• February 4, 2026
  • RP
  • 0

ಹಣಕಾಸಿನ ಹಂಚಿಕೆ ಹಾಗೂ ಹತೋಟಿಯ ಹಿತಮಿತ ಹಲ್ವಾ – Budget

ಇತ್ತೀಚಿನ ದಿನಗಳಲ್ಲಿ ಫೆಬ್ರವರಿ 1ರಂದು ದೇಶದ ವಿತ್ತ ಮಂತ್ರಿಗಳು ವಾರ್ಷಿಕ ಆಯವ್ಯಯ—ಬಜೆಟ್ ಮಂಡನೆ ಮಾಡುತ್ತಾರೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ನಿಮಗೇನನ್ನಿಸಿತು? ಎಂದು ಕೇಳುವುದೂ ಸಾಮಾನ್ಯ ವಿಷಯ. ಒಬ್ಬರೋ ಇಬ್ಬರೋ ಸಂಪಾದನೆ ಮಾಡಿ ತಂದ ಹಣದ ಲೆಕ್ಕವನ್ನೇ ಸರಿಯಾಗಿ ನಿರ್ವಹಿಸಲು ಹೆಣಗಾಡುವ ನಾವು, ಇಂತಹ ವಿಶಾಲ ಮತ್ತು ವಿಶಿಷ್ಟ ದೇಶದ ಬಜೆಟ್ ಬಗ್ಗೆ ತೀರ್ಪು ನೀಡುವುದಕ್ಕೆ ಮುಂದಾಗುತ್ತೇವೆ!

 

ಆದಾಯ ತೆರಿಗೆ ಕಡಿಮೆಯಾಯಿತಾ? ಕೃಷಿ ಸಾಲ ಮನ್ನಾ ಆಗತ್ತಾ? ದಿನನಿತ್ಯದ ವಸ್ತುಗಳ ಬೆಲೆ ಇಳಿಯಿತಾ? ಎಂಬ ಸೀಮಿತ ದೃಷ್ಟಿಕೋನದ ಪ್ರಶ್ನೆಗಳಲ್ಲೇ ಬಜೆಟ್‌ನ ಅರ್ಥವನ್ನು ಹುಡುಕುತ್ತೇವೆ. ನಮ್ಮ ದೃಷ್ಟಿ ಸದಾ ವೈಯಕ್ತಿಕ ಲಾಭದ ಮಿತಿಯಲ್ಲೇ ಸುತ್ತುತ್ತದೆ. ಅಲ್ಲವೇ?

 

ಪ್ರತಿಯೊಬ್ಬ ಸದ್ಗೃಹಸ್ಥರ ಬದುಕಿನಲ್ಲೂ ಅತ್ಯಗತ್ಯವಾಗಿ ಬೇಕಾದ ವಿದ್ಯೆ ಹಣಕಾಸು ನಿರ್ವಹಣೆ. ಅದನ್ನು ಅರಿಯದೇ, ಸಂಕೀರ್ಣ ಜಗತ್ತಿನ ಹಣಕಾಸು ನಿರ್ಧಾರಗಳನ್ನೂ, ದೇಶದ ಬಜೆಟ್‌ನ ಹೂರಣವನ್ನೂ ಅರ್ಥಮಾಡಿಕೊಳ್ಳಲು ಸಾಧ್ಯವೇ? ಅದು ಕಷ್ಟಸಾಧ್ಯ!

 

ಆಧುನಿಕ ಭಾರತದಲ್ಲಿ ವ್ಯಾಪಾರ, ಅರ್ಥ ವ್ಯವಸ್ಥೆ, ಜನಸಂಖ್ಯೆ, ಜನರ ಜೀವನಪದ್ಧತಿ ಗಣನೀಯವಾಗಿ ಬದಲಾಗಿದೆ. ಇಂದು ವಿಶ್ವದಲ್ಲೇ ಅತಿ ದೊಡ್ಡ ಗಣರಾಜ್ಯವಾಗಿರುವ ಭಾರತದ ಆಡಳಿತ ಸೂತ್ರದಲ್ಲಿ ಆರ್ಥಿಕ ನಿರ್ವಹಣೆಗೆ ಬಹಳ ಮಹತ್ವದ ಸ್ಥಾನವಿದೆ. ದೇಶದ ಆರ್ಥಿಕ ಸ್ಥಿತಿಗತಿಯು ವಾರ್ಷಿಕ ಬಜೆಟ್ಟಿನ ಮೇಲೆ ಅವಲಂಬಿತವಾಗಿದೆ. ಹಾಗಾಗಿ ಬಜೆಟ್ ಅಂದರೆ ಏನೆಂದು ಸ್ವಲ್ಪ ತಿಳಿಯೋಣ.

