• June 4, 2026
  • RP
  • 0
The Rajarshi who found his happiness in the happiness of his citizens: Nalwadi Krishnaraja Wadiyar
Those who rule by the sword are confined only to the pages of history, but Nalwadi Krishnaraja Wadiyar, who ruled with love and compassion, continues to reign as a Rajarshi (king-sage) in the temple of every Kannadiga’s heart to this day.

ಪ್ರಜೆಗಳ ಸುಖದಲ್ಲೇ ತಮ್ಮ ಸುಖವನ್ನು ಕಂಡ ರಾಜರ್ಷಿ: ನಾಲ್ವಡಿ ಕೃಷ್ಣರಾಜ ಒಡೆಯರ್

ಕತ್ತಿಯಿಂದ ಆಳುವವರು ಇತಿಹಾಸದ ಪುಟಗಳಲ್ಲಿ ಮಾತ್ರ ಸೇರಿಹೋಗುತ್ತಾರೆ, ಆದರೆ ಪ್ರೀತಿ ಮತ್ತು ಕರುಣೆಯಿಂದ ಆಳಿದ ನಾಲ್ವಡಿ ಕೃಷ್ಣರಾಜ ಒಡೆಯರ್‍ ಅವರು ಇಂದಿಗೂ ಪ್ರತಿಯೊಬ್ಬ ಕನ್ನಡಿಗನ ಹೃದಯಮಂದಿರದಲ್ಲಿ ರಾಜರ್ಷಿಯಾಗಿ ವಿರಾಜಮಾನರಾಗಿದ್ದಾರೆ.

 

ಮಹಾರಾಜ ಜ್ಞಾನಿಯಾಗಿರಬೇಕು, ಇಂದ್ರಿಯ ನಿಗ್ರಹಿಯಾಗಿರಬೇಕು ಮತ್ತು ಕ್ರೋಧ, ಲೋಭ, ಅಹಂಕಾರಗಳನ್ನು ಜಯಿಸಿದವನಾಗಿರಬೇಕು. “ಪ್ರಜಾಸುಖೇ ಸುಖಂ ರಾಜ್ಞಃ” – ಅಂದರೆ ಪ್ರಜೆಗಳ ಸುಖದಲ್ಲಿಯೇ ರಾಜನ ನಿಜವಾದ ಸುಖ ಅಡಗಿದೆ ಎಂಬುದು ಅವನ ಮೂಲ ತತ್ತ್ವ. ರಾಜನು ನ್ಯಾಯಪ್ರಿಯನಾಗಿ, ದೂರದೃಷ್ಟಿಯುಳ್ಳವನಾಗಿ, ಚತುರ ರಾಜನೀತಿಜ್ಞನಾಗಿ ಮತ್ತು ಕಷ್ಟಪರಿಶ್ರಮಿಯಾಗಿರಬೇಕು. ಧರ್ಮ ಮತ್ತು ನೀತಿಗೆ ಬದ್ಧನಾಗಿ ಪ್ರಜೆಗಳ ಏಳಿಗೆಗಾಗಿ ಸದಾ ಶ್ರಮಿಸುವವನೇ ನಿಜ ಅರ್ಥದಲ್ಲಿ ರಾಜನಾಗಿರುತ್ತಾನೆ ಎಂದು ಚಾಣಕ್ಯ ಹೇಳುತ್ತಾನೆ.

 

