When Sarees and Panches Went From Being ‘Worn’ to Being ‘Put On’ — Was It Merely Linguistic Decline?
A heated discussion was underway. It’s unclear what has happened to the people of Bengaluru. Language lovers were grumbling that people now say “haakkollodu” (putting on) instead of “uduvudu” (draping) for sarees and panches; that instead of “parking” cars and bikes, they say “haaki” (throwing/dropping) them; and that instead of “purchasing” objects, they say “going toward the brand.”
Their concern is indeed valid. Words and expressions ought to be as pure and sound as possible, for it is they that lead us back toward the pristine, crystal-clear source! Yet within that concern, the question kept arising: whether this was merely the dominance of linguistic decline, or whether it also reflected a transformation in the very way objects, their use, and their purpose are experienced.
‘ಉಡುತ್ತಿದ್ದ’ ಸೀರೆ-ಪಂಚೆಗಳು ‘ಹಾಕಿಕೊಳ್ಳುವ’ ಕಾಲಕ್ಕೆ ಬಂದಾಗ ಭಾಷಾ ಶೈಥಿಲ್ಯವಷ್ಟೇ ಆಯಿತೇ?

ಜೋರು ಚರ್ಚೆ ನಡೆಯುತ್ತಿತ್ತು. ಬೆಂಗಳೂರಿಗರಿಗೆ ಏನಾಗಿದೆಯೋ ಗೊತ್ತಿಲ್ಲ. ‘ಉಡುವ’ ಸೀರೆ-ಪಂಚೆಗಳನ್ನು ‘ಹಾಕಿಕೊಳ್ಳುವುದು’, ಕಾರು-ಬೈಕುಗಳನ್ನು ‘ನಿಲ್ಲಿಸಿ’ ಅಲ್ಲ ‘ಹಾಕಿ’ ಬರುವುದು, ವಸ್ತುಗಳನ್ನು ಖರೀದಿಸುವುದರ ಬದಲಿಗೆ ‘ಬ್ರಾಂಡ್ ಕಡೆಗೆ ಹೋಗುವುದು’ ಅಂತೆಲ್ಲ ಹೇಳುತ್ತಾರೆಂದು ಭಾಷಾ ಪ್ರೇಮಿಗಳು ಕೊಣಕೊಣಿಸುತ್ತಿದ್ದರು.
ಅವರು ಕೊರಗೂ ಸರಿಯೇ. ವಸ್ತು-ವಿಚಾರಗಳು ಎಷ್ಟು ಸಾಧ್ಯವೋ ಅಷ್ಟು ಸ್ವಚ್ಛ-ಸ್ವಸ್ಥವಾಗಿರಬೇಕು. ಏಕೆಂದರೆ ಅವು ಶುದ್ಧ-ಸ್ಫಟಿಕ ಆದಿಮೂಲದೆಡೆಗೆ ಕರೆದುಕೊಂಡು ಹೋಗುತ್ತವಲ್ಲ! ಆ ಕೊರಗಿನಲ್ಲಿ ಭಾಷಾ ಶೈಥಿಲ್ಯದ್ದೇ ಪಾರುಪತ್ಯವೇ ಅಥವಾ ಪದಾರ್ಥ-ಪ್ರಯೋಗ-ಪ್ರಯೋಜನ ಭಾವ ಸಂಕ್ರಮಣವೂ ಆಗಿದೆಯೇ ಎಂಬ ಪ್ರಶ್ನೆ ಏಳುತ್ತಲೇ ಇತ್ತು.
ಪಂಚೆ ಸಾಮಾನ್ಯ ಪೋಷಾಕು ಆಗಿದ್ದ ಕಾಲದಲ್ಲಿ ಕಚ್ಚೆ ಹಾಕಿ ಪಂಚೆ ‘ಉಡುವುದು’, ಮುಂಡು ಪಂಚೆ ‘ಉಡುವುದು’, ಬೈರಾಸ ‘ಸುತ್ತಿಕೊಳ್ಳುವುದು’ ಎಂದೆಲ್ಲ ಹೇಳುತ್ತಿದ್ದೆವು. ಅಸಾಮಾನ್ಯ ಸಂದರ್ಭಗಳಿಗೆ ಮಾತ್ರ ಪಂಚೆಗಳು ಸೀಮಿತವಾಗತೊಡಗಿದಾಗ ಪಂಚೆ ‘ಹಾಕಿಕೊಳ್ಳುವುದು’ ಎಂಬ ಪ್ರಯೋಗ ಚಾಲ್ತಿಗೆ ಬಂದು, ಎಲಾಸ್ಟಿಕ್-ವೆಲ್‍ಕ್ರೋ ಕಾಲದಲ್ಲಿ ಕಚ್ಚೆಪಂಚೆಯನ್ನು ಅಕ್ಷರಶಃ ಹಾಕಿಕೊಳ್ಳುವುದೇ ಆಗಿ, ಮುಂಡು ಪಂಚೆಗಳನ್ನು ಅಂಟಿಸಿಕೊಂಡು ಅದರ ಕಿಸೆಯಲ್ಲಿ ಮೊಬೈಲನ್ನೂ ಇಳಿಬಿಟ್ಟಿದ್ದಾಯಿತು.
ಹೆಂಗಸರು ಸೀರೆ ಬಿಟ್ಟು ಬೇರೆ ಬಟ್ಟೆ ತೊಡದಿದ್ದ ಕಾಲದಲ್ಲಿ 9 ಗಜದ ಸೀರೆಯಲ್ಲಿ ಕಚ್ಚೆ ‘ಹಾಕಿಕೊಂಡರೆ’, 6 ಗಜದ ಸೀರೆಗಳನ್ನು ‘ಉಡುತ್ತಿದ್ದರು’. ನೈಟಿ, ಸಲ್ವಾರ-ಕಮೀಜ್ ಇತ್ಯಾದಿಗಳ ಕಾಲದಲ್ಲಿ ಸೀರೆಗಳು ಹಬ್ಬ-ಹರಿದಿನಗಳ ವಿಶೇಷಕ್ಕಷ್ಟೇ ಅಂತಾಗುತ್ತಿದ್ದಂತೆ ಉಡುವ ಸೀರೆಗಳನ್ನು ಪಿನ್ನುಗಳ ಸಹಕಾರದೊಂದಿಗೆ ‘ಸಿಕ್ಕಿಸಿಕೊಳ್ಳುವ’, ನಂತರದ ದಿನಗಳಲ್ಲಿ ನಾಟ್ಯದ ಪೋಷಾಕಿನಂತೆ (ರೆಡಿಮೇಡ್ ಸೀರೆ) ಪ್ಯಾಂಟು-ಶರಟುಗಳ ರೀತಿಯಲ್ಲಿ ‘ಏರಿಸಿಕೊಳ್ಳುವ’ ಹಂತಕ್ಕೂ ಹೋಗುತ್ತಾ, ಸೀರೆಯನ್ನು ‘ಹಾಕಿಕೊಳ್ಳುವ’ ಪ್ರಯೋಗ ಸರ್ವೇಸಾಮಾನ್ಯವಾಗಿದ್ದಷ್ಟೇ ಅಲ್ಲದೇ, ದುಃಖಿತರನ್ನು ಮಾತನಾಡಿಸಲು ತರಾತುರಿಯಲ್ಲಿ ಸೀರೆ ‘ಸುತ್ತಿಕೊಂಡು’ ಹೋಗುವ ಸತ್-ಸಂಪ್ರದಾಯವೂ ಬಂತೇನೋ!
ಒಟ್ಟಾರೆಯಾಗಿ ಬಟ್ಟೆಗಳಲ್ಲಿ ಹೊಲಿಗೆ, ಎಲಾಸ್ಟಿಕ್, ಲಾಡಿ, ಹುಕ್, ಬಕಲ್, ಗುಂಡಿ, ಬೆಲ್ಟ್, ಪಿನ್ನಿನ ಬಳಕೆ ಢಾಳಾಗುತ್ತಿದ್ದಂತೆಯೇ ‘ಉಡುವ’ ಬಟ್ಟೆ ‘ಹಾಕಿಕೊಳ್ಳುವ’ ಪ್ರಕ್ರಿಯೆಗೆ ಮಗ್ಗುಲು ಬದಲಾಯಿಸಿತೇನೋ!
