• July 28, 2026
  • RP
  • 0

May Guru Purnima Become a Stepping Stone to the Guru’s Grace… What Do We Have Without Him!

In Indian culture, the Guru holds a position even higher than that of God. It is the Guru who has the power to shape a person’s life; it is the great responsibility of a true Guru to uplift the individual, strengthen the family, and guide society along the righteous path. The Guru is revered as equal to the Trimurtis — the creator, sustainer, and destroyer — as expressed in “Gururbrahma Gururvishnuh Gururdevo Maheshwarah…” This is because it is the Guru alone who introduces one to God. It is a firm belief of the eternal (Sanatana) tradition that neither knowledge nor the path of devotion can be attained without the grace of the Guru.

That supreme truth, which pervades all beings and the entire living world, though present everywhere, does not ordinarily come within one’s awareness. It is the Guru who takes one by the hand and leads one toward such a subtle, imperceptible truth. Hence, it is customary to begin one’s education by bowing one’s head to the Guru — who dispels the darkness of ignorance and reveals the light of knowledge — reciting “Gururbrahma Gururvishnuh Gururdevo Maheshwarah…”


ಗುರುಪೂರ್ಣಿಮೆಯು ಗುರುಕಾರುಣ್ಯದ ಸೋಪಾನವಾಗಲಿ… ಅವನಿಲ್ಲದೇ ನಮಗೇನಿದೆ!

ಗುರು, ನೀನೆ ಮತಿಯೆನಗೆ, ಗತಿಯೆನಗೆ; ಒಳಗಿನ ತುಡಿತವು ನೀನೆ, ಹೊರಗಿನ ಮಿಡಿತವೂ ನೀನೆ; ಮೌನದಲಿ ಪೂರ್ಣಚಂದಿರನು ನೀನೆ, ಜ್ಞಾನದ ಆನಂದಸಾಗರವೂ ನೀನೆ; ಆತ್ಮಸಾಧನೆಯ ಅಪ್ಪಣೆ ಕೊಡುವವನು ನೀನೆ, ಆತ್ಮಧ್ಯಾನದ ಧೈರ್ಯ ತುಂಬುವವನೂ ನೀನೆ; ಕರ್ಮವ ಬೋಧಿಸುವವನು ನೀನೆ, ದಾಟಿಸುವವನೂ ನೀನೆ; ಗುರುವೇ! ನೀನಿಲ್ಲದೆ ನಮಗೇನಿದೆ? ನಿನ್ನ ಕಾರುಣ್ಯದ ಮಡಿಲೊಂದೇ ಸಾಕೆಮಗೆ…

ಸಕಲ ಚರಾಚರಗಳಲ್ಲೂ, ಜೀವಜಗತ್ತಿನಲ್ಲೆಲ್ಲ ವ್ಯಾಪಿಸಿರುವ ಆ ಪರಮಸತ್ಯ ಎಲ್ಲೆಡೆ ಇದ್ದರೂ, ಅದು ಸಾಮಾನ್ಯ ಪರಿಸ್ಥಿತಿಯಲ್ಲಿ ಅರಿವಿಗೆ ಬಾರದು. ಅಂತಹ ಸೂಕ್ಷ್ಮವಾದ, ಅಗೋಚರವಾದ ಸತ್ಯದ ಕಡೆಗೆ ಕೈ ಹಿಡಿದು ನಡೆಸುವವನೇ ಗುರು. ಹಾಗಾಗಿ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ತೋರಿಸುವ ಶ್ರೀಗುರುವನ್ನು “ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ…” ಎಂದು ನತಮಸ್ತಕರಾಗಿ ವಿದ್ಯಾರಂಭ ಮಾಡುವುದು ವಾಡಿಕೆ.

ಇಂದು ಸಾಮಾನ್ಯವಾಗಿ ‘ಗುರು’ ಎಂಬ ಪದ ಕೇವಲ ಪಾಠ ಹೇಳಿಕೊಡುವ ವ್ಯಕ್ತಿಯನ್ನಷ್ಟೇ ಸೂಚಿಸುವುದಿಲ್ಲ. ಏಕೆಂದರೆ, ಮೋಕ್ಷ ಪ್ರಾಪ್ತಿಯೇ ಪ್ರತಿ ಮಾನವನ ಪರಮ ಗುರಿ ಎಂದು ನಂಬಿ ನಡೆಯುತ್ತಿರುವ ಪರಂಪರೆಯಿದು. ಗುರು ಎಂಬ ಪದಕ್ಕೆ ಇನ್ನೂ ಆಳ, ವಿಸ್ತಾರ ಹಾಗೂ ಗುರುತರ ಅರ್ಥವಿದೆ. “ಗು” ಎಂದರೆ ಅಂಧಕಾರ, “ರು” ಎಂದರೆ ಅದನ್ನು ಹೋಗಲಾಡಿಸುವವನು.