 

ಬಜೆಟ್‌ ಪದದ ಅರ್ಥ 

ಬಜೆಟ್ ಎನ್ನುವ ಪದದ ನಿಜಾರ್ಥ ‘ಬ್ಯಾಗ್’ ಅಥವಾ ‘ಪುಟ್ಟ ಬ್ಯಾಗ್’. ಫ್ರೆಂಚ್ ಮೂಲದ ‘ಬೊಗೆಟ್’ (ಪುಟ್ಟ ಚೀಲ) ಎಂಬ ಪದವು ಕಾಲಕ್ರಮೇಣ ‘ಬಜೆಟ್’ ಆಗಿ ಮಾರ್ಪಾಡಾಗಿದೆ. ಬಜೆಟ್ ಎಂದರೆ ಒಂದು ವರ್ಷದ ಅವಧಿಯಲ್ಲಿ ಎಷ್ಟು ಆದಾಯ ಬರುತ್ತದೆ ಮತ್ತು ಎಲ್ಲಿ, ಎಷ್ಟು ಖರ್ಚಾಗಿ ಹೋಗುತ್ತದೆ ಎಂಬುದರ ಕುರಿತು ರೂಪಿಸಲಾದ ಆದಾಯ–ವೆಚ್ಚದ (ಆಯವ್ಯಯ) ಯೋಜನೆ.

 

ಬಜೆಟ್‌ನಲ್ಲಿ ಎಷ್ಟು ವಿಧ?
ವಾರ್ಷಿಕ ಮುಂಗಡಪತ್ರವನ್ನು ಮೂರು ವಿಧಗಳಾಗಿ ವಿಂಗಡಿಸಬಹುದು. ಇಲ್ಲಿ ಆದಾಯ ಹಾಗೂ ವೆಚ್ಚಗಳು ಪ್ರಧಾನ ಅಂಶಗಳು. ಹೀಗಾಗಿ ಆದಾಯ- ವೆಚ್ಚದ ಪ್ರಮಾಣವನ್ನು ಆಧರಿಸಿ ಸಂತುಲಿತ ಬಜೆಟ್‌, ಉಳಿತಾಯ (ಮಿಗತೆ) ಬಜೆಟ್‌, ಕೊರತೆ ಬಜೆಟ್‌ ಎಂಬ ಮೂರು ವಿಧಗಳಾಗಿ ವಿಂಗಡಿಸಬಹುದು. ಇತ್ತೀಚಿನ ಸರಕಾರಗಳು ಹೆಚ್ಚಾಗಿ ಕೊರತೆಯ ಬಜೆಟ್ಟನ್ನೇ ಮಂಡಿಸುತ್ತಿವೆ. ಅಂದರೆ, ನಿರೀಕ್ಷಿತ ಆದಾಯಕ್ಕಿಂತಲೂ, ನಿರೀಕ್ಷಿತ ವೆಚ್ಚ ಹೆಚ್ಚಾಗಿರುತ್ತದೆ!

 

ಸನಾತನ ಭಾರತೀಯ ಜೀವನಪದ್ಧತಿದಲ್ಲಿ ಅರ್ಥಕ್ಕೆ (ಸಂಪತ್ತು) ದೈವಿಕ ಸ್ಥಾನವಿದೆ. ಭಾರತೀಯರು ಚತುರ್ವಿಧ ಪುರುಷಾರ್ಥಗಳ ಮೇಲೆ ಆಧಾರಿತವಾದ ಜೀವನಕ್ರಮ ಅನುಸರಿಸುತ್ತಾರೆ. ಧರ್ಮದ ಹಾದಿಯಲ್ಲಿ ಅರ್ಥವನ್ನು (ಹಣ) ಗಳಿಸಿ, ಆ ಹಣದಿಂದ ತಮ್ಮ ಕಾಮನೆಗಳನ್ನು (ಆಸೆ) ಪೂರೈಸಿಕೊಂಡು, ಅಂತಿಮವಾಗಿ ಮೋಕ್ಷದ ಕಡೆಗೆ ಸಾಗಬೇಕು ಎಂಬುದು ದರ್ಶನ. ಈ ನಾಲ್ಕರ ಸಮತೋಲನವೇ ಯಶಸ್ವಿ ಜೀವನ.

