ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್ ನಿತ್ಯ ನಿರಂತರ ಆಗುತ್ತಲೇ ಇದೆ

ಕಳೆದೊಂದು ದಶಕದಲ್ಲಿ, ಭಾರತದಲ್ಲಿ ಎಲ್ಲರ ಸಹಕಾರಗಳೊಂದಿಗೆ ವಿಕಾಸ ಹೊಂದಿ, ವಿಶ್ವಾಸವನ್ನು ಸಂಪಾದಿಸುತ್ತಾ, ಎಲ್ಲರ ಪರಿಶ್ರಮವನ್ನು ಮತ್ತಷ್ಟು ಒಗ್ಗೂಡಿಸಲಾಗುತ್ತಿದೆ.
ಭಾರತ ಎಂಬ ಮಹಾನ್ ನಾಗರಿಕತೆಯ ವೃಕ್ಷವು ತನ್ನ ಪ್ರಾಚೀನ ಬೇರುಗಳನ್ನು ಭದ್ರವಾಗಿಟ್ಟುಕೊಂಡು, ಬೆಳೆವ ಸಿರಿ ಮೊಳಕೆಯಲ್ಲಿ ಎಂಬ ನಾಣ್ಣುಡಿಯಂತೆ ಪಲ್ಲವಿಸಿ, ಬಲಿಷ್ಠವಾದ ತಾರುಣ್ಯದ ಮರವಾಗಿ ಬೆಳೆಯುತ್ತಿದೆ. ಹೆದ್ದಾರಿಯ ಅಷ್ಟಪಥ ರಸ್ತೆಗಳಲ್ಲಿ, ಆಧುನಿಕ ತಂತ್ರಜ್ಞಾನದ ಕಲಿಕೆ ಹಾಗೂ ಬಳಕೆಯಲ್ಲಿ, ಬಾಹ್ಯಾಕಾಶದ ಜಿಗಿತಗಳಲ್ಲಿ, ಶಸ್ತ್ರಾಸ್ತ್ರ ತಯಾರಿ ಹಾಗೂ ಮಾರಾಟದಲ್ಲಿ, IC ಚಿಪ್ ಉತ್ಪಾದನೆ ಹಾಗೂ ಆಹಾರ ಉತ್ಪಾದನೆಯಲ್ಲಿ, ಆರ್ಥಿಕ ಬೆಳವಣಿಗೆಯಲ್ಲಿ, ವಿದೇಶನೀತಿಯಂಥ ಸಂಕೀರ್ಣ ವಿಷಯಗಳಲ್ಲಿ — ಉನ್ನತಿಯ ಕುರುಹುಗಳು ಎದ್ದುಕಾಣುತ್ತಿವೆ. ಈ ಬದಲಾವಣೆಯ ಚಿತ್ರಣ ಜನಸಾಮಾನ್ಯರ ದೈನಂದಿನ ಜೀವನದಲ್ಲಿಯೂ ಅಷ್ಟೇ ಸ್ಪಷ್ಟವಾಗಿ ಕಾಣಸಿಗುತ್ತದೆ — ಮಂಗಳೂರಿನ ಮೀನು ಮಾರುಕಟ್ಟೆಯಲ್ಲಿ UPI ಮೂಲಕ ಪಾವತಿ ಸ್ವೀಕರಿಸುವ ವಯೋವೃದ್ಧೆಯಲ್ಲಿ, ಫಸಲ್ ಬೀಮಾ ಪರಿಹಾರಧನ ನೇರ ಖಾತೆಗೆ ಜಮೆಯಾದ SMS ನೋಡಿ ಕೃತಜ್ಞತೆಯ ಮುಗುಳ್ನಗೆ ಬೀರುವ ಮೈಸೂರಿನ ರೈತನಲ್ಲಿ, ಮುದ್ರಾ ಯೋಜನೆಯ ಸಾಲ ಪಡೆದು ತಮ್ಮದೇ ಉದ್ಯಮ ಕಟ್ಟಿ ಐದು ಮಹಿಳೆಯರಿಗೆ ಉದ್ಯೋಗ ನೀಡಿದ ಗದಗದ ಶರಣಮ್ಮನವರಲ್ಲಿ, ಉಜ್ವಲಾ ಯೋಜನೆಯ ಗ್ಯಾಸ್ ಒಲೆಯ ಮುಂದೆ ರೊಟ್ಟಿ ತಟ್ಟುತ್ತ ಆನಂದಬಾಷ್ಪ ಸುರಿಸುವ ಥಾರ್ ಮರುಭೂಮಿಯ ಗೃಹಿಣಿಯಲ್ಲಿ. ಕೇವಲ ಭೌತಿಕ ಬದಲಾವಣೆಗಳಷ್ಟೇ ಅಲ್ಲದೇ, ಭಾರತೀಯರ ಆತ್ಮವಿಶ್ವಾಸ ಹಾಗೂ ಸ್ವಾಭಿಮಾನವೂ ವೈಶ್ವಿಕ ಮಟ್ಟದಲ್ಲಿ ಮತ್ತೊಮ್ಮೆ ಜಾಗೃತಗೊಂಡಿದ್ದು, ನವಭಾರತವು ಇಂದು ಸ್ಥಿರ, ಸಮರ್ಥ ಮತ್ತು ಸ್ವಾವಲಂಬೀ ರಾಷ್ಟ್ರವಾಗಿ ಭವಿಷ್ಯದ ಶತಮಾನದತ್ತ ದೃಢ ಹೆಜ್ಜೆಗಳನ್ನಿಡುತ್ತಿದೆ.
ಭಾರತದ ಪ್ರಧಾನ ಮಂತ್ರಿಗಳಾಗಿ ಶ್ರೀ ನರೇಂದ್ರ ಮೋದಿಯವರು 12 ವರ್ಷಗಳನ್ನು ಪೂರೈಸಿರುವುದು ದೇಶದ ರಾಜಕೀಯ ಮತ್ತು ಆಡಳಿತಾತ್ಮಕ ಇತಿಹಾಸದಲ್ಲಿ ಒಂದು ಪ್ರಮುಖ ಘಟ್ಟವಾಗಿದೆ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಲ್ಲಿ ದೇಶವು ಹಲವು ಆರ್ಥಿಕ, ಸಾಮಾಜಿಕ ಮತ್ತು ಮೂಲಸೌಕರ್ಯ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಒಂದು ರೀತಿಯ ರಾಜಕೀಯ ಸಿದ್ಧಾಂತಕ್ಕೆ ರಾಜಿಯಾಗದೇ, ಒಲವು, ವಾಲುವಿಕೆಗಳಿಲ್ಲದೇ, ತಮ್ಮ ರಾಷ್ಟ್ರಕ್ಕಾಗಿ ಅವಿಶ್ರಾಂತವಾಗಿ ದುಡಿದಿದ್ದಾರೆ. ಒಮ್ಮೆ ಅವಲೋಕಿಸಿದಾಗ, ಪ್ರಸ್ತುತ ಸರ್ಕಾರವು ದೇಶದ ಪ್ರಗತಿಗಾಗಿ ಕೈಗೊಂಡಿರುವ ಅನೇಕ ಕ್ರಮಗಳು ಪ್ರಗತಿಪಥದಲ್ಲಿ ಉತ್ತುಂಗದ ಗುರಿಯೆಡಿಗೆ ಮುನ್ನುಗ್ಗುತ್ತಿದೆ ಎಂಬುದು ಸ್ಪಷ್ಟವಾಗುತ್ತದೆ.
