• July 16, 2026
  • RP
  • 0

Jai Jagannatho – Victory to Jagannath!

Would anyone believe that the English word “Juggernaut” actually entered the English language from the Puri Jagannath Rath Yatra itself? The true origin of this word is indeed the Sanskrit word ‘Jagannath’! That word means “an unstoppable, massive force that crushes everything that comes before it.” In the 17th century, Europeans who witnessed the massive 45-foot-tall chariot (Nandighosha) were stunned, and this is how the word came to be recorded in a distorted form — through the exaggerated claim that devotees, in their desire to attain salvation, would throw themselves under the wheels of this chariot and die.

The Puri Rath Yatra of the Shri Parabhava Samvatsara, which began today, is a great festival held for the devotees of Lord Shri Jagannath — that is, Shri Krishna, the savior of the universe! Every year, on Ashadha Shukla Bidige (this year, 16-07-2026), the trio of deities residing here — Shri Jagannath (the form of Shri Krishna), his elder brother Balabhadra (Balarama), and his younger sister Subhadra — are seated on massive wooden chariots and taken on a procession through the city; this grand festival is what is called the Rath Yatra. In the Kathopanishad, there is a reference that uses the metaphor of a chariot for the human body — the body is the chariot, the soul is the passenger seated in the chariot, the intellect is the charioteer, and the mind is the reins.

ಜಯ ಜಗನ್ನಾಥೋ!

ಇಂಗ್ಲಿಷ್‌ನ ಜಗರ್ನಾಟ್” (Juggernaut) ಎಂಬ ಪದವು ಪುರಿ ಜಗನ್ನಾಥ ರಥಯಾತ್ರೆಯಿಂದಲೇ ಇಂಗ್ಲಿಷ್ ಭಾಷೆಗೆ ಸೇರ್ಪಡೆಯಾಗಿದೆ ಎಂದರೆ ಯಾರಾದರೂ ನಂಬಬಹುದೇ? ಈ ಪದದ ಮೂಲ ನಿಜಕ್ಕೂ ಸಂಸ್ಕೃತದ ‘ಜಗನ್ನಾಥ’ ಎಂಬ ಪದವೇ ಆಗಿದೆ! ಆ ಪದದ ಅರ್ಥ “ಎದುರಿಗೆ ಬಂದದ್ದನ್ನೆಲ್ಲಾ ಹೊಸಕಿಹಾಕುವ, ತಡೆಯಲಾಗದ ಬೃಹತ್ ಶಕ್ತಿ” ಎಂದಾಗಿದೆ. 17ನೇ ಶತಮಾನದಲ್ಲಿ 45 ಅಡಿ ಎತ್ತರದ ಬೃಹತ್ ರಥವನ್ನು (ನಂದಿಘೋಷ) ನೋಡಿದ ಯುರೋಪಿಯನ್ನರು ದಂಗಾಗಿ, ಮೋಕ್ಷ ಪಡೆವ ಆಸೆಯಿಂದ ಭಕ್ತರು ಈ ರಥದ ಚಕ್ರದಡಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂಬ ಉತ್ಪ್ರೇಕ್ಷೆಯಿಂದ ತಿರುಚಿ ದಾಖಲಿಸಿದ ಬಗೆ ಇದು!

