ಸಹಕಾರ ನೀಡಿದರು. ಇದು ದಂಗೆಯ ಪ್ರಮುಖ ಕೇಂದ್ರವಾಗಿತ್ತು. ಅಲ್ಲಿ ತಾತ್ಯಾ ಟೋಪೆ ಮತ್ತು ಬಾಂದಾದ ನವಾಬರು ಆಕೆಯನ್ನು ಭೇಟಿಯಾದರು.
ಮೇ 22ರಂದು ಸರ್ ಹ್ಯೂ ರೋಸ್ ಕಾಲ್ಪಿ ಮೇಲೆ ದಾಳಿ ಮಾಡಿದಾಗ, ಲಕ್ಷ್ಮೀಬಾಯಿ ಕೈಯಲ್ಲಿ ತಲವಾರು ಹಿಡಿದು ಮಿಂಚಿನ ಚುರುಕಿನಿಂದ ಮುಂಚೂಣಿಗೆ ನುಗ್ಗಿ ಇಂಗ್ಲಿಷ್ ಸೈನ್ಯವನ್ನು ಹಿಮ್ಮೆಟ್ಟಿಸಿದರು. ಆದರೆ ಹೊಸ ಪಡೆಗಳ ಆಗಮನದಿಂದ ಕ್ರಾಂತಿಕಾರಿಗಳ ಆವೇಶ ಕಮ್ಮಿಯಾಗಿ, ಮೇ 24ರಂದು ಕಾಲ್ಪಿ ಇಂಗ್ಲಿಷರ ವಶವಾಯಿತು. ನಂತರ ರಾವ್‌ಸಾಹೇಬ್ ಪೇಶ್ವೆ, ತಾತ್ಯಾ ಟೋಪೆ, ಬಾಂದಾದ ನವಾಬ್ ಮತ್ತು ಇತರ ಸರದಾರರೊಂದಿಗೆ ಸೇರಿ ಗ್ವಾಲಿಯರ್ ವಶಪಡಿಸಿಕೊಳ್ಳುವ ಸಲಹೆ ನೀಡಿದ ರಾಣಿ, ಮುಂದೆ ನಿಂತು ಗ್ವಾಲಿಯರ್ ಗೆದ್ದು ಪೇಶ್ವೆಗಳ ಕೈಗೆ ಒಪ್ಪಿಸಿದರು.
ಗ್ವಾಲಿಯರ್ ವಿಜಯದ ನಂತರ ಸರ್ ಹ್ಯೂ ರೋಸ್ ಮತ್ತೆ ದಾಳಿ ನಡೆಸಿದಾಗ, ಗ್ವಾಲಿಯರಿನ ಪೂರ್ವ ಭಾಗದ ರಕ್ಷಣೆಯ ಹೊಣೆಗಾರಿಕೆಯನ್ನು ಲಕ್ಷ್ಮೀಬಾಯಿ ತಾವೇ ಹೊತ್ತರು. ಅವರ ಅಭೂತಪೂರ್ವ ಧೈರ್ಯ ಸೈನಿಕರಿಗೆ ಸ್ಫೂರ್ತಿಯಾಯಿತು. 1858ರ ಜೂನ್ 18ರಂದು ಎಲ್ಲ ದಿಕ್ಕುಗಳಿಂದ ದಾಳಿ ನಡೆದಾಗಲೂ ಅವರು ಶರಣಾಗತಿಗೆ ಒಪ್ಪದೇ ಶತ್ರುಗಳ ಸಾಲು ಭೇದಿಸಿ ಹೊರಹೋಗಲು ಪ್ರಯತ್ನಿಸಿದರು. ಆದರೆ ಅಲ್ಲಿ ಲಕ್ಷ್ಮೀಬಾಯಿಗೆ ವಿಧಿ ಸಾಥ್ ನೀಡಲಿಲ್ಲ, ಕುದುರೆ ಮುಂದೆಹೋಗದೇ ಕೆರಳಿ ನಿಂತಿದ್ದರಿಂದ, ಲಕ್ಷ್ಮೀಬಾಯಿ ಅಸಹಾಯಕರಾಗಿ ಶತ್ರುಗಳ ಮೇಲೆ ದಾಳಿ ನಡೆಸುತ್ತಲೇ ತೀವ್ರವಾಗಿ ಗಾಯಗೊಂಡು ವೀರ ಮರಣವನ್ನಪ್ಪಿದರು. ಸತ್ತ ಮೇಲೂ ತಮ್ಮ ದೇಹಕ್ಕೆ ಮ್ಲೇಚ್ಛರ ಕೈ ತಾಗಬಾರದು ಎಂಬ ಇಚ್ಛೆಯನ್ನು ವ್ಯಕ್ತಪಡಿಸಿದ್ದ ಕಾರಣ, ಅವರ ನಿಷ್ಠಾವಂತ ಸೇವಕರು ರಾಣಿಯನ್ನು ಗಂಗಾದಾಸರ ಮಠಕ್ಕೆ ಕರೆದೊಯ್ದರು.
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #jhansiranilakshmibai #jhansirani #manikarnika







