• June 8, 2026
  • RP
  • 0

Children, come back to school. A warm welcome to you, with best wishes!

Summer vacation is the time when you see a sense of accomplishment on children’s faces—having completed, prepared for, and triumphed over the continuous exams of the last two months of the academic year. The joy of those holidays before the results are announced is truly beyond words! That is what the feeling of true freedom feels like! Teachers, too, feel relieved after completing the evaluation and the announcement of results.

ಶೈಕ್ಷಣಿಕ ವರ್ಷದ ಕೊನೆಯ ಎರಡು ತಿಂಗಳುಗಳಲ್ಲಿ ಅವಿರತವಾಗಿ ನಡೆಯುವ ಪರೀಕ್ಷೆಗಳು, ಅದಕ್ಕೆ ಬೇಕಾದ ಓದು, ಸಿದ್ಧತೆಗಳನ್ನೆಲ್ಲಾ ಯಶಸ್ವಿಯಾಗಿ ಪೂರೈಸಿ, ಜಯಿಸಿ ಹೊರಬಂದ ಭಾವ, ಮಕ್ಕಳ ಮೊಗದಲ್ಲಿ ಕಾಣುವ ಕಾಲವೇ ಬೇಸಿಗೆ ರಜೆ. ಫಲಿತಾಂಶಗಳು ಬರುವ ಮುಂಚಿನ ಆ ರಜಾದಿನಗಳ ಖುಶಿಯಂತೂ ವರ್ಣಿಸಲಸದಳ! ನಿಜವಾದ ಸ್ವಾತಂತ್ರ್ಯದ ಅನುಭೂತಿ ಅಂದರೆ ಅದು! ಶಿಕ್ಷಕರು ಮೌಲ್ಯಮಾಪನ ಹಾಗೂ ಫಲಿತಾಂಶಗಳ ಪ್ರಕಟಣೆಯ ನಂತರ ಹಗುರಾಗುವರು.

 

ಬೇಸಿಗೆ ರಜೆಯನ್ನು ನಾವು ವಾಸಿಸುವ ನಗರ, ಪಟ್ಟಣ ಅಥವಾ ಊರಿನಿಂದ ದೂರ, ಹಳ್ಳಿಗಾಡಿನ ಮನೆಯಲ್ಲಿ ಕಳೆಯುವುದೇ ಒಂದು ಬೇರೆಯ ಆನಂದ. ವಿಶಾಲವಾದ ಮನೆ, ಜಗುಲಿ-ಅಂಗಳಗಳು, ಗದ್ದೆ, ತೋಟ, ಕಾಡು, ಕೆರೆ, ಹೊಳೆ, ನದಿಗಳಲ್ಲಿ ಆಡಿ ನಲಿಯುವ ಅವಕಾಶವಿದ್ದರಂತೂ, ಸಂತೋಷಕ್ಕೆ ಪಾರವೇ ಇಲ್ಲ! ಜೀವನದುದ್ದಕ್ಕೂ ಸವಿನೆನಪುಗಳನ್ನು ಕಟ್ಟಿಕೊಡುವ ಸದವಕಾಶಗಳ ಸಮಯವದು!

 

ಅಜ್ಜಿ ತನ್ನ ಪಳಗಿದ ಕೈಗಳಿಂದ, ಮಮತೆಯ ಬೆರೆಸಿ ಮಾಡಿದ ಅದ್ಭುತ ಅಡುಗೆ, ಅಜ್ಜ ಅಥವಾ ಸೋದರ ಮಾವನನೊಂದಿಗೆ ಹತ್ತಿರದ ಪೇಟೆಗೆ ಹೋಗಿ ಗೋಲಿಸೋಡಾ, ಎಳೆನೀರು, ಐಸ್‌ಕ್ರೀಂ ಅಥವಾ ಹೋಟೆಲಿಗೆ ಹೋಗಿ ಬಂದ ನೆನಪುಗಳೊಂದಿಗೆ ಮಕ್ಕಳು ತಂತಮ್ಮ ಮನೆಗಳಿಗೆ ಮರಳಿ ಆ ನೆನಪುಗಳ ಜಾತ್ರೆ ಇನ್ನೂ ಹಸಿರಾಗಿರುವಾಗಲೇ ಶಾಲೆಗಳಿಗೆ ಮರಳುವರು.