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವರಿಗಿಂತಲೂ ಮಿಗಿಲಾದ ಸ್ಥಾನವಿದೆ. ಒಬ್ಬ ವ್ಯಕ್ತಿಯ ಬದುಕನ್ನು ರೂಪಿಸುವ ಶಕ್ತಿ ಗುರುವಿನಲ್ಲಿದೆ; ವ್ಯಕ್ತಿಯನ್ನು ಉದ್ಧರಿಸಿ, ಕುಟುಂಬವನ್ನು ಸದೃಢಗೊಳಿಸಿ, ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸುವ ಮಹತ್ತರವಾದ ಉತ್ತರದಾಯಿತ್ವ ಒಬ್ಬ ಸದ್ಗುರುವಿನದ್ದಾಗಿರುತ್ತದೆ. “ಗುರುರ್ಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ…” ಎಂದು ಗುರುವನ್ನು ಸೃಷ್ಟಿ, ಸ್ಥಿತಿ, ಲಯಕಾರಕರಾದ ತ್ರಿಮೂರ್ತಿಗಳಿಗೆ ಸಮಾನವಾಗಿ ಗೌರವಿಸಲಾಗಿದೆ. ಏಕೆಂದರೆ, ದೇವರನ್ನೂ ಪರಿಚಯಿಸಿಕೊಡುವವನೇ ಗುರು. ಗುರುಕಾರುಣ್ಯವಿಲ್ಲದೇ ಜ್ಞಾನ ಅಥವಾ ಭಕ್ತಿಮಾರ್ಗಗಳು ದಕ್ಕವು ಎಂಬುದು ಸನಾತನ ಸಂಪ್ರದಾಯದ ಬಲವಾದ ನಂಬಿಕೆ.

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಮ್
ತತ್ಪದಂ ದರ್ಶಿತಂ ಯೇನ ತಸ್ಮೈ ಶ್ರೀಗುರವೇ ನಮಃ

ಅಖಂಡವಾಗಿ ಎಲ್ಲೆಡೆ ವ್ಯಾಪಿಸಿರುವ ಯಾವ ಪರತತ್ವದಿಂದ ಈ ಚರಾಚರ ಸೃಷ್ಟಿಯೆಲ್ಲಾ ವ್ಯಾಪ್ತವಾಗಿದೆಯೋ, ಅಂತಹ ಪರಬ್ರಹ್ಮ ಪದವನ್ನು ಅಥವಾ ಆ ಪರಮಸತ್ಯವನ್ನು ಯಾರು ನಮಗೆ ತೋರಿಸಿಕೊಟ್ಟರೋ, ಅಂತಹ ಶ್ರೀಗುರುವಿಗೆ ನಾನು ನಮಸ್ಕರಿಸುತ್ತೇನೆ.

ಆಷಾಢ ಮಾಸದ ಹುಣ್ಣಿಮೆಯನ್ನು ಗುರು ಪೂರ್ಣಿಮಾ ಅಥವಾ “ವ್ಯಾಸಪೂರ್ಣಿಮಾ” ಎಂದೂ ಕರೆಯುತ್ತಾರೆ. ಅಂತಹ ಶುಭದಿನದಂದು ಜನಿಸಿದ ಕೃಷ್ಣದ್ವೈಪಾಯನ ವ್ಯಾಸರು ವೇದಗಳನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ, ಮಹಾಭಾರತ, ಪುರಾಣಗಳು ಹಾಗೂ ಬ್ರಹ್ಮಸೂತ್ರಗಳನ್ನು ರಚಿಸಿ ಮಾನವಕುಲಕ್ಕೆ ಜ್ಞಾನಭಂಡಾರವನ್ನೇ ನೀಡಿ ಭಾರತೀಯ ಜ್ಞಾನಪರಂಪರೆಯನ್ನು ಶಾಶ್ವತವಾಗಿ ಉಳಿಸಿದ ಮಹಾನ್ ಋಷಿಗಳು. ಅದಕ್ಕಾಗಿಯೇ ಅವರನ್ನು “ಜಗದ್ಗುರು” ಎಂದೂ ಗೌರವಿಸಲಾಗುತ್ತದೆ. ಭಾರತೀಯ ಋಷಿ ಪರಂಪರೆಯ ಎಲ್ಲ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪದ್ಧತಿಯೇ ಗುರು ಪೂರ್ಣಿಮೆಯಾಗಿದೆ.

