Dr. Shyama Prasad Mukherjee: Devoted to Indian identity, a synonym for concern for an undivided India
We see that Shyama Prasad’s immense knowledge, sharp intellect, talent, and unparalleled patriotism burned brightly throughout his student life. Having passed his B.A. Honors and M.A. examinations in the first class, the fire of patriotism within him was so powerful that for his M.A. degree, instead of English, he chose Bengali along with other Indian languages. In 1934, at the young age of just 33, he was appointed as the youngest-ever Vice-Chancellor of Calcutta University, bringing new dignity to Indian languages and to the field of education. When a terrible famine struck Bengal in 1943, he established the “Bengal Famine Relief Committee” and worked tirelessly, day and night, to save the lives of hundreds of thousands of people who were on the brink of death. This stands as a vivid example of the humanitarianism of that wise and far-sighted statesman within him.
ಭಾರತೀಯ ಅಸ್ಮಿತೆಯ ಬಗೆಗೆ ಮುತುವರ್ಜಿ, ಅಖಂಡ ಭಾರತದ ಕಾಳಜಿಗೆ ಅನ್ವರ್ಥ ನಾಮ, ಡಾ. ಶ್ಯಾಮ ಪ್ರಸಾದ್ ಮುಖರ್ಜಿ

ಶ್ಯಾಮ ಪ್ರಸಾದರ ಅಪಾರ ತಿಳುವಳಿಕೆ, ತೀಕ್ಷ್ಣ ಬುದ್ಧಿ, ಪ್ರತಿಭೆ, ಹಾಗೂ ಅಪ್ರತಿಮ ದೇಶಭಕ್ತಿಗಳು ಅವರ ವಿದ್ಯಾರ್ಥಿ ಜೀವನದುದ್ದಕ್ಕೂ ಜ್ವಲಂತವಾಗಿದ್ದುದನ್ನು ನಾವು ಕಾಣುತ್ತೇವೆ. ಬಿ.ಎ. ಆನರ್ಸ್ ಮತ್ತು ಎಂ.ಎ. ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದ ಅವರ ಅಂತರಂಗದಲ್ಲಿ ಸ್ವದೇಶಾಭಿಮಾನದ ಕಿಚ್ಚು ಎಷ್ಟು ಪ್ರಬಲವಾಗಿತ್ತೆಂದರೆ, ಎಂ.ಎ. ಪದವಿಗೆ ಇಂಗ್ಲಿಷ್ ಬದಲು ಬಂಗಾಳಿ ಸೇರಿದಂತೆ ಇತರ ಭಾರತೀಯ ಭಾಷೆಗಳನ್ನೇ ಆಯ್ಕೆ ಮಾಡಿಕೊಂಡರು. 1934ರಲ್ಲಿ, ಕೇವಲ 33ನೇ ವಯಸ್ಸಿನಲ್ಲಿ ಕೊಲ್ಕತ್ತಾ ವಿಶ್ವವಿದ್ಯಾಲಯದ ಅತ್ಯಂತ ಕಿರಿಯ ಕುಲಪತಿಗಳಾಗಿ ನೇಮಕಗೊಂಡು, ಭಾರತೀಯ ಭಾಷೆಗಳಿಗೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಹೊಸ ಘನತೆಯನ್ನು ತಂದುಕೊಟ್ಟರು. 1943ರಲ್ಲಿ ಬಂಗಾಳವನ್ನು ಭೀಕರ ಕ್ಷಾಮ ಆವರಿಸಿದಾಗ, ಅವರು “ಬಂಗಾಳ ಬರ ಪರಿಹಾರ ಸಮಿತಿ”ಯನ್ನು ಸ್ಥಾಪಿಸಿ, ಸಾವಿನ ಅಂಚಿನಲ್ಲಿದ್ದ ಲಕ್ಷಾಂತರ ಜೀವಗಳನ್ನು ಉಳಿಸಲು ಹಗಲಿರುಳೂ ಶ್ರಮಿಸಿದರು. ಇದು ಅವರೊಳಗಿನ ಆ ಧೀಮಂತ ಮುತ್ಸದ್ದಿಯ ಮಾನವತಾವಾದದ ಜ್ವಲಂತ ನಿದರ್ಶನ.
