• June 4, 2026
  • RP
  • 0
World Environment Day (2026): Inspired by Nature. For Climate. For Our Future
The mindset of revering nature as sacred has been deeply rooted in us since time immemorial. In the immortal tales of the Panchatantra, our ancient sages delivered moral messages through animal characters like the lion, the jackal, and the ox—reminding us that this world remains healthy and beautiful only if nature and all living species coexist in mutual harmony.

ವಿಶ‍್ವ ಪರಿಸರ ದಿನ (2026): ಪ್ರಕೃತಿಯಿಂದ ಸ್ಫೂರ್ತಿ. ಹವಾಮಾನಕ್ಕಾಗಿ. ನಮ್ಮ ಭವಿಷ್ಯಕ್ಕಾಗಿ

ಅನಾದಿಕಾಲದಿಂದಲೂ ಪ್ರಕೃತಿಯನ್ನು ಪವಿತ್ರವಾಗಿ ಭಾವಿಸುವ ಮನೋಧರ್ಮ ನಮ್ಮಲ್ಲಿ ಬಲವಾಗಿ ಬೇರೂರಿದೆ. ‘ಪಂಚತಂತ್ರ’ದ ಅಮರ ಕಥೆಗಳಲ್ಲಿ ಸಿಂಹ, ನರಿ, ಎತ್ತು ಮುಂತಾದ ಪ್ರಾಣಿ ಪಾತ್ರಗಳ ಮೂಲಕ ನಮ್ಮ ಪ್ರಾಚೀನ ಋಷಿಗಳು ನೀತಿ ಸಂದೇಶಗಳನ್ನು ಕೊಟ್ಟರು – ಪ್ರಕೃತಿ ಮತ್ತು ಜೀವಸಂಕುಲ ಪರಸ್ಪರ ಹೊಂದಾಣಿಕೆಯೊಂದಿಗೆ ಬದುಕಿದರೆ ಮಾತ್ರ ಈ ಜಗತ್ತು ಸ್ವಸ್ಥ-ಸುಂದರ.

ದಟ್ಟಾರಣ್ಯದಲ್ಲಿನ ‘ರಕ್ತಮುಖ’ ಎಂಬ ಕೋತಿ, ‘ಕರುಳಮುಖ’ ಎಂಬ ಮೊಸಳೆ, ಕಾಡಿನ ಅಹಂಕಾರಿ ರಾಜನಾದ ‘ಭಾಸುರಸಕ’ ಎಂಬ ಸಿಂಹ, ‘ದಂತಕ’ ಎಂಬ ಚತುರ ಮೊಲ, ಪರಸ್ಪರ ಒಗ್ಗಟ್ಟಿನ ಮಹತ್ವವನ್ನು ಸಾರುವ ‘ಲಘನಕ’ ಎಂಬ ಕಾಗೆ, ‘ಹಿರಣ್ಯಕ’ ಎಂಬ ಇಲಿ, ‘ಚಿತ್ರಾಂಗ’ ಎಂಬ ಜಿಂಕೆ ಮತ್ತು ‘ಕಂಬುಗ್ರೀವ’ ಎಂಬ ಆಮೆಯ ಬಳಗದ ನೀತಿ-ಕಥಾ-ಗುಚ್ಛ ಕಾಡಿನ ಸಹಬಾಳ್ವೆಗೆ ಅತ್ಯುತ್ತಮ ಉದಾಹರಣೆಯಾಗಿದೆ. ಪ್ರತಿಯೊಂದು ಜೀವಿಯೂ ಪ್ರಕೃತಿಯ ಚಕ್ರದಲ್ಲಿ ಹೇಗೆ ಭಾಗಿಗಳಾಗಿವೆ ಮತ್ತು ಕಾಡಿನ ನಿತ್ಯಹಸಿರಿನ ಸಂಪತ್ತನ್ನು ಹೇಗೆ ಆಶ್ರಯಿಸಿವೆ ಎಂಬುದನ್ನು ನಮಗೆ ಆ ಕಥೆಗಳು ಮನವರಿಕೆ ಮಾಡಿಕೊಡುತ್ತವೆ.