 

ಸಾಮಾನ್ಯ ಪ್ರಜೆಗಳು ತಮಗಿರುವ ಕುಲಕಸುಬು, ಸಂಪತ್ತು, ಶ್ರೇಯಗಳನ್ನು ದೈವ ಪ್ರಸಾದವೆಂದು ಬಗೆದು ಸಂತೃಪ್ತಿ, ಸಮಾಧಾನದಿಂದ ಬಾಳುತ್ತಿದ್ದ ಕಾಲವಿತ್ತು. ತಮ್ಮ ಸಂಪಾದನೆಯ ಒಂದು ದೊಡ್ಡ ಭಾಗವನ್ನು ದಾನ, ಧರ್ಮ, ಪೂಜೆ ಹಾಗೂ ಯಜ್ಞಯಾಗಾದಿಗಳಿಗಾಗಿ ವಿನಿಯೋಗಿಸುತ್ತಿದ್ದರು.

 

ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ |

ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ ||

ಅರ್ಥ: “ಯಾರು ಬೇರೆ ಯಾವುದನ್ನೂ ಚಿಂತಿಸದೇ ನನ್ನನ್ನೇ ಆರಾಧಿಸುತ್ತಾರೋ, ಅಂತಹವರ ಯೋಗ (ಹೊಸದನ್ನು ಗಳಿಸುವ ಯೋಗ) ಮತ್ತು ಕ್ಷೇಮ (ಗಳಿಸಿದ್ದನ್ನು ರಕ್ಷಿಸುವುದು) ಈ ಎರಡನ್ನೂ ನಾನೇ ವಹಿಸಿಕೊಳ್ಳುತ್ತೇನೆ” ಎಂದು ಕೃಷ್ಣನು ಭರವಸೆ ನೀಡಿರುವುದನ್ನು 9ನೇ ಅಧ್ಯಾಯವಾದ ‘ರಾಜವಿದ್ಯಾ ರಾಜಗುಹ್ಯ ಯೋಗ’ದಲ್ಲಿ ಕಾಣಬಹುದು.

 

ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ |

ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ ||

ಅರ್ಥ: “ಎಲ್ಲಿ ಯೋಗೇಶ್ವರನಾದ ಕೃಷ್ಣ (ಜ್ಞಾನ) ಮತ್ತು ಧನುರ್ಧರನಾದ ಅರ್ಜುನ (ಕ್ರಿಯೆ/ ಶ್ರಮ) ಇರುತ್ತಾರೋ, ಅಲ್ಲಿ ಶ್ರೀ (ಸಂಪತ್ತು) ಮತ್ತು ವಿಜಯ ಖಂಡಿತವಾಗಿಯೂ ಇರುತ್ತವೆ”. ಅಂದರೆ, ಜ್ಞಾನ ಮತ್ತು ಶ್ರಮ ಎರಡೂ ಸೇರಿದಾಗ ಮಾತ್ರ ಸಮೃದ್ಧಿ ನೆಲೆಸುತ್ತದೆ.

 

ಕೌಟುಂಬಿಕ ಜೀವನವನ್ನು ಸರಿದೂಗಿಸಿ ನಡೆಸಲಿಕ್ಕಾಗಿ ಹಣಕಾಸು ನಿರ್ವಹಣೆ ಮಾಡಬೇಕಾದಾಗ ಭವಿಷ್ಯದ ಬಗೆಗೆ ಅನಿಶ್ಚಿತತೆ ಕಾಡಿ ಜನಸಾಮಾನ್ಯನೊಬ್ಬನು ಆತಂಕಿತನಾದರೆ, ಅಂಥವನಿಗೆ ಇದೊಂದು ಲಕ್ಷ್ಮೀಕಾಂತನ ಆತ್ಮೀಯ ಆಶ್ವಾಸನೆಯಲ್ಲವೇ?

 

ಇನ್ನು ಐತಿಹಾಸಿಕವಾಗಿ ನೋಡಿದರೆ, ರಾಜ-ಮಹಾರಾಜರು, ಸಾಮಂತರು, ಸಚಿವರು ರಾಜ್ಯಾಡಳಿತಕ್ಕಾಗಿ, ಸೌಕರ್ಯಗಳ ಅಭಿವೃದ್ಧಿಗಾಗಿ, ಪ್ರಜೆಗಳ ಹಿತ ಕಾಪಾಡಲು ಬೊಕ್ಕಸಗಳಲ್ಲಿ ಕರ-ಸಂಗ್ರಹದ ಮೂಲಕ ಸಂಪತ್ತನ್ನು ಕೂಡಿಡುತ್ತಿದ್ದರು ಎಂಬುದು ತಿಳಿದ ವಿಷಯವೇ. ಬೊಕ್ಕಸದ ಸಮರ್ಪಕ ಹಂಚಿಕೆ, ನಿರ್ವಹಣೆ, ಯೋಜನೆ, ಸದ್ವಿನಿಯೋಗ, ಹಾಗೂ ನಿಯಂತ್ರಣಗಳ ಅರಿವು ಈ ಭಾರತದ ನೆಲದಲ್ಲಿ ಅನಾದಿ ಕಾಲದಿಂದ ಇದೆ.