 

ವಿದ್ಯಾರಂಭಂ ಕರಿಷ್ಯಾಮಿ… ಸಿದ್ಧಿರ್ಭವತು ಮೇ ಸದಾ…

ಹೊಸ ಶೈಕ್ಷಣಿಕ ವರ್ಷದ ಹೊಸ ಪುಸ್ತಕಗಳನ್ನು ತೆರೆಯುತ್ತಿದ್ದಂತೆ ಹೊಮ್ಮುವ ಆಪ್ಯಾಯಮಾನ ಪರಿಮಳ, ಪುಸ್ತಕಗಳನ್ನು ಬೈಂಡ್ ಮಾಡಿ ಲೇಬಲ್ ಹಚ್ಚುವ ಸಂಭ್ರಮವಂತೂ ಹೇಳತೀರದು. ಕ್ಲಾಸ್ ಟೀಚರ್ ಯಾರು, ಮೊದಲ ದಿನವೇ ಟೈಂ ಟೇಬಲ್ ಪ್ರಕಾರ ಪಾಠಗಳು ಆರಂಭವಾಗುತ್ತವೆಯೋ ಇಲ್ಲವೋ, ಹೊಸದಾದ ಗರಿಗರಿ ಪುಸ್ತಕದ ಖಾಲಿ ಹಾಳೆಯ ಮೇಲೆ ದುಂಡಾದ ಅಕ್ಷರಗಳಲ್ಲಿ ಬರೆಯುವ ಅವಕಾಶ ಒದಗಿ ಬರುವುದೋ ಎಂಬ ಕಾತರ! ಗೆಳೆಯರೊಡನೆ ರಜೆಯ ಅನುಭವಗಳನ್ನು ಪರಸ್ಪರ ಹಂಚಿಕೊಳ್ಳುವ ತವಕ, ಆಟೋಟ-ಊಟದ ವಿರಾಮದ ಸಮಯಗಳಲ್ಲಿ ರಜಾಮಜಾದ ಮೆಲುಕು, ಪರಸ್ಪರ ಅನುಭವ ಹಂಚಿಕೆ… ಇವೆಲ್ಲವೂ ಮಕ್ಕಳನ್ನು ಶಾಲೆಯತ್ತ ಸೆಳೆಯುತ್ತವೆ! ಪ್ರಸ್ತುತ ಕಾಲದಲ್ಲಿ ಒಂದು ಅಥವಾ ಎರಡು ಮಕ್ಕಳಿರುವ ವಿಭಕ್ತ ಕುಟುಂಬಗಳಲ್ಲಿ, ಮಕ್ಕಳಿಗೆ ಮನೆಗಿಂತ ಶಾಲೆಯೇ ಹೆಚ್ಚು ಸಂತೋಷ ಕೊಡುವ, ಚಟುವಟಿಕೆಗಳಿಂದ ತುಂಬಿರುವ ಜಾಗವಾಗಿರಲಿಕ್ಕೂ ಸಾಕು.

 

ಇನ್ನು ಪೋಷಕರಿಗಂತೂ, ಶಾಲಾ-ಪುನರಾರಂಭವೆಂದರೆ, ಜವಾಬ್ದಾರಿಗಳ ಸರತಿ ಸಾಲೇ ಕಾದಿರುವಂತೆ ಭಾಸವಾಗುವ ಕಾಲ! ಶಾಲಾ ಸಮವಸ್ತ್ರ, ಹೌಸ್ ಕಲರ್ ಸಮವಸ್ತ್ರ, ಕೋಟ್/ ಸ್ವೆಟರ್, ಶೂ, ಬೆಲ್ಟ್, ಟೈ ಎಲ್ಲದರ ಪರಾಮರ್ಶೆ; ಶಾಲಾ ಬಸ್, ವ್ಯಾನ್, ಆಟೋರಿಕ್ಷಾ ಚಾಲಕರೊಡನೆ ಮಾತನಾಡಿದರೆ ಒಮ್ಮೆ ದೊಡ್ಡ ನಿಟ್ಟುಸಿರು, ಸಮಾಧಾನ ಪೋಷಕರಿಗೆ. ಆಫೀಸಿನ ಕೆಲಸ, ಮನೆಗೆಲಸ, ಮಕ್ಕಳನ್ನು ಶಾಲೆಗೆ ಸಿದ್ಧಗೊಳಿಸುವ ಜವಾಬ್ದಾರಿಗಳು ಒತ್ತಡ ಹೆಚ್ಚಿಸಿದರೂ, ರಜೆಯ ಸಮಯದಲ್ಲಿ ಬೇಡದ ಕಾಲಹರಣ ಮಾಡಿಕೊಂಡು, ಮೊಬೈಲ್, ಟಿವಿ, ಕಂಪ್ಯೂಟರ್ ಎದುರು ಕಾಲ ಕಳೆಯುವ ಮಕ್ಕಳನ್ನು ನೋಡಿ ಬೇಸರಪಡುವುದಕ್ಕಿಂತ ಶಾಲೆಗೆ ಹೋಗುವುದೇ ಲೇಸು ಎಂಬ ಸಂತಸ ಪಾಲಕರಿಗೆ!