ಇಂತಹಾ ಸಹಬಾಳ್ವೆಯ ಚಿಂತನೆಯನ್ನು ಚಿಕ್ಕ ಪ್ರಾಯದಲ್ಲೇ ಮಕ್ಕಳಿಗೆ ಕಲಿಸುವಂತಹ ಉನ್ನತ ವಿಚಾರಗಳ ದೇಶದಲ್ಲಿ, ತನ್ಮೂಲಕ ವಿಶ್ವದಲ್ಲಿ ಮತ್ತೊಮ್ಮೆ, ಮಗದೊಮ್ಮೆ ಆ ಪರಿಸರ ಕಾಳಜಿಯನ್ನು ಬೇರೂರಿಸಲೆಂದೇ ಪ್ರತಿ ವರ್ಷ ಜೂನ್ 5ರಂದು ‘ವಿಶ್ವ ಪರಿಸರ ದಿನ’ವನ್ನು ಆಚರಿಸಲಾಗುತ್ತದೆ.

1972ರ ಜೂನ್ 5ರಂದು ಸ್ವೀಡನ್‌ನ ಸ್ಟಾಕ್‌ಹೋಮ್ ನಗರದಲ್ಲಿ ‘ಮಾನವ ಪರಿಸರ ಕುರಿತ ವಿಶ್ವಸಂಸ್ಥೆಯ ಸಮ್ಮೇಳನ’ವು ಆಯೋಜನೆಗೊಂಡಿತು. 113 ರಾಷ್ಟ್ರಗಳ ಭಾಗವಹಿಸುವಿಕೆಯೊಂದಿಗೆ ನಡೆದ ಈ ಐತಿಹಾಸಿಕ ಶೃಂಗಸಭೆಯು ಜಗತ್ತಿನ ಮೊದಲ ಅಂತಾರಾಷ್ಟ್ರೀಯ ಪರಿಸರ ಸಮ್ಮೇಳನವಾಗಿದೆ. ಇದರ ಫಲಿತವಾಗಿ ವಿಶ್ವಸಂಸ್ಥೆ ‘ಪರಿಸರ ಕಾರ್ಯಕ್ರಮ’ವನ್ನು (UNEP) ಯೋಜಿಸಿ, ಜೂನ್ 5ನ್ನು ‘ವಿಶ್ವ ಪರಿಸರ ದಿನ’ವೆಂದು ಘೋಷಿಸಿತು. 1974ರಲ್ಲಿ ‘ಒಂದೇ ಭೂಮಿ’ (Only One Earth) ಎಂಬ ಘೋಷವಾಕ್ಯದೊಂದಿಗೆ ಮೊದಲ ‘ವಿಶ‍್ವ ಪರಿಸರ ದಿನ’ವನ್ನು ಆಚರಿಸಲಾಯಿತು. ಅಂದಿನಿಂದ ಇಂದಿನವರೆಗೆ ಪ್ರತಿ ವರ್ಷ ವಿಶಿಷ್ಟ ಪಾರಿಸಾರಿಕ ಚಿಂತನೀಯ ವಿಚಾರವನ್ನು ಆಯ್ದು ಜಗತ್ತಿನಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ. 2026ರ ಈ ಸಾಲಿನ ಥೀಮ್ – “ಪ್ರಕೃತಿಯಿಂದ ಸ್ಫೂರ್ತಿ. ಹವಾಮಾನಕ್ಕಾಗಿ. ನಮ್ಮ ಭವಿಷ್ಯಕ್ಕಾಗಿ” (Inspired by Nature. For Climate. For Our Future).