ವ್ಯಾಸರನ್ನು ಮಹಾವಿಷ್ಣುವಿನ ಜ್ಞಾನ ಅವತಾರವೆಂದು ಪರಿಗಣಿಸಲಾಗುತ್ತದೆ. ಸನಾತನ ಪರಂಪರೆಯಲ್ಲಿ ಮಹಾವಿಷ್ಣುವಿನ ಜ್ಞಾನಾವತಾರಗಳಿಗೆ ವಿಶಿಷ್ಟ ಸ್ಥಾನವಿದ್ದು, ಹಂಸ, ಹಯಗ್ರೀವ, ದತ್ತಾತ್ರೇಯ ಮತ್ತು ವೇದವ್ಯಾಸರನ್ನು ಪ್ರಮುಖವಾಗಿ ಹೇಳಬಹುದು. ಈ ಎಲ್ಲ ಜ್ಞಾನಾವತಾರಗಳ ಉದ್ದೇಶ ಒಂದೇ – ಧರ್ಮವನ್ನು ಉಳಿಸುವುದು, ಜ್ಞಾನವನ್ನು ಸಂರಕ್ಷಿಸುವುದು ಹಾಗೂ ಮಾನವಕುಲಕ್ಕೆ ಮೋಕ್ಷಮಾರ್ಗವನ್ನು ತೋರಿಸುವುದು.

ಹಂಸಾವತಾರದಲ್ಲಿ ಪರಮಾತ್ಮನು ಬ್ರಹ್ಮರಿಗೆ, ಸನಕಾದಿ ಋಷಿಗಳಿಗೆ ಆತ್ಮತತ್ತ್ವದ ಜ್ಞಾನವನ್ನು ಬೋಧಿಸಿದನೆಂದು ಪುರಾಣಗಳು ವರ್ಣಿಸುತ್ತವೆ. ಹಯಗ್ರೀವ ಅವತಾರದಲ್ಲಿ ಮಧು-ಕೈಟಭರಿಂದ ಅಪಹರಿಸಲ್ಪಟ್ಟ ವೇದಗಳನ್ನು ಮರಳಿ ಪಡೆದು, ವೇದಗಳನ್ನು ರಕ್ಷಿಸಿ, ಜ್ಞಾನವನ್ನು ಲೋಕಕ್ಕೆ ಪುನಃ ಕೊಟ್ಟರೆ, ದತ್ತಾತ್ರೇಯರು ಸಕಲ ಜೀವಿಗಳಲ್ಲೂ, ಪ್ರಕೃತಿಯಲ್ಲೂ ಗುರುವನ್ನು ಕಂಡು, ವಿಶ್ವವೇ ಗುರು ಎಂಬ ಸಂದೇಶವನ್ನು ಸಾರಿದರು.