 

ಮಕ್ಕಳ ರಜೆಯ ಸಮಯದ ಸದುಪಯೋಗಕ್ಕಾಗಿ ಮಕ್ಕಳನ್ನು ಕ್ರಿಯಾಶೀಲರಾಗಿರಿಸಲು, ವ್ಯಸ್ತರಾಗಿಸಲು ಬೇಸಿಗೆ ಶಿಬಿರ, ಸಂಗೀತ, ಕ್ರಿಕೆಟ್, ಚೆಸ್, ಕರಾಟೆ, ಭರತನಾಟ್ಯ, ಕಥಕ್ ಮುಂತಾದ ತರಬೇತಿ ಶಾಲೆಗಳನ್ನು ಹುಡುಕಿ, ಫೀಸ್ ಹೊಂದಿಸಿ ಕಳಿಸುವುದು, ವಾಪಸ್ ಬಂದ ಮೇಲೆ ಅಭ್ಯಾಸ ಮಾಡಿಸುವುದು — ಇಂತಹ ಜವಾಬ್ದಾರಿಗಳನ್ನು ನಿಭಾಯಿಸಿ ಬಸವಳಿದ ಪೋಷಕರಿಗೆ ಶಾಲಾರಂಭ ಎನ್ನುವುದು ಖಂಡಿತವಾಗಿಯೂ ಒಂದು ಶುಭ ಸುದ್ದಿಯೇ!

 

ಶಾಲಾ ಸಿಬ್ಬಂದಿ ಹಾಗೂ ಶಾಲೆಯ ಶಿಕ್ಷಕರು ಮಕ್ಕಳಿಗಿಂತ 2-3 ದಿನ ಮೊದಲೇ ಶಾಲೆಗೆ ತೆರಳಿ, ಬೇಕಾದ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಬೇಕಾಗುತ್ತದೆ. ಕೇವಲ ಕರಿಕ್ಯುಲಂ ಅಥವಾ ಸಿಲಬಸ್ ಪ್ರಕಾರ ಪಾಠ ಮಾಡಿ ಮುಗಿಸುವುದಷ್ಟೇ ಮುಖ್ಯವಲ್ಲ. ಶಿಕ್ಷಕರಾದವರು ತಮ್ಮ ವಿದ್ಯಾರ್ಥಿಗಳ ಕಲಿಯುವ ಹಸಿವಿಗೆ ಗ್ರಾಸ ಒದಗಿಸಿ, ಪ್ರೋತ್ಸಾಹ ತುಂಬಿ, ಸ್ಫೂರ್ತಿಯ ಸೆಲೆಯಾಗಬೇಕು. ಅದು ತಮ್ಮ ಉದ್ಯೋಗದ ಭಾಗವೇ ಆಗಿದ್ದರೂ, ಆ ಕೆಲಸಕ್ಕೆ ಅಪಾರ ಮಹತ್ವವಿದೆ ಎಂಬ ಅರಿವಿರುವ ಶಿಕ್ಷಕರು ಮಾತ್ರ ಶಿಸ್ತಿನ, ವಿದ್ಯಾವಿನಯ ಸಂಪನ್ನರಾದ, ಯಶಸ್ವೀ ಸತ್ಪ್ರಜೆಗಳನ್ನು ಸಮಾಜಕ್ಕೆ ಉಡುಗೊರೆಯಾಗಿ ನೀಡಲು ಸಾಧ್ಯ. ಯಾವುದೇ ಸಮಾಜವು ಉನ್ನತಿಗೆ, ಉತ್ಕೃಷ್ಟತೆಯಡೆಗೆ ತುಡಿಯಬೇಕಾದರೆ, ಅದು ಮೊದಲು ಬುದ್ಧಿವಂತ, ನೀತಿವಂತ, ಸದಾಚಾರೀ ಹಾಗೂ ವಿಚಾರವಂತ ಶಿಕ್ಷಕವೃಂದವನ್ನು ಶಾಲೆಗಳಲ್ಲಿ ಹೊಂದಿರಬೇಕು.