ಸನಾತನ ಭಾರತೀಯ ಪರಂಪರೆಯಲ್ಲಿ ಪ್ರಕೃತಿಯನ್ನು ಕೇವಲ ಸಂಪನ್ಮೂಲವೆಂದಷ್ಟೇ ನೋಡಲಿಲ್ಲ. ಕಲ್ಲು, ಬೆಟ್ಟ, ನದಿ, ಅಗ್ನಿ, ವಾಯು, ವೃಕ್ಷ, ಸೂರ್ಯ, ಚಂದ್ರ ಮತ್ತು ಪ್ರಾಣಿ-ಪಕ್ಷಿ ಸಂಕುಲದಲ್ಲೂ ದೈವೀ ಸ್ವರೂಪವನ್ನು ಕಾಣುವ ಎತ್ತರಕ್ಕೆ ಬೆಳೆದಿದೆ. ‘ಧರ್ಮೋ ರಕ್ಷತಿ ರಕ್ಷಿತಃ’ ಎಂಬ ಪ್ರಾಚೀನ ಸಂಸ್ಕೃತ ಸೂಕ್ತಿಯ ಸ್ಫೂರ್ತಿಯಲ್ಲಿ, ‘ವೃಕ್ಷೋ ರಕ್ಷತಿ ರಕ್ಷಿತಃ’ ಅಂದರೆ, ಮರವನ್ನು ರಕ್ಷಿಸಿದವರನ್ನು ಮರವು ರಕ್ಷಿಸುತ್ತದೆ ಎಂಬುದು ಸದಾ, ಸರ್ವದಾ ಅಷ್ಟೇ ಪ್ರಸ್ತುತ.

ಎತ್ತರದ ಹಿಮಾಲಯ ಶ್ರೇಣಿಯಿಂದ ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳವರೆಗೆ, ಗಂಗಾ ತೀರದ ಕೃಷಿ ಭೂಮಿಯಿಂದ ಕೃಷ್ಣಾ-ಗೋದಾವರಿ ಪ್ರವಾಹ ಮೈದಾನಗಳವರೆಗೆ – ಭಾರತ ಒಂದು ಅಪೂರ್ವ ಪರಿಸರ ವೈವಿಧ್ಯತೆಯ ತೊಟ್ಟಿಲು. ಇಂದು ದೇಶದಲ್ಲಿ 104 ರಾಷ್ಟ್ರೀಯ ಉದ್ಯಾನವನಗಳು ಮತ್ತು 550ಕ್ಕೂ ಹೆಚ್ಚು ವನ್ಯಜೀವಿ ಸಂರಕ್ಷಣಾ ವಲಯಗಳಿವೆ. 1986ರಲ್ಲಿ ಸ್ಥಾಪನೆಯಾದ ನೀಲಗಿರಿ ಜೀವಮಂಡಲ ಸಂರಕ್ಷಣಾ ಕ್ಷೇತ್ರ ಭಾರತದ ಮೊದಲ ಮತ್ತು ಅತ್ಯಂತ ದೊಡ್ಡ ಜೀವ ವಿವಿಧತೆಯ ಆಶ್ರಯಧಾಮ. ಈ ಕಟ್ಟುನಿಟ್ಟಿನ ಸಂರಕ್ಷಣಾ ಕ್ರಮಗಳ ಫಲವಾಗಿ ಹುಲಿಗಳ ಸಂಖ್ಯೆಯಲ್ಲಿ ಧನಾತ್ಮಕ ಬೆಳವಣಿಗೆ ದಾಖಲಾಗಿದೆ.