ಈ ದಿನ ಆರಂಭಗೊಂಡ ಶ‍್ರೀ ಪರಾಭವ ಸಂವತ್ಸರದ ಪುರಿ ರಥಯಾತ್ರೆಯು ಭಗವಾನ್ ಶ್ರೀ ಜಗನ್ನಾಥನ ಅಂದರೆ ಜಗದೋದ್ಧಾರಕ ಶ್ರೀಕೃಷ್ಣನ ಭಕ್ತರಿಗಾಗಿ ಜರುಗುವ ಒಂದು ಮಹಾಪರ್ವವೇ ಆಗಿದೆ! ಇಲ್ಲಿ ನೆಲೆಸಿರುವ ಶ್ರೀ ಜಗನ್ನಾಥ (ಶ್ರೀಕೃಷ್ಣನ ಸ್ವರೂಪ), ಅಣ್ಣ ಬಲಭದ್ರ (ಬಲರಾಮ) ಮತ್ತು ತಂಗಿ ಸುಭದ್ರೆಯ ತ್ರಿಮೂರ್ತಿಗಳು ಪ್ರತಿವರ್ಷ ಆಷಾಢ ಶುಕ್ಲ ಬಿದಿಗೆಯಂದು (ಈ ವರ್ಷ 16-07-2026) ಬೃಹತ್ ಮರದ ರಥಗಳಲ್ಲಿ ಆಸೀನರಾಗಿ ನಗರ ಸಂಚಾರ ಕೈಗೊಳ್ಳುವ ಮಹೋತ್ಸವವನ್ನೇ ರಥಯಾತ್ರೆ ಎಂದು ಕರೆಯುತ್ತಾರೆ. ಕಠೋಪನಿಷತ್‌ನಲ್ಲಿ ರಥದ ರೂಪಕವನ್ನು ಮಾನವ ದೇಹಕ್ಕೆ ಹೋಲಿಸಿ, ದೇಹವೇ ರಥ, ಆತ್ಮವೇ ರಥದಲ್ಲಿ ಕುಳಿತ ಪ್ರಯಾಣಿಕ, ಬುದ್ಧಿಯೇ ಸಾರಥಿ ಮತ್ತು ಮನಸ್ಸೇ ಕಡಿವಾಣ ಎಂಬ ಉಲ್ಲೇಖವಿದೆ.

ಕೃಷ್ಣನ ಬಾಲರೂಪದ ಮೂರ್ತಿಗಳಿರುವ ಪುರಾತನ ದೇವಾಲಯಗಳು ಬೆರಳೆಣಿಕೆಯಷ್ಟು ಇರಬಹುದೇನೋ. ದಕ್ಷಿಣದಲ್ಲಿ, ಅಂತಹ ಮಂದಿರಗಳ ಪೈಕಿ ಉಡುಪಿಯ ಕಡೆಗೋಲು ಕೈಯಲ್ಲಿ ಹಿಡಿದ ಬಾಲಕೃಷ್ಣನ ದೇವಳ ಹಾಗೂ ಗುರುವಾಯೂರಪ್ಪ “ಉನ್ನಿಕೃಷ್ಣ”ನ ಜಗದ್ವಿಖ್ಯಾತ ದೇಗುಲಗಳಾಗಿವೆ. ಅಚ್ಚರಿಯ ಸಂಗತಿಯೆಂದರೆ, ಉತ್ತರದಲ್ಲಿನ ಕೃಷ್ಣಜನ್ಮಸ್ಥಾನವಾದ ಮಥುರೆಯಾಗಲೀ, ವೃಂದಾವನದಲ್ಲಾಗಲೀ ಅಥವಾ ದ್ವಾರಕೆಯಲ್ಲಾಗಲೀ ಬಾಲಕೃಷ್ಣನ ದೇವಸ್ಥಾನಗಳು ವಿರಳವೇ. ವೇಣುಗೋಪಾಲ, ರಾಧಾಕೃಷ್ಣ ದೇವಸ್ಥಾನಗಳನ್ನಂತೂ ದೇಶದ ಬಹುತೇಕ ಎಲ್ಲ ಪ್ರಾಂತ್ಯಗಳಲ್ಲೂ ಕಾಣಬಹುದು.