ಇಂದು ಭಾರತಾಂಬೆಯ ಒಬ್ಬ ಹಮ್ಮೆಯ ಪುತ್ರರಲ್ಲೊಬ್ಬರಾದ, ರಾಷ್ಟ್ರದ ಏಕತೆ ಮತ್ತು ಅಖಂಡತೆಗಾಗಿ ತಮ್ಮ ಇಡೀ ಬದುಕನ್ನೇ ಮುಡಿಪಾಗಿಟ್ಟ ಮಹಾನ್ ದೇಶಭಕ್ತ ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಜನ್ಮ ದಿನ. ಇಸವಿ, 1901ರ ಜುಲೈ 6ರಂದು ಪ್ರಸಿದ್ಧ, ಪ್ರತಿಭಾನ್ವಿತ ಸ್ವಾತಂತ್ರ್ಯ ಹೋರಾಟಗಾರರ ತವರೂರು ಎಂಬಂತಿದ್ದ ಕೊಲ್ಕತ್ತಾದ ಭವಾನಿಪುರದಲ್ಲಿ ಜನಿಸಿದ ಅವರು, ಮುಂದೆ ಭಾರತದ ರಾಜಕೀಯ ಇತಿಹಾಸದಲ್ಲಿ ಎಂದೂ ಅಳಿಸಲಾಗದ ಛಾಪನ್ನು ಮೂಡಿಸಿದರು. ಕೊಲ್ಕತ್ತಾ ವಿಶ್ವವಿದ್ಯಾಲಯದ ಕುಲಪತಿಗಳೂ, ಖ್ಯಾತ ನ್ಯಾಯವಾದಿಗಳೂ ಆಗಿದ್ದ ತಂದೆ ಆಶುತೋಷ್ ಮುಖರ್ಜಿಯವರಿಂದ ಸ್ವಾತಂತ್ರ್ಯಪ್ರಿಯತೆ ಮತ್ತು ಧೈರ್ಯದ ಗುಣಗಳನ್ನೂ, ಧರ್ಮನಿಷ್ಠ ಮಾತೆ ಜೋಗಮಾಯಾ ದೇವಿಯವರಿಂದ ಆಧ್ಯಾತ್ಮಿಕ ಸಂಸ್ಕಾರವನ್ನೂ ಪಡೆದ ಬಾಲಕ ಶ್ಯಾಮ ಪ್ರಸಾದನಲ್ಲಿ, ಭಾರತೀಯ ಪುರಾತನ ಸಂಸ್ಕೃತಿಯ ಬಗೆಗಿನ ಗೌರವ ಮತ್ತು ಆಧುನಿಕ ವೈಜ್ಞಾನಿಕ ದೃಷ್ಟಿಕೋನಗಳೆರಡೂ ಒಟ್ಟಿಗೇ ಬೆಳೆದವು.
ವೀರ ಸಾವರ್ಕರರ ಪ್ರಭಾವಕ್ಕೆ ಒಳಗಾಗಿ 1939ರಲ್ಲಿ ಹಿಂದೂ ಮಹಾಸಭಾ ಸೇರಿದ ಶ್ಯಾಮ ಪ್ರಸಾದರು, ಬಹುಬೇಗ ಅದರ ಅಧ್ಯಕ್ಷರೂ ಆದರು. ಬಂಗಾಳದ ಆಡಳಿತದಲ್ಲಿ ಆಗಿನ ಗವರ್ನರ್ರ ಅನಗತ್ಯ ಹಸ್ತಕ್ಷೇಪವನ್ನು ಪ್ರತಿಭಟಿಸಿ 1943ರಲ್ಲಿ ಮಂತ್ರಿ ಸ್ಥಾನವನ್ನೇ ತ್ಯಜಿಸಿದ ಅವರ ನಿರ್ಧಾರ, ಅಧಿಕಾರಕ್ಕಿಂತ ತತ್ತ್ವವೇ ಮುಖ್ಯ ಎಂಬ ಅವರ ಬದುಕಿನ ಧ್ಯೇಯವಾಕ್ಯವನ್ನು ಸಾರಿ ಹೇಳಿತು. ದೇಶ ವಿಭಜನೆಯ ಕರಾಳ ದಿನಗಳಲ್ಲಿ, ಸಂಪೂರ್ಣ ಬಂಗಾಳವು ಪಾಕಿಸ್ತಾನದ ಪಾಲಾಗುವ ಅಪಾಯ ಎದುರಾದಾಗ, ಶ್ಯಾಮ ಪ್ರಸಾದರು ಬಂಗಾಳದ ಹಿಂದೂಗಳ ಬೇಡಿಕೆಯನುಸಾರ ಬಂಗಾಳ ವಿಭಜನೆಗಾಗಿ ಅವಿರತ ಹೋರಾಟ ನಡೆಸಿದರು. ಅವರ ಅಚಲ ಪ್ರಯತ್ನದ ಫಲವಾಗಿಯೇ ಪಂಜಾಬ್ ಮತ್ತು ಬಂಗಾಳ ಪ್ರಾಂತ್ಯಗಳ ಅರ್ಧ ಭಾಗಗಳಾದರೂ ಭಾರತದಲ್ಲೇ ಉಳಿದವು! ಅವರು “ಭಾರತವನ್ನು ಕಾಂಗ್ರೆಸ್ ವಿಭಜಿಸಿತು, ನಾನು ಪಾಕಿಸ್ತಾನವನ್ನು ವಿಭಜಿಸಿದೆ” ಎಂದು ಹೆಮ್ಮೆಯಿಂದ ಘೋಷಿಸಿದ್ದ ಗಟ್ಟಿ ಮನೋಭಾವದ ಅಪೂರ್ವ ವ್ಯಕ್ತಿಯಾಗಿದ್ದರು.
1947ರಲ್ಲಿ ಮಹಾತ್ಮಾ ಗಾಂಧೀಜಿಯವರ ಆಹ್ವಾನದ ಮೇರೆಗೆ ಸ್ವತಂತ್ರ ಭಾರತದ ಮೊದಲ ಸಂಪುಟದಲ್ಲಿ ಕೈಗಾರಿಕೆ ಮತ್ತು ಸರಬರಾಜು ಸಚಿವರಾಗಿ ಸೇರ್ಪಡೆಗೊಂಡ ಶ್ಯಾಮಪ್ರಸಾದರು, ಚಿತ್ತರಂಜನ್ ಲೋಕೊಮೋಟಿವ್ ಕಾರ್ಖಾನೆ, ಸಿಂಧ್ರಿ ರಸಗೊಬ್ಬರ ನಿಗಮ ಮತ್ತು ಬೆಂಗಳೂರಿನ ಹಿಂದೂಸ್ತಾನ್ ಏರ್ಕ್ರಾಫ್ಟ್ ಲಿಮಿಟೆಡ್ (HAL) ಕಾರ್ಖಾನೆಯಂತಹ ಮೂರು ಬೃಹತ್ ಕೈಗಾರಿಕೆಗಳನ್ನು ದೇಶಕ್ಕೆ ಅರ್ಪಿಸುವ ಮೂಲಕ ನವಭಾರತದ ಕೈಗಾರಿಕಾ ಬುನಾದಿಗೆ ಭದ್ರ ಅಡಿಪಾಯ ಹಾಕಿದರು. ಆದರೆ ಪೂರ್ವ ಪಾಕಿಸ್ತಾನದಲ್ಲಿ (ಇಂದಿನ ಬಾಂಗ್ಲಾದೇಶ) ಶಾಂತಿಪ್ರಿಯ ಹಿಂದೂಗಳ ಮೇಲೆ ಮುಸಲ್ಮಾನರಿಂದ ನಡೆದ ಭೀಕರ ಹತ್ಯೆಗಳು, ದೌರ್ಜನ್ಯಗಳು ಮತ್ತು ನಿರಾಶ್ರಿತರ ಸಂಕಷ್ಟಗಳಿಗೆ ಸೂಕ್ತ ಪರಿಹಾರ ದೊರಕಿಸದ 1950ರ ನೆಹರೂ-ಲಿಯಾಖತ್ ಒಪ್ಪಂದವನ್ನು ಅವರು ಕಟುವಾಗಿ ವಿರೋಧಿಸಿದರು. ದೇಶದ ಭದ್ರತೆ ಮತ್ತು ಸಂಕಷ್ಟದಲ್ಲಿದ್ದ ಹಿಂದೂಬಾಂಧವರ ಜೀವಗಳ ರಕ್ಷಣೆಗಾಗಿ ದನಿಯೆತ್ತಿ, ಸಂಪುಟದಿಂದ ಹೊರಬಂದು, ಸರ್ಕಾರದ ಹೊರಗಿನಿಂದಲೇ ಹೋರಾಟ ಮುಂದುವರೆಸಲು ನಿರ್ಧರಿಸಿದ ಆ ಘಳಿಗೆ ಅವರ ಬದುಕಿನ ಒಂದು ಐತಿಹಾಸಿಕ ತಿರುವು!