 

ಟಿವಿ ಹಾಗೂ ಮೊಬೈಲ್‌ಗಳನ್ನು ದಿಟ್ಟಿಸುತ್ತಾ ಮಕ್ಕಳಿಗೆ ಸಮಯವನ್ನೇ ಕೊಡದ ಕೆಲವು ಬೇಜವಾಬ್ದಾರಿಯ ಪೋಷಕರಿಂದ ಮಕ್ಕಳಿಗೆ ಕೆಲವು ಗಂಟೆಗಳಾದರೂ ಮುಕ್ತಿ ನೀಡುವ ಉಪಾಯಗಳಂತಾಗಿವೆ ಶಾಲೆಗಳು! ಅಂತಹವರ ಮಕ್ಕಳನ್ನೂ ಸರಿದಾರಿಯಲ್ಲಿ ನಡೆಸುವ, ಎಲ್ಲ ಮಕ್ಕಳನ್ನೂ ಸಮವಾಗಿ ಕಾಣುವ, ಹೆಚ್ಚು ಕಾಳಜಿ ಬೇಕಿರುವ ಮಕ್ಕಳಿಗೆ ಹೆಚ್ಚಿನ ಆಸ್ಥೆಯಿಂದ ಪ್ರೋತ್ಸಾಹ ಹಾಗೂ ಸಹಾಯ ಒದಗಿಸುವ ಗುರುಗಳು ನಿಜಕ್ಕೂ ಸ್ತುತ್ಯರ್ಹರು. ಅಂತಹ ಶಿಕ್ಷಕರು ಪೋಷಕರಿಗಿಂತಲೂ ಹೆಚ್ಚು ಇಷ್ಟವಾಗಿಬಿಡುವ ಉದಾಹರಣೆಗಳೆಷ್ಟೋ!

 

ಬೇಸಿಗೆ ರಜೆ ಅಥವಾ ನವರಾತ್ರಿ ರಜೆಗಳ ಸಮಯವನ್ನು ಹೆಚ್ಚು ನಿರಾಳವಾಗಿ ಕಳೆಯಬೇಕಾದಲ್ಲಿ, ಮಕ್ಕಳು, ಶಿಕ್ಷಕರು ವರ್ಷದುದ್ದಕ್ಕೂ ಪ್ರತಿ ದಿನವೂ ನಿಯಮಿತವಾದ ಕಲಿಕೆ, ಓದು ಹಾಗೂ ಮನನ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳುವುದು ಉದ್ವೇಗ, ಆತಂಕದಿಂದ ಮುಕ್ತರಾಗಲು ಒಂದು ಸರಳವಾದ ಉಪಾಯ. ನೈರಂತರ್ಯವೇ ಯಶಸ್ಸಿನ ಸುಲಭ ಸೋಪಾನ (ಮೆಟ್ಟಿಲುಗಳು). ಹಾಗೆಯೇ ಹಿಂದಿನ ವರ್ಷದಲ್ಲಿ ಉತ್ತಮ ರಿಸಲ್ಟ್ ಬಂದವರು ಅದನ್ನು ಮುಂದುವರೆಸುವ, ಪ್ರಗತಿಹೊಂದುವ ಕಡೆ ಗಮನ ಹರಿಸುವುದು; ಸಮಾಧಾನಕರ ಅಥವಾ ಮಧ್ಯಮ ಎನಿಸುವ ಫಲಿತಾಂಶ ಬಂದವರು ಹೊಸ ಹುರುಪು ಹಾಗೂ ಹೊಸ ಆಶಯದೊಂದಿಗೆ ತಮ್ಮನ್ನು ತಾವು ಹೆಚ್ಚಿನ, ನಿರಂತರ ಶ್ರಮವಹಿಸಲು ಮನಸ್ಸನ್ನು ಗಟ್ಟಿಗೊಳಿಸಿಕೊಂಡು ಶುಭಾರಂಭ ಮಾಡಿದರೆ ಯಶಸ್ಸು ಕಟ್ಟಿಟ್ಟಬುತ್ತಿ ಎಂದು ತಿಳಿದು ಮುನ್ನಡೆಯಬೇಕು.

 

ಶಾಲಾ ಆರಂಭವು ಮಕ್ಕಳು, ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳಿಗೂ ಒಂದು ಹೊಸ ಜೀವನದ ಶುಭಾರಂಭದಂತೆಯೇ ಆಗಿದೆ! ಮತ್ತೆ ಶಾಲೆಗೆ ಬನ್ನಿ, ಶುಭಾಶಯ ಹಾಗೂ ಹಾರೈಕೆಗಳೊಂದಿಗೆ ಸ್ವಾಗತವು ನಿಮಗೆ!

Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #schoolreopen #rajamaja #summerholidays

Leave a Reply

Your email address will not be published. Required fields are marked *