• July 3, 2026
  • RP
  • 0

“It is better to die than to lead a life of ignorance like plants. It is better to die fighting than to live a life of defeat.” – Swami Vivekananda.

Swami Vivekananda, revered as one of the foremost among the world’s most influential spiritual leaders, was born as Narendranath Datta on January 12, 1863, in Kolkata. Under the guidance of his guru, Sri Ramakrishna Paramahamsa, he wrote a history of revolution on the spiritual path.

Swami Vivekananda is a venerable figure who introduced the Western world to the elevated universal ideas and noble humanistic thoughts of Sanatana Hindu Dharma, along with the concepts drawn from the essence of Yoga and Vedanta, and who made people turn back and look again at an invincible, undivided India. His most powerful and electrifying speech at the World’s Parliament of Religions held in Chicago in 1893 drew global attention to India’s rich cultural heritage. Transcending borders, faiths, and cultures, his divine spirit, wisdom, and charisma have left an indelible mark on the minds of people.

“ಸಸ್ಯಗಳಂತೆ ಅಜ್ಞಾನದ ಜೀವನವನ್ನು ನಡೆಸುವುದಕ್ಕಿಂತ ಸಾಯುವುದು ಉತ್ತಮ. ಸೋಲಿನ ಜೀವನ ನಡೆಸುವುದಕ್ಕಿಂತ ಹೋರಾಟದಲ್ಲಿ ಸಾಯುವುದು ಮೇಲು.” – ಸ್ವಾಮಿ ವಿವೇಕಾನಂದ

ವಿಶ್ವದಲ್ಲಿ ಆಗಿಹೋದ ಅತ್ಯಂತ ಪ್ರಭಾವಶಾಲಿ ಆಧ್ಯಾತ್ಮಿಕ ನಾಯಕರಲ್ಲಿ ಅಗ್ರಮಾನ್ಯರೆಂದು ಪೂಜಿಸಲ್ಪಡುವ ಸ್ವಾಮಿ ವಿವೇಕಾನಂದರು ಜನವರಿ 12, 1863ರಂದು ಕೋಲ್ಕತ್ತಾದಲ್ಲಿ ನರೇಂದ್ರನಾಥ ದತ್ತನಾಗಿ ಜನಿಸಿದರು. ಅವರು ತಮ್ಮ ಗುರು ಶ್ರೀ ರಾಮಕೃಷ್ಣ ಪರಮಹಂಸರ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಮಾರ್ಗದಲ್ಲಿ ಒಂದು ಕ್ರಾಂತಿಯ ಚರಿತ್ರೆಯನ್ನೇ ಬರೆದರು.

 

ಸ್ವಾಮಿ ವಿವೇಕಾನಂದರು ಸನಾತನ ಹಿಂದೂ ಧರ್ಮದ ಉನ್ನತ ವೈಶ್ವಿಕ ವಿಚಾರಗಳು ಹಾಗೂ ಉದಾತ್ತ ಮಾನವೀಯ ಚಿಂತನೆಗಳ ಬಗೆಗೆ, ಯೋಗ ಮತ್ತು ವೇದಾಂತ ಸಾರಗಳ ಬಗೆಗಿನ ಪರಿಕಲ್ಪನೆಗಳನ್ನು ಪಾಶ್ಚಿಮಾತ್ಯ ಜಗತ್ತಿಗೆ ಪರಿಚಯಿಸಿ, ಅಜೇಯ, ಅಖಂಡ ಭಾರತದ ಬಗೆಗೆ ಮರಳಿ ಹೊರಳಿ ನೋಡುವಂತೆ ಮಾಡಿದ ಸದ್ವಂದ್ಯರು. 1893ರಲ್ಲಿ ಷಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿನಲ್ಲಿ ಅವರ ಅತ್ಯಂತ ಪ್ರಭಾವಶಾಲಿಯಾದಂತಹ ಮಿಂಚಿನ ಸಂಚಾರದಂತಹ ಭಾಷಣವು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗೆಗೆ ಜಾಗತಿಕಮಟ್ಟದಲ್ಲಿ ಗಮನ ಸೆಳೆಯಿತು. ಗಡಿಗಳು, ಮತ-ಪಂಥಗಳು ಮತ್ತು ಸಂಸ್ಕೃತಿಗಳನ್ನು ಮೀರಿ, ಅವರ ದೈವೀಭಾವ, ಬುದ್ಧಿವಂತಿಕೆ ಹಾಗೂ ವರ್ಚಸ್ಸು ಜನಮಾನಸದಲ್ಲಿ ಅಳಿಸಲಾಗದ ಛಾಪು ಮೂಡಿಸಿವೆ.

