• June 4, 2026
  • RP
  • 0
The Rajarshi who found his happiness in the happiness of his citizens: Nalwadi Krishnaraja Wadiyar
Those who rule by the sword are confined only to the pages of history, but Nalwadi Krishnaraja Wadiyar, who ruled with love and compassion, continues to reign as a Rajarshi (king-sage) in the temple of every Kannadiga’s heart to this day.

ಚಿಕ್ಕ ಅರ್ಪಣೆ ದೊಡ್ಡ ಸಮರ್ಪಣೆಯಾಗಿ ಆಯಿತು ಭಾವವಿಸ್ಮಯ

‘ಎ’ ಮತ್ತು ‘ಬಿ’ ಎಂಬಿಬ್ಬರು ಆಪ್ತ ಸ್ನೇಹಿತರು. 2010ರ ಸುಮಾರಿನಲ್ಲಿ ‘ಎ’ ತಾನು ಮಾಡುತ್ತಿದ್ದ ಕೆಲಸವನ್ನು ಬಿಡಬೇಕಾಗಿ ಬಂದು, ಮುಂದೇನು ಮಾಡುವುದೆಂದು ತಿಳಿಯದೇ ಮನೆಯಲ್ಲೇ ಕೂತಿದ್ದ. ಆಗ ‘ಬಿ’ ತನ್ನಲ್ಲಿದ್ದ ವಿನ್ಯಾಸ ಕಲೆಯನ್ನು ‘ಎ’ನಿಗೆ ಕಲಿಸಿದ. ಆ ಕಲೆಯನ್ನು ಕಲಿತಷ್ಟೇ ವೇಗದಲ್ಲಿ ‘ಎ’ ತನ್ನ ಜೀವನಕ್ಕೊಂದು ಸುಂದರ ವಿನ್ಯಾಸ ತಂದುಕೊಂಡುಬಿಟ್ಟ.

 

ಆದರೆ ಆ ವಿಧಿಯ ಆಟ ಬೇರೆಯೇ ಇತ್ತು! 2020ರ ನಂತರದ ಕೊರೋನಾ ಕಾಲಘಟ್ಟದಲ್ಲಿ ‘ಬಿ’ ಹಾಸಿಗೆ ಹಿಡಿದ. ಮಹಾಮಾರಿ ಕ್ಯಾನ್ಸರ್ ಆತನನ್ನು ಹಿಂಡಿಹಿಪ್ಪೆ ಮಾಡಿತ್ತು. ಚಿಕಿತ್ಸೆಗೆ ಹಣಕಾಸಿನ ತೀವ್ರ ಮುಗ್ಗಟ್ಟು ಎದುರಾದಾಗ, ‘ಎ’ ತನಗೂ ಸಲೀಸಾಗಿ ಎತ್ತಿ ಕೊಡಲಾಗದಷ್ಟು ದೊಡ್ಡ ಮೊತ್ತದ ಹಣವನ್ನು ‘ಬಿ’ನ ಮನೆಯವರಿಗೆ ತಂದುಕೊಟ್ಟ. ಆ ಸಂದರ್ಭದಲ್ಲಿ ಅದನ್ನು ಸಾಲವಾಗಿ ಕೊಟ್ಟಿದ್ದಾ ಅಥವಾ ದೇಣಿಗೆಯಾಗಿ ಕೊಟ್ಟಿದ್ದಾ? ಎಂಬುದನ್ನು ನಿರ್ಧಾರ ಮಾಡಿಕೊಳ್ಳಲು ‘ಎ’ಗೆ ಸುಮಾರು ಕಾಲ ಸಾಧ‍್ಯವಾಗಲೇ ಇಲ್ಲ.