ವೇದಗಳನ್ನು ವ್ಯವಸ್ಥಿತಗೊಳಿಸಿ, ಶಾಸ್ತ್ರ-ಪುರಾಣ-ಇತಿಹಾಸಗಳ ಮೂಲಕ ಧರ್ಮಜ್ಞಾನವನ್ನು ಜನಸಾಮಾನ್ಯರಿಗೂ ಸುಲಭವಾಗಿ ಗ್ರಾಹ್ಯವಾಗುವಂತೆ ಮಾಡುವ ಧ್ಯೇಯದಿಂದ ವ್ಯಾಸರ ಅವತಾರವಾಯಿತೆಂದು ಪುರಾಣಗಳು ಹೇಳುತ್ತವೆ. ಗುರುಪೂರ್ಣಿಮೆಯು ತನ್ನ ಗುರುವಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನ. ಹುಣ್ಣಿಮೆಯ ಪೂರ್ಣಚಂದ್ರನು ಹೇಗೆ ತನ್ನ ಸಂಪೂರ್ಣ ಪ್ರಕಾಶದಿಂದ ಜಗತ್ತನ್ನು ಬೆಳಗುತ್ತಾನೋ, ಹಾಗೆಯೇ ಗುರು ತನ್ನ ಸಂಪೂರ್ಣ ಜ್ಞಾನದಿಂದ ಶಿಷ್ಯನ ಬದುಕನ್ನು ಪ್ರಕಾಶಮಾನಗೊಳಿಸುತ್ತಾನೆ ಎಂಬ ಸಾಂಕೇತಿಕ ಅರ್ಥವನ್ನು ಈ ದಿನ ಸಾರುತ್ತದೆ. ಗುರು ಇಲ್ಲದೇ ಜ್ಞಾನವಿಲ್ಲ; ಜ್ಞಾನವಿಲ್ಲದೇ ವಿವೇಕವಿಲ್ಲ; ವಿವೇಕವಿಲ್ಲದೇ ಧರ್ಮಪೂರ್ಣ ಜೀವನ ಸಾಧ್ಯವಿಲ್ಲ ಎಂಬ ಸಂದೇಶವನ್ನು ಗುರುಪೂರ್ಣಿಮೆಯು ನೆನಪಿಸುತ್ತದೆ.

ಗುರು, ಆಚಾರ್ಯ ಮತ್ತು ಶಿಕ್ಷಕ ಎನ್ನುವ ಪದಗಳಲ್ಲಿರುವ ಅಂತರವಾದರೂ ಏನು? ಶಿಕ್ಷಕ ವಿಷಯಜ್ಞಾನವನ್ನು ಬೋಧಿಸಿದರೆ, ಆಚಾರ್ಯ ನುಡಿದಂತೆ ನಡೆ ಎಂಬ ರೀತಿಯಲ್ಲಿ ಬೋಧಿಸಿದ್ದನ್ನು ತಮ್ಮ ಜೀವನದಲ್ಲಿ ತಾವೇ ಅಳವಡಿಸಿಕೊಳ್ಳುವ ಮೂಲಕ ಶಿಷ್ಯರಿಗೆ ಕಲಿಸುತ್ತಾರೆ. ಆದರೆ ಗುರು ಇವೆರಡನ್ನೂ ಮೀರಿ, ಶಿಷ್ಯನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ರೂಪಿಸಿ, ಅವನ ಅಂತರಂಗವನ್ನು ಉದ್ಧರಿಸಿ, ಕೈ ಹಿಡಿದು ಆತ್ಮಸಾಕ್ಷಾತ್ಕಾರ ಮಾಡಿಸುವವನು. ಶಿಕ್ಷಕ ಮಾಹಿತಿ ನೀಡುತ್ತಾನೆ; ಆಚಾರ್ಯ ಬದುಕನ್ನು ಮಾದರಿಯಾಗಿಸುತ್ತಾನೆ; ಗುರು ಬದುಕಿನ ಗುರಿಯನ್ನೇ ತೋರಿಸುತ್ತಾನೆ.

ಇಂದಿನ ಒತ್ತಡಭರಿತ, ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನ ಯುಗದಲ್ಲಿ ಮಾಹಿತಿಗೆ ಕೊರತೆಯಿಲ್ಲದಿದ್ದರೂ ಮಾನಸಿಕ ಶಾಂತಿ, ವಿವೇಕ ಮತ್ತು ಮೌಲ್ಯಗಳ ಕೊರತೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಗುರುಗಳು ಜನರಿಗೆ ಆತ್ಮಾವಲೋಕನ, ಸಂಯಮ, ಕರುಣೆ, ಸಮಾಜಸೇವೆ, ಧ್ಯಾನ, ಯೋಗ, ಪ್ರಾಣಾಯಾಮ ಮುಂತಾದ ದಿವ್ಯ ವಿದ್ಯೆಗಳೊಂದಿಗೆ ನೈತಿಕತೆ, ಆತ್ಮವಿಶ್ವಾಸ, ಸೇವಾಭಾವ ಹಾಗೂ ರಾಷ್ಟ್ರನಿಷ್ಠೆಯಂತಹ ಮೌಲ್ಯಗಳನ್ನು ಕಲಿಸುತ್ತಾ, ಸಮಾಜದಲ್ಲಿ ಸ್ವಾಸ್ಥ್ಯ, ಸುಖ, ಶಾಂತಿ ಮತ್ತು ಸೌಹಾರ್ದ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಅವರ ಮಾರ್ಗದರ್ಶನದಲ್ಲಿ ಬೌದ್ಧಿಕ, ಮಾನಸಿಕ, ನೈತಿಕ ಹಾಗೂ ಸಾಮಾಜಿಕ ಸ್ವಾಸ್ಥ್ಯ-ಬೆಳವಣಿಗೆ ಸಾಧ್ಯವಾಗುತ್ತದೆ.