ಆರ್ಥಿಕ ರಂಗದಲ್ಲಿ, ಹಲವು ರಾಷ್ಟ್ರೀಕೃತ ಬ್ಯಾಂಕುಗಳ ವಿಲೀನ ಮತ್ತು ಬಂಡವಾಳ ಸಾಮರ್ಥ್ಯವನ್ನು ಜಾಗತಿಕ ಗುಣಮಟ್ಟಕ್ಕೆ ಹೆಚ್ಚಿಸುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಸುಭದ್ರಗೊಳಿಸಲಾಗಿದೆ. ಜನ್ ಧನ್, DBT ಮತ್ತು UPI ಬ್ಯಾಂಕಿಂಗ್ ಸೌಲಭ್ಯವನ್ನು ಗ್ರಾಮೀಣ ಭಾಗಕ್ಕೂ ತಂದಿದ್ದು, UPI ಇಂದು ಸಿಂಗಾಪುರ, ಫ್ರಾನ್ಸ್, ಯುಎಇ ಸೇರಿ ಹಲವು ದೇಶಗಳಲ್ಲಿ ಬಳಕೆಯಲ್ಲಿದೆ. GST ಜಾರಿಯಿಂದ ಸರಕು ಸಾಗಣೆ ಸುಲಭವಾಗಿ, ದೆಹಲಿ ಸಾಗಾಟ ಅವಧಿ ಎಂಟು ದಿನದಿಂದ ಐದು ದಿನಕ್ಕೆ ಇಳಿದಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ. ಆದಾಯ ತೆರಿಗೆಯ ಕನಿಷ್ಠ ಮಿತಿ ಗಣನೀಯವಾಗಿ ಹೆಚ್ಚಿಸಿದ್ದರಿಂದ ಲಕ್ಷಾಂತರ ಮಧ್ಯಮ ವರ್ಗದವರು ತೆರಿಗೆ ವ್ಯಾಪ್ತಿಯಿಂದ ಹೊರಬಂದಿದ್ದಾರೆ; ಆದರೂ ಆಶ್ಚರ್ಯಕರವಾಗಿ, ಒಟ್ಟಾರೆ ಆದಾಯ ತೆರಿಗೆ ಮತ್ತು ಜಿಎಸ್ಟಿ ಸಂಗ್ರಹ ಸಾರ್ವಕಾಲಿಕ ದಾಖಲೆ ಮಟ್ಟ ತಲುಪುತ್ತಿದ್ದು, ದೇಶದ ಬೊಕ್ಕಸದ ಆದಾಯವು ಗಣನೀಯವಾಗಿ ಹೆಚ್ಚಿದೆ.
ದೇಶದ ನರನಾಡಿಗಳಂತಿರುವ ಸಂಪರ್ಕ ವ್ಯವಸ್ಥೆಯ ಕಾಯಕಲ್ಪದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ದಿನಕ್ಕೆ ಸುಮಾರು 40 ಕಿ.ಮೀ. ಗಳಷ್ಟು ದಾಖಲೆಯ ವೇಗದಲ್ಲಿ ಸಾಗಿದೆ. ಮೂಲಸೌಕರ್ಯ ಮತ್ತು ಸುಸ್ಥಿರ ಅಭಿವೃದ್ಧಿಯ ವಿಷಯದಲ್ಲೂ ಕಳೆದ ಹನ್ನೆರಡು ವರ್ಷಗಳಲ್ಲಿ ದೇಶವು ಭಾರಿ ಪರಿವರ್ತನೆಯನ್ನು ಕಂಡಿದೆ. ಸ್ವದೇಶೀ ನಿರ್ಮಿತ ವಂದೇ ಭಾರತ್ ರೈಲುಗಳು, ಕವಚ್ ಸುರಕ್ಷತಾ ತಂತ್ರಜ್ಞಾನ ಮತ್ತು ಆನ್ಲೈನ್ ಟಿಕೆಟ್ ವ್ಯವಸ್ಥೆಯೊಂದಿಗೆ ರೈಲ್ವೆ ಸಂಪೂರ್ಣ ಆಧುನೀಕರಣಗೊಂಡು ಪ್ರಯಾಣಿಕರ ಅನುಭವ ಬದಲಿಸಿದೆ. ನಗರಗಳಲ್ಲಿ ಮೆಟ್ರೋ ಜಾಲ ವಿಸ್ತರಣೆ ಸಂಚಾರ ದಟ್ಟಣೆ ತಗ್ಗಿಸಿದೆ. ಸಾರಿಗೆ-ಲಾಜಿಸ್ಟಿಕ್ಸ್ ಅಡೆತಡೆಗಳ ನಿವಾರಣೆಯಿಂದ ದೇಶಾದ್ಯಂತ ಸಂಚಾರ-ವ್ಯಾಪಾರ ಸುಗಮಗೊಂಡಿದೆ. ಉಡಾನ್ ಯೋಜನೆ ಬೆಳಗಾವಿ, ಹುಬ್ಬಳ್ಳಿ, ಶಿವಮೊಗ್ಗ, ಕಲಬುರಗಿಯಂತಹ ನಗರಗಳಿಗೆ ವಿಮಾನ ಸಂಪರ್ಕ ತಂದಿದ್ದು, ಭಾರತ ಇಂದು ವಿಶ್ವದ ಮೂರನೇ ಅತಿ ದೊಡ್ಡ ವಿಮಾನ ಮಾರುಕಟ್ಟೆ ಎನಿಸಿದೆ.