 

2025ರ ಕೊನೆಯ ದಿನಗಳು. ‘ಬಿ’ನ ಆರೋಗ್ಯಸ್ಥಿತಿ ಸ್ವಲ್ಪಸ್ವಲ್ಪವೇ ಸುಧಾರಿಸುತ್ತಿರುವಂತೆ ತೋರುತ್ತಿತ್ತು. ಆಗ ವಾಕಿಂಗ್‍ನಲ್ಲೊಮ್ಮೆ ‘ಎ’ನಿಗೆ ಒಂದು ಆಲೋಚನೆ ಬಂತು; ಕೊಟ್ಟಿದ್ದ ಹಣದಲ್ಲಿ ಅರ್ಧದಷ್ಟನ್ನು ವಾಪಸ್ ಕೇಳಬಾರದ ದೇಣಿಗೆ ಎಂದು ಭಾವಿಸಿ ಬಿಟ್ಟರೆ ಹೇಗೆ? ಇದೇ ವಿಚಾರವನ್ನು ಆತ ಮನಸ್ಸು ಬಿಚ್ಚಿ ‘ಬಿ’ನ ಬಳಿ ಹೇಳಿದಾಗ, ಆತನೂ ಒಪ್ಪಿ ಸಾಧ್ಯವಾದಷ್ಟು ಬೇಗ ಉಳಿದರ್ಧ ಹಣವನ್ನು ವಾಪಸ್ ಮಾಡುವುದಾಗಿ ತಿಳಿಸಿದ.

 

ಆ ಮಾತಾದ ಕೆಲವೇ ದಿನಗಳಲ್ಲಿ, ಅಂದರೆ 2026ರ ಪ್ರಾರಂಭದಲ್ಲಿ ‘ಬಿ’ ಮತ್ತೆ ಹಾಸಿಗೆ ಹಿಡಿದ. ಈ ಬಾರಿ ಆತನ ಬದುಕುಳಿಯುವ ಆಸೆ ಕ್ಷಣಕ್ಷಣಕ್ಕೂ ಕಡಿಮೆಯಾಗುತ್ತಿತ್ತು. ಪ್ರಾಣಪಕ್ಷಿಯನ್ನು ಹಾರಿಸಿಕೊಂಡುಹೋಗಲು ಕ್ಯಾನ್ಸರ್ ಕಾದು ಕುಳಿತಿತ್ತು. ಆಗ ಮತ್ತೆ ‘ಎ’, ಆ ಮನುಷ್ಯನೇ ಕಣ್ಣೆದುರು ಕರಗುತ್ತಿರುವಾಗ ಆತನಿಂದ ಬರಬೇಕಾದ ಬಾಕಿಯನ್ನು ವಾಪಸ್ ಕೇಳುವುದರಲ್ಲಿ ಯಾವ ಅರ್ಥವನ್ನು ಕಾಣದೇ, “ನನಗೆ ಏನೊಂದೂ ವಾಪಸ್ ಕೊಡುವುದು ಬೇಡ” ಎಂದುಬಿಟ್ಟ. ಆದರೆ ಅದನ್ನು ‘ಬಿ’ ಸುತಾರಾಂ ಒಪ್ಪಲಿಲ್ಲ. ಅನಿವಾರ್ಯದ ಈ ಸಂದರ್ಭದಲ್ಲಿ ಸೈಟು-ಮನೆ ಮಾರಿದ ದುಡ್ಡು ಬಂದಿರುವುದರಿಂದ ಸಾಲವನ್ನು ವಾಪಸ್ ತೆಗೆದುಕೊಳ್ಳಲೇಬೇಕು ಅಂತ ‘ಬಿ’ ಹಠಹಿಡಿದ.

 

2026ರ ಫೆಬ್ರವರಿಯ ಮಧ್ಯದಲ್ಲೊಂದು ದಿನ ‘ಬಿ’ನ ಖಾತೆಯಿಂದ ‘ಎ’ನ ಖಾತೆಗೆ ಬಾಕಿ ಉಳಿದ ಹಣ ಬಂದುಬಿತ್ತು. ‘ಎ’ ಕೊನೆಯ ಈ ಕ್ಷಣಗಳಲ್ಲಿ ವಾದವೇನೂ ಮಾಡುವುದು ಬೇಡವೆಂದುಕೊಂಡು, “ಆಮೇಲೆ ಮಾತನಾಡುವೆ” ಎಂದು ಒಂದು ಸಾಲಿನ ಸಂದೇಶ ಕಳುಹಿಸಿ ಸುಮ್ಮನಾದ. ಆದರೆ ‘ಬಿ’ನ ಬದುಕು ಅದೇ ರಾತ್ರಿ ಕೊನೆಯಾಗಬಹುದೆಂದು ಆತನ ಊಹೆಗೂ ನಿಲುಕಿರಲಿಲ್ಲ.