 

ಇಸವಿ 1902ರ ಜುಲೈ ತಿಂಗಳ 4ನೇ ದಿನ, ಕೋಲ್ಕತ್ತಾದ ಬೇಲೂರು ಮಠದಲ್ಲಿ ಬೆಳಗಿನ ಹೊತ್ತಿನ ಕಾರ್ಯಕಲಾಪಗಳು ಸಾಗಿದ್ದವು. ಸೂರ್ಯನೇನೋ ಎಂದಿನಂತೆ ಬೆಳಗುತ್ತಿದ್ದರೂ, ಭಾರತೀಯ ಇತಿಹಾಸದಲ್ಲಿ ಆ ದಿನ ಒಂದು ಮುಖ್ಯ ಅಧ್ಯಾಯವು ಮುಗಿಯುವುದರಲ್ಲಿತ್ತು. ಕೇವಲ 39 ವರ್ಷಗಳ ಬದುಕಿನಲ್ಲೇ ಭಾರತೀಯರ ಆತ್ಮವಿಶ್ವಾಸವನ್ನು ಮತ್ತೆ ಜಾಗೃತಗೊಳಿಸಿದ್ದ ಸ್ವಾಮಿ ವಿವೇಕಾನಂದರ ಕೊನೆಯ ದಿನ ಬಂದುಬಿಟ್ಟಿತ್ತು.

 

1899–1900ರಲ್ಲಿ ತಮ್ಮ ಎರಡನೇ ಪಾಶ್ಚಾತ್ಯ ದೇಶಗಳ ಪ್ರವಾಸ ಮುಗಿಸಿ ಭಾರತಕ್ಕೆ ಮರಳಿದ ನಂತರ ಅವರ ಆರೋಗ್ಯದಲ್ಲಿ ಬಹಳ ಏರುಪೇರು ಕಾಣಿಸಿಕೊಳ್ಳಲು ಶುರುವಾಗಿತ್ತು. ಆಸ್ತಮಾ, ಮಧುಮೇಹ, ನಿದ್ರಾಹೀನತೆ ಮುಂತಾದ ಹಲವು ಕಾಯಿಲೆಗಳು ಅವರನ್ನು ಬಾಧಿಸುತ್ತಿದ್ದವು. ಆದರೂ ಒಂದೇ ಊರಲ್ಲಿ ಕೂತು ವಿಶ್ರಾಂತಿ  ಸ್ವೀಕರಿಸದೇ, ಕಾಶೀ, ಮಥುರಾ, ಗಯಾ ಮೊದಲಾದ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ, ರಾಮಕೃಷ್ಣ ಮಿಷನ್‌ನ ಭವಿಷ್ಯದ ಯೋಜನೆಗಳನ್ನು ರೂಪಿಸುವುದರಲ್ಲಿ ತೊಡಗಿದ್ದರು. ತನ್ನ ದೇಹ ಇನ್ನು ಹೆಚ್ಚು ದಿನ ಉಳಿಯುವುದಿಲ್ಲ ಎಂಬ ಭಾವನೆಯು ಅವರನ್ನು ಆಗಾಗ ಆವರಿಸುತ್ತಿತ್ತೆಂದು ಅವರ ಶಿಷ್ಯರ ನೆನಪುಗಳ ಸಂಗ್ರಹಗಳು ಅರಹುತ್ತವೆ.