ಒಂದು ಶತಮಾನದಷ್ಟೇ ಹಿಂದೆ ಆಗಿಹೋದ ಮಹಾರಾಜರುಗಳಲ್ಲಿ ಅಂತಹಾ ಯೋಗ್ಯತಾಸಂಪನ್ನ ಆದರ್ಶಪ್ರಾಯ ರಾಜರಲ್ಲಿ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರು ಅಗ್ರಗಣ್ಯರು. ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಅಳವಡಿಸಿಕೊಂಡು, ಪಾಶ್ಚಾತ್ಯ ಜ್ಞಾನದ ಶ್ರೇಷ್ಠತೆಯನ್ನೂ ಸಮನ್ವಯಗೊಳಿಸಿ ದೇಶದ ಉನ್ನತಿಗೆ ಜೀವನವನ್ನೇ ಸಮರ್ಪಿಸಿದ ಮಹಾನ್ ರಾಜರೇ ನಾಲ್ವಡಿ ಶ್ರೀ ಕೃಷ್ಣರಾಜ ಒಡೆಯರು. ಮೈಸೂರು ರಾಜ್ಯದ ಇತಿಹಾಸವನ್ನು ತೆರೆದರೆ ಅಲ್ಲಿ ಯುದ್ಧಗಳ ಘೋಷಕ್ಕಿಂತ ಅಭಿವೃದ್ಧಿ, ಜ್ಞಾನ ಮತ್ತು ಶಾಂತಿಯ ಜೋಗುಳವೇ ಹೆಚ್ಚು ಕೇಳುತ್ತದೆ. ಸಿಂಹಾಸನದ ಮೇಲೆ ಕುಳಿತಿದ್ದರೂ ಮನಸ್ಸಿನಲ್ಲಿ ಸನ್ಯಾಸಿಯ ನಿರ್ಲಿಪ್ತತೆ ಹೊಂದಿದ್ದ ಅಪರೂಪದ ರಾಜರ್ಷಿ! 1884 ಜೂನ್ 4ರಂದು ಜನಿಸಿದ ನಾಲ್ವಡಿಯವರು ಅಪಾರ ಜನಮನ್ನಣೆ ಗಳಿಸಿದ ಸಾತ್ವಿಕ ಶ್ರೇಷ್ಠರು.

 

ತಾಯಿಯವರಾದ ಮಹಾರಾಣಿ ಕೆಂಪನಂಜಮ್ಮಣ್ಣಿಯವರ ಮಮತಾ-ಸಂಸ್ಕಾರದಲ್ಲಿ ಬೆಳೆದ ಅವರು ಸದಾಚಾರ, ಶಿಸ್ತು ಮತ್ತು ಮೃದುಸ್ವಭಾವವನ್ನು ಮೈಗೂಡಿಸಿಕೊಂಡಿದ್ದರು. ರಾಜವೈಭೋಗಗಳ ಮಧ್ಯೆ ಬೆಳೆದರೂ ಭೋಗದ ಅಮಲಿಗೆ ಎಂದಿಗೂ ಸಿಲುಕಲಿಲ್ಲ. ಮುಂಜಾನೆ ಯೋಗ, ಪೂಜೆ ಹಾಗೂ ಗ್ರಂಥಪಠಣದಲ್ಲಿ ತೊಡಗಿಕೊಳ್ಳುತ್ತಿದ್ದ ಅವರು ಪೌರಾತ್ಯ ಮತ್ತು ಪಾಶ್ಚಾತ್ಯ ತತ್ತ್ವಶಾಸ್ತ್ರಗಳ ಆಳವಾದ ಅಧ್ಯಯನದಿಂದ ಮಾನವೀಯತೆಯನ್ನು ಬೆಳೆಸಿಕೊಂಡಿದ್ದರು. ಸಾಹಿತ್ಯ, ಸಂಗೀತ ಮತ್ತು ಕಲೆಯ ಬಗೆಗೆ ಅಪಾರ ಅಭಿರುಚಿ ಹೊಂದಿದ್ದ ಅವರು ಕರ್ಣಾಟಕ, ಹಿಂದೂಸ್ತಾನೀ ಹಾಗೂ ಪಾಶ್ಚಾತ್ಯ ಸಂಗೀತಕಲಾ ಪೋಷಕರಾಗಿದ್ದರು.