ರಾಜಸ್ಥಾನದ ರಾಜಸಮಂದಾ ಜಿಲ್ಲೆಯ ಪಿಪ್ಲಾಂತ್ರಿ ಗ್ರಾಮದಲ್ಲಿ, ಶ್ಯಾಮ್ ಸುಂದರ್ ಪಾಲಿವಾಲ್ ಎಂಬ ದೂರದರ್ಶಿ ನಾಯಕನ ನೇತೃತ್ವದಲ್ಲಿ ಮಾನವಕುಲದ ಇತಿಹಾಸದಲ್ಲೇ ಅತ್ಯಂತ ಅವಿಸ್ಮರಣೀಯ ಅಧ್ಯಾಯವೊಂದು ಸೃಷ್ಟಿಯಾಗಿದೆ. ತನ್ನ ಹೆಣ್ಣುಮಗುವಿನ ವಿಯೋಗದ ತೀವ್ರ ನೋವಿನಿಂದ ನೊಂದ ಅವರು, ಆ ದುಃಖವನ್ನು ಸಕಾರಾತ್ಮಕವಾಗಿ ಬದಲಾಯಿಸಿ, ಗ್ರಾಮದಲ್ಲಿ ಜನಿಸುವ ಪ್ರತಿಯೊಂದು ಹೆಣ್ಣುಮಗುವಿನ ಜನ್ಮದ ನೆನಪಿಗಾಗಿ 111 ಗಿಡಗಳನ್ನು ನೆಡುವ ಪರಂಪರೆಯನ್ನು ಆರಂಭಿಸಿದರು. ಕಳೆದ 13 ವರ್ಷಗಳ ಅವಧಿಯಲ್ಲಿ, ಪರಿಸರ ಶುದ್ಧತೆ ಮತ್ತು ಹಸಿರನ್ನು ಕಾಪಾಡುವ ನಿಟ್ಟಿನಲ್ಲಿ ಪಿಪ್ಲಾಂತ್ರಿ ಗ್ರಾಮವು ಬರೋಬ್ಬರಿ 3 ಲಕ್ಷ 50 ಸಾವಿರಕ್ಕೂ ಹೆಚ್ಚು ಮರಗಳನ್ನು ನೆಟ್ಟು ಬೆಳೆಸಿದೆ. ಮಾರ್ಬಲ್ ಗಣಿಗಳಿಂದ ಉಂಟಾಗಿದ್ದ ನೀರಿನ ಬಿಕ್ಕಟ್ಟು ಮತ್ತು ಅರಣ್ಯ ನಾಶದ ಸಮಸ್ಯೆಯನ್ನು ಯಶಸ್ವಿಯಾಗಿ ನಿವಾರಿಸಿದ ಈ ಮಹಾನ್ ಪ್ರಯತ್ನವನ್ನು ಯುನೆಸ್ಕೋ (UNESCO) ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯಗಳು ಮುಕ್ತಕಂಠದಿಂದ ಶ್ಲಾಘಿಸಿವೆ. ಇದು ಕೇವಲ ಪರಿಸರ ಸಂರಕ್ಷಣೆಯಷ್ಟೇ ಆಗಿರದೇ ಒಂದು ಹೆಣ್ಣುಮಗುವಿನ ಗೌರವ, ಸಾಮಾಜಿಕ ಸಮಾನತೆ ಮತ್ತು ಪರಿಸರ ಜಾಗೃತಿಯ ಪವಿತ್ರ ಬಾಂಧವ್ಯವಾಗಿದೆ.