ಇನ್ನು ವಾಹನಗಳ ವಿಚಾರ. ವ್ಯವಸ್ಥಿತವಾದ ನಿಲುಗಡೆ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಿ ಬರುವಾಗ, ಗಾಡಿ ಅಲ್ಲಿ ‘ನಿಲ್ಲಿಸಿದೆ’, ‘ಹಚ್ಚಿದೆ’ ಎಂಬ ಸುವ್ಯವಸ್ಥೆಯ ಅನ್ವರ್ಥಕ ಶಬ್ದಗಳು ಮಾತುಗಳಲ್ಲಿ ಮೂಡುತ್ತಿದ್ದವು. ರಸ್ತೆಯಲ್ಲಿ, ಮನೆಯಲ್ಲಿ ಪಾರ್ಕಿಂಗ್ ಸ್ಥಳಾವಕಾಶದ ಕೊರತೆಯಾಗಿ ಎಲ್ಲೆಂದರಲ್ಲಿ , ಹೇಗೆಂದರೆಹಾಗೆ ವಾಹನಗಳನ್ನು ನಿಲ್ಲಿಸುವ ಅನಿವಾರ್ಯಕ್ಕೆ ಒಳಗಾಗುತ್ತಿದ್ದಂತೆಯೇ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅಲ್ಲಿ ಗಾಡಿ ‘ಹಾಕಿ ಬಂದೆ’ ಎನ್ನುವ ಭಾವಗಳು ಶಬ್ದಗಳಾಗಹತ್ತಿದವೇನೋ!
ಬೆರಳಿನಿಂದ ‘ಹಚ್ಚಿಕೊಳ್ಳುತ್ತಿದ್ದ’ ತಿಲಕ, ಕುಂಕುಮಗಳು ಗಮ್‍ಯುಕ್ತ ಬಿಂದಿಗಳಾದಾಗ ‘ಇಟ್ಟುಕೊಳ್ಳಲಾಯಿತು’. ತುರುಬಿದ್ದಾಗ ಹೂವನ್ನು ‘ಮುಡಿದುಕೊಂಡರೆ’, ಜಡೆ ಹೆಣೆಯದ ಕೂದಲುಗಳಲ್ಲಿ ಹೂಮಾಲೆಯನ್ನು ಕ್ಲಿಪ್ಪಿನೊಳಗೆ ‘ಸಿಕ್ಕಿಸಿಕೊಳ್ಳಲಾಯಿತು’, ನಂತರ ಹೂವನ್ನು ‘ಹಾಕಿಕೊಳ್ಳಲಾಯಿತು’.
ಸರಕು-ಸೇವೆಗಳ ಬಗೆಗಿರುವ ದಿವ್ಯ ಭಾವ ಕಡಿಮೆಯಾಗುತ್ತ ಬಸ್-ಆಟೋದಲ್ಲಿ ‘ಬರುತ್ತಿದ್ದವರು’ ಬಸ್-ಆಟೋಗಳನ್ನೆಲ್ಲ ‘ತೆಗೆದುಕೊಂಡು’ ಬರುತ್ತಿದ್ದಾರೆ. ಕೊಳ್ಳುಬಾಕರಾದ ಮೇಲೆ ಬ್ರಾಂಡ್‍ನಿಂದ ಬ್ರಾಂಡ್ ಕಡೆಗೆ ಹೋಗುವುದು ಸಾಮಾನ್ಯವಾಗುತ್ತಿದೆ.
ಭಾವದೊಟ್ಟಿಗೆ ಭಾಷೆಯೂ ಬದಲಾಗುತ್ತಾ ಒಳಹೊರಗುಗಳಲ್ಲಿ ಏರ್ಪಡುತ್ತಿರುವ ಸಾಮ್ಯದ ಬಗೆಗೆ ಹರ್ಷಿಸಬೇಕೋ ಅಥವಾ ಗಮ್ಯ ಮತ್ತೂ ಪ್ರಶ್ನಾರ್ಥಕವಾಗುತ್ತಿರುವುದರ ಬಗೆಗೆ ದುಃಖಿಸಬೇಕೋ! ದಾರಿ ಕಾಣದಾಗಿದೆ ರಾಘವೇಂದ್ರನೇ…
#Rashtrotthana #RashtrotthanaParishat #rashtrotthanainrashtraseva #languageusage #indianconstume #dhoti #saree #ethnicwear