 

ಮಾನವೀಯತೆಯೇ ಅವರ ಎಲ್ಲ ಯೋಜನೆಗಳ ಮೂಲಮಂತ್ರವಾಗಿತ್ತು. ರೈತರ ಸಂಕಷ್ಟ ಮತ್ತು ಬರಗಾಲದ ದುಸ್ಥಿತಿಯನ್ನು ಕಂಡು ಮರುಗಿದ ಅವರು ತಮ್ಮ ಖಾಸಗಿ ಆಭರಣಗಳನ್ನು ಅಡವಿಟ್ಟು ಕಾವೇರಿ ನದಿಗೆ ‘ಕೆ.ಆರ್.ಎಸ್.’ ಅಣೆಕಟ್ಟು ನಿರ್ಮಾಣಕ್ಕೆ ಕಾರಣೀಭೂತರಾದರು. ವಿಜ್ಞಾನ ಮತ್ತು ಕೈಗಾರಿಕೆಯಿಂದ ದೇಶದ ಪ್ರಗತಿ ಸಾಧ್ಯವೆಂದು ನಂಬಿದ್ದ ಅವರು, ಸ್ವಾಮಿ ವಿವೇಕಾನಂದರು ಹಾಗೂ ಜಮ್ಶೆಡ್ಜಿ ಟಾಟಾ ಅವರ ಕನಸಿಗೆ ಬೆಂಬಲವಾಗಿ 1909ರಲ್ಲಿ ಬೆಂಗಳೂರಿನಲ್ಲಿ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್’ (IISc) ಸ್ಥಾಪನೆಗೆ ಕಾರಣರಾದರು. 1905ರಲ್ಲಿಯೇ ಶಿವನಸಮುದ್ರದಲ್ಲಿ ಜಲವಿದ್ಯುತ್ ಉತ್ಪಾದನೆ ಆರಂಭಿಸಿ ಹಳ್ಳಿಗಳಿಗೂ ಬೆಳಕು ತಲುಪಿಸಿದರು. ಭದ್ರಾವತಿಯ ಉಕ್ಕಿನ ಕಾರ್ಖಾನೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮುಂತಾದ ಸಂಸ್ಥೆಗಳು ಅವರ ದೂರದೃಷ್ಟಿಯ ಪ್ರತೀಕಗಳಾಗಿವೆ.

 

ನಾಲ್ವಡಿ ಕೃಷ್ಣರಾಜ ಒಡೆಯರ ಆಡಳಿತ ಕೇವಲ ಕಡತಗಳಿಗೆ ಸೀಮಿತವಾದೇ, ಅದು ಅವರ ಮೃದು ಹೃದಯದ ಪ್ರಜಾಪರತೆಯ ಪ್ರತಿಬಿಂಬವಾಗಿತ್ತು. ಶಿಕ್ಷಣವೇ ಸಮಾಜೋನ್ನತಿಯ ಮೂಲವೆಂದು ನಂಬಿದ್ದ ಅವರು 1916ರಲ್ಲಿ ‘ಮೈಸೂರು ವಿಶ್ವವಿದ್ಯಾನಿಲಯ’ವನ್ನು ಸ್ಥಾಪಿಸಿದರು.

 

ಅಧಿಕಾರ ಮತ್ತು ಶಿಕ್ಷಣ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು ಎಂಬ ಆಶಯದಿಂದ ‘ಮಿಲ್ಲರ್ ಆಯೋಗ’ವನ್ನು ರಚಿಸಿ ಸಾಮಾಜಿಕ ನ್ಯಾಯದ ಹರಿಕಾರರಾದರು. ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ಹಾಗೂ ದೇವದಾಸಿ ಪದ್ಧತಿಯನ್ನು ನಿಷೇಧಿಸಿದ ಭಾರತದ ಮೊದಲ ಪ್ರಾಂತ್ಯ ಎಂಬ ಗೌರವ ಮೈಸೂರಿಗೆ ದೊರಕಿದ್ದು ಅವರ ಸಮಾನತೆಯ ಚಿಂತನೆಯ ಫಲ. 1884ರಿಂದ 1940ರವರೆಗೆ ತಮ್ಮ ಆಡಳಿತಾವಧಿಯಲ್ಲಿ ಮೈಸೂರನ್ನು ಅಕ್ಷರಶಃ ‘ರಾಮರಾಜ್ಯ’ವನ್ನಾಗಿ ರೂಪಿಸಿದ ಧೀಮಂತರವರು. ಬ್ರಿಟಿಷ್ ನಾಯಕರು ಮೈಸೂರನ್ನು “ಜಗತ್ತಿನ ಅತ್ಯಂತ ಸುಂದರ ಹಾಗೂ ಪ್ರಗತಿಪರ ರಾಜ್ಯ” ಎಂದು ಕೊಂಡಾಡಿದ್ದು ಅವರ ದೂರದೃಷ್ಟಿಗೆ ಸಾಕ್ಷಿ.