 

‘ಬಿ’ ಈ ಜೀವನದ ಪಯಣ ಮುಗಿಸಿ ತಿಂಗಳುಗಳೇ ಉರುಳಿದವು. ಆದರೆ ‘ಎ’ನಿಗೆ ವಾಪಸ್ ಬಂದ ಆ ಹಣವನ್ನು ಏನಾದರೂ ಮಾಡಿ ‘ಬಿ’ನ ಕುಟುಂಬಕ್ಕೇ ಮರಳಿಸಬೇಕು ಎಂಬ ಹಂಬಲ ಬಲವಾಗಿ ಕಾಡುತ್ತಿತ್ತು. ಅಷ್ಟಕ್ಕೆ ಸರಿಯಾಗಿ ದುಡ್ಡೂ ಹೊಂದಾಣಿಕೆಯಾಗಿ, ಮರಳಿಸಬೇಕಿದ್ದ ಮೊತ್ತದಲ್ಲಿ ಒಂದಂಶವನ್ನು ‘ಬಿ’ನ ಶ್ರೀಮತಿಯವರಿಗೆ ಕಳುಹಿಸುತ್ತಾ, “ಮಕ್ಕಳ ವಿದ್ಯಾಭ್ಯಾಸಕ್ಕೊಂದು ಚಿಕ್ಕ ಅರ್ಪಣೆ” ಎಂದು ಬರೆದ.

 

ಅದಕ್ಕೆ ಆಕೆಯ ಕಡೆಯಿಂದ ಬಂದ ಪ್ರತಿಕ್ರಿಯೆ ‘ಎ’ನನ್ನು ಮೂಕವಿಸ್ಮಿತನನ್ನಾಗಿಸಿತು. ಆಕೆ ಹೇಳಿದಳು: “ಹೀಗೆಲ್ಲ ಏಕೆ ಮಾಡಿದಿರಿ? ನಮ್ಮ ಹತ್ತಿರವೇ ಮನೆ ಮಾರಿದ್ದರಲ್ಲಿ ಒಂದಷ್ಟು ಉಳಿದುಕೊಂಡಿದೆ, ಮತ್ತೆ ಯಾಕೆ? ಅಲ್ಲದೇ, ನಿಮಗೇನಾದರೂ ಹಣದ ಅನಿವಾರ್ಯತೆ ಇದ್ದರೆ ತಿಳಿಸಿ, ನನ್ನಲ್ಲಿರುವುದನ್ನು ಕೊಡಬಹುದು…”

 

ಆಕೆ ಆಡುತ್ತಿದ್ದ ಆ ಮಾತುಗಳನ್ನು ಕೇಳುತ್ತಾ ‘ಎ’ ಭಾವ-ವಿಸ್ಮಿತನಾಗಿಬಿಟ್ಟ. ತಾನು ಮಾಡಿದ ಆ ಚಿಕ್ಕ ಅರ್ಪಣೆ, ಅಲ್ಲಿ ಬೆಟ್ಟದಂತಹ ದೊಡ್ಡ ಸಮರ್ಪಣೆಯಾಗಿ ರೂಪಾಂತರಗೊಳ್ಳುತ್ತಿದ್ದುದನ್ನು ಕಂಡು ಆತನ ಕಣ್ಣಾಲಿಗಳು ಚಿಕ್ಕದಾಗಿ ಜಿನುಗುತ್ತಾ, ದೊಡ್ಡದಾಗಿ ಆಡುತ್ತಿದ್ದವು.

 

– ಶ್ರೀ ಭಾರತೀಶ ಪಿ, ಸಂಚಾಲಕರು, ರಾಷ್ಟ್ರೋತ್ಥಾನ ಮಾಧ್ಯಮ ಕೇಂದ್ರ

 

Learn More: https://www.rashtrotthana.org/
#Rashtrotthana #RashtrotthanaParishat #rashtrotthanainrashtraseva #arpan #samarpan

Leave a Reply

Your email address will not be published. Required fields are marked *