ವಿಜ್ಞಾನ ಕ್ಷೇತ್ರದಲ್ಲಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದ ವಿಶ್ವದ ಮೊದಲ ಯಶಸ್ಸು ಸಾಧಿಸಿತು; ಆದಿತ್ಯ L1 ಮತ್ತು ಗಗನಯಾನ ಮಿಷನ್ಗಳು ಮುಂದಿನ ಹೆಜ್ಜೆ. ಪಾವಗಡ ಸೋಲಾರ್ ಪಾರ್ಕ್ನಂತಹ ಯೋಜನೆಗಳಿಂದ ಭಾರತ ಸೌರಶಕ್ತಿಯ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಪ್ಯಾರಿಸ್ ಒಪ್ಪಂದದ ಗುರಿಯನ್ನು ಮೊದಲೇ ಸಾಧಿಸಿದೆ. ಭವಿಷ್ಯದ ಇಂಧನ ಅಗತ್ಯಗಳನ್ನು ಪೂರೈಸಲು ನವೀಕರಿಸಬಹುದಾದ ಇಂಧನ (Renewable Energy) ಮೂಲಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಸೌರ ಮತ್ತು ಪವನ ಶಕ್ತಿಯ ಯೋಜನೆಗಳ ಯಶಸ್ವಿ ಅನುಷ್ಠಾನದಿಂದಾಗಿ ದೇಶದ ಇಂಧನ ಉತ್ಪಾದನಾ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗಿದೆ.
ದೇಶದ ಜನಸಂಖ್ಯೆಯ ಅರ್ಧಕ್ಕರ್ಧದಷ್ಟು ಇರುವ ಮಹಿಳೆಯರಿಗೆ, ನಾರೀಶಕ್ತಿ ವಂದನ ಅಧಿನಿಯಮ’ದ ಪ್ರಕಾರ, ಸಂಸತ್ತು ಮತ್ತು ವಿಧಾನಸಭೆಗಳಲ್ಲಿ 33% ಮೀಸಲಾತಿ ಸಿಕ್ಕಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ಮಾತೃಭಾಷಾ ಕಲಿಕೆಗೆ ಒತ್ತು ಕೊಟ್ಟಿದೆ. ಸ್ಟಾರ್ಟ್ಅಪ್-ಇಂಡಿಯಾದ (Startup India) ಯೋಜನೆಯಡಿಯಲ್ಲಿ, 1,20,000ಕ್ಕೂ ಹೆಚ್ಚು ಸ್ಟಾರ್ಟ್ಆಪ್ಗಳು ಮತ್ತು 110ಕ್ಕೂ ಹೆಚ್ಚು ಯೂನಿಕಾರ್ನ್ ಕಂಪನಿಗಳು ನೋಂದಣಿಯಾಗಿವೆ. ಒಂದು ಕಾಲದಲ್ಲಿ ವಿಶ್ವದ 10ನೇ ಸ್ಥಾನದಲ್ಲಿದ್ದ ಭಾರತ ಇಂದು 5ನೇ ಅತಿ ದೊಡ್ಡ ಆರ್ಥಿಕತೆಯಾಗಿದೆ.