 

ನಾಲ್ವಡಿಯವರ ಪ್ರಜಾಪ್ರೀತಿ ಮತ್ತು ಪ್ರಾಣಿದಯೆ ಅಪೂರ್ವವಾಗಿತ್ತು. ಅವರು ಕಾಡು ಪ್ರಾಣಿಗಳ ವೀಕ್ಷಣೆಗಾಗಿ ಮೈಸೂರು ಮೃಗಾಲಯವನ್ನು ಅಭಿವೃದ್ಧಿಪಡಿಸಿದರು. ಅಲ್ಲದೇ ಆನೆಗಳನ್ನು ಹಿಡಿಯುವ, ಪಳಗಿಸುವ ನಿಟ್ಟಿನಲ್ಲಿ ಅನೇಕ ಹೊಸ ಬದಲಾವಣೆಗಳನ್ನು ತಂದರು.

 

ಒಮ್ಮೆ ಮಹಾರಾಜರು ಸಂಚಾರಾರ್ಥವಾಗಿ ಕೋಲಾರ ಜಿಲ್ಲೆಗೆ ಹೋಗಿದ್ದಾಗ, ಮೈಸೂರಿನಿಂದ ಬಂದಿದ್ದ ಅರಮನೆಯ ಟಾಂಗಾ ಬಂಡಿಗೆ ಒಬ್ಬ ರೈತನ ಎತ್ತುಗಳನ್ನು ಹೂಡಿಸಿ ಅಧಿಕಾರಿಗಳೊಡನೆ ಹೊರಟರು. ಸ್ವಲ್ಪ ಹೊತ್ತಿಗೆ ಮಳೆಯು ಶುರುವಾಗಿ ಬಂಡಿಯ ಮುಂಭಾಗದಲ್ಲಿ ಕುಳಿತಿದ್ದ ರಾಯರ ಮುಖಕ್ಕೂ, ಮೈಗೂ ಮಳೆಯ ಹನಿಗಳು ಬೀಳಲು, ಕೈಯಲ್ಲಿ ಛತ್ರಿಯಿದ್ದರೂ ಅದನ್ನು ತೆರೆಯಲಿಲ್ಲ. ಡೆಪ್ಯುಟಿ ಕಮೀಷನರವರು ತಮ್ಮ ಛತ್ರಿಯನ್ನು ಕೈಯಲ್ಲಿ ಹಿಡಿದು, “ಮಳೆಯ ರಭಸ ಜೋರಾಗಿದೆ. ನೆನೆದರೆ ದೇಹಾಲಸ್ಯವಾದೀತು. ಛತ್ರಿಯನ್ನು ತೆರೆದು ಒಪ್ಪಿಸಲೇ?” ಎಂದರು. ಆಗ ಮಹಾಸ್ವಾಮಿಯವರು ಕೊಂಚ ನಕ್ಕು, “ನಮ್ಮಕೈಯಲ್ಲಿಯೂ ಛತ್ರಿಯಿದೆ. ಮಳೆಯಲ್ಲಿ ನೆನೆದು ದೇಹಾಲಸ್ಯವಾದರೆ ನಮಗೆ ಮೂರು-ನಾಲ್ಕು ದಿನಗಳಲ್ಲಿ ಗುಣವಾದೀತು. ಆದರೆ ಛತ್ರಿಯನ್ನು ತೆರೆದಾಗ ಎತ್ತುಗಳು ಬೆದರಿ ಜಾರಿಬಿದ್ದು ಕಾಲು ಮುರಿದುಕೊಂಡರೆ, ಆ ಬಡ ಪ್ರಾಣಿಗಳು ಯಾವಜ್ಜೀವವೂ ಕಷ್ಟ ಪಡಬೇಕಾಗುತ್ತದೆ” ಎಂದು ಅಪ್ಪಣೆ ಕೊಡಿಸಿದರು.