ಆದರೆ ಕೌಮಾರ್ಯದಲ್ಲಿರುವ, ಅದರಲ್ಲೂ ತನ್ನ ಅಣ್ಣ ಬಲರಾಮ ಹಾಗೂ ತಂಗಿ ಸುಭದ್ರೆಯ ಜೊತೆಗಿರುವ ಕುಮಾರ ಕೃಷ್ಣನನ್ನು ಎಲ್ಲಿ ಕಾಣಬಹುದು? ಅದು ಮತ್ತೆಲ್ಲೂ ಅಲ್ಲದೇ, ಪುಣ್ಯನಗರಿ ಪುರಿಯಲ್ಲಿರುವ ಬಲಭದ್ರ, ಸುಭದ್ರಾ ಸಹಿತ ಜಗನ್ನಾಥ ಮಂದಿರದಲ್ಲಿ ಮಾತ್ರ. ಅಗಲವಾದ, ದುಂಡಾದ ಮನಮೋಹಕ ಕಣ್ಣುಗಳ, ವಿಶಾಲವಾದ ಮುದ್ದುಮೊಗವನ್ನು ಹೊಂದಿ, ಪುಟ್ಟಪುಟ್ಟ ಅಸ್ಪಷ್ಟ ಕೈಕಾಲುಗಳಿರುವ “ಅಪರೂಪದ” ವಿಶಿಷ್ಟವಾದ ಶಿಲ್ಪಕಾರಿಕೆಯ ಮೂರ್ತಿಗಳಿರುವ ದೇವಸ್ಥಾನವಿರುವುದು ವಿಶ್ವದಲ್ಲಿ ಒಂದೇ ಕಡೆ! ಆಧುನಿಕ ಜಗತ್ತಿನ ಸೃಷ್ಟಿಯಾದ ಆಕರ್ಷಕ “ಕಾರ್ಟೂನ್”ಗಳಂತೆ ಕಾಣುವ ಆ ಮೂರ್ತಿಗಳನ್ನು ಕಂಡಾಗ ದೈವಭಕ್ತಿಗೆ ಪ್ರತಿಮೆ, ವಿಗ್ರಹಗಳ ಅಂದ ಮಾತ್ರ ಮುಖ್ಯವಲ್ಲ, ಶ್ರದ್ಧಾಭಕ್ತಿಗಳಿದ್ದರೆ ದೇವರು ಎಲ್ಲ ಕಡೆಯೂ ಕಾಣುವನು ಎಂಬ ಸತ್ಯದ ಅರಿವಾಗುತ್ತದೆ.

ಇನ್ನು… ರಥಯಾತ್ರೆಗಾಗಿ ಮೂರು ಬೃಹತ್ ಮರದ ರಥಗಳನ್ನು ಅಕ್ಷಯ ತೃತೀಯಾದಂದು ಆರಂಭಿಸಿ, ಪರಂಪರಾಗತ ಶಿಲ್ಪಕಾರರು ‘ಫಸ್ಸಿ’ ಮತ್ತು ‘ಧೌಸಾ’ ಮರಗಳಿಂದ, ಒಂದೇ ಒಂದು ಮೊಳೆಯನ್ನೂ ಬಳಸದೇ ಪ್ರತಿವರ್ಷ ಹೊಸದಾಗಿ ನಿರ್ಮಿಸುತ್ತಾರೆ. ಮೂರು ರಥಗಳಲ್ಲಿ, ಶ್ರೀ ಜಗನ್ನಾಥರ 16 ಚಕ್ರಗಳ “ನಂದಿಘೋಷ” (ಚಕ್ರಧ್ವಜ) ರಥವು ಕೆಂಪು-ಹಳದಿಯ ಮೇಲ್ಛಾವಣಿಯನ್ನು ಹೊಂದಿದ್ದರೆ, ಬಲಭದ್ರನ 14 ಚಕ್ರಗಳ “ತಳಧ್ವಜ” ರಥವು ಕೆಂಪು-ಹಸಿರು ಬಣ್ಣದ ಮೇಲ್ಛಾವಣಿಯನ್ನು ಹೊಂದಿರುತ್ತದೆ. ಸುಭದ್ರೆಯ 12 ಚಕ್ರಗಳ “ದರ್ಪದಳನವಾಗಿದ್ದು (ದೇವದಳನ) ರಥವು ಕೆಂಪು-ಕಪ್ಪು ಬಣ್ಣದ ಮೇಲ್ಛಾವಣಿಯನ್ನು ಹೊಂದಿರುತ್ತದೆ.