ರಕ್ಷಣಾ ಮತ್ತು ವಿದೇಶಾಂಗ ರಂಗದಲ್ಲಿ ಸರ್ಜಿಕಲ್ ಸ್ಟ್ರೈಕ್ (2016), ಬಾಲಾಕೋಟ್ ವಾಯುದಾಳಿ (2019), 370ನೇ ಅನುಚ್ಛೇದ ರದ್ದತಿ ಮತ್ತು 2025ರ ಆಪರೇಶನ್ ಸಿಂಧೂರ್ ಭಾರತದ ನಿಲುವಿನಲ್ಲಿ ಬದಲಾವಣೆ ತೋರಿಸಿವೆ. ತೇಜಸ್, ಅರ್ಜುನ ಟ್ಯಾಂಕ್, ಅಗ್ನಿ ಕ್ಷಿಪಣಿಯಂತಹ ಸ್ವದೇಶಿ ರಕ್ಷಣಾ ಉತ್ಪಾದನೆ ಹೆಚ್ಚಿದೆ. 2023ರ G20 ಅಧ್ಯಕ್ಷತೆ, ಯೆಮನ್-ಉಕ್ರೇನ್-ಸುಡಾನ್ನಿಂದ ನಾಗರಿಕರ ಸ್ಥಳಾಂತರ ಮತ್ತು 20ಕ್ಕೂ ಹೆಚ್ಚು ದೇಶಗಳ ಗೌರವ ಪ್ರಶಸ್ತಿಗಳು ಭಾರತದ ಜಾಗತಿಕ ಪ್ರತಿಷ್ಠೆ ಹೆಚ್ಚಿಸಿವೆ.
ಇನ್ನು ಜಾಗತಿಕವಾಗಿ ಎದುರಾದ ಕೋವಿಡ್-19 ಮಹಾಮಾರಿಯ ಬಿಕ್ಕಟ್ಟನ್ನು ನಿರ್ವಹಿಸಿದ ರೀತಿಯಂತೂ ಜಗತ್ತನ್ನೇ ಬೆರಗುಗೊಳಿಸಿತು. ಬೃಹತ್ ಜನಸಂಖ್ಯೆ ಇರುವ ದೇಶದಲ್ಲಿ ಕರೋನಾವನ್ನು ಸಮರ್ಥವಾಗಿ ನಿಭಾಯಿಸಿದ್ದಲ್ಲದೇ, ಸ್ವದೇಶನಿರ್ಮಿತ ಕರೋನಾ ಲಸಿಕೆಯನ್ನು ಪೇಟೆಂಟ್ ಹಕ್ಕುಗಳಿಗಾಗಿ ಕಾಯ್ದಿರಿಸದೇ, ವಿಶ್ವದ ಅನೇಕ ಬಡ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಉಚಿತವಾಗಿ ಒದಗಿಸಲಾಯಿತು. ಭಾರತದ ಈ ಮಾನವೀಯ ಹೆಜ್ಜೆಯು ಜಾಗತಿಕ ಮಟ್ಟದಲ್ಲಿ ದೇಶದ ಸ್ಥಾನಮಾನ, ರಾಜತಾಂತ್ರಿಕ ಪ್ರಭಾವ ಮತ್ತು ಗೌರವವನ್ನು ಅಸಾಧಾರಣವಾಗಿ ವೃದ್ಧಿಸಿದೆ.
ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಹಾಗೂ ವಿದೇಶಗಳಲ್ಲಿ ಯುದ್ಧದಂತಹ ಭೀಕರ ಪರಿಸ್ಥಿತಿಗಳು ಎದುರಾದಾಗ, ಸರ್ಕಾರವು ಕ್ಷಿಪ್ರ ಕಾರ್ಯಾಚರಣೆಗಳನ್ನು ಕೈಗೊಂಡು (ವಿಶೇಷವಾಗಿ ದಿವಂಗತ ಸುಷ್ಮಾ ಸ್ವರಾಜ್ ಅವರು ವಿದೇಶಾಂಗ ಸಚಿವರಾಗಿದ್ದಾಗ) ಅನೇಕ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಸಾವಿರಾರು ಅನಿವಾಸೀ ಭಾರತೀಯರನ್ನು (NRIs) ಸುರಕ್ಷಿತವಾಗಿ ತಾಯ್ನಾಡಿಗೆ ಕರೆತರಲಾಗಿದೆ. ಸಂಕಷ್ಟದ ಸಮಯದಲ್ಲಿ ನೆರವಾಗುವ ಭಾರತದ ಈ ಬದ್ಧತೆಯು ಜಾಗತಿಕ ಮಟ್ಟದಲ್ಲಿ ದೊಡ್ಡಮಟ್ಟದ ಪ್ರಶಂಸೆಗೆ ಪಾತ್ರವಾಯಿತು. ದೇಶದ ನಾಗರಿಕರು ಸಂಕಷ್ಟದಲ್ಲಿದ್ದಾಗ ಆಡಳಿತ ವ್ಯವಸ್ಥೆ ಸ್ಪಂದಿಸಿದ ರೀತಿ ನಿಜಕ್ಕೂ ಕೌತುಕಮಯ ವಿಷಯವೇ.