 

ಮಹಾಸಮಾಧಿ ಹೊಂದುವ ಕೆಲವೇ ದಿನಗಳ ಮೊದಲು ಸ್ವಾಮಿ ಪ್ರೇಮಾನಂದರೊಂದಿಗೆ ಬೇಲೂರು ಮಠದ ಆವರಣದಲ್ಲಿ ನಡೆಯುತ್ತಿದ್ದಾಗ, ಗಂಗಾತಟದ ಒಂದು ಸ್ಥಳವನ್ನು ತೋರಿಸಿ, “ನಾನು ದೇಹ ತ್ಯಜಿಸಿದರೆ ಇಲ್ಲಿಯೇ ಅಂತ್ಯಸಂಸ್ಕಾರ ಮಾಡಿ” ಎಂದು ಗಂಭೀರ-ಶಾಂತರಾಗಿ ಹೇಳಿದ್ದರು. ಇಂದಿಗೂ ಅದೇ ಸ್ಥಳದಲ್ಲಿ ಅವರ ಸ್ಮಾರಕವನ್ನು ನಾವು ಕಾಣಬಹುದಾಗಿದೆ. ಜುಲೈ 2ರಂದು ಸೋದರಿ ನಿವೇದಿತಾ ಅವರನ್ನು ಭೇಟಿ ಮಾಡಲು ಬಂದಾಗ, ಸ್ವಾಮೀಜಿ ಉಪವಾಸದಲ್ಲಿದ್ದರೂ ತಮ್ಮ ಕೈಯಾರೆ ಊಟ ಬಡಿಸಿ, ಕೈ ತೊಳೆಯಲು ನೀರು ಕೊಟ್ಟು, ಬಟ್ಟೆಯಿಂದ ಕೈಗಳನ್ನು ಒರೆಸಿಕೊಟ್ಟರು. ನಿವೇದಿತಾ ಆಶ್ಚರ್ಯಪಟ್ಟಾಗ, “ಯೇಸುಕ್ರಿಸ್ತರೂ ತಮ್ಮ ಶಿಷ್ಯರ ಪಾದ ತೊಳೆದಿದ್ದರು” ಎಂದು ಮಾತ್ರ ಉತ್ತರಿಸಿದರು. ನಿಜಕ್ಕೂ ಅದು ಅವರಿಬ್ಬರ ಕೊನೆಯ ಭೇಟಿಯಾಗಿತ್ತು.

 

July 4ರ ಬೆಳಗ್ಗೆ ಅವರು ಎಂದಿನಂತೆ ಬೇಗ ಎದ್ದು ದೀರ್ಘಕಾಲ ಧ್ಯಾನಮಗ್ನರಾಗಿದ್ದರು. ನಂತರ ಸನ್ಯಾಸಿಗಳೊಂದಿಗೆ ಉಪಾಹಾರ ಸೇವಿಸಿ, ಸಂಸ್ಕೃತ ವ್ಯಾಕರಣ ಹಾಗೂ ಶುಕ್ಲ ಯಜುರ್ವೇದದ ಪಾಠವನ್ನೂ ಹೇಳಿದರು. ಭಾರತದಲ್ಲಿ ವೈದಿಕ ಅಧ್ಯಯನಕ್ಕೆ ಹೊಸ ಚೈತನ್ಯ ನೀಡುವ ಕಾಲೇಜೊಂದನ್ನು ಸ್ಥಾಪಿಸುವ ಕನಸಿನ ಬಗೆಗೆ ಚರ್ಚಿಸಿದರು. ಸಂಜೆ ಬಿಸಿ ಹಾಲು ಕುಡಿದು ಸುಮಾರು 2 ಮೈಲುಗಳಷ್ಟು ನಡೆದರು. ಆ ವೇಳೆ ಭಾರತದ ಭವಿಷ್ಯದ ಕುರಿತು ಮಾತನಾಡುತ್ತ, “ಭಾರತ ತನ್ನ ಆಧ್ಯಾತ್ಮಿಕ ಆದರ್ಶವನ್ನು ಉಳಿಸಿಕೊಂಡರೆ ಮಾತ್ರ ಅಮರವಾಗಿರುತ್ತದೆ; ಅದನ್ನು ಮರೆತರೆ ಸಂಕಷ್ಟ ಎದುರಿಸಬೇಕಾಗುತ್ತದೆ” ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರೆಂದು ಶಿಷ್ಯರು ದಾಖಲಿಸಿದ್ದಾರೆ.