ಪುರಿ ರಥೋತ್ಸವದಲ್ಲಿ ಬಳಸುವ 220 ಅಡಿ ಉದ್ದ ಹಾಗೂ 8 ಇಂಚು ದಪ್ಪದ ಮೂರು ಹಗ್ಗಗಳಿಗೂ ಪೌರಾಣಿಕ ಹಿನ್ನೆಲೆಯಿದೆ. ನಂದಿಘೋಷ ಮತ್ತು ತಳಧ್ವಜ ರಥಗಳ ಹಗ್ಗಗಳು ಕ್ರಮವಾಗಿ ‘ಶಂಖಚೂಡಾ’ ಹಾಗೂ ‘ವಾಸುಕಿ’ ಎಂಬ ನಾಗದ ಸಂಕೇತವಾದರೆ, ದರ್ಪದಳನ ರಥದ ಹಗ್ಗ ‘ಸ್ವರ್ಣಚೂಡಾ’ ಎಂಬ ನಾಗಿಣಿಯ ಪ್ರತೀಕ. ಈ ಪವಿತ್ರ ಹಗ್ಗಗಳನ್ನು ಸ್ಪರ್ಶಿಸಿದರೆ ಪಾಪನಾಶವಾಗುತ್ತದೆ ಹಾಗೂ ರಥವೆಳೆದರೆ ಜನ್ಮ ಪಾವನವಾಗಿ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬುದು ದೃಢವಾದ ನಂಬಿಕೆ.

ಜಗನ್ನಾಥ ರಥಯಾತ್ರೆಯ ಕಲಾಪಗಳು ಜ್ಯೇಷ್ಠ ಪೌರ್ಣಮಿಯಂದು 108 ಕೊಡಗಳ ‘ಸ್ನಾನಯಾತ್ರೆ’ಯ ಜಲಾಭಿಷೇಕದೊಂದಿಗೆ ಆರಂಭವಾಗುತ್ತವೆ. ತದನಂತರ ದೇವತೆಗಳು ‘ಅಸ್ವಸ್ಥ’ರಾಗುತ್ತಾರೆಂಬ ನಂಬಿಕೆಯಿಂದ 15 ದಿನಗಳ ‘ಅನಾಸರ’ ಕಾಲದಲ್ಲಿ ಗಿಡಮೂಲಿಕೆ ಚಿಕಿತ್ಸೆ ಪಡೆಯುತ್ತಾ ಭಕ್ತರಿಂದ ಮರೆಯಾಗುತ್ತಾರೆ. ಗುಂಡಿಚಾ ಮಾರ್ಜನದ ಬಳಿಕ ಆಷಾಢ ಶುಕ್ಲ ಬಿದಿಗೆಯಂದು ಬಡಾ ದಂಡದ ಮೂಲಕ ರಥಯಾತ್ರೆ ಹೊರಡುವ ದೇವತೆಗಳು, ಗುಂಡಿಚಾ ದೇವಾಲಯವನ್ನು (ಚಿಕ್ಕಮ್ಮನ ಮನೆ) ತಲುಪಿ ಏಳು ದಿನಗಳ ಕಾಲ ತಂಗುತ್ತಾರೆ. ಈ ಮಧ್ಯೆ ಐದನೇ ದಿನ ‘ಹೇರಾ ಪಂಚಮಿ’ಯಂದು ಲಕ್ಷ್ಮಿದೇವಿಯು ಪತಿಯನ್ನು ಮರಳಿ ಕರೆದೊಯ್ಯಲು ಬರುವ ಸಾಂಕೇತಿಕ ಆಚರಣೆ ಜರುಗುತ್ತದೆ. ಏಳು ದಿನಗಳ ಬಳಿಕ ‘ಬಾಹುಡ ಯಾತ್ರೆ’ಯ ಮೂಲಕ ಮೌಸಿ ಮಾ ದೇವಾಲಯದಲ್ಲಿ ‘ಪೋಡ ಪಿಠಾ’ ನೈವೇದ್ಯ ಸ್ವೀಕರಿಸಿ ಮುಖ್ಯ ದೇವಾಲಯಕ್ಕೆ ಮರಳುವ ದೇವತೆಗಳನ್ನು, ರಥದ ಮೇಲೆಯೇ ಸುಮಾರು 208 ಕೆ.ಜಿ. ಚಿನ್ನಾಭರಣಗಳಿಂದ ‘ಸುನಾ ಬೇಷ’ ವಿಧಿಯಡಿ ಅಲಂಕರಿಸಲಾಗುತ್ತದೆ. ಅಂತಿಮವಾಗಿ, ದೇವಶಯನಿ ಏಕಾದಶಿಗೂ ಮುನ್ನ ‘ನೀಳಾದ್ರಿ ಬಿಜೆ’ ವಿಧಿಯ ಮೂಲಕ ದೇವತೆಗಳು ಗರ್ಭಗುಡಿಯನ್ನು ಪ್ರವೇಶಿಸಿ ನಾಲ್ಕು ತಿಂಗಳ ಚಾತುರ್ಮಾಸ್ಯ ಯೋಗನಿದ್ರೆಗೆ ಜಾರುವುದರೊಂದಿಗೆ ಈ ಭವ್ಯ ಯಾತ್ರೆಯು ಸಂಪನ್ನಗೊಳ್ಳುತ್ತದೆ.