ಸಾಮಾಜಿಕ ಕ್ಷೇತ್ರದಲ್ಲಿ ಸ್ವಚ್ಛ ಭಾರತ ಅಭಿಯಾನದಡಿ 2014ರಲ್ಲಿ 38% ಇದ್ದ ಗ್ರಾಮೀಣ ಶೌಚಾಲಯ ಸೌಲಭ್ಯ ಗಮನಾರ್ಹವಾಗಿ ಹೆಚ್ಚಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ, ಜನ ಔಷಧಿ ಕೇಂದ್ರಗಳಲ್ಲಿ 50-90% ಕಡಿಮೆ ದರದ ಔಷಧಿ, ಮತ್ತು ಉಜ್ವಲಾ ಯೋಜನೆಯಡಿ ಕೋಟ್ಯಂತರ ಮಹಿಳೆಯರಿಗೆ ಎಲ್ಪಿಜಿ ಸಂಪರ್ಕ ಜೀವನಮಟ್ಟ ಸುಧಾರಿಸಿವೆ. ಭಾರತ್ ನೆಟ್ ಮೂಲಕ ಗ್ರಾಮೀಣ ಇಂಟರ್ನೆಟ್ ಸಂಪರ್ಕದ ವಿಸ್ತರಿಣೆಯಾಗಿದೆ.
ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಷಯಗಳಿಗೆ ಸಂಬಂಧಪಟ್ಟಂತೆ, ಅಯೋಧ್ಯೆಯ ಶ್ರೀರಾಮ ಮಂದಿರ, ಕಾಶೀವಿಶ್ವನಾಥ ಕಾರಿಡಾರ್, ಓಂಕಾರೇಶ್ವರ ಮಂದಿರ ಕಾರಿಡಾರ್, ಮತ್ತಿತರ ತೀರ್ಥಕ್ಷೇತ್ರಗಳ ಅಭಿವೃದ್ಧಿ ಯಾವುದೇ ವಿವಾದವಿಲ್ಲದೇ, ಭರದಿಂದ ಸಾಗಿದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ 193 ದೇಶಗಳಿಂದ ಅನುಮೋದನೆ ಸಿಕ್ಕಿದೆ. ಪದ್ಮ ಪ್ರಶಸ್ತಿಗಳು ತುಳಸೀಗೌಡ, ಸಾಲುಮರದ ತಿಮ್ಮಕ್ಕರಂತಹ ಗ್ರಾಮೀಣ ಸಾಧಕರನ್ನು ಗುರುತಿಸಿವೆ.
ಆದಾಗ್ಯೂ, ಇನ್ನೂ ಹಲವು ಕ್ಷೇತ್ರಗಳಲ್ಲಿ ಕ್ರಮ ಮತ್ತು ಚರ್ಚೆ ಮುಂದುವರಿಯಬೇಕಿದೆ ಎಂಬುದನ್ನೂ ಗಮನಿಸಬೇಕು.
- ಕಲಬೆರಕೆ ರಹಿತ, ಸುರಕ್ಷಿತ ಆಹಾರ ಪ್ರತಿಯೊಬ್ಬರಿಗೂ ಲಭ್ಯವಾಗಬೇಕು. ವಿಷಕಾರೀ ರಾಸಾಯನಿಕಗಳ ಅನಿಯಂತ್ರಿತ ಬಳಕೆಯಿಂದ ಕ್ಯಾನ್ಸರ್, ಬಂಜೆತನ, ಉಸಿರಾಟ ಹಾಗೂ ಜೀರ್ಣ ಸಂಬಂಧೀ ರೋಗಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ.
- ಸೂಕ್ಷ್ಮಸಂವೇದೀ ಪರಿಸರ ವಲಯಗಳಲ್ಲಿ ಅಭಿವೃದ್ಧಿ ಯೋಜನೆಗಳಿಂದ ಆಗುತ್ತಿರುವ ಪರಿಸರ ಹಾನಿ ಮತ್ತು ಜೀವಸಂಕುಲ ಅಸಮತೋಲನ ತಡೆಯಬೇಕೆಂದು ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ.