ಗುರುಗಳು ವ್ಯಕ್ತಿಯನ್ನು ವ್ಯಸನಗಳಿಂದ ದೂರವಿಟ್ಟು, ಸಂಸಾರದಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರಷಾರ್ಥಗಳ ಅನುಸರಣೆಗಾಗಿ ತಿಳುವಳಿಕೆ, ವಿವೇಚನೆ ಬೆಳೆಸುತ್ತಾ, ಜೀವನದ ನಿಜವಾದ ಗುರಿಯನ್ನು ಅರಿಯುವಂತೆ ಮಾರ್ಗದರ್ಶನ ಮಾಡುತ್ತಾರೆ. ನಿಜವಾದ ಗುರು ವ್ಯಕ್ತಿಪೂಜೆಯನ್ನು ಬಯಸದೇ, ಧರ್ಮ, ಸತ್ಯ ಮತ್ತು ಆತ್ಮೋನ್ನತಿಯ ಮಾರ್ಗವನ್ನೇ ಶಿಷ್ಯನಿಗೆ ತೋರಿಸುತ್ತಾನೆ.

ಗುರುಪೂರ್ಣಿಮೆಯಂದು ಗುರುಪೂಜೆ, ಪಾದಪೂಜೆ, ವ್ಯಾಸಪೂಜೆ, ಗುರುದಕ್ಷಿಣೆ ಸಮರ್ಪಣೆ, ಆಶೀರ್ವಾದ ಸ್ವೀಕಾರ, ವೇದ-ಗೀತಾ-ಉಪನಿಷತ್ತುಗಳ ಪಾರಾಯಣ, ಸತ್ಸಂಗ, ಧ್ಯಾನ, ಜಪ, ದಾನ ಹಾಗೂ ಸೇವಾಕಾರ್ಯಗಳನ್ನು ಭಕ್ತಿಯಿಂದ ಆಚರಿಸಲಾಗುತ್ತದೆ. ಅನೇಕ ಮಠ-ಆಶ್ರಮಗಳಲ್ಲಿ ಚಾತುರ್ಮಾಸ್ಯದ ಆರಂಭವೂ ಇದೇ ದಿನದಿಂದ ನಡೆಯುತ್ತದೆ. ಈ ಎಲ್ಲ ಆಚರಣೆಗಳ ಮೂಲ ಉದ್ದೇಶ ಒಂದೇ – ಜ್ಞಾನಪರಂಪರೆಯ ಬಗೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು, ಗುರುವಿನ ಆಶೀರ್ವಾದವನ್ನು ಪಡೆದು ಧರ್ಮನಿಷ್ಠ ಜೀವನದ ಸಂಕಲ್ಪ ಮಾಡುವುದು.

ಗುರುಪೂರ್ಣಿಮೆಯ ಸಂದೇಶವೆಂದರೆ, ಜ್ಞಾನವನ್ನು ಗೌರವಿಸಿ, ಗುರುವನ್ನು ಸ್ಮರಿಸಿ, ಧರ್ಮದ ಮಾರ್ಗದಲ್ಲಿ ನಡೆಯಿರಿ; ಆಗ ವ್ಯಕ್ತಿಯೂ ಉದ್ಧಾರವಾಗುತ್ತಾನೆ, ಸಮಾಜವೂ ಸುಭಿಕ್ಷವಾಗುತ್ತದೆ, ರಾಷ್ಟ್ರವೂ ವೈಭವದ ಶಿಖರವನ್ನು ತಲುಪುತ್ತದೆ.

#Rashtrotthana #RashtrotthanaParishat #rashtrotthanainrashtraseva #gurupurnima #vyasapurnima #vedavyasa #vyasajayanti #vyasa

Leave a Reply

Your email address will not be published. Required fields are marked *