ಸೂರ್ಯೋದಯ ಮತ್ತು ಸೂರ್ಯಾಸ್ತಗಳೆರಡನ್ನೂ ಒಂದೇ ಕಡಲತೀರದಿಂದ ಕಾಣುವ ಅಪರೂಪದ ಭೌಗೋಳಿಕ ಸ್ಥಾನದಲ್ಲಿ ಪುರಿ ನಗರವು ನೆಲೆಗೊಂಡಿದೆ! ಶಂಕರಾಚಾರ್ಯಸ್ಥಾಪಿತ ಚತುರಾಮ್ನಾಯ ಶಕ್ತಿಪೀಠಗಳಲ್ಲಿ ಪುರಿಯು ಋಗ್ವೇದವನ್ನು ಪ್ರತಿನಿಧಿಸುವ ಗೋವರ್ಧನ ಮಠ ಅಥವಾ ಪುರಿ ಪೀಠವೆನಿಸಿಕೊಂಡಿದೆ.

800 ವರ್ಷಗಳಷ್ಟು ಹಳೆಯದೆಂದು ಅಂದಾಜಿಸಲಾಗಿರುವ, ಐತಿಹಾಸಿಕ ಪುರಿ ಜಗನ್ನಾಥ ದೇವಾಲಯವನ್ನು ಕನ್ನಡ ಮೂಲದ ಪೂರ್ವ-ಗಂಗ ರಾಜವಂಶಕ್ಕೆ ಸೇರಿದ ದೊರೆ, ಅನಂತವರ್ಮನ್ ಚೋಡಗಂಗದೇವನು ಸುಮಾರು 11ನೇ-12ನೇ ಶತಮಾನದಲ್ಲಿ, ಮೊದಲಿದ್ದ ಹಳೆಯ ದೇವಾಲಯದ ಸ್ಥಳದಲ್ಲಿಯೇ ಪುನರ್ನಿರ್ಮಿಸಿದ. ದೇವಾಲಯವು ಸುಮಾರು 4,00,000 ಚದರ ಅಡಿ ವಿಸ್ತೀರ್ಣದ ಬೃಹತ್ ಸಂಕೀರ್ಣ ಹೊಂದಿದ್ದು, ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಪ್ರಮುಖ ಪ್ರವೇಶ ದ್ವಾರಗಳೊಂದಿಗೆ 214ಅಡಿಗಳಷ್ಟು ಎತ್ತರವಾದ ಗೋಪುರವನ್ನೊಳಗೊಂಡಿದೆ.

ಪುರಿ ಜಗನ್ನಾಥ ದೇವಾಲಯದ ಕುರಿತು ಅನೇಕ ಅದ್ಭುತ ಅಚ್ಚರಿಯ ವಿದ್ಯಮಾನಗಳಿವೆ. ದೇವಾಲಯದ ಗೋಪುರದ ತುದಿಯಲ್ಲಿ ಸುಮಾರು 20 ಅಡಿ ಎತ್ತರದ ಸುದರ್ಶನ ಚಕ್ರ (ನೀಲಚಕ್ರ) ಪ್ರತಿಷ್ಠಾಪಿತವಾಗಿದೆ. ಪುರಿಯ ಯಾವುದೇ ಸ್ಥಳದಿಂದ ಕಂಡರೂ ಅದು ನಮ್ಮೆಡೆಗೆ ತಿರುಗಿದಂತೆಯೇ ಭಾಸವಾಗುತ್ತದೆ! ನೀಲಚಕ್ರಕ್ಕಿಂತ ಮೇಲೇರಿ, ಪ್ರತಿ ಸಂಜೆ ತಪ್ಪದೇ ಬದಲಾಯಿಸಲಾಗುವ ಧರ್ಮಧ್ವಜವು ಗಾಳಿಯ ವಿರುದ್ಧ ದಿಕ್ಕಿನಲ್ಲಿ ನಿರಂತರವಾಗಿ ಹಾರುವುದು ನಿಜಕ್ಕೂ ಒಂದು ಅದ್ಭುತವೇ ಸರಿ. ಮುಖ್ಯ ಗೋಪುರದ ನೆರಳು ದಿನದ ಯಾವುದೇ ಸಮಯದಲ್ಲಿ ದೇವಳದ ಸುತ್ತಲಿನ ಯಾವುದೇ ದಿಕ್ಕಿನಲ್ಲಿ ಗೋಚರವಾಗುವುದಿಲ್ಲ! ಹಕ್ಕಿ-ಪಕ್ಷಿಗಳು ಗೋಪುರದ ಮೇಲೆ ಹಾರುವುದಿಲ್ಲ, ಮುಂತಾದ ಆಧುನಿಕ ವಿಜ್ಞಾನಿಗಳಿಗೂ ಸವಾಲೊಡ್ಡುವ ಕೌತುಕಮಯ ಸಂಗತಿಗಳು ಅಲ್ಲಿವೆ!