 

ಅರ್ಥಶಾಸ್ತ್ರದ ಬಗೆಗೆ ಅತ್ಯಂತ ಮಹತ್ವವಾದ ಸರ್ವಕಾಲಿಕ ವಿಷಯಗಳನ್ನು ಆಚಾರ್ಯ ಚಾಣಕ್ಯರು ತಮ್ಮ ‘ಚಾಣಕ್ಯ ನೀತಿ’ ಯಲ್ಲಿ ವಿಸ್ತೃತವಾಗಿ, ಬರೆದಿದ್ದಾರೆ. ಹಾಗಾಯೇ ತಾನೇ ಬೆಳೆಸಿ ಚಕ್ರವರ್ತಿಯನ್ನಾಗಿ ಸ್ಥಾಪಿಸಿದ ಚಂದ್ರಗುಪ್ತ ಮೌರ್ಯನಿಗೆ ರಾಜನೀತಿ, ಆಡಳಿತ, ಆರ್ಥಿಕ ಸಲಹೆ, ಸೂಚನೆಗಳನ್ನು ಕೊಟ್ಟ ಮಾರ್ಗದರ್ಶಕನೇ ಚಾಣಕ್ಯ. ಚಾಣಕ್ಯ-ನೀತಿ ಕೇವಲ ಒಂದು ರಾಷ್ಟ್ರ ಅಥವಾ ರಾಜ್ಯದ ದೊರೆ, ಮಂತ್ರಿ, ಅಧಿಕಾರಿಗಳಿಗೆ ಸೀಮಿತವಾಗಿರದೇ, ಒಬ್ಬ ಸಾಮಾನ್ಯ ವ್ಯಕ್ತಿ ತನ್ನ ಜೀವನವನ್ನು ಶಿಸ್ತುಬದ್ಧವಾಗಿ ಮತ್ತು ಯಶಸ್ವಿಯಾಗಿ ನಡೆಸಲು ಬೇಕಾದ ಅಮೂಲ್ಯ ಪಾಠಗಳನ್ನು ಸಹ ಒಳಗೊಂಡಿದೆ.

 

ಸಾಮಾನ್ಯ ಜನರಿಗೆ ಅನ್ವಯವಾಗುವ ಕೌಟಿಲ್ಯನ ಅರ್ಥಶಾಸ್ತ್ರದ ಪ್ರಮುಖ ಅಂಶಗಳು ಹೀಗಿವೆ.

  • ಸಂಪತ್ತನ್ನು ಸದಾ ಸಂರಕ್ಷಿಸುವುದು ಸೇವಕರ ಕರ್ತವ್ಯವಾದರೂ, ಬುದ್ಧಿವಂತನು ತನ್ನ ಸಾಮರ್ಥ್ಯವನ್ನು ಮೀರಿ ವೆಚ್ಚ (ಖರ್ಚು) ಮಾಡುವುದಿಲ್ಲ.
  • ಅರ್ಥಮೂಲಂ ಹಿ ಕಾರ್ಯಂ” ಅಂದರೆ ಎಲ್ಲ ಕಾರ್ಯಗಳಿಗೂ ಹಣವೇ ಆಧಾರ. ಇದು ಅರ್ಥಶಾಸ್ತ್ರದ ಮೂಲ ಮಂತ್ರವಿದ್ದಂತೆ.
  • ಸಾಮಾನ್ಯ ವ್ಯಕ್ತಿಯೊಬ್ಬ ತನ್ನ ಆದಾಯದ ಕಾಲು ಭಾಗವನ್ನು (25%) ಆಪತ್ಕಾಲಕ್ಕಾಗಿ ಉಳಿಸಲೇಬೇಕು ಎಂದು ಕೌಟಿಲ್ಯ ಒತ್ತಿ ಹೇಳುತ್ತಾನೆ.
  • ಸಾಲ ಮಾಡುವುದು ವ್ಯಕ್ತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆ. ಶತ್ರು ಮತ್ತು ರೋಗದಂತೆ ಸಾಲವನ್ನೂ ಸಹ ಮೂಲದಿಂದಲೇ ನಾಶಪಡಿಸಬೇಕು.
  • ವಿದ್ಯೆಯೇ ಅತ್ಯುತ್ತಮ ಸಂಪತ್ತು ಹಾಗೂ ಶಿಕ್ಷಣವು ವ್ಯಕ್ತಿಯಲ್ಲಿ ವಿನಯವನ್ನು ಬೆಳೆಸಬೇಕು.
  • ಸೋಮಾರಿತನವೇ ಮನುಷ್ಯನ ಅತಿದೊಡ್ಡ ಶತ್ರು.
  • ಒಬ್ಬ ಸಾಮಾನ್ಯ ವ್ಯಕ್ತಿ ತಾನು ಯಾರನ್ನು ನಂಬುತ್ತಿದ್ದಾನೆ ಎಂಬುದರ ಬಗ್ಗೆ ಯಾವಾಗಲೂ ಜಾಗರೂಕನಾಗಿರಬೇಕು.
  • ಒಬ್ಬ ಪ್ರಜೆ ಯಾವಾಗಲೂ ರಾಷ್ಟ್ರದ ಕಾನೂನನ್ನು ಗೌರವಿಸಿ, ಅನುಸರಿಸಬೇಕು.