ಭಾರತದ ಪರಿಸರ ಸಂರಕ್ಷಣೆಯ ಮಹಾನ್ ಮಾರ್ಗದರ್ಶಕರಾದ ಪ್ರೊ. ಮಾಧವ ಗಾಡ್ಗೀಳ್, ಚಿಪ್ಕೋ ಆಂದೋಲನದ ಹರಿಕಾರರಾದ ಸುಂದರ್ ಲಾಲ್ ಬಹುಗುಣ, ಕರ್ನಾಟಕದ ಹೆಮ್ಮೆಯ ಮಹಿಳೆ ಸಾಲುಮರದ ತಿಮ್ಮಕ್ಕ, ಅಸ್ಸಾಮಿನ ಬಂಜರಾಗಿದ್ದ ಮರಳು ದ್ವೀಪದಲ್ಲಿ ವಿಶಾಲ ವನವನ್ನೇ ಸೃಷ್ಟಿಸಿ ‘ಭಾರತದ ಅರಣ್ಯ ಮಾನವ’ (Forest Man of India) ಎಂದೆನಿಸಿಕೊಂಡ ಜಾದವ್ ಪಾಯೆಂಗ್, ಮತ್ತು ಜಾಗತಿಕ ಮಟ್ಟದಲ್ಲಿ ಪರಿಸರ ಚೈತನ್ಯ ಮೂಡಿಸುತ್ತಿರುವ (#SaveSoil, #CauveryCalling) ಆಧ್ಯಾತ್ಮಿಕ ಗುರುಗಳಾದ ಸದ್ಗುರು ಜಗ್ಗಿ ವಾಸುದೇವ್ ಮುಂತಾದವರೆಲ್ಲರೂ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಪರಿಸರ ಸಂರಕ್ಷಣೆಯ ದಾರಿದೀಪವಾಗಿ ನಿಂತು ಇಡಿಯ ಜಗತ್ತಿಗೆ ಸ್ಫೂರ್ತಿಯಾಗಿದ್ದಾರೆ. ಪಶ್ಚಿಮಘಟ್ಟಗಳ ಸಂರಕ್ಷಣೆಯ ಕಾಳಜಿಯಿಂದ ಹಿಡಿದು ಮಣ್ಣನ್ನು ಸಂರಕ್ಷಿಸುವ ಜಾಗತಿಕ ಪ್ರತಿಜ್ಞೆಯವರೆಗೆ, ಸಾಲುಸಾಲು ಸಸಿಗಳನ್ನು ನೆಟ್ಟು, ಮರಗಳಾಗಿ ಬೆಳೆಸಿ, ದಟ್ಟಾರಣ್ಯಗಳನ್ನು ಸೃಜಿಸುವವರೆಗೆ ಈ ಮಹನೀಯರಿಂದ ಪರಿಸರ ಹಾಗೂ ಜೀವಪ್ರೇಮಗಳು ಅಭಿವ್ಯಕ್ತಗೊಂಡಿವೆ.

ಇಷ್ಟೆಲ್ಲ ಸಕಾರಾತ್ಮಕ ಪ್ರಯತ್ನಗಳ ನಡುವೆಯೂ ಕ್ಷಮಯಾಧರಿತ್ರಿಯು (ಭೂಮಿತಾಯಿ) ಇಂದು ತೀವ್ರ ಬಿಕ್ಕಟ್ಟನ್ನು ಎದುರಿಸುತ್ತಿದ್ದಾಳೆ. ಜಾಗತಿಕ ತಾಪಮಾನದ ಏರಿಕೆಯಿಂದಾಗಿ ಉತ್ತರ-ದಕ್ಷಿಣ ಧ್ರುವಗಳ ಹಿಮಪರ್ವತಗಳು ಆತಂಕಕಾರೀ ವೇಗದಲ್ಲಿ ಕರಗುತ್ತಿವೆ. ಸಮುದ್ರಮಟ್ಟ ಸರಾಸರಿ 130 ಮಿ.ಮೀ. ಮೇಲೇರಿದ್ದು, ಮಾಲ್ಡೀವ್ಸ್, ಬಾಂಗ್ಲಾದೇಶ ಮತ್ತು ಫಿಲಿಪೈನ್ಸ್‌ನಂತಹ ಚಿಕ್ಕಪುಟ್ಟ ದ್ವೀಪಗಳು, ತೀರಪ್ರದೇಶಗಳು ಮುಳುಗಡೆಯ ಭೀತಿಯಲ್ಲಿವೆ. ಕಾರ್ಬನ್ ಡೈಆಕ್ಸೈಡ್ ಮತ್ತು ಮೀಥೇನ್ ಅನಿಲಗಳ ಮಿತಿಮೀರಿದ ಹೊರಸೂಸುವಿಕೆ, ಪ್ಲಾಸ್ಟಿಕ್ ಮಾಲಿನ್ಯ ಮತ್ತು ಸತತ ಅರಣ್ಯನಾಶ – ಇವು ಮಾನವ ನಿರ್ಮಿತ ಸಂಕಟಗಳಾಗಿ ಈ ಭೂಮಿಯ ಪರಿಸ್ಥಿತಿಯನ್ನು ದಯನೀಯವಾಗಿಸಿವೆ.