ಆ ರಾಜೀನಾಮೆ ಕೇವಲ ಹುದ್ದೆಯ ತ್ಯಾಗವಾಗಿರಲಿಲ್ಲ; ಅದು ಹೊಸ ರಾಷ್ಟ್ರೀಯ ಸಿದ್ಧಾಂತವೊಂದರ ಉದಯವಾಗಿತ್ತು. 1951ರ ಅಕ್ಟೋಬರ್ನಲ್ಲಿ ಭಾರತೀಯ ಜನಸಂಘವನ್ನು ಸ್ಥಾಪಿಸಿದ ಶ್ಯಾಮ ಪ್ರಸಾದರು ಅದರ ಮೊದಲ ಅಧ್ಯಕ್ಷರಾದರು. ಜಾತಿ-ಮತ ಭೇದವಿಲ್ಲದೇ ಭಾರತದ ಭವ್ಯ ಪರಂಪರೆ ಮತ್ತು ಸಂಸ್ಕೃತಿಗೆ ನಿಷ್ಠೆಯುಳ್ಳ ಎಲ್ಲ ನಾಗರಿಕರಿಗೂ ಮುಕ್ತವಾದ, ಬಲಿಷ್ಠ ಪ್ರತಿಪಕ್ಷವೊಂದನ್ನು ಕಟ್ಟುವ ಅವರ ಕನಸು ಇಂದಿನ ಭಾರತದ ರಾಜಕೀಯ ಪಥದ ಇತಿಹಾಸದಲ್ಲಿ ಒಂದು ಆಳವಾದ ಪ್ರಭಾವ ಬಿಟ್ಟುಹೋಯಿತು. 1952ರಲ್ಲಿ ಲೋಕಸಭೆಗೆ ಆಯ್ಕೆಯಾದ ಅವರು, ತಮ್ಮ ಅಸಾಧಾರಣ ವಾಕ್ಚಾತುರ್ಯ, ಆಳವಾದ ಜ್ಞಾನ ಮತ್ತು ನಿರ್ಭೀತ ಮಾತುಗಾರಿಕೆಯಿಂದ “ಸಂಸತ್ತಿನ ಸಿಂಹ” ಎಂಬ ಬಿರುದಿಗೆ ಪಾತ್ರರಾದರು.