 

ಮತ್ತೊಂದು ಸಂದರ್ಭದಲ್ಲಿ, ಒಂದು ತಾಲೂಕು ಸಭೆಗೆ ಹೋಗಿದ್ದಾಗ, ಊರಿನ ಹೊರಭಾಗದಲ್ಲಿದ್ದ ಕಡುಬಡವಳಾದ ಹಣ್ಣು ಮುದುಕಿಯೊಬ್ಬಳ ಗುಡಿಸಿಲಿನ ಮೇಲಿನ ಹಂದರವು ಮುರಿದುಹೋಗಿದ್ದುದನ್ನೂ, ಮುಪ್ಪಿನಿಂದ ಕುಗ್ಗಿದ್ದ ಅವಳು ಆ ಮುರುಕು ಗುಡಿಸಿಲಿನ ಬಾಗಿಲಿನಲ್ಲಿ ನಿಂತಿದ್ದುದನ್ನೂ ಪರಿಶೀಲಿಸಿದ್ದರು. ಅಂದು ರಾತ್ರಿ ಮಳೆಯೂ ಬಂದಾಗ ವೃದ್ಧೆಯ ದುರ್ಭರ ಸ್ಥಿತಿಯನ್ನು ಯೋಚಿಸಿ ಬಿಡಾರದಿಂದ (ಟ್ರಾವೆಲರ್ಸ್ ಬಂಗಲೆ) ಅಂಗರಕ್ಷಕರೊಡನೆ ಕೆಸರನ್ನೂ ತುಳಿದುಕೊಂಡು ಸಾಮಾನ್ಯರಂತೆ ಮಹಾಪ್ರಭುಗಳು ಆ ಕುಟೀರದ ಬಳಿಗೆ ಹೋದರು. ಕೂಲಿಯೂ ದೊರೆಯದೇ ಬೆಳಗಿನಿಂದ ಊಟವಿಲ್ಲದೇ ಸೋರುವ ಗುಡಿಸಿಲಿನಲ್ಲಿ ಸಂಕಟಪಡುತ್ತಿದ್ದ ಆ ಮುದುಕಿಗೆ ಹಣ್ಣುಗಳನ್ನೂ ಹಣವನ್ನೂ ಕೊಡಿಸಿ ಬಿಡಾರಕ್ಕೆ ಚಿತ್ತೈಸಿದರು.

 

ಪ್ರಜಾವಾತ್ಸಲ್ಯದ ಮತ್ತೊಂದು ನಿದರ್ಶನವೆಂದರೆ, ಮಹಾರಾಜರು ಕೈಲಾಸಯಾತ್ರೆಗೆ ತೆರಳಿದ್ದಾಗ, ಪರಮಪವಿತ್ರವಾದ ಮಾನಸ ಸರೋವರದಲ್ಲಿ ಮುಳುಗೇಳುವ ವೇಳೆಯಲ್ಲಿ, ತಮಗಾಗಲಿ ಅಥವಾ ತಮ್ಮ ಕುಟುಂಬವರ್ಗದವರಿಗಾಗಲೀ ಪುಣ್ಯವು ಲಭಿಸಲೆಂದು ಕೋರಿ ಸಂಕಲ್ಪ ಮಾಡುವುದಕ್ಕಿಂತ ಮೊದಲು, ತಮ್ಮ ಪ್ರಜೆಗಳಿಗೆ ಸಮಸ್ತ ಸನ್ಮಂಗಳಗಳೂ ಆ ತೀರ್ಥೋದಕ ಸ್ನಾನದ ಪುಣ್ಯವೂ ಲಭಿಸಲೆಂದು ಸಂಕಲ್ಪ ಮಾಡಿ ಸ್ನಾನ ಮಾಡಿದರು. ಆಗ್ಗೆ, ನಿಶ್ಚಲವಾದ ಪ್ರಜಾವಾತ್ಸಲ್ಯದಿಂದ ಕೂಡಿ ತೀರ್ಥೋದಕದಲ್ಲಿ ಅಂಜಲಿ ಬದ್ಧರಾಗಿ ನಿಂತು, “ಈಗ ನನಗೆ ಲಭ್ಯವಾಗಿರುವ ಈ ಪವಿತ್ರತಮವಾದ ಮಾನಸಸರೋವರ ಸ್ನಾನದ ಫಲವನ್ನು ನಮ್ಮ ಅತ್ಯಂತ ಪ್ರೀತಿಪಾತ್ರರಾದ ರಾಷ್ಟ್ರದ ಸಮಸ್ತ ಜನಗಳೂ ಪಡೆಯಲಿ!” ಎಂದು ಹಾರೈಸಿ ಅನೇಕ ಸಲ ಮುಳುಗು ಹಾಕಿ ಸ್ನಾನಮಾಡಿದರು.