ಈ ಪರಿಸರ ಬಿಕ್ಕಟ್ಟಿನ ವಿರುದ್ಧ ಭಾರತ ನಿರ್ಣಾಯಕ ಹೆಜ್ಜೆ ಇಡುತ್ತಿದೆ. 175 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಗುರಿ ತಲುಪಲು ಸೌರ ಮತ್ತು ಪವನ ಇಂಧನ ಕ್ಷೇತ್ರಗಳಲ್ಲಿ ದಾಖಲೆಯ ಹೂಡಿಕೆ ನಡೆಯುತ್ತಿದೆ. ‘ಏಕ್ ಪೆಡ್ ಮಾ ಕೇ ನಾಮ್’ ಮತ್ತು ‘ಹರಿತ ಭಾರತ’ ಯೋಜನೆಗಳಡಿ ಕೋಟ್ಯಂತರ ಸಸಿಗಳನ್ನು ನೆಡಲಾಗಿದೆ. ಭಾರತ ಸರ್ಕಾರ ಏಕ-ಬಳಕೆ ಪ್ಲಾಸ್ಟಿಕ್‌ಗೆ ನಿಷೇಧ ಹೇರಿ, ‘ಆರ್ಥಿಕತೆಯ ವೃತ್ತ’ಕ್ಕೆ (Circular Economy) ಪ್ರೋತ್ಸಾಹ ನೀಡುತ್ತಿದೆ. ಕೇಂದ್ರ ಸರ್ಕಾರವು ಇಂತಹಾ ಅನೇಕ ಪರಿಸರ ಪ್ರೇಮಿಗಳಿಗೆ ‘ಪದ್ಮ’ ಪ್ರಶಸ್ತಿ ನೀಡಿ ಗೌರವಿಸುತ್ತಾ ಬಂದಿದೆ.

ಪ್ರಕೃತಿ ರಕ್ಷಣೆ ಕೇವಲ ಸರ್ಕಾರಗಳ ಹೊಣೆಯಲ್ಲ. ಅದು ಪ್ರತಿಯೊಬ್ಬ ಪ್ರಜೆಯ ನೈತಿಕ ಕರ್ತವ್ಯ. ಗಿಡ ನೆಟ್ಟು, ಪ್ಲಾಸ್ಟಿಕ್ ಬಳಕೆ ಕನಿಷ್ಠಗೊಳಿಸಿ, ಕಾಗದ, ನೀರು ಹಾಗೂ ವಿದ್ಯುತ್ತನ್ನು ಮಿತವಾಗಿ ಬಳಸಿ, ಉಳಿಸೋಣ. ಏಕೆಂದರೆ, ನಮ್ಮ ಪೂರ್ವಿಕರು ಉಳಿಸಿ, ಬಳುವಳಿಯಾಗಿ ಕೊಟ್ಟ ಉತ್ತಮ ಪರಿಸರವನ್ನು ನಾಳಿನ ತಲೆಮಾರಿಗೆ ನಾವೂ ಉಳಿಸಿ, ಋಣ ಸಂದಾಯ ಮಾಡುವ ಜವಾಬ್ದಾರಿ ನಮ್ಮೆಲ್ಲರ ಹೆಗಲಮೇಲಿದೆ.

Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #worldenvironmentday #ecology #worldenvironmentday2026 #inspiredbynature #climatechange #oneearth #onlyoneearth

Leave a Reply

Your email address will not be published. Required fields are marked *