 

ದೇಶದ ಪ್ರಗತಿ ವೇಗ ಪಡೆದುಕೊಳ್ಳುತ್ತಿದ್ದರೂ, ಪ್ರಜೆಯ ಜೀವನದಲ್ಲಿ ನಿಜವಾದ ಸಂತೃಪ್ತಿ ಮತ್ತು ಸಮಾಧಾನ ನೆಲೆಸಿದೆಯೇ ಎಂಬ ಪ್ರಶ್ನೆ ಇನ್ನೂ ಪ್ರಸ್ತುತವೇ. ಅಗತ್ಯ ಮತ್ತು ಆಸೆಯ ನಡುವಿನ ರೇಖೆ ಮಸುಕಾಗುತ್ತಿರುವ ಈ ಕಾಲದಲ್ಲಿ, “ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ” ಎಂಬ ಸತ್ಯ ಅರಿತಿದ್ದರೂ, ಭವಿಷ್ಯದ ಭಯದಿಂದ ಮಾನವನು ಹಣಗಳಿಕೆಯ ಹಿಂದೆ ಅಂಧನಂತೆ ಓಡುತ್ತಾ, ಅತಿರೇಕದ ಸಂಗ್ರಹಣೆಗೆ ತೊಡಗಿಕೊಂಡು ನೆಮ್ಮದಿಯಿಂದ ದೂರ ಸರಿಯುತ್ತಿದ್ದಾನೆ.

 

ಒಟ್ಟಾರೆ, ಬಜೆಟ್ ಎನ್ನುವುದು ಕೇವಲ ಸರ್ಕಾರದ ಘೋಷಣೆ ಅಥವಾ ಸಂಖ್ಯೆಗಳ ಲೆಕ್ಕವಲ್ಲ. ದೇಶದ ಬಜೆಟ್ ಕೊರತೆಯದ್ದಾಗಿರಬಹುದು; ಆದರೆ ನಮ್ಮ ಜೀವನದ ಬಜೆಟ್ ಮೌಲ್ಯಯುತವಾಗಿರಬೇಕು. ಭಗವದ್ಗೀತೆಯ ನಿಷ್ಕಾಮ ಕರ್ಮ ಮತ್ತು ಕೌಟಿಲ್ಯನ ಅರ್ಥಶಾಸ್ತ್ರದ ಶಿಸ್ತು—ಇವೆರಡನ್ನೂ ದೈನಂದಿನ ಆಯವ್ಯಯಕ್ಕೆ ಅಳವಡಿಸಿಕೊಂಡಾಗ ಮಾತ್ರ ಹಣಕಾಸಿನ ಭದ್ರತೆಯ ಜೊತೆಗೆ ಮಾನಸಿಕ ಶಾಂತಿಯೂ ಸಾಧ್ಯ.

 

Learn More: https://www.rashtrotthana.org/
#Rashtrotthana #RashtrotthanaParishat #Rashtrotthana60 #ರಾಷ್ಟ್ರೋತ್ಥಾನ60 #rashtrotthanainrashtraseva #budget #FinancialLiteracy #ChanakyaNeeti #BhagavadGita #PersonalFinance #EconomicWisdom #WealthManagement #valuebasedliving

Leave a Reply

Your email address will not be published. Required fields are marked *