 

ಅವರು ಒಮ್ಮೆ ಗೇರುಸೊಪ್ಪೆ ಜಲಪಾತವನ್ನು ನೋಡಲು ತೆರಳಿದ್ದಾಗ, “ ಇಲ್ಲಿಯ ನೋಟವು ಅದ್ಭುತ-ರಮ್ಯವಾಗಿದೆ! ಈ ಕಾನನ ಪ್ರದೇಶವನ್ನೂ ಈ ಜಲಪಾತದ ಸೌಂದರ್ಯವನ್ನೂ ನಮ್ಮ ಪ್ರಜೆಗಳೂ, ಬಡವರಾದವರೂ ನೋಡಿ ಹರ್ಷಿಸಬೇಡವೇ? ಹಾಗಾಗಿ ಉಚಿತವಾಗಿ ಅವರಿಗೂ ಇಲ್ಲಿ ಸ್ಥಳವಸತಿ ದೊರೆಯುವ ಸೌಕರ್ಯವನ್ನು ಕಲ್ಪಿಸಬೇಕು” ಎಂದು ಅಪ್ಪಣೆ ಕೊಡಿಸಿದರು. ಆ ತರುವಾಯ ಅಲ್ಲಿ ಅತಿ ಶೀಘ್ರವಾಗಿ ಧರ್ಮಶಾಲೆಯು ನಿರ್ಮಾಣವಾಯಿತು.

 

ಮುಸ್ಲಿಂ ದಿವಾನರು, ಕ್ರೈಸ್ತ ಕಾರ್ಯದರ್ಶಿಗಳು ಹಾಗೂ ಬ್ರಿಟಿಷ್ ಅಧಿಕಾರಿಗಳನ್ನು ಸಮಾನವಾಗಿ ನೇಮಿಸಿಕೊಂಡ ಅವರು ಸಮಾನತೆಯನ್ನು ಕೇವಲ ಘೋಷಣೆಯಾಗಿ ಅಲ್ಲ, ಬದುಕಿನ ಮೌಲ್ಯವಾಗಿಯೂ ಆಚರಿಸಿದರು. ಒಬ್ಬ ದೊರೆ ತನ್ನ ಅಧಿಕಾರವನ್ನು, ಸಂಪತ್ತನ್ನು ಮತ್ತು ಬದುಕನ್ನು ಸಮಾಜದ ಒಳಿತಿಗಾಗಿ ಹೇಗೆ ಸಂಪೂರ್ಣವಾಗಿ ಮುಡಿಪಾಗಿಡಬಹುದು ಎಂಬುದಕ್ಕೆ ನಾಲ್ವಡಿಯವರು ಜಗತ್ತಿಗೇ ಶ್ರೇಷ್ಠ ಮಾದರಿ.

 

Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #mysoredynasty #nalvadikrishnarajawodeyar

Leave a Reply

Your email address will not be published. Required fields are marked *