 

ಆ ಸಮಯದ ಭಾರತವು ರಾಜಕೀಯ ಸಂಕ್ರಮಣದ ಹಂತದಲ್ಲಿತ್ತು. ಬ್ರಿಟಿಷರ ಆಳ್ವಿಕೆ ಮತ್ತಷ್ಟು ಕಠಿಣವಾಗಿತ್ತು; ಸ್ವರಾಜ್ಯದ, ಸ್ವಾತಂತ್ರ್ಯಗಳಿಕೆಯ ಚಿಂತನೆಗಳು ರೂಪುಗೊಳ್ಳುತ್ತಿದ್ದ ಕಾಲ; ಜೊತೆಗೆ ಸಮಾಜಸುಧಾರಣಾ ಚಳುವಳಿಗಳು ದೇಶದ ವಿವಿಧ ಭಾಗಗಳಲ್ಲಿ ಹೊಸ ವೇಗ ಪಡೆದಿದ್ದವು. ಇನ್ನೂ ಬಂಗಾಳ ವಿಭಜನೆ ಆಗಿರಲಿಲ್ಲ. ಆದರೆ ವಿವೇಕಾನಂದರು ಸ್ವರಾಜ್ಯ-ಸ್ವಾತಂತ್ರ್ಯದೊಂದಿಗೆ ರಾಷ್ಟ್ರೀಯ ಆತ್ಮಜಾಗೃತಿ, ಶಿಕ್ಷಣ, ಚಾರಿತ್ರ್ಯ, ಶಿಸ್ತು, ಸಂಸ್ಕಾರ ಮತ್ತು ಸೇವಾಭಾವ ಬೆಳೆಸುವುದು ಅತ್ಯಗತ್ಯ ಎಂದು ನಂಬಿದ್ದರು. ಅವರ ದೃಷ್ಟಿಯಲ್ಲಿ ಬಲಿಷ್ಠ ವ್ಯಕ್ತಿಗಳಿಂದಲೇ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದಾಗಿತ್ತು.

 

ಸಂಜೆ 7 ಗಂಟೆಗೆ ಆರತಿಯ ಘಂಟಾನಾದ ಮೊಳಗಿದಾಗ ಅವರು ತಮ್ಮ ಕೋಣೆಗೆ ತೆರಳಿ, ಜಪಮಾಲೆ ತರಲು ಹೇಳಿ, ಯಾರೂ ತೊಂದರೆ ಕೊಡಬಾರದೆಂದು ಸೂಚಿಸಿದರು. ಸುಮಾರು 2 ಗಂಟೆಗಳ ಕಾಲ ಧ್ಯಾನದಲ್ಲಿ ಲೀನರಾಗಿದ್ದರು. ರಾತ್ರಿ ಸುಮಾರು 9:20ಕ್ಕೆ ಅವರ ಉಸಿರು ನಿಧಾನವಾಗಿ ನಿಂತು “ಮಹಾಸಮಾಧಿ”ಯಲ್ಲಿ ಲೀನರಾದರು. ಆಶ್ಚರ್ಯವೆಂದರೆ, “ನಾನು 40 ವರ್ಷ ದಾಟುವುದಿಲ್ಲ” ಎಂದು ಅವರು ಹಿಂದೆ ಹೇಳಿದ್ದ ಮಾತು ಅಕ್ಷರಶಃ ನಿಜವಾಯಿತು. ದೇಹ ಕ್ಷೀಣಿಸಿದ್ದರೂ, ಅವರು ಬಿತ್ತಿದ ಆತ್ಮವಿಶ್ವಾಸ, ಸೇವೆ ಮತ್ತು ರಾಷ್ಟ್ರಚೇತನದ ಬೀಜಗಳು ಮಾತ್ರ ಇಂದಿಗೂ, 120 ವರ್ಷಗಳ ನಂತರವೂ, ಭಾರತೀಯ ಚಿಂತನೆಗೆ ಜೀವಂತ ಶಕ್ತಿಯಾಗಿ ಉಳಿದಿವೆ.

#Rashtrotthana #RashtrotthanaParishat #rashtrotthanainrashtraseva #swamivivekananda #vivekananda #veersanyasi #vivekanandasmaran #lastdaysofvivekananda #ramakrishnamission #ramakrishnamath

Leave a Reply

Your email address will not be published. Required fields are marked *