ವಿಶ್ವದ ಬೃಹತ್ ಪಾಕಶಾಲೆಗಳಲ್ಲೊಂದಾದ ಇಲ್ಲಿನ ಪಾಕಶಾಲೆಯಲ್ಲಿ, ಮಹಾನೈವೇದ್ಯವನ್ನು (ಛಪ್ಪನ್ [56] ಭೋಗ್) ಇಂದಿಗೂ ಮಡಕೆಗಳನ್ನು ಒಂದರ ಮೇಲೊಂದರಂತೆ ಇಟ್ಟು ಸಿದ್ಧಪಡಿಸುತ್ತಾರೆ.  ಒಟ್ಟಿಗೆ 500 ಅಡುಗೆಭಟ್ಟರು ಹಾಗೂ ಅವರ 300 ಸಹಾಯಕರು ಕಟ್ಟಿಗೆಗಳ ಒಲೆಯ ಮೇಲೆಯೇ ನೈವೇದ್ಯ ತಯಾರಿಸುತ್ತಾರೆ. ಇಲ್ಲಿನ ಮಹಾಪ್ರಸಾದ ಎಂದಿಗೂ ವ್ಯರ್ಥವಾಗುವುದಿಲ್ಲ ಅಥವಾ ಭಕ್ತಸಮೂಹಕ್ಕೆ ಹಂಚಲು ಕಡಿಮೆಯಾಗುವುದಿಲ್ಲವಂತೆ!

ಪುರಿಯಲ್ಲಿ ಪಂಚತೀರ್ಥಗಳು, ಗುಂಡಿಚಾ ದೇವಾಲಯ, ಜಿಲ್ಲಾ ವಸ್ತುಸಂಗ್ರಹಾಲಯ ಹಾಗೂ ರಘುನಂದನ ಗ್ರಂಥಾಲಯದಂತಹ ಹಲವು ಪ್ರೇಕ್ಷಣೀಯ ಸ್ಥಳಗಳಿವೆ. ಇವಲ್ಲದೇ, ಪುರಿಯಲ್ಲಿ ಸಮುದ್ರ ಆಹಾರ ಸವಿಯುವುದು, ಸಾಂಪ್ರದಾಯಿಕ ಒಡಿಸ್ಸಿ ನೃತ್ಯ ಪ್ರದರ್ಶನಗಳನ್ನು ವೀಕ್ಷಿಸುವುದು ಹಾಗೂ ಸ್ಥಳೀಯ ಕರಕುಶಲ ಮಳಿಗೆಗಳಲ್ಲಿ ಶಂಖ, ಪಟಚಿತ್ರ ಮತ್ತು ಬಿದಿರಿನ ಕಲಾಕೃತಿಗಳ ಖರೀದಿ ಯಾತ್ರಿಕರ ನೆಚ್ಚಿನ ಚಟುವಟಿಕೆಗಳಾಗಿವೆ.

#Rashtrotthana #RashtrotthanaParishat #rashtrotthanainrashtraseva #rathayatra #purijagannatharathayatra #jaijagannath #jayajagannatho #subhadra #balabhadra

Leave a Reply

Your email address will not be published. Required fields are marked *