ಆದರೆ ಶ್ಯಾಮ ಪ್ರಸಾದ್ ಮುಖರ್ಜಿಯವರ ಹೆಸರು ಚಿರಸ್ಥಾಯಿಯಾಗಿ ಉಳಿದಿರುವುದು ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಅವರು ತೋರಿದ ಸ್ಪಷ್ಟ ಹಾಗೂ ದೃಢವಾದ ಸಂಕಲ್ಪಕ್ಕಾಗಿ. ಸಂವಿಧಾನದ 370ನೇ ವಿಧಿಯ ಅಡಿಯಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಅವರು ರಾಷ್ಟ್ರದ ಏಕತೆಗೆ ವಿರುದ್ಧವಾದದ್ದೆಂದು ಪ್ರತಿಪಾದಿಸಿ ಆ ವಿಧಿ/ ನಿಯಮವನ್ನು ಖಂಡಿಸಿದರು. “ಒಂದು ದೇಶದಲ್ಲಿ ಎರಡು ಸಂವಿಧಾನಗಳು, ಎರಡು ಧ್ವಜಗಳು, ಎರಡು ಪ್ರಧಾನಿಗಳನ್ನು ಒಪ್ಪಲಾರೆವು (ಅದು ನಡೆಯದು)” ಎಂಬ ಅವರ ಘೋಷವಾಕ್ಯ ಇಂದಿಗೂ ಭಾರತದ ಏಕತೆಯ ಕರೆಗಂಟೆಯಾಗಿ ಪ್ರತಿಧ್ವನಿಸುತ್ತಿದೆ! ಅವರ ಈ ತತ್ತ್ವಕ್ಕಾಗಿ, ಧೋರಣಯಿಂದಾಗಿ, ಸರ್ಕಾರದ ಪರವಾನಗಿ ಇಲ್ಲದೇ ಕಾಶ್ಮೀರರಾಜ್ಯವನ್ನು ಪ್ರವೇಶಿಸಿದ ಅವರನ್ನು 1953ರಲ್ಲಿ ಬಂಧಿಸಲಾಯಿತು. ಅವರು 1953ರ ಜೂನ್ 23ರಂದು ಶ್ರೀನಗರದ ಸೆರೆಮನೆಯಲ್ಲಿ ನಿಗೂಢ ಸನ್ನಿವೇಶದಲ್ಲಿ, ಅನುಮಾನಾಸ್ಪದವಾಗಿ ಕೊನೆಯುಸಿರೆಳೆದರು. ಈ ದುರಂತ ಸಾವು ಇಂದಿಗೂ ಭಾರತೀಯರ ಹೃದಯದಲ್ಲಿ ದೇಶಪ್ರೇಮದ ಮಹಾ ಬಲಿದಾನವಾಗಿ ಅಚ್ಚಳಿಯದೆ ಉಳಿದಿದೆ.
ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರು ಶಿಕ್ಷಣ ತಜ್ಞರಾಗಿ, ಮಾನವತಾವಾದಿಯಾಗಿ, ಅಖಂಡಭಾರತದ, ನಾಯಕನಾಗಿ, ಸ್ವಾಭಿಮಾನೀ ಸಂಸದೀಯ ಮುತ್ಸದ್ದಿಯಾಗಿ ಬೆಳಗಿದರು. ಎಲ್ಲಕ್ಕಿಂತ ಮಿಗಿಲಾಗಿ ಅವರು ಭಾರತದ ಏಕತೆ ಮತ್ತು ಅಖಂಡತೆಯ ಅಪ್ರತಿಮ ಹರಿಕಾರರಾಗಿದ್ದರು. ಅಧಿಕಾರದ ಆಮಿಷಗಳಿಗೆ ಎಂದೂ ಮಣಿಯದ, ತಮ್ಮ ತತ್ತ್ವ-ಸಿದ್ಧಾಂತಗಳಿಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಅವರ ಬದುಕು, ಇಂದಿನ ಮತ್ತು ಮುಂದಿನ ಪೀಳಿಗೆಗೆ ಮಾದರಿಯಾಗಿದೆ. 2019ರಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಭಾರತ, ಶ್ಯಾಮ ಪ್ರಸಾದರು ಕಂಡ “ಒಂದು ದೇಶ, ಒಂದು ಸಂವಿಧಾನ” ಎಂಬ ಕನಸನ್ನು ಸಾಕಾರಗೊಳಿಸಿದಂತಾಗಿದೆ. ಅವರ ಜನ್ಮದಿನವಾದ ಇಂದು, ಆ ಮಹಾನ್ ಚೇತನಕ್ಕೆ ಕೋಟಿ ಕೋಟಿ ವಂದನೆಗಳನ್ನು ಸಲ್ಲಿಸುತ್ತಾ, ಅವರು ತೋರಿದ ರಾಷ್ಟ್ರಪ್ರೇಮ ಮತ್ತು ರಾಷ್ಟ್ರನಿಷ್ಠೆಯ ಹಾದಿಯಲ್ಲಿ ನಡೆಯುವ ಸಂಕಲ್ಪ ಮಾಡೋಣ.
#Rashtrotthana #RashtrotthanaParishat #rashtrotthanainrashtraseva #shyamprasad #shyamprasadmukherjee #bharatiyajanasangh #janasangh