- ಎಲ್ಲ ಕ್ಷೇತ್ರಗಳಲ್ಲಿ ಮಹಿಳಾ ಮೀಸಲಾತಿಯನ್ನು 50%ಗೆ ವಿಸ್ತರಿಸಬೇಕು ಮತ್ತು ಸಮಾನ ನಾಗರಿಕ ಸಂಹಿತೆ ಜಾರಿಯಾಗಬೇಕು ಎಂಬ ಬೇಡಿಕೆಗಳು ಪ್ರಬಲವಾಗಿ ಕೇಳಿಬರುತ್ತಿವೆ.
- ಶಿಕ್ಷಣ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನ ಪರಂಪರೆ ಹಾಗೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಪಕ್ಷಪಾತದಿಂದ ಕೂಡಿದ ಇತಿಹಾಸ ಪಠ್ಯಗಳ ಪರಿಷ್ಕರಣೆ ಮಾಡಿ ಭಾರತದ ನೈಜ ಇತಿಹಾಸ ಕಲಿಸಬೇಕು.
- UGC ನೀತಿ ಬದಲಾವಣೆ, NEET ಮುಂತಾದ ಪರೀಕ್ಷೆಗಳಲ್ಲಾದ ದೊಡ್ಡ ಲೋಪಗಳಿಗೆ ಸ್ಪಷ್ಟ ಕಾರ್ಯಯೋಜನೆ ಹಾಗೂ ತುರ್ತು ಪರಿಹಾರ ಅಗತ್ಯ.
- ಹಿಂದೂಗಳು, ಜೈನರು ಹಾಗೂ ಶೋಷಿತ ವರ್ಗಗಳ ವಿರುದ್ಧ ನಡೆಯುವ ಹಿಂಸೆ ಮತ್ತು ದೌರ್ಜನ್ಯ ತಡೆಯಲು ಪರಿಣಾಮಕಾರಿ ಕಾನೂನುಗಳ ಜಾರಿ ಆಗಬೇಕು.
ಒಟ್ಟಾರೆಯಾಗಿ ಹೇಳುವುದಾದರೆ, ಒಂದು ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಸರ್ಕಾರದ ಸಾಧನೆಗಳನ್ನು ತಟಸ್ಥವಾಗಿ ಮೌಲ್ಯಮಾಪನ ಮಾಡಿದಾಗ, ಈ 12 ವರ್ಷಗಳ ಆಡಳಿತಾವಧಿಯಲ್ಲಿ ಜಾರಿಗೆ ಬಂದಿರುವ ಯೋಜನೆಗಳು ಮತ್ತು ಕೈಗೊಂಡಿರುವ ದೃಢ ನಿರ್ಧಾರಗಳು ಭಾರತವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠ ಹಾಗೂ ಸ್ವಾವಲಂಬೀ ರಾಷ್ಟ್ರವಾಗಿ ರೂಪಿಸುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸಿವೆ ಎಂಬುದನ್ನು ನಿಸ್ಸಂದೇಹವಾಗಿ ಒಪ್ಪಿಕೊಳ್ಳಬಹುದು. ಈ ಬದಲಾವಣೆಗಳು ಕೇವಲ ರಾಜಕೀಯ ಮೈಲಿಗಲ್ಲುಗಳಲ್ಲ — ಜನಸಾಮಾನ್ಯರ ದಿನನಿತ್ಯದ ಬದುಕಿನಲ್ಲಿ ಆಗಿರುವ ಗಮನಾರ್ಹ ಪ್ರಗತಿ. ಒಂದು ರಾಷ್ಟ್ರವಾಗಿ, ಈ ದಶಕದಲ್ಲಿ ಆಗಿರುವ ಪ್ರಗತಿಯನ್ನು ಮುಕ್ತ ಮನಸ್ಸಿನಿಂದ ಗುರುತಿಸುವುದು ಸತ್ಯಕ್ಕೆ ಸಲ್ಲಿಸುವ ಗೌರವ.
Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #sabkasaath #sabkavikas #sabkavishwas #sabkaprayas #narendramodi #modiera #amritkal







